ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 5)
೨೫.ಉತ್ತರ ಅಮೇರಿಕಾದ ಅತ್ಯಂತ ಉದ್ದದ ನದಿಗೆ ಒಂದೇ ಹೆಸರಿಲ್ಲ. ಮೊಂಟಾನಾದಿಂದ ಒಂದೊಂದು ಹನಿ ನೀರೂ ಮಿಸ್ಸೋರಿ ನದಿಯಲ್ಲಿ ೨,೪೬೬ ಮೈಲು ಹರಿಯುತ್ತದೆ. ಸೈಂಟ್ ಲೂಯಿಸ್ ನಗರವನ್ನು ದಾಟಿದ ನಂತರ ಆ ನೀರು ಮಿಸ್ಸಿಸಿಪ್ಪಿ ಎಂಬ ಹೆಸರಿನಲ್ಲಿ ೧,೨೯೪ ಮೈಲು ಸಾಗುತ್ತದೆ. ಇವೆರಡು ನದಿಗಳ ಒಟ್ಟು ಉದ್ದ ೩,೭೬೦ ಮೈಲು. (ಇದಕ್ಕಿಂತ ಉದ್ದವಾದ ನದಿಗಳು ದಕ್ಷಿಣ ಅಮೇರಿಕಾದ ಅಮೆಜಾನ್ ಮತ್ತು ಆಫ್ರಿಕಾದ ನೈಲ್.)
೨೬.ಸಾಗರಗಳಲ್ಲಿರುವ ನೀರನ್ನು ಭೂಮಿಯ ಮನುಷ್ಯರಿಗೆ ಹಂಚಿದರೆ, ಪ್ರತಿಯೊಬ್ಬ ವ್ಯಕ್ತಿಗೂ ಸುಮಾರು ೧೦೦ ಬಿಲಿಯನ್ ಗ್ಯಾಲನ್ ನೀರು ಸಿಗುತ್ತದೆ. ಭೂಮಿಯ ತಾಜಾ ನೀರನ್ನು (ಒಟ್ಟು ನೀರಿನ ಶೇಕಡಾ ೧.೬ ಭಾಗ) ಹಂಚಿದರೆ, ಪ್ರತಿಯೊಬ್ಬ ವ್ಯಕ್ತಿಗೂ ೪೦ ಗ್ಯಾಲನ್ ನೀರು ಸಿಗುತ್ತದೆ.
೨೭.ವಾಯುವಿನ ಒತ್ತಡಕ್ಕೆ ಅನುಗುಣವಾಗಿ ನೀರಿನ ಕುದಿಯುವ ಬಿಂದು ಬದಲಾಗುತ್ತದೆ. ಸಮುದ್ರ ಮಟ್ಟದಲ್ಲಿ ೨೧೨ ಡಿಗ್ರಿ ಫ್ಯಾರನ್‌ಹೀಟ್ (೧೦೦ ಡಿಗ್ರಿ ಸೆಲ್ಸಿಯಸ್) ಉಷ್ಣತೆಯಲ್ಲಿ ನೀರು ಕುದಿಯುತ್ತದೆ. ಆದರೆ, ಅಧಿಕ ಒತ್ತಡದಲ್ಲಿರುವ ನೀರು ಕುದಿಯಲು ಹೆಚ್ಚಿನ ಉಷ್ಣತೆ ಅಗತ್ಯ. "ನೀರಿನ ಕುದಿಯುವ ಬಿಂದು ಹೆಚ್ಚಿಸಲು ವಾಯು ಒತ್ತಡ ಹೆಚ್ಚಿಸಬೇಕು” ಎಂಬ ತತ್ವವನ್ನೇ ಬಳಸಿ, ಪ್ರೆಶರ್ ಕುಕ್ಕರ್ ಮೂಲಕ ಶೀಘ್ರವಾಗಿ ಅಡುಗೆ ಮಾಡಲಾಗುತ್ತದೆ.
೨೮.ಅಂಟಾರ್ಕಟಿಕಾದ ನೀರು ಇಲ್ಲದಿದ್ದರೆ, ಸಾಗರಗಳು ಸೀಮಿತ ಜೀವಜಾಲಕ್ಕೆ ಮಾತ್ರ ಆಸರೆ ನೀಡಬಲ್ಲವು; ಆಗ ಭೂಮಿಯ ಭೂಭಾಗದ ಜೀವಜಾಲವೂ ಬಾಧಿತವಾಗುತ್ತದೆ. ಅಂಟಾರ್ಕಟಿಕಾ ಸಾಗರದ ತಣ್ಣಗಿನ ನೀರು ಇಡೀ ಭೂಮಿಯನ್ನೇ ಫಲವತ್ತಾಗಿ ಮಾಡಲು ಸಹಕರಿಸುತ್ತದೆ. ಈ ನೀರಿನಲ್ಲಿ ಆಮ್ಲಜನಕ ಸಮೃದ್ಧವಾಗಿದೆ; ತಣ್ಣಗಿರುವ ಕಾರಣ ಭಾರವೂ ಆಗಿರುವ ಈ ನೀರು, ಸಾಗರದ ತಳದಲ್ಲಿ ಉತ್ತರ ದಿಕ್ಕಿನತ್ತ ಸರಿಯುತ್ತಾ, ಸುತ್ತಲಿನ ನೀರಿಗೆ ಆಮ್ಲಜನಕ ಪೂರೈಸುತ್ತದೆ. ಮುಂದೊಮ್ಮೆ, ಈ ಪೋಷಕಾಂಶಭರಿತ ನೀರು, ಸಾಗರಗಳ ಮೇಲ್ಮೈಗೆ ಬಂದಾಗ, ಖನಿಜಗಳನ್ನೂ ಪೂರೈಸುತ್ತದೆ. ಇದರಿಂದಾಗಿ, ಸಾಗರಗಳಲ್ಲಿ ಜೀವಜಾಲ ಸಮೃದ್ಧವಾಗುತ್ತದೆ.
೨೯.ಪಾನೀಯ-ಕೊಳವೆಯಲ್ಲಿ ಪಾನೀಯ ಹೀರಲಿಕ್ಕಾಗಿ ನೀವು ಗಾಳಿ ಸೆಳೆದುಕೊಂಡಾಗ, ನಿಮ್ಮ ಬಾಯಿಯೊಳಗೆ ಭಾಗಶಃ ನಿರ್ವಾತ ಉಂಟು ಮಾಡುತ್ತೀರಿ; ಆಗ ಲೋಟದಲ್ಲಿರುವ ಪಾನೀಯದ ಮೇಲಿನ ವಾಯು ಒತ್ತಡವು, ಆ ಕೊಳವೆಯಲ್ಲಿ ಪಾನೀಯ ಮೇಲೇರಲು ಕಾರಣವಾಗುತ್ತದೆ. ಅದೇನಿದ್ದರೂ, ವಾಯು ಒತ್ತಡ ನೀರನ್ನು ಮೂವತ್ತು ಅಡಿ ಎತ್ತರಕ್ಕೆ ಮಾತ್ರ ಮೇಲೇರಿಸ ಬಲ್ಲದು.
೩೦.ಎರಡು ಮಹಾಯುದ್ಧಗಳಿಂದ ಜಗತ್ತು ನಲುಗಿದೆ; ಲಕ್ಷಗಟ್ಟಲೆ ಅಮಾಯಕರು ಹಾಗೂ ಸೈನಿಕರು ಬಲಿಯಾದರು. ಮೂರನೆಯ ಮಹಾಯುದ್ಧ ನಡೆಯುದಿದ್ದರೆ, ಅದು ನೀರಿಗಾಗಿ ಎಂಬುದು ಜ್ನಾನಿಗಳ ಅಭಿಪ್ರಾಯ.
ಫೋಟೋ ೧: ಮಿಸ್ಸಿಸಿಪ್ಪಿ ನದಿ ... ಕೃಪೆ: ಪೆಕ್ಸೆಲ್ಸ್ .ಕಾಮ್
ಫೋಟೋ ೨: ಸಾಗರದ ಜೀವಜಾಲ