ಹೀಗೊಂದು ಅನುಭವ

ಹೀಗೊಂದು ಅನುಭವ

ಇಂದು ಕೊನೆಯ ಪರೀಕ್ಷೆ . ಕಷ್ಟಪಟ್ಟು ಓದಿದ್ದನ್ನೆಲ್ಲಾ ಪೇಪರ್ ಮೇಲೆ ಕಕ್ಕಿ ಹೊರಬಂದಾಗ ಇಳಿಸಂಜೆ... 'ಅಬ್ಬ ಗೆದ್ದೆ' ಎಂಬ ಉದ್ಗಾರದೊಂದಿಗೆ ಬಸ್ ನಿಲ್ದಾಣದ ಕಡೆ ಮುಖ ಮಾಡಿದೆ. ಎಲ್ಲಿದ್ದನೋ ಆ ವರುಣ ಒಮ್ಮೆಗೇ ತನ್ನ ಸ್ಟಾಕ್ನೆಲ್ಲಾ ನನ್ನ ಮೇಲೆ ಸುರಿಸಬೇಕೆ?? ಬಯ್ದುಕೊಳ್ಳುತ್ತಾ ಆಸರೆಗೆ ಆಚೀಚೆ ನೋಡುತ್ತಿರಲು ಅನತಿ ದೂರದಲ್ಲಿ ಇಬ್ಬರು ಷೋಡಶಿ(!!)ಯರು ಕೈ ಬೀಸಿ ಕರೆದ ಹಾಗೆ ಅನ್ನಿಸಿತು. ಮಳೆಯಲ್ಲಿ ನೆನೆಯುತ್ತಲೇ ಅವರಿದ್ದ ಮರದ ಕಡೆ ನಡೆದೆ. 'ನೋಡಿ, ಅವನ್ಯಾರೋ ಆಗಲಿಂದ ನಮ್ಮನ್ನು ಫಾಲೋ ಮಾಡ್ತಾ ಇದ್ದಾನೆ, ನೀವು ನಮ್ಮ ಜೊತೆ ಇದ್ದರೆ ಸೇಫ್ ಅಂತ ಕರೆದ್ವಿ'.. ಅಂತ ವಿವರಣೆ ಕೊಟ್ಟವು. ನಾನು ವೀರ ವನಿತೆ ಓಬವ್ವನ ಸೋಗಿನಲ್ಲಿ ಕತ್ತು ಆಚೀಚೆ ಆಡಿಸಿದೆ, ಯಾರೂ ಕಾಣಿಸಲಿಲ್ಲ.…ಮಳೆ ಜೋರಾಯ್ತಲ್ಲ, ಅದಕ್ಕೆ ಓಡಿಹೊಗಿರಬೇಕು ಅಂದ್ಕೊಂಡು ಅವರ ಬಗ್ಗೆ ವಿಚಾರಿಸ ತೊಡಗಿದೆ. ಹತ್ತಿರವೇ ಇದ್ದ ಕಾಲೇಜಿನಲ್ಲಿ ಪಿ ಯು ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಹುಡುಗಿಯರವರು... ನಾನು ಅದೇ ಕಾಲೇಜ್ನಲ್ಲಿ ವ್ಯಾಸಂಗ ಮಾಡಿದ್ದರಿಂದ ಸಹಜವಾಗಿಯೇ ಖುಷಿಯಾಗಿ ನಮ್ಮ ಲೆಕ್ಚರರ್ಸ್ ಇನ್ನೂ ಅಲ್ಲೇ ಕೆಲಸ ಮಾಡುತ್ತಿದ್ದಾರ ಎಂದು ವಿಚಾರಿಸತೊಡಗಿದೆ. ನಮ್ಮ ಸಂಭಾಷಣೆ ಹೀಗೆ ಸಾಗಿತ್ತು.
ನಾನು: ಕಂಪ್ಯೂಟರ್ ಸೈನ್ಸ್ ಮೇಡಂ ___  ಇನ್ನೂ   ಅಲ್ಲೇ ಇದ್ದಾರ?..
ಷೋಡಶಿ ೧ : ಅವಳಾ, ಆ ಬಿಳಿ ಜಿರಲೇನಾ.. ?? ಅಬ್ಬ, ಏನು ತಲೆ ತಿನ್ದುಬಿಡ್ತಾಳಪ್ಪ.. ಇನ್ನೂ ೨೦ ವರ್ಷ ಬಿಡಲ್ಲ , ಕಾಣ್ತದೆ..
ಮಾಥ್ಸ್ ಲೆಕ್ಚರರ್ ಎಲ್ರಿಗೂ ತುಂಬಾ ಇಷ್ಟದ  ಮೆತು ಮಾತಿನವರು. ಅವರ ಬಗ್ಗೆ ವಿಚಾರಿಸಿದೆ.
ನಾನು :___ ಮೇಡಂ ಟ್ರಿಗ್ನಾಮೆಟ್ರಿ ಪಾಠ ಈಗಲಾದರೂ ಗಟ್ಟಿಯಾಗಿ  ಹೇಳ್ತಾರಾ?
ಷೋಡಶಿ ೨ : ಆ ಯಮ್ಮ ಬಾಯಲ್ಲಿ ಅದೇನು ತುಂಬ್ಕೊಂಡ್ ಇರ್ತಾಳೋ…ಜೋರಾಗ್ ಸ್ವರವೇ ಹೊರಡಲ್ಲಪ್ಪ...ಅಲ್ವೇನೇ....?
ನಾನು : ನಾನು ಓದ್ತಿದ್ದಾಗ ಇಂಗ್ಲಿಷ್ ಪ್ರೊಫೆಸರ್ ___ ತುಂಬ ಸ್ಟ್ರಿಕ್ಟ್ , ಅವರ ಲೆಕ್ಚರ್ಸ  ತುಂಬಾ ಇಂಟೆರೆಸ್ಟಿಂಗ್ ಆಗಿರ್ತಿತ್ತು .. ನಿಮಗೆ ಹೇಗನಿಸುತ್ತೆ.. ನಿಮಗೂ ತೊಗೋತಾರ  ??
ಷೋಡಶಿಯರಿಬ್ಬರು ಒಟ್ಟಿಗೆ : ಯಪ್ಪಾ ....ಆ ಕರಿ ಹೆಣ ಕ್ಲಾಸ್ ಗೆ ಬಂದ್ರೆ ನಾವು ಕಿಟಕಿ ಯಿಂದ ಆಚೆ ಬಂದ್ಬಿಡ್ತೀವಿ !!..
ಓಹೋ.. ಇವರು ಕನ್ನಡ ಕಂದಮ್ಮಗಳೇ ಇರಬೇಕು...ಅದಕ್ಕೆ ಬೇರೆ ಏನೂ ರುಚಿಸುತ್ತಿಲ್ಲ ಎನಿಸಿ 
ನಾನು: ಕನ್ನಡ ಪಾಠ ಇಷ್ಟ ಅಂತ ಗೊತ್ತಾಯ್ತು ....ಹಳೆಗನ್ನಡ ಸಾಹಿತ್ಯದಲ್ಲಿ ಅಭಿರುಚಿ ಇದ್ಯಾ?.. __ ಮೇಡಂ ಕ್ಲಾಸ್  ಚೆನ್ನಾಗಿರುತ್ತಲ್ವ??
ಷೋಡಶಿ ೨ : ಅಯ್ಯೋ ಯಾರಿಗೆ ಬೇಕು ಈ ಮಾತ್ರೆ, ಗಣ , ಅಲಂಕಾರ ಎಲ್ಲಾ?? ಅದೂ ಈಗಿನ ಕಾಲದಲ್ಲಿ..  ಕೆಲಸಕ್ಕೆ ಏನಿದ್ರೂ ಇಂಗ್ಲಿಷ್ ಮಾತ್ರ. ಅದೂ ಅಲ್ದೆ ಕನ್ನಡ ಡಿಪಾರ್ಟ್ಮೆಂಟ್ ಲೆಕ್ಚರರ್ಸ್  ಮೂದೇವಿಗಳು...  ಲಿಪ್ ಸ್ಟಿಕ್, ಮ್ಯಾಚಿಂಗ್ ಬ್ಲೌಸ್ ಹಾಳಾಗೋಗ್ಲಿ, ಒಂದಕ್ಕೂ ಡ್ರೆಸ್ ಸೆನ್ಸ್ ಝೀರೋ.. 
ಷೋಡಶಿ ೧ : (ಮುಂದುವರೆಸುತ್ತಾ ) __ ಅದಕ್ಕಂತೂ ಹರಕು ಬಾಯಿ; ಬಂದ್ರೆ ಒದ್ಬಿಡೋಣ ಅನ್ನಿಸುತ್ತೆ….
ನನ್ನ ಪ್ರೀತಿಯ ಮೇಡಂ ಇನ್ನೂ ಅಲ್ಲೇ ಸೇವೆ ಸಲ್ಲಿಸ್ತಿದ್ದಾರೆ , ಈ ಹುಡುಗಿಯರು ಏಕವಚನ ಬಳಸೋದು ಅಲ್ಲದೆ ಕೆಟ್ಟ ಪದ ಗಳಿಂದ ಹೀಯಾಳಿಸೋದು ಕಂಡು ಬಹಳವೇ ನೋವಾಯ್ತು... ಸರಿ, ಅವರಿಗೆ ಆಸಕ್ತಿ ವಿಷಯವಾದರೂ ಏನೆಂದು ಕೇಳೋಣ ಎನಿಸಿ,
ನಾನು : ಪಾಪ, ದೊಡ್ಡವರ ಬಗ್ಗೆ ಹಾಗೆ ಮಾತಾಡೋದು ತಪ್ಪಲ್ವ?  ಅವರು ಎಷ್ಟೆಲ್ಲಾ ತಯ್ಯಾರಿ ನಡೆಸಿ ಪಾಠ ಹೇಳಿಕೊಡಲು ಬಂದಿರ್ತಾರೆ., ಆಯ್ತು ..ನಿಮಗೆ ಓದಕ್ಕೆ ಇಷ್ಟ ಇಲ್ವೋ ಅಥ್ವಾ ಈ ಕಾಲೇಜ್ ಇಷ್ಟ ಇಲ್ವೋ ?
ಇಬ್ಬರೂ : ಎರಡೂ ....
ನಾನು : ಮತ್ತೆ ಯಾಕೆ ದುಡ್ಡು ವೇಸ್ಟ್ ಮಾಡಿದ್ರೀ ??
ಇಬ್ಬರೂ : ಮನೇಲಿದ್ರೆ ಅಮ್ಮ ಕೆಲಸ ಹೇಳ್ತಾರೆ , ಇಲ್ಲಿ ಬಂದ್ರೆ ಇವರನ್ನೆಲ್ಲ ತಮಾಷೆ ಮಾಡ್ಕೊಂಡು ಹಾಯಾಗಿರಬಹುದು !!... ಅಂತನ್ನುತ್ತಲೇ ‘ ಬೈ 'ಹೇಳಿ ಓಡಿಯೇ ಬಿಟ್ಟರು. 
 
ಮಳೆ ನಿಂತಿತ್ತು, ಮನವೂ ಖಾಲಿಯಾಗಿತ್ತು... ಭವ್ಯ ಭಾರತದ ಮುಂದಿನ ಪೀಳಿಗೆಯ ದಿವ್ಯ ಪ್ರಜೆಗಳ ಬಗ್ಗೆ ಯೋಚಿಸುತ್ತ ಬಸ್ ಸ್ಟಾಪ್ ಕಡೆ ನಡೆದೆ.