ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 4)

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 4)

೧೯.ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ವಿಜ್ನಾನಿಯೊಬ್ಬರು ಮಾಡಿರುವ ಲೆಕ್ಕಾಚಾರದ ಅನುಸಾರ ಕೆಲವು ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ನೀರಿನ ಪರಿಮಾಣ ಹೀಗಿದೆ: ಒಂದು ಕೋಳಿ ಮೊಟ್ಟೆಗೆ ೧೨೦ ಗ್ಯಾಲನ್, ಒಂದು ತುಂಡು (ಲೋಫ್) ಬ್ರೆಡ್ ೩೦೦ ಗ್ಯಾಲನ್ ಹಾಗೂ ಒಂದು ಪೌಂಡ್ ದನದ ಮಾಂಸಕ್ಕೆ ೩,೫೦೦ ಗ್ಯಾಲನ್.

೨೦.ಒಂದು ಬಿಂದು ನೀರಿನಲ್ಲಿ ಅಗಾಧ ಸಂಖ್ಯೆಯ ಅಣುಗಳಿವೆ - ೧.೭ ಕ್ವಿನ್‌ಟಿಲಿಯನ್ (೧,೭೦೦,೦೦೦,೦೦೦,೦೦೦,೦೦೦,೦೦೦) ಇದು ಎಷ್ಟೆಂದು ಅಂದಾಜು ಮಾಡಲಿಕ್ಕಾಗಿ ಒಂದು ಸೂಚನೆ: ಒಂದು ಬಿಂದು ನೀರಿಗೆ ಎಲ್ಲ ಸಾಗರಗಳ ನೀರನ್ನು ಸೇರಿಸಿದರೆ, ಆಗ ಈ “ಮಿಶ್ರಣ"ದ ಒಂದು ಪಿಂಟ್ (ಗ್ಯಾಲನಿನ ಒಂದು ಎಂಟನೆಯ ಭಾಗ)ದಲ್ಲಿರುವ ಅಣುಗಳ ಸಂಖ್ಯೆ ಸುಮಾರು ೨೪.

೨೧.ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರಕ್ಕೆ ಎಷ್ಟು ತಾಜಾ ನೀರನ್ನು ಸುರಿಯುತ್ತದೆ? ಇದನ್ನು ಗ್ರಹಿಸಲಿಕ್ಕೊಂದು ಸೂಚನೆ: ಅಮೆಜಾನ್ ನದಿ ಸಾಗರ ಸೇರುವ ಜಾಗದಿಂದ ಒಂದು ನೂರು ಮೈಲು ದೂರದಲ್ಲಿಯೂ ವ್ಯಕ್ತಿಯೊಬ್ಬ ಲೋಟದಲ್ಲಿ ತಾಜಾ ನೀರನ್ನು ಎತ್ತಿ ಕುಡಿಯಬಹುದು!

೨೨.ಕೆಂಬೋಡಿಯಾದ ಟೊನ್ಲೆ ಸ್ಯಾಪ್ ಒಂದು ವಿಚಿತ್ರ ನದಿ. ಇದು ಪ್ರತಿ ವರುಷ ಆರು ತಿಂಗಳು ಉತ್ತರ ದಿಕ್ಕಿಗೆ ಹರಿದರೆ, ಉಳಿದ ಆರು ತಿಂಗಳು ದಕ್ಷಿಣ ದಿಕ್ಕಿಗೆ ಹರಿಯುತ್ತದೆ! ಇದಕ್ಕೆ ಕಾರಣ: ಕೆಂಬೋಡಿಯಾದ ಕೇಂದ್ರದಲ್ಲಿರುವ ವಿಸ್ತಾರವಾದ ಸರೋವರಕ್ಕೆ, ಮೆಕೊಂಗ್ ನದಿಯ ಮಳೆಗಾಲದ ನೆರೆ-ನೀರಿನ ಸ್ವಲ್ಪ ಭಾಗವನ್ನು ಹರಿಸಿ, ಸರೋವರವನ್ನು ಭರ್ತಿ ಮಾಡುತ್ತದೆ; ಅನಂತರ, ಬೇಸಗೆಯಲ್ಲಿ, ವಿರುದ್ಧ ದಿಕ್ಕಿನಲ್ಲಿ ನದಿ ಹರಿಯುತ್ತದೆ - ಸರೋವರದ ನೀರನ್ನು ಹೊರ ಹರಿಸುವ ಮೂಲಕ.

೨೩.ಸಮುದ್ರಶಾಸ್ತ್ರಜ್ನರ ಅನುಸಾರ ಅತ್ಯಂತ ದೊಡ್ಡ ಸಮುದ್ರದ ಅಲೆ ದಾಖಲಾದದ್ದು ೬-೭ ಫೆಬ್ರವರಿ ೧೯೩೩ರಂದು, ಶಾಂತ ಸಾಗರದಲ್ಲಿ - ಗಂಟೆಗೆ ೭೮ ಮೈಲು ವೇಗದ ಬಿರುಗಾಳಿ ಬೀಸುತ್ತಿದ್ದಾಗ ಯು.ಎಸ್.ಎಸ್. ರಾಮಾಪೊ ಎಂಬ ನೌಕೆಯಿಂದ ಕಂಡು ಬಂದ ಆ ಅಲೆಯ ಎತ್ತರ ೧೧೨ ಅಡಿ!

೨೪.ಸಮುದ್ರದ ನೀರಿನ ಮೇಲ್ಮೈಯಲ್ಲಿ ಮಾತ್ರ ಜೀವಿಗಳಿವೆ ಎಂದು ೧೮೬೦ರ ವರೆಗೆ ನಂಬಲಾಗಿತ್ತು. ಆ ವರುಷ ಮೆಡಿಟರೇನಿಯನ್ ಸಮುದ್ರದಲ್ಲಿ ಒಂದು ಮೈಲು ಆಳದಲ್ಲಿ ಕೇಬಲ್ ಹಾಗಿದಾಗ, ಸಮುದ್ರದ ಆಳದಲ್ಲಿಯೂ ಜೀವಿಗಳಿವೆ ಎಂಬುದಕ್ಕೆ ಪುರಾವೆ ಸಿಕ್ಕಿತು. ಈಗಂತೂ ಸಮುದ್ರ ಹಾಗೂ ಸಾಗರಗಳ ಆಳದಲ್ಲಿ, ತಣ್ಣಗಿನ, ಕತ್ತಲಿನ ಮತ್ತು ಅತಿ ಒತ್ತಡದ ಪರಿಸರದಲ್ಲಿಯೂ ಸಾವಿರಾರು ಜೀವಿಗಳು ವಾಸ ಮಾಡುತ್ತಿವೆ ಎಂಬುದಕ್ಕೆ ಹೊಸಹೊಸ ಪುರಾವೆಗಳು ಸಿಗುತ್ತಲೇ ಇವೆ.

ಫೋಟೋ ೧: ದಟ್ಟ ಅರಣ್ಯದ ನಡುವೆ ಹರಿಯುವ ಬೃಹತ್ ನದಿ ಅಮೆಜಾನ್ ... ಕೃಪೆ: ಅಮೆಜಾನ್ ಡಾಟ್ ಇನ್

ಫೋಟೋ ೨: ಸಾಗರದ ದೈತ್ಯ ಅಲೆ ... ಕೃಪೆ: ಸರ್ಫರ್ ಟುಡೇ ಡಾಟ್ ಕಾಮ್