ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)

೩೧.ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್ಟೆಗಳಿಂದ ಮರಿಗಳು ಹೊರಬರುವ ಸಮಯದಲ್ಲಿ, ಯಾವುದೇ ಗಂಡು ಕಪ್ಪೆ (ಅಪ್ಪ ಕಪ್ಪೆಯೇ ಆಗಿರಬೇಕೆಂದಿಲ್ಲ.) ಹಲವಾರು ಮರಿಗಳನ್ನು ಎತ್ತಿಕೊಂಡು, ತನ್ನ ಬಾಯಿಯ ಸಂಚಿಯೊಳಗೆ ಹಾಕಿಕೊಳ್ಳುತ್ತದೆ. ಈ ಮರಿಗಳು ಕಪ್ಪೆಗಳಾಗಿ ಬೆಳೆಯುವ ತನಕ ಆ ಸಂಚಿಯಲ್ಲೇ ಇರುತ್ತವೆ! ಚಾರ್ಲ್ಸ್ ಡಾರ್ವಿನ್ ಪತ್ತೆ ಮಾಡಿದ ಕಾರಣ ಅವರ ನೆನಪಿಗಾಗಿ ಈ ಹೆಸರನ್ನಿಡಲಾಗಿದೆ. ಭೂಮಿಯಲ್ಲಿ ಈ ರೀತಿಯಲ್ಲಿ ಮರಿ ಬೆಳೆಸುವ ಬೇರೆ ಯಾವುದೇ ಜೀವಿ ಇಲ್ಲ.

೩೨.ಬೇರೆಬೇರೆ ವಿಧದ ಪೋಲಿಯೋ ವೈರಾಣುಗಳ ಪತ್ತೆಗಾಗಿ ಮೂರು ವರುಷ ಕಾಲ ನಡೆಸಿದ ಬೃಹತ್ ಸಂಶೋಧನೆಯಲ್ಲಿ ಮೂವತ್ತು ಸಾವಿರ ಮಂಗಗಳನ್ನು ಬಳಸಲಾಗಿತ್ತು.

೩೩.ಚಟುವಟಿಕೆ ಮತ್ತು ಪ್ರತಿಫಲದ ಜೊತೆ ೨೫ ಸೆಕೆಂಡುಗಳ ತನಕ ಸಂಬಂಧ ಕಲ್ಪಿಸಲು ಇಲಿಗೆ ಸಾಧ್ಯ. ಒಂದು ಸನ್ನೆಯನ್ನು ಒತ್ತುವುದು ಮತ್ತು ಆಹಾರದ ಚೂರು ಪಡೆಯುವುದು - ಇವುಗಳ ನಡುವಣ ಸಮಯ ಮೂವತ್ತು ಸೆಕೆಂಡು ದಾಟಿದರೆ ಇಲಿಗೆ ಗೊಂದಲವಾಗುತ್ತದೆ.

೩೪.ರಷ್ಯಾದಲ್ಲಿ ಕಬ್ಬಿಣದ ಸಲ್ಫೈಡ್ ಇರುವ ಅದಿರು ನಿಕ್ಷೇಪಗಳನ್ನು ವಾಸನೆಯ ಮೂಲಕ ಪತ್ತೆ ಮಾಡಲು ನಾಯಿಗಳಿಗೆ ತರಬೇತಿ ನೀಡಲಾಗಿದೆ.

೩೫.ನೀಲಗಿರಿ ಮರ ನಿರ್ವಂಶವಾದರೆ ಆಸ್ಟ್ರೇಲಿಯಾದ ಮರ ಹತ್ತುವ ಕೋಲಾ ಕರಡಿಗಳೂ ನಿರ್ವಂಶವಾಗುತ್ತವೆ! ಯಾಕೆಂದರೆ, ಕೋಲಾ ಕರಡಿಗಳು ನೀಲಗಿರಿ ಮರದ ಎಲೆಗಳನ್ನು ಮಾತ್ರ ತಿನ್ನುತ್ತವೆ. ಹಾಗೆಯೇ, ಆಫ್ರಿಕಾದ ಜೀಬ್ರಾಗಳು ನಿರ್ವಂಶವಾದರೆ, ಆಫ್ರಿಕಾದ ಸಿಂಹಗಳ ಸಂಖ್ಯೆಯೂ ಕುಸಿಯುತ್ತದೆ. ಜೇನ್ನೊಣಗಳು ನಿರ್ವಂಶವಾದರೆ, ಪರಕೀಯ ಪರಾಗಸ್ಪರ್ಶಕ್ಕಾಗಿ ಜೇನ್ನೊಣಗಳನ್ನೇ ಅವಲಂಬಿಸಿರುವ ಸಾವಿರಾರು ಸಸ್ಯ ಜಾತಿಗಳೂ ನಿರ್ನಾಮವಾಗುತ್ತವೆ.

ಫೋಟೋ ೧: ರೈನೋಡರ್ಮಾ ಡಾರ್-ವಿನಿ ಕಪ್ಪೆ

ಫೋಟೋ ೨: ಆ ಕಪ್ಪೆಯ ಸಂಚಿಯಲ್ಲಿ ಮರಿಗಳು

ಫೋಟೋ ೩: ಕೋಲಾ ಕರಡಿ

ಫೋಟೋ ಕೃಪೆ: ಪಿನ್‌ಟರೆಸ್ಟ್.ಕೋಮ್