ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 7)
31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
32.ಭೂಮಿಯಲ್ಲಿ ಬದುಕಿ ಬಾಳಿದ ಅರುವತ್ತು ಬಿಲಿಯನ್ ಮನುಷ್ಯರಲ್ಲಿ ಪ್ರತಿಯೊಬ್ಬರೂ ಉಳಿದ ಎಲ್ಲರಿಗಿಂತ ಭಿನ್ನ! ಪ್ರತೀ ತಂದೆ-ತಾಯಿ ಉತ್ಪಾದಿಸುವ ಲಿಂಗ-ನಿರ್ದೇಶಿ ಜೀವಕೋಶಗಳಲ್ಲಿ ಸಂಭವಿಸಬಹುದಾದ ಬದಲಾವಣೆಗಳ ಅಗಾಧ ಸಂಖ್ಯೆಯನ್ನು ಗಮನಿಸಿದರೆ, ಅನಂತ ಕಾಲದ ವರೆಗೆ ಈ ವಿಶೇಷತೆ ಹೀಗೆಯೇ ಮುಂದುವರಿಯುತ್ತದೆ. ಅದೇನಿದ್ದರೂ, ಇದಕ್ಕೆ ಕೆಲವು ವಿನಾಯ್ತಿಗಳಿವೆ: ಏಕರೂಪದ ಅವಳಿಜವಳಿ, ತ್ರಿವಳಿ ಇತ್ಯಾದಿ. ಯಾಕೆಂದರೆ, ಇವರು ಫಲೀಕೃತವಾದ ಒಂದೇ ಅಂಡಾಶಯವು ಎರಡು ಅಥವಾ ಹೆಚ್ಚು ಕೋಶಗಳಾಗಿ ಒಡೆದಾಗ, ಅವುಗಳಿಂದ ಬೆಳೆದು ಬರುವ ವ್ಯಕ್ತಿಗಳು.
33.ಪ್ಯಾರಿಸಿನ ಜಗತ್ಪ್ರಸಿದ್ಧ ಎಫೆಲ್ ಗೋಪುರದಲ್ಲಿರುವ "ಕಟಿ ಮೊಳೆ” (ರಿವೆಟ್)ಗಳ ಸಂಖ್ಯೆ 25,00,000!
34.ಜಗತ್ತಿನ ಜನಸಂಖ್ಯೆ 2019ರಲ್ಲಿದ್ದ 771.34 ಕೋಟಿಗಳಿಂದ 2020ರಲ್ಲಿ 779.45 ಕೋಟಿಗಳಿಗೆ ಏರಿಕೆಯಾಗಿದೆ. ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚಳ 8,13,30,639 (ಹೆಚ್ಚಳದ ದರ ಶೇಕಡಾ 1.05). ಈ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವವರ ಸಂಖ್ಯೆಯಲ್ಲಿ ಸುಮಾರು ಎಂಟು ಕೋಟಿ ಏರಿಕೆಯಾಗಿದೆ.
35.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಜನಸಂಖ್ಯೆ ಹೊಂದಿರುವ ಚೀನಾ (ಮೊದಲ ಸ್ಥಾನ) ಮತ್ತು ಭಾರತ (ಎರಡನೇ ಸ್ಥಾನ) ಹಾಗೂ ಅತ್ಯಂತ ಶ್ರೀಮಂತ ದೇಶವಾಗಿರುವ ಯು.ಎಸ್.ಎ. ಇವುಗಳ 2020ರ ಜನಸಂಖ್ಯಾ ಸಂಬಂಧಿ ಅಂಕೆಸಂಖ್ಯೆಗಳು ಹೀಗಿವೆ:
ಜನಸಂಖ್ಯೆ (ಕೋಟಿಗಳಲ್ಲಿ): ಚೀನಾ 143.93; ಭಾರತ 138.00; ಯು.ಎಸ್.ಎ. 33.10
ವಿಸ್ತೀರ್ಣ (ಚದರ ಕಿಮೀ): ಚೀನಾ 97,06,961; ಭಾರತ 32,87,590; ಯು.ಎಸ್.ಎ. 93,72,610
ಜನಸಂಖ್ಯಾ ಸಾಂದ್ರತೆ (ಜನಸಂಖ್ಯೆ /ಚದರ ಕಿಮೀ) ಚೀನಾ 149; ಭಾರತ 424; ಯು.ಎಸ್.ಎ. 36
ಆದರೆ, ಯು.ಎಸ್.ಎ. ದೇಶದ ಒಬ್ಬ ಪ್ರಜೆ ತನ್ನ ಜೀವಿತ ಅವಧಿಯಲ್ಲಿ (ಅ) ಉಪಯೋಗಿಸುವ ಭೂಮಿಯ ಸಂಪನ್ಮೂಲಗಳು ಮತ್ತು (ಆ) ಉಂಟು ಮಾಡುವ ಮಾಲಿನ್ಯ, ಭಾರತದ ಎಂಭತ್ತು ಪ್ರಜೆಗಳ (ಅ) ಮತ್ತು (ಆ)ಕ್ಕೆ ಸಮಾನ! ಅಂದರೆ, ಯು.ಎಸ್.ಎ. ದೇಶದ ಪ್ರತಿಯೊಬ್ಬ ಪ್ರಜೆಯ (ಅ) ಮತ್ತು (ಆ), ಭಾರತದ ಪ್ರಜೆಯದಕ್ಕಿಂತ ೮೦ ಪಟ್ಟು ಜಾಸ್ತಿ!!