ಹೀಗೊಂದು ದಿನವಿತ್ತು...

ಹೀಗೊಂದು ದಿನವಿತ್ತು...

ಕವನ

ಹೀಗೊಂದು ದಿನವಿತ್ತು

ನೆನಪುಗಳ ನೆನೆದು ಕಣ್ಣೀರ ಬರಿಸಿತ್ತು..//

ಸೂರ್ಯನೇಳುವ ಹೊತ್ತಿಗೇ ಶಾಲೆಗೆ ಆಗಮನ

ಪ್ರಾರ್ಥನೆಯ ಸಮಯದಿ ಪ್ರಶ್ನೆ, ಹಿತನುಡಿಗಳ ವಾಚನ

ತರಗತಿಗೆ ಹೋಗುತ್ತಿದ್ದಂತೇ, ಕಥೆ ಕವನಗಳ ನೃತ್ಯ ಗಾಯನ

ನಮ್ಮೊಂದಿಗೆ ಗುರುಗಳೂ ಹೆಜ್ಜೆ ಹಾಕಿದ ಆ ಕ್ಷಣ

ಹೀಗೊಂದು ದಿನವಿತ್ತು,

ಕಳೆದುಹೋದ ಸುಂದರ ಕ್ಷಣ ಮರಳದೆಂದು ಕಣ್ಣೀರ ಬರಿಸಿತು..//

ಗೆಳೆಯರೊಂದಿಗೆ ಕುಳಿತು ಕೇಳಿದ ಪಾಠಗಳು

ಕೈ ಕೈ ಜೋಡಿಸಿ ಆಡಿದ ಆಟಗಳು

ಎಡವಿ ಬಿದ್ದು ಜೋರಾಗಿ ಅತ್ತ ದಿನಗಳು

ಒಮ್ಮೆ ತುಟಿಯ ಅರಳಿಸಿತಾದರೂ,

ಮರಳಿ ಬಾರದ ದಿನವ ನೆನೆದು ಕಣ್ಣೀರ ಬರಿಸಿತು..//

ಓದಲು ಬಾರದ ಪುಸ್ತಕಗಳು,

ಚೀಲದಿಂದ ತೆಗೆದರೆ ಹರಿದು ಹಾರಾಡುತ್ತಿತ್ತು

ಬೆಚ್ಚಗೆ ಮುಚ್ಚಿದ ಪಟ್ಟಿಯ ತೆರೆದರೆ,

ಗುರುಗಳು ಬರೆದ ಸೂಚನೆ ಕಣ್ಣ ಕುಕ್ಕುವಂತಿರುತ್ತಿತ್ತು

ಹೀಗೊಂದು ದಿನವಿತ್ತು,

ಎಲ್ಲಾ ಬರೀ ನೆನಪುಗಳೆಂದು ಕಣ್ಣೀರ ಬರಿಸಿತು..//

ಊಟದ ತಟ್ಟೆಗೊಂದು ನಂಬರಿನ ಗುರುತು

ಗಂಟೆಯ ಶಬ್ದ ಕೇಳಿದೊಡನೆ,

ಸರದಿ ಸಾಲಿನಲ್ಲಿ ನಿಲ್ಲುವ ಹುರುಪು

ತಿಳಿದೋ ತಿಳಿಯದೆಯೋ ಮಾಡಿದ ಕೀಟಲೆಗೆ

ಬೆತ್ತದಿ ಬಿತ್ತು ಗಮ್ಮತ್ ಏಟು.

ಆ ಕ್ಷಣ ಕೋಪದಿ ಉರಿದೆವಾದರೂ,

ಹಿಂದೆ ಸರಿಯದ ಸಮಯವ ನೆನೆದು ಕಣ್ಣೀರ ಬರಿಸಿತು..//

ಮುಸ್ಸಂಜೆ ಹೊತ್ತು ಆಟವಾಡಿ

ಶಾಲಾ ಸಮಯ ಮುಗಿಯಿತೆಂದು

ಸಂತಸದಿ ಮನೆಗೆ ಓಡಿ,

ಶಿಕ್ಷಕರು ಕೊಟ್ಟ ಮನೆಗೆಲಸದ ಚೀಟಿ ನೋಡಿ

ಒಂದಿಷ್ಟು ಹುಸಿಮುನಿಸು ತೋರಿದೆವಾದರೂ,

ಮರಳಿ ಬಾರದ ದಿನವ ನೆನೆದು ಕಣ್ಣೀರ ಬರಿಸಿತು..//

-ಭಾರತಿ ಗೌಡ

ಇಂಟರ್ನೆಟ್ ಚಿತ್ರ ಕೃಪೆ 

 

ಚಿತ್ರ್