ಹೀಗೊಂದು ಆಹ್ವಾನ ಪತ್ರಿಕೆ!

ಹೀಗೊಂದು ಆಹ್ವಾನ ಪತ್ರಿಕೆ!

ಮದುವೆ ಎಂಬ ಸಂಭ್ರಮಕ್ಕಾಗಿ ತಯಾರಿಸಲಾಗುವ ಆಹ್ವಾನ ಪತ್ರಿಕೆಗಳಲ್ಲಿ ನೂರಾರು ವಿಧ. ಹಣವಂತರು ಮದುವೆಯ ಆಹ್ವಾನ ಪತ್ರಿಕೆಗಾಗಿಯೇ ಲಕ್ಷಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಾರೆ. ಈ ಬಗ್ಗೆ ಹಲವಾರು ಉದಾಹರಣೆಗಳನ್ನು ನಾವು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಗಮನಿಸಿರುತ್ತೇವೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ತಮ್ಮ ಸಾಕು ಮಗನ ವಿವಾಹದ ಆಮಂತ್ರಣ ಪತ್ರದ ಜೊತೆಗೆ ಬೆಳ್ಳಿ ತಟ್ಟೆ, ಬಂಗಾರದ ನಾಣ್ಯ ಉಡುಗೊರೆಯಾಗಿ ನೀಡಿದ್ದು, ಇತ್ತೀಚೆಗೆ ಜನಾರ್ಧನ ರೆಡ್ಡಿ ತಮ್ಮ ಮಗಳ ಮದುವೆಗೆ ಆಹ್ವಾನಿಸುವ ವಿಡಿಯೋ ಸಹಿತವಾಗಿರುವ ಕಾಗದವನ್ನು ನೀಡಿದ್ದು ಗಮನಿಸಿರಬಹುದು. ಅದೇ ರೀತಿ ಆಹ್ವಾನ ಪತ್ರಿಕೆಯನ್ನು ಬಟ್ಟೆಯಲ್ಲಿ, ತಾಳೆ ಗರಿಗಳಲ್ಲಿ ಮುದ್ರಿಸುವುದು ಎಲ್ಲಾ ಹೊಸ ಹೊಸ ನಮೂನೆಗಳು. 

ಕೆಲವು ಶೋಕಿಲಾಲರು ತಮ್ಮ ಮಗನ ಅಥವಾ ಮಗಳ ಮದುವೆ ಕಾಗದದ ಜೊತೆ ಮದ್ಯದ ಬಾಟಲಿ, ಸೋಡಾ ಮತ್ತು ಕುರುಕುರು ತಿಂಡಿಯನ್ನೂ ಪ್ಯಾಕ್ ಮಾಡಿ ಕಳಿಸಿದ್ದೂ ಇದೆ. ಬೆಲೆ ಬಾಳುವ ಸೀರೆ, ಬಂಗಾರದ ಆಭರಣಗಳನ್ನು ನೀಡಿದ್ದೂ ಇದೆ. ಇದು ಶ್ರೀಮಂತರ ಕಥೆಯಾದರೆ ಮಧ್ಯಮ ವರ್ಗದವರೂ ನಾವೇನೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳಲು ವಿವಿಧ ರೀತಿಯ ಮದುವೆ ಕಾಗದಗಳನ್ನು ತಯಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಈಗಂತೂ ಡಿಜಿಟಲ್ ಯುಗವೆಂದ ಬಳಿಕ ಕಾಗದವನ್ನು ಹೇಗೆ ಬೇಕಾದರೂ ಮುದ್ರಿಸುವ ಅವಕಾಶಗಳು ಇವೆ. ಹೀಗೇ ಒಂದು ವಿನೂತನ ಬಗೆಯ ಆಹ್ವಾನ ಪತ್ರಿಕೆ ನನಗೂ ಬಂತು...!

ಕೆಲವು ದಿನಗಳ ಹಿಂದೆ ನನ್ನ ಗೆಳೆಯ ಭರತ್ ಆತನ ಮದುವೆ ಆಹ್ವಾನ ಪತ್ರ ನೀಡಲು ನನ್ನ ಮನೆಗೆ ಬಂದಿದ್ದ. ಆತನ ಮದುವೆ ನಿಶ್ಚಿತಾರ್ಥ ಅದಾಗಲೇ ಆಗಿರುವುದು ನನಗೆ ತಿಳಿದೇ ಇತ್ತು. ಕೈ ಬೀಸಿಕೊಂಡು ಮದುವೆಗೆ ಕರೆಯಲು ಬಂದಿದ್ದಾನಲ್ಲ ಎಂದು ಅವನನ್ನು ನೋಡುವಾಗ ಅನಿಸಿತು. ಬಹುಷಃ ಈಗಿನ ಹೊಸ ಟ್ರೆಂಡ್ ನಂತೆ ಆತ ಬಾಯಿ ಮಾತಿನಲ್ಲಿ ಆಹ್ವಾನ ನೀಡಿ, ಮದುವೆಯ ಕರೆಯೋಲೆಯನ್ನು ವಾಟ್ಸಾಪ್ ಮೂಲಕ ಕಳಿಸುತ್ತಾನೆ ಎಂದು ಅಂದುಕೊಂಡೆ. ಇಂತಿಂಥ ದಿನಕ್ಕೆ ಮದುವೆ, ಆರತಕ್ಷತೆ ಎಂದೆಲ್ಲಾ ಹೇಳಿ, ಬರಲೇ ಬೇಕು ಎಂಬ ಒತ್ತಾಯವನ್ನೂ ಮಾಡಿ, ಕಿಸೆಯಿಂದ ಪುಟ್ಟ ಎಟಿಎಂ ಕಾರ್ಡ್ ತೆಗೆದು ಕೊಟ್ಟ. 

“ಏನು ಮಾರಾಯ, ಮದುವೆಗಿಂತ ಮೊದಲೇ ಎಟಿಎಂ ಕಾರ್ಡ್ ಕೊಡುತ್ತೀಯಲ್ಲಾ? ಉಡುಗೊರೆಯ ಹಣವನ್ನು ನೇರವಾಗಿ ಕಾರ್ಡ್ ಮೂಲಕ ಪಾವತಿ ಮಾಡಬೇಕೋ ಏನೋ?”

“ಸರಿಯಾಗಿ ನೋಡಿ ಅಣ್ಣ, ಅದು ಆಹ್ವಾನ ಪತ್ರಿಕೆ” ಅಂದ.

ಓ ದೇವಾ, ಹೀಗೂ ಕರೆಯೋಲೆ ಮಾಡುತ್ತಾರಾ? ಎಂದು ಆ ಕಾರ್ಡ್ ಅನ್ನು ಗಮನವಿಟ್ಟು ಓದುವಾಗ ಅನಿಸಿದ್ದು ಸುಳ್ಳಲ್ಲ. ನಮ್ಮ ಕಿಸೆಯಲ್ಲಿರುವ ಬ್ಯಾಂಕ್ ಎಟಿಎಂ ಕಾರ್ಡ್ ನದ್ದೇ ಯಥಾ ನಕಲು ಆಗಿರುವ ಈ ಆಹ್ವಾನ ಪತ್ರಿಕೆಯಲ್ಲಿ (ಚಿತ್ರವನ್ನು ಗಮನಿಸಿ) ವಧು-ವರರ ಆರತಕ್ಷತೆಯ (Reception) ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕರೆಯೋಲೆಯ ಒಂದು ಬದಿಯಲ್ಲಿ ಎಟಿಎಂ ಕಾರ್ಡ್ ನಲ್ಲಿ ಬಳಸಲಾಗುವ ಅಕ್ಷರ ವಿನ್ಯಾಸ (Font) ವನ್ನೇ ಬಳಸಿದ್ದಾರೆ. ವಧು-ವರರ ಹೆಸರು, ದಿನಾಂಕ, ಸಮಯ, ಸ್ಥಳ ಮತ್ತು ಮೊಬೈಲ್ ಸಂಖ್ಯೆ ನೀಡಲಾಗಿದೆ. ಇದರ ಜೊತೆಗೆ ಈ ಕಾರ್ಡ್ ಗೆ “ಲೈಫ್ ಟೈಂ ವ್ಯಾಲಿಡಿಟಿ" ಯನ್ನೂ ನೀಡಲಾಗಿದೆ! 

ಕಾರ್ಡ್ ನ ಮತ್ತೊಂದು ಬದಿಯಲ್ಲಿ “ಈ ಕಾರ್ಡ್ ಅನ್ನು ಗೆಳೆಯರ ಜೊತೆ ಹಂಚಿಕೊಳ್ಳಬಹುದು" ಎಂದು ಬರೆಯಲಾಗಿದೆ. ಆರತಕ್ಷತೆಯ ಬಗ್ಗೆ ಪುಟ್ಟದಾದರೂ ಸೊಗಸಾದ ಆಂಗ್ಲ ಪದಗಳು ಅಚ್ಚಾಗಿವೆ. ಮದುಮಗನ ಹಸ್ತಾಕ್ಷರವೂ ಮುದ್ರಿತವಾಗಿದೆ. ಹಳೆಯ ಮಂದಿ ಈ ಕಾರ್ಡ್ ನ ವಿನ್ಯಾಸವನ್ನು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಆದರೆ ಈಗಿನ ಜನಾಂಗಕ್ಕೆ ಈ ಯೋಚನೆ ಹೇಳಿ ಮಾಡಿಸಿದ ಹಾಗಿದೆ. ಈ ಕಾರ್ಡ್ ಅನ್ನು ಆತನ ಗೆಳೆಯನೊಬ್ಬ ಮುಂಬಯಿಯಲ್ಲಿ ತಯಾರಿಸಿದ್ದು ಎಂಬ ಮಾಹಿತಿ ದೊರೆತಿದೆ.

ಈಗಾಗಲೇ ಕಲಶ, ಮೊಬೈಲ್, ಟಿವಿ ಮುಂತಾದ ಆಕಾರದಲ್ಲಿ ಆಹ್ವಾನ ಪತ್ರಿಕೆಯನ್ನು ಮುದ್ರಿಸುವುದನ್ನು ಗಮನಿಸಿದ್ದೇವೆ. ಇದೊಂದು ವಿನೂತನ ಕಲ್ಪನೆ. ಇನ್ನಷ್ಟು ಹೊಸ ರೀತಿಯ ಆಹ್ವಾನ ಪತ್ರಿಕೆಗಳು ಮುಂದಿನ ದಿನಗಳಲ್ಲಿ ಬರಬಹುದು. ಕರೆಯೋಲೆ ಹೇಗಾದರೂ ಇರಲಿ, ಮದುವೆಯ ಬಳಿಕ ದಂಪತಿಗಳು ಉತ್ತಮ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಸಂಸಾರ ಸಾಗಿಸುವುದು ಬಹುಮುಖ್ಯ. ಹೊಸ ಬಗೆಯ ಆಹ್ವಾನ ಪತ್ರಿಕೆಗಳನ್ನು ತಯಾರಿಸುವುದು ಇಂದಿನ ಕಾಲದಲ್ಲಿ ದೊಡ್ಡ ಸಂಗತಿಯೇ ಅಲ್ಲ, ಏಕೆಂದರೆ ಈ ಮುದ್ರಣ ಲೋಕ ಯಾವತ್ತೂ ನಿಂತ ನೀರಲ್ಲ…