ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 1)
೧.ಜಿರಾಫೆಯ ರಕ್ತದ ಒತ್ತಡ, ಆರೋಗ್ಯವಂತ ಮನುಷ್ಯನ ರಕ್ತದ ಒತ್ತಡಕ್ಕಿಂತ ಎರಡು ಅಥವಾ ಮೂರು ಪಟ್ಟು ಜಾಸ್ತಿ. ಅದು ಉಳಿದೆಲ್ಲ ಪ್ರಾಣಿಗಳಿಗಿಂತ ಅಧಿಕ ರಕ್ತದೊತ್ತಡ ಇರುವ ಪ್ರಾಣಿ ಎನ್ನಲಾಗಿದೆ. ಇದಕ್ಕೆ ಕಾರಣ ಹತ್ತರಿಂದ ಹನ್ನೆರಡು ಅಡಿ ಉದ್ದವಿರುವ ಅದರ ಕತ್ತು; ಅದರ ಮೆದುಳಿಗೆ ಕರೊಟಿಡ್ ರಕ್ತನಾಳದ ಮೂಲಕ ರಕ್ತ ಪಂಪ್ ಮಾಡಲಿಕ್ಕೆ ಭಾರೀ ಒತ್ತಡ ಅಗತ್ಯ. ಜಿರಾಫೆಯ ಹೃದಯವೂ ದೊಡ್ಡದೇ - ಅದರ ಉದ್ದ ಎರಡು ಅಡಿ, ಭಿತ್ತಿಯ ದಪ್ಪ ಮೂರು ಇಂಚು ಮತ್ತು ತೂಕ ೧೧.೫ ಕಿಗ್ರಾ.
೨.ಜಾನುವಾರುಗಳಿಗೆ ಗುರುತಿಗಾಗಿ "ಬರೆ" ಹಾಕುವ ಪರಿಪಾಠ ೪,೦೦೦ ವರುಷಗಳ ಹಿಂದೆಯೂ ಬಳಕೆಯಲ್ಲಿತ್ತು. ಈಜಿಪ್ಟಿನ ಜನರು ಅವರ ಜಾನುವಾರುಗಳಿಗೆ ಬರೆ ಹಾಕುತ್ತಿದ್ದರು ಎಂಬುದನ್ನು ಅಲ್ಲಿನ ಪ್ರಾಚೀನ ಚಿತ್ರಗಳಲ್ಲಿ ಕಾಣಬಹುದು.
೩.ಕೆಂಪು ಸ್ಪಂಜ್ ಎಂಬ ಸ್ಪಂಜಿಗೆ ಒಂದು ವಿಶೇಷ ಗುಣವಿದೆ. ಅದನ್ನು ಒಂದು ಬಟ್ಟೆಯ ಮೂಲಕ ತಳ್ಳಿದಾಗ, ಅದು ಸಾವಿರಾರು ಸೂಕ್ಷ್ಮ ಕಣಗಳಾಗಿ ಒಡೆಯುತ್ತದೆ. ಆದರೆ ಅದು ಸಾಯುವುದಿಲ್ಲ. ಬದಲಾಗಿ, ಆ ಎಲ್ಲ ಕಣಗಳೂ ಪುನಃ ಒಗ್ಗೂಡಿ, ಮುಂಚಿನಂತೆಯೇ ಆಗಿ, ಸ್ಪಂಜು ತನ್ನ ಜೀವನ ಮುಂದುವರಿಸುತ್ತದೆ.
೪.ಅಲಾಸ್ಕದಲ್ಲಿ ೧೨,೦೦೦ ವರುಷಗಳ ಮುಂಚೆ ಆನೆಗಳು, ಸಿಂಹಗಳು ಮತ್ತು ಒಂಟೆಗಳು ಅಡ್ಡಾಡುತ್ತಿದ್ದವು!
೫.ಒಂದು ಟನ್‌ಗಿಂತ ಜಾಸ್ತಿ ತೂಕದ ಕಪ್ಪು-ಖಡ್ಗಮೃಗ ನೋಡಲು ದೈತ್ಯ ಪ್ರಾಣಿ. ಆದರೆ, ಇದು ಆಫ್ರಿಕಾದ ಅತ್ಯಂತ ಸುಲಭವಾಗಿ ಪಳಗಿಸಬಹುದಾದ ಪ್ರಾಣಿ. ಅದನ್ನು ಒಮ್ಮೆ ಬಂಧಿಸಿದರಾಯಿತು; ಅನಂತರ ಅದು ಅದನ್ನು ಸಲಹುವ ವ್ಯಕ್ತಿಯ ಕೈಯಿಂದ ಆಹಾರ ಸ್ವೀಕರಿಸುತ್ತದೆ ಮತ್ತು ಅದರ ಕಿವಿ ತುರಿಸಲಿಕ್ಕಾಗಿ ಕರೆದರೆ ಕೂಡಲೇ ಹತ್ತಿರ ಬರುತ್ತದೆ!
ಫೋಟೋ ೧: ಎತ್ತರದ ಮರದ ಎಲೆ ತಿನ್ನುತ್ತಿರುವ ಜಿರಾಫೆ
ಫೋಟೋ ೨: ಆಫ್ರಿಕಾದ ಕಪ್ಪು ಖಡ್ಗಮೃಗ ಮತ್ತು ಮರಿ .... ಫೋಟೋ ಕೃಪೆ: ಅನ್‌ಪ್ಲಾಸ್. ಕಾಮ್