ಹೀಗೊಂದು ನೀತಿ ಕಥೆ

ಒಂದು ದಿನ ಭಾನುವಾರದಂದು ಬಿಡುವಿನ ಸಮಯದಲ್ಲಿ ಫೇಸ್ಬುಕ್ ಪೋಸ್ಟ್ ಗಳನ್ನು ಓದುತ್ತಿದ್ದೆ. ಆಗ ಯಾವುದೋ ಒಂದು ಪೇಜ್ ನಲ್ಲಿ ಒಂದು ಸುಂದರವಾದ ಕಥೆಯನ್ನು ಓದಿದೆ. ಆ ಕಥೆ ನನಗೆ ಎಷ್ಟು ಇಷ್ಟವಾಯಿತೆಂದರೆ ಮರುದಿನವೇ ಅದನ್ನು ನನ್ನ ಶಾಲೆಯ ಮಕ್ಕಳಿಗೆ ಹೇಳಬೇಕು ಅಂತ ಅಂದುಕೊಂಡೆ. ಮರುದಿನ ಶಾಲೆಗೆ ತಲುಪಿದಾಗಲೂ ನನ್ನ ಮನಸ್ಸಿನಲ್ಲಿ ಆ ಕಥೆ ಭದ್ರವಾಗಿತ್ತು. ಆದರೆ ಆ ದಿನ ನನ್ನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿದ್ದವು. ಹಾಗಾಗಿ ಕಥೆ ಹೇಳಲಿಕ್ಕೆ ಸಾಧ್ಯ ಆಗ್ಲಿಲ್ಲ. ನನಗೆ ನಿರಾಸೆ ಆಯ್ತು. ಆದರೆ ಅದೇ ದಿನ ಒಂದನೇ ತರಗತಿಯ ಶಿಕ್ಷಕಿ ಒಬ್ಬರು ರಜೆ ಹಾಕಿದ್ದ ಕಾರಣ ಅವರ ಒಂದು ಅವಧಿ ನನಗೆ ಸಿಕ್ಕಿತು. ಹಾಗಾಗಿ ಖುಷಿಯಿಂದ ಹೇಗೂ ಒಂದನೇ ತರಗತಿಗೆ ಹೋಗಬೇಕು, ಆ ಮಕ್ಕಳಿಗೇ ನಾನು ಓದಿದ ಕಥೆಯನ್ನು ಹೇಳೋಣ ಎನ್ನುವ ಉತ್ಸಾಹದಿಂದ ತರಗತಿಗೆ ಹೋದೆ. ಅದೇ ಮೊದಲ ಬಾರಿಗೆ ನಾನು ಒಂದನೇ ತರಗತಿಗೆ ಹೋಗಿದ್ದರಿಂದ ಮಕ್ಕಳು ನನ್ನನ್ನು ನೋಡಿದ್ದೇ ತಡ ಅವರ ಟೀಚರ್ ಬಂದಿದ್ದಲ್ಲ ಎಂದು ಗೊತ್ತಾಗಿ ಅವರ ಪಾಡಿಗೆ ಅವರು ತಮ್ಮ-ತಮ್ಮ ಕೆಲಸಗಳಲ್ಲಿ ಬಿಜಿಯಾಗಿ ಬಿಟ್ಟರು! ಅರೇ! ಇದೇನಿದು ನಾನು ತರಗತಿಗೆ ಬಂದರೂ ಮಕ್ಕಳು ಕೇರ್ ಅಂತಿಲ್ಲ! ನಾನೇ ಮಕ್ಕಳನ್ನೆಲ್ಲ ಕರೆದೆ. 'ಗುಡ್ ಮಾರ್ನಿಂಗ್ ಮಕ್ಕಳೇ ಹೇಗಿದ್ದೀರಾ?' ಅಂತ ಕೇಳಿದೆ. ಮಕ್ಕಳು ಗುಡ್ ಮಾರ್ನಿಂಗ್, ನೀವು ಯಾಕೆ ನಮ್ಮ ಕ್ಲಾಸಿಗೆ ಬಂದಿದ್ದು? ನಮ್ಮ ಟೀಚರ್ ಎಲ್ಲಿ? ಎಂದು ಕೇಳಿದರು. 'ನಿಮ್ಮ ಟೀಚರ್ ಇವತ್ತು ರಜೆಯಲ್ಲಿದ್ದಾರೆ ಹಾಗಾಗಿ ನಾನು ಬಂದಿದ್ದು' ಅಂತ ಹೇಳಿದ ಕೂಡಲೇ 'ಓ ಸರಿ' ಅಂತ ಮಕ್ಕಳು ತಮ್ಮ ತಮ್ಮ ಗೆಳೆಯರೊಂದಿಗೆ ಮಾತನಾಡಲಿಕ್ಕೆ ಶುರು ಮಾಡಿದರು. ಈ ಮಕ್ಕಳನ್ನ ಹೇಗಪ್ಪಾ ನನ್ನ ಕಡೆ ಸೆಳೆಯುವುದು! ಎಲ್ಲರೂ ನನಗೂ ಅವರಿಗೂ ಯಾವ ಸಂಬಂಧವಿಲ್ಲ ಅನ್ನೋತರ ಅವರ ಪಾಡಿಗೆ ಅವರು ಮಾತಾಡ್ತಾ ಆಕಡೆ ಈಕಡೆ ಓಡಾಡ್ತಾ ಇದ್ರು. ಅಂತೂ ಇಂತೂ ಮಕ್ಕಳಿಗೆ ನಾನೂ ಈ ಶಾಲೆಯ ಟೀಚರ್, ಸ್ವಲ್ಪ ಇಲ್ಲಿ ಕೇಳಿ ಅಂತ ಹೇಳಿ, ಸಣ್ಣ ಚಟುವಟಿಕೆಯೊಂದನ್ನು ಮಾಡಿಸಿದೆ. ನಂತರ ಮಕ್ಕಳು ಸ್ವಲ್ಪ ನನ್ನ ಕಡೆ ಗಮನ ಕೊಡಲು ಪ್ರಾರಂಭಿಸಿದ್ರು. ಮಕ್ಕಳೇ ನಿಮಗೆ ಕಥೆ ಅಂದರೆ ಇಷ್ಟನಾ? ಹೌದು ಅಂದ್ರು ಮಕ್ಕಳು. ಸರಿ ಹಾಗಾದರೆ ನಾನೊಂದು ಕಥೆ ಹೇಳುತ್ತೇನೆ. ಗಮನವಿಟ್ಟು ಕೇಳಿ ಕೊನೆಗೆ ಆ ಕಥೆಯಿಂದ ನಿಮಗೆ ಏನು ಅರ್ಥ ಆಯ್ತು ಅಂತ ನೀವು ಹೇಳಬೇಕು ಸರಿನಾ?' ಎಂದು ಕೇಳಿದೆ. ಎಲ್ಲರೂ 'ಓಕೆ ಮಾಮ್' ಅಂದರು.
ಒಂದು ಊರಿನಲ್ಲಿ ಒಂದು ಮದುವೆ ಸಮಾರಂಭ ಇತ್ತು. ಹಾಗಾಗಿ ಹಿಂದಿನ ದಿನ ರಾತ್ರಿ ಮದುವೆಯ ಛತ್ರದಲ್ಲಿ ಅಡುಗೆಯವರು ಮದುವೆಯ ಊಟಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದರು. ಹೋಳಿಗೆ, ಲಡ್ಡು ಹೀಗೆ ಅನೇಕ ತಿಂಡಿ ತಿನಿಸುಗಳನ್ನು ಮಾಡುತ್ತಿದ್ದರು. ಮದುವೆ ಊಟಕ್ಕೆ ಮೊಸರು ಬೇಕಲ್ವಾ? ಹಾಗಾಗಿ ಒಂದು ದೊಡ್ಡ ಪಾತ್ರೆಯಲ್ಲಿ ಹಾಲನ್ನ ಹಾಕಿ ಅದಕ್ಕೆ ಸ್ವಲ್ಪ ಹೆಪ್ಪು ಹಾಕಿ ಮೊಸರಾಗಲಿಕೆ ಇಟ್ಟಿದ್ದರು. ಎಲ್ಲಾ ಕೆಲಸ ಆಯ್ತು ಅಡುಗೆಯವರೆಲ್ಲಾ ಸುಸ್ತಾಗಿ ನಿದ್ದೆ ಮಾಡಲು ಹೊರಟರು. ಆದರೆ ಹಾಲು ಹೆಪ್ಪು ಹಾಕಿದ್ದ ಹಾಲಿನ ಪಾತ್ರೆಗೆ ಮುಚ್ಚಳ ಮುಚ್ಚಲು ಮರೆತಿದ್ದರು! ಮಧ್ಯರಾತ್ರಿ ಅಡುಗೆ ಕೋಣೆಯ ಛಾವಣಿಯ ಮೇಲೆ ಎರಡು ಪುಟಾಣಿ ಇಲಿ ಮರಿಗಳು ಆಟವಾಡುತ್ತಿದ್ದವು. ಆಟ ಆಡ್ತಾ ಆಡ್ತಾ ಕಾಲು ಜಾರಿ ಆ ಎರಡೂ ಮರಿಗಳು ಹಾಲಿನ ಪಾತ್ರೆಗೆ ಬಿದ್ದು ಬಿಟ್ಟವು.
ಇಲಿ ಮರಿಗಳಿಗೆ ತುಂಬಾ ಗಾಬರಿಯಾಯ್ತು, ಹೇಗಾದರೂ ಮಾಡಿ ಆ ಪಾತ್ರೆಯಿಂದ ಹೊರಗೆ ಬರಬೇಕು ಅಂತ ಪ್ರಯತ್ನ ಪಟ್ಟವು. ಆದರೆ ಎಷ್ಟು ಪ್ರಯತ್ನಿಸಿದರೂ ಅವುಗಳಿಗೆ ಹೊರಗೆ ಜಿಗಿಯಲು ಆಗಲಿಲ್ಲ. ಕೈಕಾಲು ಬಡಿಯುತ್ತಾ ಇಲಿ ಮರಿಗಳು 'ಅಯ್ಯೋ , ನಾವಿನ್ನೇನು ಸ್ವಲ್ಪ ಹೊತ್ತಲ್ಲಿ ಸತ್ತೇ ಹೋಗುತ್ತೇವೆ' ಎಂದು ಅಳುತ್ತಾ, ಈಜುತ್ತಿದ್ದರು. ಆಗ ಒಂದು ಇಲಿ ಮರಿಗೆ ತುಂಬಾ... ಸುಸ್ತಾಗಿತ್ತು.
ಅದು ಇನ್ನೊಂದು ಮರಿಗೆ ಹೇಳಿತು, 'ಹೇಗಿದ್ದರೂ ನಮಗೆ ಮೇಲೆ ಹೋಗಲಿಕ್ಕೆ ಸಾಧ್ಯವೇ ಇಲ್ಲ. ಸಾಯುವುದು ಖಂಡಿತ. ಇನ್ನು ನನ್ನಿಂದ ಕೈ ಕಾಲು ಬಡಿದು ಸುಸ್ತು ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ' ಎಂದು ಹೇಳಿ ಈಜಾಡೋದನ್ನು ಬಿಟ್ಟುಬಿಟ್ಟಿತು! ತಕ್ಷಣವೇ ಅದು ಪಾತ್ರೆಯ ತಳಕ್ಕೆ ಹೋಗಿ ಉಸಿರುಗಟ್ಟಿ ಸತ್ತುಹೋಯಿತು. ಆದರೆ ಮತ್ತೊಂದು ಇಲಿ ಮರಿ ಮಾತ್ರ ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ತನ್ನೆಲ್ಲಾ ಶಕ್ತಿಯನ್ನು ಹಾಕಿ ಪಾತ್ರೆಯಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಸ್ವಲ್ಪ ಹೊತ್ತಾಗುವಾಗ ಹಾಲು ಮೊಸರಾಗಲಿಕ್ಕೆ ಪ್ರಾರಂಭವಾಯಿತು. ಮೊಸರು ಗಟ್ಟಿಯಾಯಿತು. ಇಲಿಗೆ ಅದರ ಮೇಲೆ ನಿಂತುಕೊಳ್ಳಲು ಸಾಧ್ಯವಾಯಿತು. ಇಲಿ ಮರಿ ಖುಷಿಯಿಂದ ಸ್ವಲ್ಪ ಸುಧಾರಿಸಿಕೊಂಡು ನಂತರ ತನ್ನ ಶಕ್ತಿಯನ್ನೆಲ್ಲಾ ಬಲವಾಗಿ ಉಪಯೋಗಿಸಿ ಪಾತ್ರೆಯಿಂದ ಹೊರಕ್ಕೆ ಹಾರಿಬಿಟ್ಟಿತು. ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿಹೋಯಿತು.
ಹೀಗೆ ಕಥೆ ಹೇಳಿ ಮುಗಿಸಿದೆ. ಮಕ್ಕಳು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ನನ್ನನ್ನೇ ನೋಡುತ್ತಿದ್ದರು. ಕಡೆಗೆ ಮಕ್ಕಳಲ್ಲಿ ಕೇಳಿದೆ, 'ಮಕ್ಕಳೇ ಕಥೆ ಹೇಗಿತ್ತು?'. 'ಚೆನ್ನಾಗಿತ್ತು ಮಿಸ್' ಅಂದ್ರು. ಈ ಕಥೆಯಿಂದ ನಿಮಗೇನು ತಿಳಿಯಿತು ಹೇಳಿ ನೋಡೋಣ? ಎಂದೆ. ತಕ್ಷಣ ಒಬ್ಬ ಹುಡುಗ ಎದ್ದು ನಿಂತು 'ಮೇಡಂ ನಾವು ಯಾವಾಗಲೂ ಪಾತ್ರೆಗಳಿಗೆ ಮುಚ್ಚಳವನ್ನು ಸರಿಯಾಗಿ ಮುಚ್ಚಬೇಕು ಇಲ್ಲದಿದ್ದರೆ ಅದರಲ್ಲಿ ಇಲಿ ಬಿದ್ದು ಸತ್ತೋಗುತ್ತದೆ ಅಂತ ಹೇಳಿದ!! ಇನ್ನೊಬ್ಬ, ಮತ್ತೆ ಹಾಗೆ ಇಲಿ ಬಿದ್ದು ಸತ್ತು ಹೋದ್ಮೇಲೆ ಆ ಮೊಸರನ್ನು ನಾವು ತಿನ್ನ ಬಾರದು, ಹೊರಗೆ ಚೆಲ್ಲಬೇಕು'. ಎಂದು ಮುಗ್ದತೆಯಿಂದ ಉತ್ತರಿಸಿದ.
ಮಕ್ಕಳ ಪ್ರತಿಕ್ರಿಯೆ ಕೇಳಿ ಬೆಸ್ತು ಬೀಳುವ ಸರದಿ ನನ್ನದು! ನಾನೇನೋ 'ನಾವು ನಮ್ಮ ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಸೋಲದೆ ಧೈರ್ಯವಾಗಿ ಪ್ರಯತ್ನಿಸಿದರೆ ಗೆಲುವು ನಮ್ಮದಾಗುತ್ತದೆ' ಎಂಬಂತಹ ನೀತಿಯನ್ನು ಮಕ್ಕಳಿಂದ ನಿರೀಕ್ಷಿಸಿದ್ದೆ. ಬಹುಷಃ ಇದೇ ಕಥೆಯನ್ನು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹೇಳಿದ್ದರೆ ನನಗೆ ಬೇಕಾದ ಪ್ರತಿಕ್ರಿಯೆ ಬರುತಿತ್ತೋ ಏನೋ. ಆದರೆ ಒಂದನೇ ತರಗತಿಯ ಮಕ್ಕಳಿಗೆ ಕಷ್ಟ, ಬದುಕು, ಸಾಧನೆ ಇವುಗಳ ಅರಿವು ಎಲ್ಲಿಂದ ಬರಲು ಸಾಧ್ಯ?! ಆದರೂ ಒಂದನೇ ತರಗತಿಯ ಮಕ್ಕಳೂ ಕೂಡಾ ನಮಗಿಂತ ವಿಭಿನ್ನ ವಾದ ಆಲೋಚನೆಯನ್ನು ಮಾಡಬಲ್ಲರು ಎಂಬುದು ಮಕ್ಕಳು ನೀಡಿದ ಪ್ರತಿಕ್ರಿಯೆಯಿಂದ ಸಾಬೀತಾಯಿತು!
ಪುಟ್ಟ ಮಕ್ಕಳಿಗೆ ಹೆಚ್ಚು ನೀತಿಯ ಅವಶ್ಯಕತೆ ಇರುವುದಿಲ್ಲ. ನಮಗೆ ಇಷ್ಟವಾದ ಕಥೆ, ಅದು ಎಷ್ಟೇ ನೀತಿಯಿಂದ ಕೂಡಿದ್ದರೂ ಅದನ್ನು ನಾವು ಯಾವ ವಯಸ್ಸಿನ ಮಕ್ಕಳಿಗೆ ಹೇಳಬೇಕೋ ಅವರಿಗೇ ಹೇಳಬೇಕು ಎಂಬ ಸೂಕ್ಷ್ಮತೆಯ ಅರಿವಾಯಿತು. ಮುಂದೆ ಅವರ ತರಗತಿಗೆ ಹೋದಾಗೆಲ್ಲ ಪಂಚತಂತ್ರದ ಕಥೆಗಳನ್ನು ಹೇಳುವುದನ್ನು ರೂಢಿಸಿಕೊಂಡಿದ್ದೇನೆ. ಆದರೂ ಒಂದನೇ ತರಗತಿಗೆ ಹೋದಾಗಲೆಲ್ಲಾ ಈ ಕಥೆ ನೆನಪಾಗುತ್ತದೆ.
- ಶ್ರೀಮತಿ ಸುಪ್ರಿಯಾ ,ಮೂಡುಬಿದಿರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ