ಹೀಗೂ ಉಂಟೇ! ನಮ್ಮ ಭೂಮಿ (ಭಾಗ 4)

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 4)

ರಸಾಯನ ಶಾಸ್ತ್ರಜ್ನರು ೧೧೮ ಮೂಲವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಇವುಗಳನ್ನು ಪರಮಾಣು ಸಂಖ್ಯೆಗೆ ಅನುಗುಣವಾಗಿ ಆವರ್ತ ಕೋಷ್ಠಕದಲ್ಲಿ  (ಪೀರಿಯೋಡಿಕ್ ಟೇಬಲ್) ಪಟ್ಟಿ ಮಾಡಲಾಗಿದೆ. ಜಲಜನಕದ ಪರಮಾಣು ಸಂಖ್ಯೆ ೧ ಮತ್ತು ಒಗನೆಸ್ಸೊನ್ ಅದರ ಪರಮಾಣು ಸಂಖ್ಯೆ ೧೧೮. ಭೂಮಿಯ ಶೇಕಡಾ ೯೮ರಷ್ಟು ಭಾಗದಲ್ಲಿ ತುಂಬಿರುವುದು ಕೇವಲ ಆರು ಮೂಲವಸ್ತುಗಳು: ಕಬ್ಬಿಣ, ಆಮ್ಲಜನಕ, ಮೆಗ್ನೇಸಿಯಂ, ಸಿಲಿಕೋನ್, ಗಂಧಕ ಮತ್ತು ನಿಕ್ಕಲ್.

ಭೂಮಿಯ ಅತ್ಯಂತ ಪುರಾತನ ಶಿಲೆಗಳನ್ನು ನ್ಯೂಝಿಲೆಂಡಿನ ವಿಕ್ ಮ್ಯಾಕ್-ಗ್ರೆಗರ್ ೧೯೬೬ ಮತ್ತು ೧೯೬೭ರಲ್ಲಿ ಪತ್ತೆ ಮಾಡಿದರು. ಗ್ರೀನ್-ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪುರಾತನ ಶಿಲೆಗಳು ಅವರಿಗೆ ಸಿಕ್ಕಿದವು. ಪರಮಾಣು ಕಾಲನಿರ್ಣಯದ ಪ್ರಕಾರ ಈ ಶಿಲೆಗಳು ೩.೭ರಿಂದ ೨.೯ ಬಿಲಿಯನ್ ವರುಷ ಹಳೆಯವು.

ಭೂಮಿಯಲ್ಲಿ ಮನುಷ್ಯರ ಜನಸಂಖ್ಯೆ ಸ್ಫೋಟವಾಗುತ್ತಿದೆ: ೨೦೧೯ರಲ್ಲಿ ಜನಸಂಖ್ಯೆ ೭೬೭.೩೫ ಕೋಟಿ. ಇದರ ಶೇಕಡಾ ೫೦ ಜನರು ವಾಸ ಮಾಡುತ್ತಿರುವುದು ಕೇವಲ ಈ ನಾಲ್ಕು ದೇಶಗಳಲ್ಲಿ: ಚೀನಾ, ಭಾರತ, ರಷ್ಯಾ ಮತ್ತು ಯು.ಎಸ್.ಎ. ಉಳಿದವರು ಸುಮಾರು ೧೬೦ ದೇಶಗಳಲ್ಲಿ ಬದುಕುತ್ತಿದ್ದಾರೆ.

ಭೂಮಿಯ ಅತ್ಯಂತ ಉದ್ದದ ಪರ್ವತಶ್ರೇಣಿ ಯಾರಿಗೂ ಕಾಣಿಸುವುದಿಲ್ಲ ಎನ್ನಬಹುದು. ಯಾಕೆಂದರ ಅದು ಸಾಗರದೊಳಗಿದೆ. ಅದುವೇ ಮಿಡ್-ಅಟ್ಲಾಂಟಿಕ್ ರಿಡ್ಜ್. ಐರ್ಲೆಂಡಿನಿಂದ ಅಂಟಾರ್ಕ್‌ಟಿಕ್ ತನಕ ಅದರ ಉದ್ದ ೧೦,೦೦೦ ಮೈಲುಗಳು. ಆ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಶಿಖರದ ಎತ್ತರ ಐದು ಮೈಲು. ಆ ಪರ್ವತಶ್ರೇಣಿಯಲ್ಲಿ ನೀರಿನಿಂದ ಮೇಲಕ್ಕೆ ಕಾಣಿಸುವ ಅತ್ಯಂತ ಎತ್ತರದ ಶಿಖರದ ಎತ್ತರ ಒಂದು ಮೈಲು; ಅದುವೇ ಪಿಕೊ ದ್ವೀಪ.

ಬೆಳೆಗಳಿಗೆ ಹಾನಿ ಮಾಡುವ ಕೀಟ, ಬೂಸ್ಟು ಇತ್ಯಾದಿಗಳನ್ನು ಕೊಲ್ಲಲು ಬಳಸುವ ವಿಷರಾಸಾಯನಿಕಗಳಾದ ಪೀಡೆನಾಶಕಗಳು ಸಾಗರಗಳನ್ನು ಸೇರಿ, ಸಾಗರದಾಳದ ಪ್ರವಾಹದೊಂದಿಗೆ ಸ್ಥಳಾಂತರಗೊಳ್ಳುತ್ತವೆ. ಹೀಗೆ ಸಾಗುವಾಗ, ಅವು “ಸಾಗರದ ಆಹಾರ ಸರಪಳಿ”ಯ ಜೀವಿಗಳ ದೇಹದಲ್ಲಿ ಹೆಚ್ಚೆಚ್ಚು ಪರಿಮಾಣದಲ್ಲಿ ಸಂಗ್ರಹವಾಗುತ್ತವೆ. ಉತ್ತರ ಧ್ರುವದಿಂದ ಶುರುವಾಗುವ ಪಶ್ಚಿಮ ಗ್ರೀನ್-ಲ್ಯಾಂಡ್ ಪ್ರವಾಹದಲ್ಲಿ ಹುಟ್ಟಿ ಬೆಳೆದ ಇಪ್ಪತ್ತು ವೇಲ್‌ಗಳನ್ನು ಪ್ರಯೋಗಕ್ಕಾಗಿ ಈಟಿಗಾಳದಿಂದ ಹಿಡಿದು ಪರೀಕ್ಷಿಸಿದಾಗ ಪತ್ತೆಯಾದ ಸಂಗತಿ: ಅವುಗಳ ತಿಮಿ ಮೇದಸ್ಸಿನಲ್ಲಿ (ಬ್ಲಬ್ಬರ್), ಡಿಡಿಟಿ ಸಹಿತ ಆರು ವಿವಿಧ ಪೀಡೆನಾಶಕಗಳ ಶೇಷಾಂಶಗಳು ಇದ್ದವು!

ಬೆಳಕಿಗೆ "ತೂಕ"ವಿದೆ! ಭೂಮಿಯ ಮೇಲ್ಮೈಯ ಮೇಲೆ ಬೆಳಕಿನ "ಒತ್ತಡ" ಚದರ ಮೈಲಿಗೆ ಎರಡು ಪೌಂಡ್ ಎಂದು ಲೆಕ್ಕ ಹಾಕಲಾಗಿದೆ.

ಫೋಟೋ ೧: ಕಬ್ಬಿಣದ ಅದಿರಿನ ಗಣಿಗಾರಿಕೆ

ಫೋಟೋ ೨: ಜನಸಂಖ್ಯಾ ಸ್ಫೋಟ - ಮುಂಬೈಯಲ್ಲಿ ಜನಸಾಗರ