ಹೀಗೊಂದು ದನಿ

ಹೀಗೊಂದು ದನಿ

ಕವನ

ನಾ ಧರಿಸೆನು ನೀನಿತ್ತ ಮುಖವಾಡ!!

ಎನ್ನದಿದೆ ಎದೆಯ ಭಾವ ಸ್ವಂತ ಸ್ವಭಾವ!!

ಗದುರದಿರು!! ನಾ ಸರಕಲ್ಲ ನಿನ್ನ ಚೌಕಟ್ಟಿಗೆ.

ನಾ ಗಂಡೆಂಬ ಲಿಂಗದ ಬಿಗಿ ಪಟ್ಟಿಗೆ!!

 

ಕರೆಯದಿರು ಅನ್ಯ ಹೆಸರು, ನಾ ವಸ್ತುವಲ್ಲ!!

ಉಸಿರಾಡುವೆ ನಿನ್ನಂತೆ!! ಭಾವದಿ ಬೆರೆತೆ ನೀರಂತೆ!!

ಇರುವನು ನನ್ನಲಿ ಆತ್ಮ, ತೋರದೆ ಗೌರವ ನಿನ್ನಾತ್ಮ?

ನಾ ಶಪಿಸೆ ಈ ಬದುಕ, ಗೌರವಿಸುವೆ ಪ್ರತಿ ಬೆಳಕ.

 

ಧರಿಸಿಹೆ ಸೀರೆ, ಲಿಂಗತ್ವದ ಕಟ್ಟುಗಳ ಬಿಚ್ಚಿ

ಸಮಾಜದ ನೀತಿಗಳ ಬದಿಯಲಿ ಚಚ್ಚಿ

ಬಯಸಿಹೆ ನಾ ಅರ್ಹ ಗೌರವ

‘ಬದುಕಿ ಬದುಕಲು ಬಿಡಿ’ ಅರಿವಿರಲಿ ಈ ಸಾರ.

 

ನಾ ಬಲಿಯಾಗೆನು ಎನ್ನದಲ್ಲದ ತಪ್ಪಿಗೆ

ಗೌರವಿಸಿ ಬದುಕುವೆ ಎನ್ನ ಭಾವ ಹೊತ್ತಿಗೆ

ನಾ ಇರುವೆ ನನ್ನಂತೆ, ಕಳೆವೆ ಪರರ ಮಾತ ಸಂತೆ

ಎಳೆವೆ ತೇರ ತಲೆಯೆತ್ತಿ, ಎಂದೂ ಬಾಗದಂತೆ!!

 

ಅಡಗಿ ಮರೆಯಾಗ ಬಯಸೆನು ನಾನು!!

ಗರಿ ಬಿಚ್ಚಿ ಗಗನದಿ ಹಾರುವೆ ನಾನು!!

ಆತ್ಮಗೌರವ ತ್ಯಜಿಸಿ ಬದುಕೆನು ನಾನು!!

ನಿನ್ನ ನೀತಿಗೆ ತಲೆಬಾಗೆನು ನಾನು!!

***

(ಅಕ್ಕಯ್ಯ ಪದ್ಮಶಾಲಿ, ಆತ್ಮ ಕಥೆಯಿಂದ  ಪ್ರೇರಣೆ ಪಡೆದು ಈ ಕವನ ಬರೆಯಲಾಗಿದೆ. ಅವರು ಮಂಗಳಮುಖಿಯಾಗಿದ್ದು ತಮ್ಮ ಆತ್ಮ ಗೌರವಕ್ಕೆ ಚ್ಯುತಿ ಆಗದಂತೆ ಬದುಕುತ್ತಿದ್ದಾರೆ.)

- ನಿರಂಜನ ಕೇಶವ ನಾಯಕ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್