ಹೀಗೆ ಹೋಗದಿರು...
ಹೀಗೆ ಹೋಗದಿರು ಚೆಲುವ ನನ್ನೊಲವ ತ್ಯಜಿಸುತಲೆ
ಮೌನ ಕಂಬನಿ ಸುರಿಯೆ ಕುಳಿತಲ್ಲಿಯೆ
ಬದುಕೆಲ್ಲ ಸೋಲುವುದು ಸೋಲಿನಲಿ ಗೆಲುವಿಹುದೆ
ನನ್ನಂತರಂಗದೊಳು ಬಲವಿಲ್ಲದೆ
ನನಸ ಅಂಗಳವೇರಿ ಕನಸುಗಳ ಹುಡುಕುತಿರೆ
ಮರೆಯಾಗಿ ಹೋಗದಿರು ನನ್ನ ಬಿಟ್ಟು
ಹೇಳಲಿರುವೆನು ಇಲ್ಲಿ ನೂರಾರು ಕತೆಗಳಿರೆ
ನಿನ್ನೊಳಗೆ ನಾನಿರಲು ಮೌನ ಬಿಟ್ಟು
ಹೃದಯದಾಳದಿ ಚಿತೆಯು ಧಗ ಧಗಿಸಿ ಉರಿಯುತಿರೆ
ಬರಸೆಳೆದು ತಬ್ಬುವವ ನೀನೊಬ್ಬನೆ
ಬಹು ಬೇಗ ಬಂದು ಬಿಡು ನನ್ನ ಒಲವಿನ ಹೂವೆ
ನಿನಗಾಗಿ ಕಾದಿರುವೆ ಒಬ್ಬಂಟಿ ನಾನೆ
***
ಗಝಲ್
ಜಾತಿಗಳ ಜೊತೆಗೆ ಹೆಜ್ಜೆ ಹಾಕಿದ್ದೇವೆ
ವರ್ಣಗಳ ಕಡೆಗೆ ಮುಖ ಮಾಡಿದ್ದೇವೆ
ಪಂಗಡಗಳು ಇವೆಯೆಂದು ನಾವು ಗುರುತಿಸಿದ್ದೇವೆ
ಜೀತಗಳಿಗೆ ನಮ್ಮವರನ್ನು ಹೀಗೆ ತಳ್ಳಿದ್ದೇವೆ
ಮಹಡಿ ಮನೆಗಳ ಹೊಲಸನ್ನು ತೊಳೆದಿದ್ದೇವೆ
ಬಡತನದ ಬೇಗೆಯಲ್ಲಿ ಯಾವತ್ತೂ ಬಳಲಿದ್ದೇವೆ
ಕಲಿಯಬೇಕೆನ್ನುವ ಹಠದಲ್ಲಿ ಈಗ ಬೆಂದಿದ್ದೇವೆ
ಬಾಳಬೇಕೆನ್ನುವ ಛಲದಲ್ಲಿ ಮತ್ತೆ ಕಾಣೆಯಾಗಿದ್ದೇವೆ
ಈಶಾ ರಶ್ಮಿಯಿಲ್ಲದೆ ಮನೆಯೊಳಗೆ ಇಂದು ಒಣಗಿದ್ದೇವೆ
ಸಂಪತ್ತುಗಳ ನೆಲದಲ್ಲಿ ಹೀಗೆ ಬಿಕರಿಯಾಗಿದ್ದೇವೆ
-ಹಾ ಮ ಸತೀಶ ಬೆಂಗಳೂರು