ಹೀಗೊಂದು ಪ್ರಯೋಗ ನೀವೂ ಮಾಡಬಹುದು !

ಹೀಗೊಂದು ಪ್ರಯೋಗ ನೀವೂ ಮಾಡಬಹುದು !

ಪಟ್ಟಣಗಳಲ್ಲಿ ವಾಸಿಸುವವರಿಗೆ ಕೃಷಿ ಮಾಡ ಬೇಕೆಂದು ಆಸಕ್ತಿ ಇದ್ದರೂ ಸ್ಥಳಾವಕಾಶದ ಕೊರತೆ ಇರುತ್ತದೆ. ಅಂಥವರು ಈ ರೀತಿಯ ಪ್ರಯೋಗವನ್ನು ಮಾಡಿ ತಮ್ಮ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಇಲ್ಲಿ ಪಿವಿಸಿ ಪೈಪ್ ಗೆ ತೂತು ಕೊರೆದು ಕಾಳೆ ಮೆಣಸು ಬಳ್ಳಿಗಳನ್ನು ನೆಟ್ಟು ತಮ್ಮ ಮನೆಯ ಉಪಯೋಗಕ್ಕೆ ಆಗುವಷ್ಟು ಮೆಣಸನ್ನು ಗಳಿಸಿದ್ದಾರೆ.  ನೀವೂ ಕೃಷಿ ಆಸಕ್ತರಾಗಿದ್ದರೆ, ನಿಮ್ಮ ಮನೆಯ ಆವರಣದಲ್ಲಿರುವ ಅಲ್ಪ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. 

ಇರುವ ಅಲ್ಪ ಸ್ಥಳವನ್ನು ಸದುಪಯೋಗ ಪಡಿಸುವಲ್ಲಿ ಮಂಗಳೂರು ತಾಲೂಕಿನ ಕೋಟೇಕಾರ್ ಬೀರಿಯ ಶ್ರೀಧರ್ ಕುಂಬ್ಳೆ ಯಶಸ್ಸನ್ನು ಸಾಧಿಸಿದ್ದಾರೆ. ಇವರಿಗೆ ಕಾಳು ಮೆಣಸು ಬೆಳೆಸುವ ಆಸಕ್ತಿ. ಆದರೆ ಅದನ್ನು ಹಬ್ಬಿಸಲು ಮರಗಳು ಬೇಕಲ್ಲ. ಅದಕ್ಕೆ ಅವರೊಂದು ಉಪಾಯ ಮಾಡಿದ್ದಾರೆ. ಸುಮಾರು ೬ ಇಂಚಿನ ಸುತ್ತಳತೆಯ ಪಿವಿಸಿ ಪೈಪ್‌ನ್ನು ಒಂದೊಂದು ಅಡಿಗೆ ೨ ಇಂಚಿನಷ್ಟು ದೊಡ್ಡ ತೂತು ಕೊರೆದಿದ್ದಾರೆ. ವೃತ್ತಾಕಾರದಲ್ಲಿ ಸುಮಾರು ೪ ತೂತುಗಳಿವೆ. ಸುಮಾರು ೬ ಅಡಿಯ ಪೈಪ್ ತೆಗೆದುಕೊಂಡರೆ ೨೦ ತೂತುಗಳನ್ನು ಕೊರೆಯ ಬಹುದು (ಚಿತ್ರವನ್ನು ಗಮನಿಸಿ). ಪ್ರತೀ ತೂತಿಗೂ ಗೊಬ್ಬರ, ಮಣ್ಣು ತುಂಬಿಸಿ ಎರಡೆರಡು ಕಾಳುಮೆಣಸಿನ ಗಿಡವನ್ನು ನೆಟ್ಟಿದ್ದಾರೆ. ನೆಡುವಾಗ ೨ ಎಲೆಗಳಿದ್ದ ಗಿಡವು ಸುಮಾರು ಒಂದು ತಿಂಗಳ ನಂತರ ೧೩-೧೪ ಎಲೆಗಳನ್ನು ಬಿಟ್ಟಿದೆ.

ಪಣಿಯೂರು ಕಾಳುಮೆಣಸಿನ ತಳಿಯನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ೬ ಅಡಿಯ ಪೈಪ್ ಒಂದರಲ್ಲಿ ೨೦ ತೂತು. ಅದಕ್ಕೆ ತಲಾ ೨ ಗಿಡಗಳಂತೆ ೪೦ ಗಿಡಗಳನ್ನು ನೆಟ್ಟಿದ್ದಾರೆ. ೬ ಅಡಿ ಪೈಪ್ ನೀರುಣಿಸಲು ಸ್ವಲ್ಪ ಕಷ್ಟವಾಗುವುದರಿಂದ ೪ ಅಥವಾ ೫ ಅಡಿಯ ಪೈಪ್ ಒಳ್ಳೆಯದು ಎಂಬುದು ಇವರ ಅನಿಸಿಕೆ. ಗಿಡಗಳು ಸ್ವಲ್ಪ ಕಮ್ಮಿ ಹಿಡಿಯುತ್ತವೆ. ಆದರೆ ನಿರ್ವಹಣೆ ಸುಲಭವಾಗುತ್ತದೆ.

ಮನೆ ಖರ್ಚಿಗೆ ಆಗುವಷ್ಟು ಕರೆಗಳು ಈ ಬಳ್ಳಿಗಳಲ್ಲಿ ಮೂಡಿದರೆ ಸಾಕು ಎನ್ನುವುದು ಇವರ ಅಭಿಮತ. ಸ್ವಲ್ಪವೇ ಜಾಗದಲ್ಲಿ ಹಲವಾರು ಸಸಿಗಳನ್ನು ನೆಡ ಬಹುದು. ಸಸಿ ಬೆಳೆದಂತೆ ಆಧಾರಕ್ಕೆ ಯಾವುದಾದರೂ ಮರದ ಗೆಲ್ಲುಗಳನ್ನು ಊರಿದರೆ ಸಾಕು. ತಮ್ಮ ಮನೆಯ ತಾರಸಿಯಲ್ಲೂ ಹಲವಾರು ಬಗೆಯ ಪ್ರಯೋಗಗಳನ್ನು ಇವರು ಮಾಡಿದ್ದಾರೆ. ತರಕಾರಿ ಗಿಡಗಳನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೆಟ್ಟು ಬೆಳೆಸುತ್ತಿದ್ದಾರೆ. ಮನೆಯಲ್ಲೇ ಸುಮ್ಮನೇ ಕುಳಿತು ಸಮಯ ಹಾಳು ಮಾಡುವುದಕ್ಕಿಂತ ಕೃಷಿಯಲ್ಲಿ ಏನಾದರೂ ಪ್ರಯೋಗಗಳನ್ನು ಮಾಡುವ ಹವ್ಯಾಸ ಒಳ್ಳೆಯದು ಎನ್ನುವುದು ಶ್ರೀಧರ್ ಕುಂಬ್ಳೆಯವರ ಅನಿಸಿಕೆ. 

ವಿ.ಸೂಚನೆ: ಶ್ರೀಧರ ಕುಂಬ್ಳೆ ಅವರ ಈ ಪ್ರಯೋಗವನ್ನು ನಾನು ಕಂಡದ್ದು ಸುಮಾರು ೬-೭ ವರ್ಷಗಳ ಹಿಂದೆ. ಸದ್ಯಕ್ಕೆ ಅವರ ಸಂಪರ್ಕ ನನಗೆ ತಪ್ಪಿ ಹೋಗಿದ್ದರೂ ಅವರು ಅಂದು ಮಾಡಿದ ಪ್ರಯೋಗವನ್ನು ಇಂದೂ ಯಾರಾದರೂ ಆಸಕ್ತಿ ಇರುವವರು ಮಾಡಿ ನೋಡಬಹುದಾಗಿದೆ. ಬೇರೆ ರೀತಿಯಲ್ಲಿ (ಮರ ಇತ್ಯಾದಿ) ಬಳ್ಳಿ ಹಬ್ಬಿಸುವುದಕ್ಕೂ, ಈ ರೀತಿಯಾಗಿ ಪೈಪ್ ಒಳಗಡೆ ಬೆಳೆಸುವುದಕ್ಕೂ ಇಳುವರಿಯಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಕಡಿಮೆ ಸ್ಥಳದಲ್ಲಿ, ಮರಗಳು ಇಲ್ಲದೆಡೆ ಮನೆ ಬಳಕೆಗೆ ಬೇಕಾಗುವಷ್ಟು ಕಾಳುಮೆಣಸು ಬೆಳೆಯಲು ಈ ಉಪಾಯವನ್ನು ಆಸಕ್ತರು ಮಾಡಿನೋಡಬಹುದು.

ಚಿತ್ರಗಳ ವಿವರ:

೧. ತೂತಿನಿಂದ ಗಿಡಗಳು ಹೊರ ಬಂದಿರುವುದು

೨. ೬ ಇಂಚಿನ ಸುತ್ತಳತೆಯ ಪಿವಿಸಿ ಪೈಪ್

೩. ತೂತಿನಿಂದ ಗಿಡಗಳು ಹೊರ ಬಂದಿರುವುದು

೪. ತೂತಿನಿಂದ ಗಿಡಗಳು ಹೊರ ಬಂದಿರುವುದು