ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 1)

1.ಒಂದು ಪೌಂಡ್ ಕಬ್ಬಿಣದಲ್ಲಿರುವ ಪರಮಾಣುಗಳು ಎಷ್ಟು? ಸುಮಾರು ಐದು ಟ್ರಿಲಿಯನ್ ಟ್ರಿಲಿಯನ್:
4,891,500,000,000,000,000,000,000.
2.ಗ್ರೀಕರ ಅನುಸಾರ ಮೊದಲ "ಪರಿಪೂರ್ಣ ಸಂಖ್ಯೆ” 6. ಯಾಕೆಂದರೆ, ಇದು ತನ್ನ ಹೊರತಾಗಿ, ತನ್ನ ಎಲ್ಲ ಭಾಜಕಗಳ ಮೊತ್ತಕ್ಕೆ ಸಮ. ಅಂದರೆ: 1, 2 ಅಥವಾ 3ರಿಂದ 6 ಭಾಗಿಸಲ್ಪಡುತ್ತದೆ ಮತ್ತು 1 + 2 + 3 = 6. ಈ ಸಂಖ್ಯೆಗಳ ಪತ್ತೆಗಾಗಿ 1952ರಲ್ಲಿ ಕಂಪ್ಯೂಟರುಗಳನ್ನು ಮೊದಲ ಬಾರಿ ಉಪಯೋಗಿಸಿದಾಗ ಗ್ರೀಕರು ಈ ಸಂಗತಿ ನಿರ್ಧರಿಸಿ 2,000 ವರುಷಗಳು ದಾಟಿದ್ದವು. 1952ರಲ್ಲಿ ಗಣಿತಜ್ನರು ಆ ವರೆಗೆ ಗುರುತಿಸಲಾಗಿದ್ದ 13 ಪರಿಪೂರ್ಣ ಸಂಖ್ಯೆಗಳ ಜೊತೆಗೆ ಹೊಸದಾಗಿ ಹನ್ನೊಂದು ಪರಿಪೂರ್ಣ ಸಂಖ್ಯೆಗಳನ್ನು ಗುರುತಿಸಿದರು. ಈಗ ನಮಗೆ ಇಂತಹ 24 ಸಂಖ್ಯೆಗಳು ತಿಳಿದಿವೆ. ಅತ್ಯಂತ ದೊಡ್ಡ ಪರಿಪೂರ್ಣ ಸಂಖ್ಯೆಯಲ್ಲಿ 12,003 ಅಂಕೆಗಳಿವೆ.
3.ಈಗ ಬಳಕೆಯಲ್ಲಿರುವ ದಶಮಾಂಶ (ದಶಮಾನ) ಸಂಖ್ಯಾ ಪದ್ಧತಿಯನ್ನು ಕ್ರಿ.ಶ. 800 ಸಮಯದಲ್ಲಿ ಸಂಶೋಧಿಸಿದವರು ಹಿಂದೂಗಳು. ಇದರಲ್ಲಿ ಸಂಖ್ಯೆಗಳ ಸ್ಥಾನವು ಅವುಗಳ ಮೌಲ್ಯವನ್ನು (ಏಕಸ್ಥಾನ, ದಶಸ್ಥಾನ, ಶತಸ್ಥಾನ, ಸಾವಿರದ ಸ್ಥಾನ ಇತ್ಯಾದಿ) ಸೂಚಿಸುತ್ತದೆ. ಹಿಂದೂಗಳು ಸಂಶೋಧಿಸಿದ "ಶೂನ್ಯ" ಗಣಿತದ ಲೆಕ್ಕಾಚಾರಗಳನ್ನು ಅದ್ಭುತವಾಗಿ ಸರಳೀಕರಿಸಿತು. ಇದಕ್ಕೆ ಹೋಲಿಸಿದಾಗ, ಶೂನ್ಯ ಇಲ್ಲದಿರುವ ರೋಮನ್ ಸಂಖ್ಯಾ ಪದ್ಧತಿ ವಿಚಿತ್ರ ಎನಿಸುತ್ತದೆ. ಉದಾಹರಣೆಗೆ, ಈ ಕೆಳಗಿನ ಸಂಖ್ಯೆಗಳನ್ನು ಕೂಡಿಸಿ:
MXC (1000 + (100 - 10) ಮತ್ತು CIV (100 + (5 - 1)
ಇದರ ಬದಲಾಗಿ, ದಶಮಾಂಶ ಪದ್ಧತಿಯಲ್ಲಿ 1,090 ಮತ್ತು 104 ಇವನ್ನು ಕೂಡಿಸುವುದು ಬಹಳ ಸುಲಭ.
4.ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಲ್ಲಿ, ಮೂರು ಜೊತೆ ಇಂಗ್ಲಿಷ್ ಮೊಲಗಳನ್ನು ಆಸ್ಟ್ರೇಲಿಯಾಕ್ಕೆ ತಂದು ಬಿಡಲಾಯಿತು. ಅವು ಮರಿಗಳನ್ನು ಹಾಕುತ್ತಾಹಾಕುತ್ತಾ ಕೇವಲ ಹತ್ತು ವರುಷಗಳಲ್ಲಿ ಅವುಗಳ ಸಂಖ್ಯೆ ಲಕ್ಷಗಟ್ಟಲೆ ಆಗಿ ಹೋಯಿತು! ಅವುಗಳಿಂದ ಬೆಳೆಗಳ ಕೃಷಿಗೆ ಅಪಾರ ನಷ್ಟವಾಗಲು ಶುರುವಾಯಿತು. ಹಾಗಾಗಿ ಲಕ್ಷಗಟ್ಟಲೆ ಮೊಲಗಳನ್ನು ಅಲ್ಲಿ ಕೊಲ್ಲಲಾಯಿತು.
5.ಭೂಮಿಯಲ್ಲಿ ಮನುಷ್ಯರ ಜನಸಂಖ್ಯಾಭಿವೃದ್ಧಿ ಈಗಿನ ದರದಲ್ಲಿಯೇ ಮುಂದುವರಿದರೆ ಏನಾದೀತು? ಒಂದು ಅಂದಾಜಿನ ಅನುಸಾರ: ಕ್ರಿ.ಶ. 3530 ಹೊತ್ತಿಗೆ, ಭೂಮಿಯಲ್ಲಿರುವ ಮನುಷ್ಯರ ತೂಕವು ಭೂಮಿಯ ತೂಕಕ್ಕೆ ಸಮಾನವಾದೀತು!