ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 6)
26.ಪಾಶ್ಚಾತ್ಯ ದೇಶಗಳಲ್ಲಿ ಮಧ್ಯಕಾಲೀನ ಅವಧಿಯಲ್ಲಿ, ಗಣಿತ ಕಲಿಕೆಗಾಗಿ ಮತ್ತು ಲೆಕ್ಕಾಚಾರಕ್ಕಾಗಿ ಬಳಕೆಯಾಗುತ್ತಿತ್ತು ಮಣಿಚೌಕಟ್ಟು (ಅಬಕಸ್). ನೆಪೋಲಿಯನ್ನನ ಪತನದ ನಂತರ ಲೆಫ್ಟಿನೆಂಟ್ ಜೀನ್ ವಿಕ್ಟರ್ ಪೊನ್ಸೆಲೆಟ್ ಅವರನ್ನು ರಷ್ಯಾದವರು ಬಿಡುಗಡೆಗೊಳಿಸಿದರು. ಆಗ ಅವರು ಫ್ರಾನ್ಸಿಗೆ ಮಣಿಚೌಕಟ್ಟನ್ನು ತಂದರು. ತದನಂತರ, ಲೆಕ್ಕ ಮಾಡುವ ಸಾಧನವಾಗಿ ಮಣಿಚೌಕಟ್ಟಿನ ಬಗ್ಗೆ ಪುನಃ ಆಸಕ್ತಿ ಹುಟ್ಟಿತು.
27.ಎರಡರ ವಿಶೇಷತೆ ಗಮನಿಸಿ: ಇದಕ್ಕೆ ಇದನ್ನೇ ಕೂಡಿಸಿದಾಗ ಮತ್ತು ಇದನ್ನು ಇದರಿಂದಲೇ ಗುಣಿಸಿದಾಗ
ಸಿಗುವ ಫಲಿತಾಂಶ ಸಮಾನ. ಇಂತಹ ಗುಣಲಕ್ಷಣವಿರುವ ಏಕಸ್ಥಾನದ ಏಕೈಕ ಅಂಕೆ 2.
2 + 2 = 4 ಮತ್ತು 2 x 2 = 4
28.ಒಂದು ಪರಮಾಣುವಿನ ಒಳಗಿರುವ ಸ್ಥಳಾವಕಾಶದ ಕ್ವಾಡ್ರಿಲಿಯನಿನ ಒಂದು (1 / 1,000,000,000,000,000) ಭಾಗದಲ್ಲಷ್ಟೇ ಪರಮಾಣು ಕೇಂದ್ರವಿದೆ; ಆದರೆ, ಪರಮಾಣುವಿನ ಒಟ್ಟು ದ್ರವ್ಯರಾಶಿಯ ಶೇಕಡಾ 99.97 ಅದರ ಕೇಂದ್ರದಲ್ಲೇ ಸಾಂದ್ರೀಕರಿಸಲ್ಪಟ್ಟಿದೆ.
29.ಫ್ರಾ ಲ್ಯುಕಾ ಪಾಸಿಯೋಲಿ 1494ರಲ್ಲಿ ಗಣಿತದ ಬಗ್ಗೆ ಬೃಹತ್ ಗ್ರಂಥವೊಂದನ್ನು ಪ್ರಕಟಿಸಿದನು. ಗಣಿತದ ಬಗ್ಗೆ ಆ ವರೆಗೆ ತಿಳಿದಿದ್ದ ಎಲ್ಲ ವಿಷಯಗಳ ಸಾರಾಂಶವನ್ನು ಅದರಲ್ಲಿ ಆತ ಬರೆದಿದ್ದನು. ಅದೇನಿದ್ದರೂ, ಪಾಸಿಯೋಲಿ ಪ್ರಸಿದ್ಧನಾದದ್ದು, ಆ ಗ್ರಂಥದ ಭಾಗವಾಗಿ ಪ್ರಕಟಿಸಿದ್ದ “ದ್ವಿ-ದಾಖಲೆ ಜಮಾಖರ್ಚು ಪದ್ಧತಿ”ಯಿಂದ (ಡಬಲ್-ಎಂಟ್ರಿ ಬುಕ್-ಕೀಪಿಂಗ್ ಸಿಸ್ಟಮ್). ಇದಕ್ಕಾಗಿಯೇ ಆತನಿಗೆ “ಜಮಾಖರ್ಚು ದಾಖಲಾತಿ ಪದ್ಧತಿಯ ಪಿತಾಮಹ” ಎಂಬ ಹೆಸರು ಬಂತು.
30.ಒಂದು ಕಚ್ಚಾತೈಲ ಬಾವಿಯನ್ನು ಐದು ಮೈಲು ಆಳಕ್ಕೆ ಕೊರೆಯಬೇಕಾದರೆ, ಸುಮಾರು 500 ದಿನಗಳು ನಿರಂತರವಾಗಿ ಹಗಲೂರಾತ್ರಿ ಕೊರೆಯಬೇಕಾಗುತ್ತದೆ.