ಹೀಗೂ ಉಂಟೇ! ನಮ್ಮ ಭೂಮಿ (ಭಾಗ 2)

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 2)

ನದಿಗಳ ಹರಿವು ಮತ್ತು ಯುರೇಷ್ಯಾ, ಆಫ್ರಿಕಾ, ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹಿಮದ ಪ್ರಕ್ರಿಯೆಯಿಂದ ಭೂಮಿಯ ಸವಕಳಿ ವರುಷಕ್ಕೆ ಚದರ ಮೈಲಿಗೆ ೩೫೦ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ೨೨,೦೦೦ ವರುಷಗಳಿಗೊಮ್ಮೆ ಭೂಮಿಯ ಮೇಲ್ಮೈ ೪೦ ಇಂಚು ತಗ್ಗುತ್ತಿದೆ. ಇದೇ ವೇಗದಲ್ಲಿ ಸವಕಳಿ ಮುಂದುವರಿದರೆ, ಇನ್ನು ೨೦ ಮಿಲಿಯ ವರುಷಗಳಲ್ಲಿ ಭೂಮಿಯ ಮೇಲ್ಮೈ ಸಮುದ್ರ ಮಟ್ಟಕ್ಕೆ ಸಮವಾಗುತ್ತದೆ. ಭೂಮಿಯ ಆಯುಷ್ಯಕ್ಕೆ ಹೋಲಿಸಿದಾಗ ಈ ಅವಧಿ ಬಹಳ ಕಡಿಮೆ.

ಗಾಳಿಯ ಬೀಸುವಿಕೆಯಿಂದಾಗಿ ಮರಳಿನ ಕಣಗಳು ಉರುಟುರುಟು ಆಗುತ್ತವೆ. ಅಂದರೆ, ಗಾಳಿ ಬೀಸುವಾಗ ಮರಳಿನ ಕಣಗಳು ಒಂದಕ್ಕಿನ್ನೊಂದು ಮತ್ತು ಅಕ್ಕಪಕ್ಕದ ಇತರ ವಸ್ತುಗಳ ಮೇಲ್ಮೈಗೆ ಉಜ್ಜಿಕೊಳ್ಳುತ್ತವೆ. ಒಮ್ಮೆ ಮರಳಿನ ಕಣ ಗೋಲಾಕೃತಿ ಆಕಾರ ಪಡೆದರೆ, ಅನಂತರ ಮಿಲಿಯಗಟ್ಟಲೆ ವರುಷ ಆಕಾರ ಬದಲಾಯಿಸದೆ ಉಳಿಯುತ್ತದೆ.

ಪ್ರತಿಯೊಬ್ಬ ಆಧುನಿಕ ಮನುಷ್ಯನ ಅಗತ್ಯಗಳನ್ನು ಮತ್ತು ಐಷಾರಾಮಿ ಜೀವನದ ಸೌಲಭ್ಯಗಳನ್ನು ಪೂರೈಸಲಿಕ್ಕಾಗಿ, ಪ್ರತಿ ವರುಷ ಕನಿಷ್ಠ ಇಪ್ಪತ್ತು ಟನ್ ಕಚ್ಚಾ ಸಾಮಗ್ರಿಗಳನ್ನು ಭೂಮಿಯಿಂದ ಅಗೆದು ತೆಗೆಯಬೇಕಾಗುತ್ತದೆ.
ದಕ್ಷಿಣ ಅಮೇರಿಕಾ ಖಂಡದ ದಕ್ಷಿಣದ ತುದಿ ಕೇಪ್ ಹಾರ್ನ್ ಅಲ್ಲ! ಟಿಯೆರಾ ಡೆಲ್ ಘ್ಯುಗೊ ದ್ವೀಪಸ್ತೋಮದ ಹೊರ್-ನೊಸ್ ದ್ವೀಪದ ದಕ್ಷಿಣ ತುದಿಗೆ ಕೇಫ್ ಹಾರ್ನ್ ಎಂದು ಹೆಸರು. ಅಂದರೆ, ಈ ಸ್ಥಳದಿಂದ ೧೫೦ ಮೈಲು ಉತ್ತರದಲ್ಲಿರುವ, ಬ್ರನ್ಸ್-ವಿಕ್ ಪರ್ಯಾಯ ದ್ವೀಪದ ಫ್ಯುರ್ಟೆ ಬುಲ್ನೆಸ್ ಎಂಬ ಸ್ಥಳವೇ ದಕ್ಷಿಣ ಅಮೇರಿಕಾ ಖಂಡದ ದಕ್ಷಿಣದ ತುದಿ.

ಒಂದು ಎಕರೆ ಹೊಲದ ಮಣ್ಣಿನಲ್ಲಿ (ಆರು ಇಂಚು ಆಳದ ವರೆಗೆ) ಏನೆಲ್ಲ ಇವೆ ಗೊತ್ತೇ? ಒಂದು ಟನ್ ಬೂಷ್ಟ್, ಹಲವು ಟನ್ ಬ್ಯಾಕ್ಟೀರಿಯಾ, ೨೦೦ ಪೌಂಡ್ ಪ್ರೊಟೊಜೊವಾ (ಏಕಕೋಶ ಪ್ರಾಣಿ), ೧೦೦ ಪೌಂಡ್ ಶೈವಲ ಮತ್ತು ೧೦೦ ಪೌಂಡ್ ಯೀಸ್ಟ್.

ಬುಡದಿಂದ ಲೆಕ್ಕ ಹಾಕಿದರೆ, ಮೌಂಟ್ ಎವರೆಸ್ಟ್ ಭೂಮಿಯ ಅತ್ಯಂತ ಎತ್ತರದ ಪರ್ವತ ಶಿಖರವಲ್ಲ! ಹವಾಯಿ ದ್ವೀಪವೇ ಅತ್ಯಂತ ಎತ್ತರದ ಪರ್ವತ ಶಿಖರ. ಹವಾಯಿಯ ಅತ್ಯಂತ ಎತ್ತರದ ಶಿಖರ ಮೌನಾ ಕಿಯಾ ಸಮುದ್ರ ಮಟ್ಟದಿಂದ ೧೩,೭೮೪ ಅಡಿ ಎತ್ತರ. ಆದರೆ, ಅದು ಸಮುದ್ರದ ತಳದಿಂದ ಮೇಲಕ್ಕೆದ್ದಿದೆ. ಸಮುದ್ರದೊಳಗೆ ಅದರ ಎತ್ತರ ೧೮,೦೦೦ ಅಡಿ. ಆದ್ದರಿಂದ, ಸಮುದ್ರದ ತಳದಿಂದ ಲೆಕ್ಕ ಹಾಕಿದಾಗ, ಈ ಶಿಖರದ ಎತ್ತರ ೩೧,೦೦೦ ಅಡಿಗಳಿಗಿಂತ ಅಧಿಕ! ಮೌಂಟ್ ಎವರೆಸ್ಟ್ ಶಿಖರದ ಎತ್ತರ ಸಮುದ್ರ ಮಟ್ಟದಿಂದ ೨೯,೦೦೦ ಅಡಿ. ಆದರೆ, ೧೨,೦೦೦ ಅಡಿ ಎತ್ತರವಾಗಿರುವ ಪ್ರಸ್ಥಭೂಮಿಯಿಂದ ಮೌಂಟ್ ಎವರೆಸ್ಟ್ ಶಿಖರದ ಎತ್ತರ ಕೇವಲ ೧೭,೦೦೦ ಅಡಿ.

ಉತ್ತರ ಅರಿಜೋನಾಕ್ಕೆ ೩೪ ಮೆಗಾಟನ್ ಅಣುಬಾಂಬಿನ ಸ್ಫೋಟದ ಬಲಕ್ಕೆ ಸಮಾನವಾದ ಬಲದ "ಹೊಡೆತ" ಅಪ್ಪಳಿಸಿತು - ೨೭,೦೦೦ ವರುಷಗಳ ಮುಂಚೆ ಒಂದು ಉಲ್ಕಾಪಿಂಡ ಅಪ್ಪಳಿಸಿದಾಗ. ಇದರಿಂದಾಗಿ, ಅಲ್ಲಿ ಗ್ರೇಟ್ ಬಾರಿಂಗರ್ ಮೀಟಿಯೋರ್ ಕ್ರೇಟರ್ ಎಂಬ ಹೆಸರಿನ ಬೃಹತ್ ಕುಳಿ (ಹೊಂಡ) ಉಂಟಾಯಿತು.

ಫೋಟೋ ೧: ಹವಾಯಿ ದ್ವೀಪದ ಒಂದು ನೋಟ

ಫೋಟೋ ೨: ಹವಾಯಿ ದ್ವೀಪ ಸಮೂಹದ ನಕ್ಷೆ

ಫೋಟೋ ೩: ಉತ್ತರ ಅರಿಜೋನಾದ ಬೃಹತ್ ಕುಳಿ