ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 3)

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 3)

೧೩.ಸಮುದ್ರದ ಸ್ಪಂಜು ತನ್ನ ತೂತುಗಳಿಂದ ಹಾದು ಹೋಗುವ ಸಮುದ್ರದ ನೀರಿನಿಂದ ಆಹಾರದ ಕಣಗಳನ್ನು ಸೋಸುತ್ತದೆ. ತನ್ನ ತೂಕವು ಒಂದು ಔನ್ಸ್ ಜಾಸ್ತಿಯಾಗಲು ಅಗತ್ಯವಾದ ಆಹಾರದ ಕಣಗಳನ್ನು ಪಡೆಯಲಿಕ್ಕಾಗಿ, ಒಂದು ಟನ್ ಸಮುದ್ರದ ನೀರನ್ನು ಸ್ಪಂಜು ಸೋಸ ಬೇಕಾಗುತ್ತದೆ!

೧೪.ಸಾಗರಗಳ ಅತ್ಯಂತ ಆಳವಾದ ಜಾಗದ ಆಳವು, ಭೂಮಿಯ ಅತ್ಯಂತ ಎತ್ತರದ ಪರ್ವತಗಳಿಗಿಂತಲೂ ಅಧಿಕ. ಉದಾಹರಣೆಗೆ, ಶಾಂತ ಸಾಗರದ ಕಣಿವೆಯೊಂದರ ಆಳ ೩೬,೧೯೮ ಅಡಿ (ಫಿಲಿಫೈನ್ಸ್ ದ್ವೀಪಗಳ ಹತ್ತಿರ). ಇದು, ಹಿಮಾಲಯ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟಿನ ಎತ್ತರ (೨೯,೦೨೮ ಅಡಿ)ಕ್ಕಿಂತ ಜಾಸ್ತಿ.

೧೫.ಭೂಮಿಯಲ್ಲಿರುವ ೨೩ ಮಿಲಿಯನ್ ಘನ ಕಿಲೋಮೀಟರ ಹಿಮವನ್ನು ಕರಗಿಸಿದರೆ, ಸಾಗರಗಳ ಘನ ಪರಿಮಾಣವು ಕೇವಲ ಶೇಕಡಾ ೧.೭ರಷ್ಟು ಹೆಚ್ಚಾಗುತ್ತದೆ. ಇದರ ಪರಿಣಾಮ ಊಹಿಸುವುದು ಸುಲಭವಲ್ಲ. ಯಾಕೆಂದರೆ, ಆ ನೀರಿನ ಅಗಾಧತೆ ಎಷ್ಟೆಂದರೆ ನ್ಯೂಯಾರ್ಕಿನ ಎಂಪೈಯರ್ ಸ್ಟೇಟ್ ಕಟ್ಟಡದ ೨೦ನೆಯ ಮಹಡಿ ಈ ನೀರಿನಲ್ಲಿ ಮುಳುಗುತ್ತದೆ!

೧೬.ಮೊದಲನೆಯ “ಐಸ್ ಏಜ್” ಕಾಲಮಾನದಲ್ಲಿ ಭೂಮಿಯ ಸಾಗರಗಳ ನೀರಿನ ಮಟ್ಟ ೪೦೦ ಅಡಿ ಕುಸಿಯಿತು. ಈ ನೀರಿನ ಬಹುಪಾಲು ಭೂಮಿಯ ಧ್ರುವಗಳಲ್ಲಿರುವ ಹಿಮಗಡ್ಡೆಗಳಾಗಿ ಪರಿವರ್ತನೆಯಾಯಿತು.

17.ಸೈಬೀರಿಯಾದ ಬೈಕಾಲ್ ಸರೋವರ ಭೂಮಿಯ ಅತ್ಯಂತ ಆಳದ ಸರೋವರ. ಕೆಲವೆಡೆ ಇದರ ಆಳ ಒಂದು ಮೈಲು. ಬೈಕಾಲ ಸರೋವರದ ವಿಸ್ತೀರ್ಣಕ್ಕೆ (೧೩,೦೦೦ ಚದರ ಮೈಲು) ಹೋಲಿಸಿದಾಗ ಸುಪೀರಿಯರ್ ಸರೊವರದ ವಿಸ್ತೀರ್ಣ (೩೨,೦೦೦ ಚದರ ಮೈಲು) ಜಾಸ್ತಿ. ಆದರೆ ಸುಪೀರಿಯರ್ ಸರೋವರದಲ್ಲಿರುವ ನೀರಿನ ಪರಿಮಾಣ ಕಡಿಮೆ! ಯಾಕೆಂದರೆ ಬೈಕಾಲ್ ಸರೋವರದ ಆಳ ಅಧಿಕ. ಹಾಗಾಗಿ ಭೂಮಿಯ ಅತ್ಯಂತ ದೊಡ್ಡ ತಾಜಾ ನೀರಿನ ಸಂಗ್ರಹ ಬೈಕಾಲ್ ಸರೋವರ.

೧೮.ಭೂಮಿಯಲ್ಲಿ ಮೂರೂ ರೂಪಗಳಲ್ಲಿ ಲಭ್ಯವಿರುವ ಏಕೈಕ ವಸ್ತು ನೀರು. ಸಾಗರಗಳಲ್ಲಿ ದ್ರವ ರೂಪದಲ್ಲಿ, ಧ್ರುವಗಳಲ್ಲಿ ಘನ ರೂಪದಲ್ಲಿ ಮತ್ತು ವಾತಾವರಣದಲ್ಲಿ ತೇವಾಂಶ (ಅನಿಲ) ರೂಪದಲ್ಲಿ ನೀರು ಲಭ್ಯ.

ಫೋಟೋ ೧: ಸಮುದ್ರದ ಸ್ಪಂಜು ... ಕೃಪೆ: ಅನ್ ಸ್ಪ್ಲಾಷ್ ಡಾಟ್ ಕಾಮ್

ಫೋಟೋ ೨: ಬೈಕಾಲ್ ಸರೋವರ ... ಕೃಪೆ: ಸಿಂಪಲ್ ವಿಕಿಪೀಡಿಯಾ