ಹೀಗೂ ಉಂಟೇ! ನಮ್ಮ ಭೂಮಿ (ಭಾಗ 5)

ಹೀಗೂ ಉಂಟೇ! ನಮ್ಮ ಭೂಮಿ (ಭಾಗ 5)

ಭೂಮಿಯ ಪರಿಭ್ರಮಣವು ಚಲಿಸುವ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಉತ್ತರ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಬಲಕ್ಕೆ ವಾಲಿದರೆ, ದಕ್ಷಿಣ ಗೋಳಾರ್ಧದಲ್ಲಿ ಚಲಿಸುವ ವಸ್ತುಗಳು ಸ್ವಲ್ಪ ಎಡಕ್ಕೆ ವಾಲುತ್ತವೆ. ಇದನ್ನು “ಕೊರಿಯೊಲಿಸ್ ಪರಿಣಾಮ” ಎಂದು ಕರೆಯುತ್ತಾರೆ. ಚಲಿಸುವ ಚೆಂಡು (ಹಗುರ ವಸ್ತು) ಅಥವಾ ಚಲಿಸುವ ಬ್ಯಾಲ್ಲಿಸ್ಟಿಕ್ ಮಿಸೈಲ್ (ಭಾರದ ವಸ್ತು) ಎರಡರ ಮೇಲೆಯೂ ಈ ಪರಿಣಾಮ ಒಂದೇ ರೀತಿಯಾಗಿರುತ್ತದೆ.

ಭೂಮಿಯ ಅಯಸ್ಕಾಂತ ಕ್ಷೇತ್ರವು ಕನಿಷ್ಠ ೧೧೭ ಬಾರಿ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಬದಲಾಯಿಸಿಕೊಂಡಿದೆ! ಭೂಮಿಯ ವಿವಿಧ ಸ್ಥಳಗಳಲ್ಲಿ ಶಿಲೆಗಳಲ್ಲಿ ಇದಕ್ಕೆ ಪುರಾವೆ ಸಿಕ್ಕಿವೆ; ಪಳೆಯುಳಿಕೆ ಮತ್ತು ರೇಡಿಯೋ ಸಮಸ್ಥಾನಿ (ಐಸೊಟೋಪ್) ಬಳಸಿ ಈ ಬದಲಾವಣೆಗಳ ಕಾಲಮಾನ ಪತ್ತೆ ಮಾಡಲಾಗಿದೆ.

ಅಂಟಾರ್ಕ‌ಟಿಕಾದಲ್ಲಿ ಹಿಮವಿಲ್ಲದ ಸ್ಥಳಗಳೂ ಇವೆ! ಇಂತಹ ಸ್ಥಳಗಳ ಒಟ್ಟು ವಿಸ್ತೀರ್ಣ ೨,೯೦೦ ಚದರ ಮೈಲು (ಅಂಟಾರ್ಕಟಿಕಾದ ಒಟ್ಟು ಪ್ರದೇಶದ ಶೇಕಡಾ ೦.೦೬ ಭಾಗ). ಬೀಸುವ ಗಾಳಿಯಿಂದಾಗಿ ಈ ಸ್ಥಳಗಳಲ್ಲಿ ಹಿಮ ಇಲ್ಲ.

ಅದೇ ಅಂಟಾರ್ಕ‌ಟಿಕಾದಲ್ಲಿ ಪುಟ್ಟ ನೀರಿನ ಕೊಳಗಳೂ ಇವೆ! ಆ ಸ್ಥಳಗಳಲ್ಲಿ ನೆಲದಾಳ ಬಿಸಿಯಾಗಿರುವುದು ಇದಕ್ಕೆ ಕಾರಣ ಆಗಿರಬಹುದು. ಸಾನ್ ಜುವಾನ್ ಹೆಸರಿನ ಕೊಳದಲ್ಲಿ ಅಮೇರಿಕಾದ ಮನೆಗಳ ಆರು ಕೋಣೆಗಳಲ್ಲಿ ತುಂಬುವಷ್ಟು ನೀರಿದೆ. ಈ ನೀರಿನಲ್ಲಿ ಬದುಕಿರುವ ಒಂದೇ ಒಂದು ಜೀವಿ ಬ್ಯಾಕ್ಟೀರಿಯಾದ ಒಂದು ಸ್ಪೀಷೀಸ್.

ಭೂಮಿಯ ಕಂಪನಗಳನ್ನು ಅಳತೆ ಮಾಡುವ ಸಾಧನಗಳು ಪ್ರತಿ ವರುಷ ಐದು ಲಕ್ಷ ಭೂಕಂಪ ಅಥವಾ ಸೂಕ್ಷ್ಮ ಭೂಕಂಪಗಳನ್ನು ದಾಖಲಿಸುತ್ತವೆ. ಇವುಗಳಲ್ಲಿ ಸುಮಾರು ಒಂದು ಲಕ್ಷ ಭೂಕಂಪಗಳು ನಿವಾಸಿಗಳ ಗಮನಕ್ಕೆ ಬರುತ್ತವೆ ಮತ್ತು ಒಂದು ಸಾವಿರ ಭೂಕಂಪಗಳು ಹಾನಿ ಮಾಡುತ್ತವೆ.

ಪ್ರತಿ ವರುಷ ೧೫೦ ಟನ್ ತೂಕದ ಬಾಹ್ಯಾಕಾಶ ವಸ್ತುಗಳು ಭೂಮಿಗೆ ಅಪ್ಪಳಿಸುತ್ತವೆ. ಕೇವಲ ಏಳು ಜನರಿಗೆ ಇಂತಹ ವಸ್ತುಗಳು ಬಂದು ಬಡಿದಿವೆ ಎಂಬುದು ದಾಖಲಾಗಿದೆ.

ಶಾಂತ ಸಾಗರವು ಭೂಮಿಯ ಗೋಳಾರ್ಧವನ್ನು ವ್ಯಾಪಿಸಿದೆ!  

ಫೋಟೋ ೧: ಭೂಮಿಯ ಅಯಸ್ಕಾಂತ ಕ್ಷೇತ್ರ - ಫೋಟೋ ಕೃಪೆ: ಸೈನ್ಸ್ ನ್ಯೂಸ್

ಫೋಟೋ ೨: ಅಂಟಾರ್ಕಟಿಕಾದಲ್ಲಿ ಹಿಮವಿಲ್ಲದ ಒಂದು ಸ್ಥಳ - ಫೋಟೋ ಕೃಪೆ: ಜಿಯೋಗ್ರಾಫಿಕಲ್ ಕೊ ಇನ್