ಹೀಗೇಕಾಯಿತು?! (ಬೇತಾಳ ಕಥೆ)

ಹೀಗೇಕಾಯಿತು?! (ಬೇತಾಳ ಕಥೆ)

ಬರಹ

ಛಲ ಬಿಡದ ತ್ರಿವಿಕ್ರಮನು ’ಚಂದಮಾಮ’ ಸಂಪಾದಕರ ಆಣತಿಯಂತೆ ಮತ್ತೆ ಮರದ ಬಳಿಬಂದು ಮರದಲ್ಲಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಮುನ್ನಡೆದನು. ಶವದಲ್ಲಿದ್ದ ಬೇತಾಳವು, ’ಬೆನ್ನು ಬಿಡದ ಬೇತಾಳ’ ಎಂಬ ಗಾದೆಯಂತೆ ಯಥಾಪ್ರಕಾರ ತ್ರಿವಿಕ್ರಮನೊಡನೆ ಮಾತಿಗೆ ಮೊದಲಿಟ್ಟಿತು.

’ಎಲೈ ತ್ರಿವಿಕ್ರಮನೇ, ನಿನ್ನನ್ನು ನೋಡಿ ನನಗೆ ಮರುಕವುಂಟಾಗುತ್ತಿದೆ. ಈ ಪ್ರಜಾಪ್ರಭುತ್ವದ ಯುಗದಲ್ಲೂ ನೀನು ನಿನ್ನನ್ನು ಇನ್ನೂ ರಾಜನೆಂದೇ ಭಾವಿಸಿಕೊಂಡಿರುವೆ. ಆದರೆ ಅದೇ ವೇಳೆ, ’ಚಂದಮಾಮ’ ಸಂಪಾದಕರ ಆಣತಿಯನ್ನು ಅಕ್ಷರಶಃ ಶಿರಸಾವಹಿಸಿ ಪಾಲಿಸುತ್ತಿರುವೆ! ಹಿಂದೆ ಗದಗದ ಪಿ.ಸಿ.ಶಾಬಾದಿಮಠ ಎಂಬ ಪುಸ್ತಕ ಪ್ರಕಾಶಕರ ಅಪ್ಪಣೆಯನ್ನೂ ಇದೇ ರೀತಿ ಪಾಲಿಸುತ್ತಿದ್ದೆ. ಇರಲಿ. ನಿನ್ನ ಕರ್ಮ. ನಾನೇನೂ ಮಾಡುವಂತಿಲ್ಲ. ಶತಮಾನಗಳಿಂದ ಈ ರೀತಿ ಶವಧಾರಿಯಾಗಿ ನಡೆಯುತ್ತ ಸುಸ್ತುಹೊಡೆಯುತ್ತಿರುವ ನಿನ್ನ ಆಯಾಸ ಪರಿಹಾರಕ್ಕಾಗಿ ಸತ್ಯಕಥೆಯೊಂದನ್ನು ಹೇಳುತ್ತೇನೆ, ಕೇಳು’, ಎಂದು ಬೇತಾಳವು ಕಥೆಯನ್ನು ಹೇಳತೊಡಗಿತು.

’ಭರತಖಂಡದ ಲೋಕಸಭಾ ಚುನಾವಣೆಯ ಅಂಗವಾಗಿ ಕರ್ನಾಟಕದಲ್ಲೂ ಚುನಾವಣೆ ನಡೆದುದು ನಿನಗೆ ಗೊತ್ತಷ್ಟೆ. ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಪಿಳ್ಳಾರಿ ಲೋಕಸಭಾ ಕ್ಷೇತ್ರವು ವಿಶಿಷ್ಟವಾದುದು. ಕರ್ನಾಟಕಕ್ಕೆ ಸೇರಿದ್ದರೂ ಇಲ್ಲಿ ತೆಲುಗು ಭಾಷೆಯು ವಿಜೃಂಭಿಸುತ್ತಿದೆ. ಕುಬೇರರ ಆಡುಂಬೊಲವಾಗಿದ್ದರೂ ಇಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಲಕ್ಷಾಂತರ ಪ್ರಜೆಗಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೂವರು ಮಂತ್ರಿಗಳನ್ನು ನೀಡಿದ್ದೂ ಈ ಕ್ಷೇತ್ರವು ಸರಿಯಾದ ರಸ್ತೆಗಳಿಲ್ಲದೆ ಸದಾ ದೂಳಿನಲ್ಲಿ ಮುಳುಗಿರುತ್ತದೆ. ಆ ಕುಬೇರ ಮಂತ್ರಿಗಳು ಮಾತ್ರ ಇಡೀ ರಾಜ್ಯವನ್ನೇ ತಮ್ಮ ಕರಕಮಲದಲ್ಲಿಟ್ಟುಕೊಂಡು ಆಡಿಸುತ್ತಿದ್ದಾರೆ.

ಇಂಥ ಪಿಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಆ ಕುಬೇರ ಮಂತ್ರಿಯೊಬ್ಬರ ಸಮೀಪಬಂಧುವೇ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರ ಜಯವು ನಿಶ್ಚಿತವೆಂದು ಇಡೀ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯ, ಇಡೀ ಭರತಖಂಡವೇ ಮಾತಾಡಿಕೊಳ್ಳುತ್ತಿತ್ತು. ಅಂತಹುದರಲ್ಲಿ ಆ ಅಭ್ಯರ್ಥಿಯು ಸೋತುಹೋದರು! ಈಗತಾನೇ ಬಂದ ಫಲಿತಾಂಶವನ್ನು ನೀನೂ ಗಮನಿಸಿರಬಹುದು. ಆ ಅಭ್ಯರ್ಥಿ ಮಾತ್ರವಲ್ಲ, ಅವರ ಎದುರಾಳಿ ಅಭ್ಯರ್ಥಿಯೂ ಸೋತುಹೋಗಿ, ಯಾರೋ ಒಬ್ಬರು ಹೆಸರೇ ಕೇಳಿಲ್ಲದ ಪಕ್ಷೇತರ ವ್ಯಕ್ತಿ ಲೋಕಸಭೆಗೆ ಆಯ್ಕೆಯಾಗಿಬಿಟ್ಟಿದ್ದಾರೆ!

ಹೀಗೇಕಾಯಿತು? ಉತ್ತರಿಸು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆಯು ಒಡೆದು ಸಹಸ್ರ ಚೂರಾಗುವುದು ಎಚ್ಚರಿಕೆ!’ ಎಂದು ಬೇತಾಳವು ಕಥೆಯನ್ನು ಮುಗಿಸಿತು.

ಆಗ ತ್ರಿವಿಕ್ರಮನು ಬೇತಾಳವನ್ನು ನೋಡಿ ನಸುನಗುತ್ತ ಇಂತೆಂದನು.
’ಎಲೈ ಬೇತಾಳವೇ, ಈ ಸಲ ನೀನು ಈಸೀ ಕ್ವೆಶ್ಚನ್ ಹಾಕಿರುವೆ. ಚಾಲ (ಬಹಳ) ಈಸೀ. ಪಿಳ್ಳಾರಿಯಿಂದ ಗೆದ್ದ ಆ ಅಪರಿಚಿತ ಪಕ್ಷೇತರ ವ್ಯಕ್ತಿಯ ಚುನಾವಣಾ ಚಿಹ್ನೆ ರೈಲ್ವೆ ಇಂಜಿನ್. ಪಕ್ಕದ ಆಂಧ್ರಪ್ರದೇಶದ ಜನಪ್ರಿಯ ಚಿತ್ರತಾರೆ ಪರಂಜೀವಿಯ ’ಮಜಾರಾಜ್ಯಂ’ ಪಕ್ಷದ ಚಿಹ್ನೆಯೂ ರೈಲ್ವೆ ಇಂಜಿನ್ನೇ. ಪಿಳ್ಳಾರಿ ಕ್ಷೇತ್ರದ ನಿರಕ್ಷರಿ ಮತದಾರರಲ್ಲಿ ಬಹುತೇಕರು ಮುಗ್ಧರು. ಅವರೆಲ್ಲ ತೆಲುಗು ಭಾಷಿಕರಾಗಿದ್ದು ಪಿರಂಜೀವಿ ಸಿನಿಮಾಗಳೆಂದರೆ ಅವರಿಗೆ ಪ್ರಾಣ. ಅವರೆಲ್ಲರೂ ಪಿರಂಜೀವಿ ಫ್ಯಾನುಗಳು ಮತ್ತು ಟಿವಿಯಲ್ಲಿ ಸದಾ ತೆಲುಗು ಚಾನೆಲ್‌ಗಳನ್ನೇ ನೋಡುತ್ತಿರುವವರು. ತಾವು ರೈಲ್ವೆ ಇಂಜಿನ್‌ಗೆ ಮತ ನೀಡಿದರೆ ಅದು ತಮ್ಮ ಹೀರೊ ಪಿರಂಜೀವಿಗೆ ಸೇರುತ್ತದೆಂದು ಭಾವಿಸಿ ಅವರೆಲ್ಲ ರೈಲ್ವೆ ಇಂಜಿನ್‌ಗೆ ಮತ ನೀಡಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಪಿರಂಜೀವಿಯ ಪಕ್ಷವು ಸ್ಪರ್ಧಿಸಿಲ್ಲವೆಂಬುದು ಅವರಿಗೆ ಗೊತ್ತಿಲ್ಲ ಪಾಪ! ಎಲ್ಲ ಗೊತ್ತಿರುವ ವಿದ್ಯಾವಂತರು ವೋಟ್ ಮಾಡಿಲ್ಲ. ಪರಿಣಾಮ, ರೈಲ್ವೆ ಇಂಜಿನ್ ಗುರುತು ಹೊಂದಿದ್ದ ಪಕ್ಷೇತರನೊಬ್ಬ ಪಿಳ್ಳಾರಿಯಲ್ಲಿ ಗೆದ್ದುಬಿಟ್ಟಿದ್ದಾನೆ!’

ತ್ರಿವಿಕ್ರಮನು ಹೀಗೆ ಸರಿ ಉತ್ತರ ನೀಡಿದ್ದೇ ತಡ, ಅವನ ಮೌನ ಮುರಿದ ಬೇತಾಳವು ಶವಸಹಿತ ಮಾಯವಾಗಿ ಮರಳಿ ಮರ ಸೇರಿಕೊಂಡುಬಿಟ್ಟಿತು! ತ್ರಿವಿಕ್ರಮನು ಮತ್ತೆ ಪುನಃ ಎಗೈನ್....