ಹೀಗೊಂದು ಯಕ್ಷ ಪ್ರಶ್ನೆ..!

"ನೀನ್(ನೀವು) ಕವಿಯಲ್ಲ ಮಾರಾಯ(ಸರ್) ಸಾಹಿತ್ಯ ಸಮ್ಮೇಳನ ಅಂದ್ರೆ ಹೋಗದಿರ್ತೀಯ(ರ)...?" ಅಂತ ಕೆಲ ಕೆಲವರು ಅನ್ನುತ್ತಿರಬೇಕಾದರೆ "ಹೌದಲ್ಲ, ನಾನು ಹೋಗದೆ ಮತ್ಯಾರು ಹೋಗೋದು" ಎಂದು ಕವಿಮಹಾಶಯನೆಂಬ ಕೊಂಬು ತುಸು ಉದ್ದವೇ ಮೂಡಿ, ಕೂತಲ್ಲಿಂದೆದ್ದು ಹಾಗೆ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆಂದು ನಿನ್ನೆ ಮಂಗಳೂರಿಗೆ ಹೊರಟಿದ್ದೆ.., ಪುತ್ತೂರಿನವರೆಗೆ ನನ್ನದೆ ಐರಾವತದಲ್ಲಿ ಬಂದವನು ಅಲ್ಲಿಂದ ಸೆಟ್ಲ್ ಬಸ್ಸೆ ಸ್ಲೀಪರ್ ಕೋಚ್ ಎಂದು ಮೊದಲಿಂದಾನು ನಂಬಿದವನಾಗಿ 'ಸ್ಟೇಟ್ ಬ್ಯಾಂಕ್' ಬಸ್ಸ್ ಹತ್ತಿದೆ. ಎಂದಿನಂತೆ ಅಂದು ಭಾನುವಾರವಾದ ಕಾರಣ! ಜನ ವಿರಳವಾಗಿತ್ತು. ಒಂಟಿ ಸೀಟಿನಲ್ಲಿ ಒಬ್ಬನೇ ಪಯಣಿಸುವ ಮಜವೂ ಸಾಕ್ಷಾತ್ಕಾರಗೊಂಡಿತು. ಮೊಬೈಲ್ ಕೈಯಲ್ಲಿದ್ದರೆ ಪಯಣ ಸುಖಕರವೆಂಬುದು ನನ್ನ ಪರಮ ಸಿದ್ದಾಂತ. ಆದರೆ ಅದಕ್ಕೆ ಮುಕುಟಪ್ರಾಯವಾದ ಇಯರ್ಪೋನ್ (ಕಿವಿ ಕೇಳದವರು ಹಾಕುವ ಸಾಧನಕ್ಕೆ ಇನ್ನೂ ಅಪ್ಡೇಟ್ ಆಗಿಲ್ಲದ ಕಾರಣ) ಇಲ್ಲದಿರುವುದೂ ತುಸು ಹಿನ್ನಡೆಯಾದರೂ ಬರೆಹಗಳನ್ನು ಓದುವಲ್ಲಿ ಸಲೀಸು ಎಂಬ ಸಂತೃಪ್ತಿಯಿತ್ತು. (ಯಕ್ಷಗಾನ ಯಾ ನಾಟಕ ಸವಿಯುವ ಅವಕಾಶ ತಪ್ಪಿತೆಂಬ ಪುಟ್ಟ ಹಿನ್ನಡೆ) ಹೀಗೆ ಫೇಸ್ಬುಕ್, ಇನ್ಟಾ, ವಾಟ್ಸಪ್..,ಆಗೊಮ್ಮೆ ಈಗೊಮ್ಮೆ ಏನೋ ಹೊಳೆದಾಗ ಗೂಗಲ್ ಬ್ರೌಸಿಂಗ್... ಹೀಗೆ ಶಾಂತವಾಗಿಯೆ ಪಯಣ ಸಾಗುತ್ತಿತ್ತು...ಅಷ್ಟರಲ್ಲಾಗಲೇ ಯಾವುದೋ ಒಂದು ಸ್ಟಾಪಿಂದ(ಮೊಬೈಲ್ ನಲ್ಲಿ ಮುಳುಗಿದ್ದಕ್ಕಾಗಿ ಅದು ಅಸ್ಪಷ್ಟ) ಒಬ್ಬ ಚಿರ ಜವ್ವನಿಗ ನನ್ನ ಸೀಟಿನ ಆಚೆ ಬದಿಗೆ ವಕ್ಕರಿಸಿದ್ದ ಮತ್ತು ನನ್ನಂತೆ ಆತನೂ ಮೊಬೈಲ್ ಪ್ರೀಯನಾಗಿದ್ದ, ಆದರೆ ಆತನ ಸ್ವತಂತ್ರ ಪ್ರೀಯತೆ ನನಗಿಂತ ತುಸು ಹೆಚ್ಚೇ ಇತ್ತು, ಪರಿಣಾಮ ವಿವಿಧ ರೀಲ್ಸ್ ಗಳೆಂಬ ಗುದ್ದುವ ಹಾಡುಗಳಿಗೆ ಬಸ್ಸಿನ ಕಿಟಕಿಗಳು ದನಿಗೂಡಿಸತೊಡಗಿದ್ದವು. ನಮ್ಮಿಂದ ಎರಡೂವರೆ ಸೀಟಿನಷ್ಟು ಮುಂದಿದ್ದ ಕೆಲ ಪಯಣಿಗರು ಈಗ, ಈತನಾರು ಎಂದು ನೋಡೆ ಬಿಡೋಣವೆಂದು ಹಿಂದೆ ತಿರುಗಿ ದಿಟ್ಟಿಸಿದರು, ಅಂತೆಯೇ ನನ್ನ ಕಡೆಗೂ ಕರುಣೆಯ ನೋಟವಿತ್ತವರಲ್ಲಿ. ಆದರೆ, ಆತನಿಗದಾವುದರ ಪರಿವೆಯೆ ಇಲ್ಲದೆ ಮುಂದಿನ ಹಾಡುಗಳಿಗೆ ಸಾಗುತ್ತಿದ್ದ. ಅವರೇ ಹಿಂತಿರುಗಿ ನೋಡಿದರೆಂದ ಮೇಲೆ ಅವನಿಂದ ಸರಿಯಾಗಿ ಈಚೆ ಬದಿಗಿದ್ದ ನನಗೆಷ್ಟು ಸಹನೀಯವಾಗಿದ್ದಿತೆಂದು ನಾನು ವಿವರಿಸಿ ಹೇಳಲಾರೆ.
ಕಂಡಕ್ಟರ್ ಏನಾದರೂ ಒದರಿಯಾರೆ(ನೆ) ಎಂದು ಕಣ್ಣಲ್ಲೆ! ಹುಡುಕಿದೆ. ಅವರಾ(ನು)ದರೊ ಡ್ರೈವರ್ ಪಕ್ಕ ಏನೋ ಗಹನ ಚರ್ಚೆಯಲ್ಲಿದ್ದಂತಿತ್ತು. ನನಗೀಗ ಮೊಬೈಲ್ ನ ಸೌಂಡ್ ಗಿಂತಲೂ ಅದರ ಹಾಡಿನ ಮ್ಯೂಸಿಕ್ ಗಳೇ ಬಂದು ಬಂದು ಚುಚ್ಚತೊಡಗಿದವು. ಪುಣ್ಯಾತ್ಮ ಹೀಗೆ ಗಟ್ಟಿಯಾಗಿ ಯಕ್ಷಗಾದ ಹಾಡುಗಳನ್ನು ಇಟ್ಟಿದ್ದರೆ(ಅವನಿಗಾದರೆ ಇತರರ ಕಿರಿಕಿರಿಯ ಹಂಗಿಲ್ಲವಲ್ಲ) ಉಳಿದವರಿಗೆ ಕಿರಿಕಿರಿಯಾದರು ನಾನಾದರೂ ಆಸ್ವಾದಿಸುತ್ತಿದ್ದೆ ಎಂದು ಮನಸ್ಸು ಹೇಳಿತು. ಹಾಡುಗಳು ಇನ್ನೂ ಗಟ್ಟಿಯಾದಂತೆನಿಸಿತು ನನಗೆ. ಅವನ ತಂಟೆಗೆ ಹೋಗುವವರೇ ಇಲ್ಲವೆಂದ ಮೇಲೆ ನಾನೇನು..?ಎಂದು ಯೋಚಿಸಿದವನೆ ಕೆಟ್ಟವನಾದರೂ ಪರವಾಗಿಲ್ಲ ಇನ್ನು ನನ್ನ ಸುಖವನ್ನು ಕಳೆದುಕೊಳ್ಳಬಾರದೆಂದು ಯಕ್ಷಗಾನದ ಹಾಡುಗಳನ್ನು ಇಟ್ಟು ಮ್ಯೂಟಾಗಿದ್ದ ವ್ಯಾಲ್ಯೂಮ್ ಅನ್ನು ಒಮ್ಮೆಲೆ ಎತ್ತರಿಸಿದೆ. ಆಹಾ... ಮೈಯೆಲ್ಲ ರೋಮಾಂಚನ! ಅದು ಪಟ್ಲರ ಹಾಡು...'ನೀರಾಟವಾಡಿದರೂ... ಸರಸದಲಿ ಸಾರಸನೇತ್ರೆಯರೂ...' ನನ್ನ ಕೈ ಬೆರಳುಗಳು ನಾನು ಹೇಳದೆ ಇದ್ದರೂ ನನ್ನದೇ ತೊಡೆ ಮೇಲೆ ಚೆಂಡೆ ಬಾರಿಸಿದವು. ಹಾ... ಹೌದು, ಈಗ ನಾನು ಯವ್ವನಿಗನನ್ನೆ ಮೀರಿಸಿದ್ದೆ!
ಆತನು ಹಾಡುಗಳನ್ನು ನಿಲ್ಲಿಸಿ ತುಸು ಗದರುವಂತೆ ನನ್ನನ್ನೇ ನೋಡಿದ, ಒಟ್ಟಿಗೆ ಎದುರಿಗಿದ್ದ ಪಯಣಿಗರ ನೋಟವೂ ನನ್ನೆಡೆಗೆ ಬೀರಿದವು. ನಾನದಾವುದರ ಪರಿವೆಯಿಲ್ಲದಂತೆ ಪದ್ಯಕ್ಕೆ ತಲೆ ದೂಗುತ್ತಲೇ ಅವರ ನೋಟವನ್ನು ಆತನೆಡೆಗೆ ತೋರಿದೆ... ಅವರೂ ತುಸು ನಗೆ ಬೀರಿದರು (ಎಂತ ಹುಚ್ಚು ಎನಿಸಿದರೊ, ನನ್ನ ಒಳದನಿಯನ್ನರಿತು ಖುಷಿ ಪಟ್ಟರೊ ನಾನರಿಯೆ)... ಈಗಂತು ಆತನ ಹಾಡು ನಿಂತಿತು. ನಿಟ್ಟುಸಿರಿಟ್ಟು ಮೈಯನ್ನೊಮ್ಮೆ ಕೊಡವಿ ಒರಗಿ ನೇರ ಕೂತ, ಕಿಟಕಿಯಿಂದ ಹೊರಗೆ ದಿಟ್ಟಿಸಿದ. ನಾನೀಗ ವಿಧಾನಕ್ಕೆ ಪಟ್ಲರ ಧ್ವನಿಯನ್ನು ತಗ್ಗಿಸಿ ಮೊಬೈಲ್ ಅನ್ನು ಕಿವಿಗೆ ಒತ್ತಿಕೊಂಡೆ. ಈಗ ನಮ್ಮ ಪಯಣ ಸಹನೀಯವಾಗಿತ್ತು. ಆದರೆ ಒಂದಂತು ಸತ್ಯ, ಇಷ್ಟೊಂದು ಖುಷಿಯ ಪಯಣ ಮಾಡದೆ ಬಹಳವೇ ದಿನವಾಗಿತ್ತು. ಆದರೆ ಇನ್ನೂ ನನ್ನನ್ನು ಕಾಡುತ್ತಿರುವುದೇನೆಂದರೆ ಆತನೇಕೆ ಹಾಡು ನಿಲ್ಲಿಸಿದಾ..?!
-ಜನಾರ್ದನ ದುರ್ಗಾ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ