ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಡಿ ವಿ ಗುರುಪ್ರಸಾದ್
ಪ್ರಕಾಶಕರು
ವಸಂತ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ : ೨೦೨೪

ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಡಿ ವಿ ಗುರುಪ್ರಸಾದ್ ಅವರ ಹೊಸ ಕೃತಿ ‘ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು' ಅಪರಾಧ ಜಗತ್ತಿನ ನೈಜ ಕಥೆಗಳನ್ನು ನಮ್ಮ ಮುಂದೆ ಪತ್ತೇದಾರಿ ಕಥೆಗಳಂತೆ ನಿರೂಪಿಸುತ್ತದೆ. ಸುಮಾರು ೧೫೦ ಪುಟಗಳ ಈ ಕಥಾ ಸಂಕಲನವನ್ನು ನೀವು ಕೈಗೆತ್ತಿಗೊಂಡರೆ ಓದಿ ಮುಗಿಯುವುದೇ ಗೊತ್ತಾಗುವುದಿಲ್ಲ. ಈ ಕೃತಿಗೆ ಡಾ ಡಿ ವಿ ಗುರುಪ್ರಸಾದ್ ಅವರು ಬರೆದ ಲೇಖಕರ ಮಾತುಗಳು ಹೀಗಿವೆ...

“ಸುಮಾರು ನಲವತ್ತು ವರ್ಷಗಳಿಂದ ನೈಜ ಅಪರಾಧಗಳು ಮತ್ತವುಗಳ ಪತ್ತೆಯ ಅಪರಾಧಗಳಿಗೆ ತುತ್ತಾಗದಿರುವುದು ಹೇಗೆಂದು ಎಚ್ಚರಿಸುತ್ತಾ ಬಂದಿದ್ದೇನೆ. ಅಪರಾಧ ಪತ್ತೆಗಿಂತ ಅಪರಾಧ ತಡೆ ಬಹು ಮುಖ್ಯ ಎನ್ನುವುದನ್ನು ಬಲವಾಗಿ ನಂಬಿರುವ ನಾನು ಆ ನಿಟ್ಟಿನಲ್ಲಿ ಕುತೂಹಲಕಾರಿ ಸತ್ಯ ಕತೆಗಳ ನಿರೂಪಣೆಯನ್ನು ಮಾಡಿ ಯಾವ ರೀತಿ ಅಪರಾಧಗಳು ಆಗುತ್ತವೆ ಎಂದು ಸಾರ್ವಜನಿಕರ ಗಮನ ಸೆಳೆಯುತ್ತಿರುವೆ. ಹೇಗೆ ಅಪರಾಧಗಳು ನಡೆಯುತ್ತವೆ ಎಂದು ಗೊತ್ತಾದರೆ ನಾವು ಆ ರೀತಿಯ ಅಪರಾಧಗಳಿಗೆ ಹೇಗೆ ಬಲಿಯಾಗದಿರಬಹುದು ಎಂಬ ತಿಳುವಳಿಕೆ ನಮ್ಮಲ್ಲಿ ಮೂಡುತ್ತದೆ. ಇದೇ ಇಂತಹ ಕತೆಗಳ ಮೂಲ ಉದ್ದೇಶ.

'ಸುಧಾ', 'ತರಂಗ', 'ಕರ್ಮವೀರ', 'ಸಂಯುಕ್ತ ಕರ್ನಾಟಕ' ಪತ್ರಿಕೆಗಳಲ್ಲಿ ನೈಜ ಅಪರಾಧಗಳ ನನ್ನ ಅಂಕಣ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಪ್ರಕಟವಾಗಿವೆ. ಈಗ ಸುಮಾರು 65 ತಿಂಗಳುಗಳಿಂದ ನಾನು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರತಿ ಭಾನುವಾರವೂ 'ಆ ಕ್ಷಣ' ಎಂಬ ಹೆಸರಿನ ಅಂಕಣವನ್ನು ಬರೆಯುತ್ತಿದ್ದೇನೆ. ಈ ಅಂಕಣದ ಪ್ರತಿ ಲೇಖನದಲ್ಲೂ ಒಂದು ವಿಶೇಷವಾದ ಹಾಗೂ ಕುತೂಹಲಕರವಾದ ಅಪರಾಧದ ಬಗ್ಗೆ ತಿಳಿಸಿ, ಆ ಅಪರಾಧ ಹೇಗಾಯಿತು, ಅಪರಾಧಿಗಳಿಗೆ ಯಾವ ಶಿಕ್ಷೆಯಾಯಿತು, ಮತ್ತು ಯಾವ ಕ್ಷಣದಲ್ಲಿ ಅಪರಾಧವಾಗುತ್ತದೆ ಮುಂತಾದ ಮಾಹಿತಿಗಳನ್ನು ಓದುಗರಿಗೆ ಕೊಡುತ್ತಾ ಬಂದಿದ್ದೇನೆ. ಪ್ರತಿ ಲೇಖನದ ಕೊನೆಯಲ್ಲಿ ಹಿರಿಯರೊಬ್ಬರ ವಾಣಿಯನ್ನು ಕೊಡುತ್ತಿದ್ದೇನೆ. ಈ ನನ್ನ ಅಂಕಣ ಸಾಕಷ್ಟು ಜನಪ್ರಿಯವಾಗಿದ್ದು, ಪ್ರತಿ ವಾರವೂ ನನಗೆ ಇ-ಮೇಲ್ ಮೂಲಕ ಬಹಳಷ್ಟು ಮೆಚ್ಚುಗೆಯ ಪತ್ರಗಳು ಬರುತ್ತಿವೆ. ಒಂದು ವಾರ ಅಂಕಣ ಬರದೇ ಹೋದರೆ ಓದುಗರು 'ವಿಜಯವಾಣಿ' ಪತ್ರಿಕೆಗೆ ಕರೆಮಾಡಿ ಕಾರಣ ಕೇಳುತ್ತಾರೆ ಎಂದು ಆ ಪತ್ರಿಕೆಯ ಸಂಪಾದಕ ಚನ್ನೇಗೌಡ ನನಗೆ ತಿಳಿಸಿದ್ದಾರೆ.

ಈ ಅಂಕಣ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು ಎಂಬ ಬೇಡಿಕೆಯು ಪೊಲೀಸ್ ಅಧಿಕಾರಿಗಳು, ನ್ಯಾಯವಾದಿಗಳು, ಅಪರಾಧ ಶಾಸ್ತ್ರದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಬಂದ ಕಾರಣ ನಾನು ಅಂಕಣದ ಬಿಡಿ ಬರಹಗಳನ್ನು ಪುಸ್ತಕದ ರೂಪದಲ್ಲಿ ತರುತ್ತಿರುವೆ. ಈಗಾಗಲೇ ಈ ಅಂಕಣದ ಬರಹಗಳು ಆರು ಪುಸ್ತಕಗಳಾಗಿ ಹೊರಬಂದಿವೆ. ಮೊದಲನೆಯದು 'ಕ್ರೈಂ ಕಥೆಗಳು' (ಸಪ್ನಾ), ಎರಡನೆಯದು 'ಅಪರಾಧದ ಆ ಕ್ಷಣ' (ಅಂಕಿತ), ಮೂರನೆಯದು 'ಅಪರಾಧಗಳ ಬೆನ್ನತ್ತಿ' (ವಿಕ್ರಂ ಪ್ರಕಾಶನ), ನಾಲ್ಕನೆಯದು 'ಸಿಸ್ಟರ್ ಅಭಯ ಸಾವು' (ವಿಕ್ರಂ ಪ್ರಕಾಶನ), ಐದನೆಯದು 'ಕೊಲೆ ಆರೋಪಿಯಾದ ಸಿನಿಮಾತಾರೆ' (ಸಾಹಿತ್ಯ ಪ್ರಕಾಶನ) ಹಾಗೂ ಆರನೆಯದು 'ತ್ರಿಕೋಣ ಪ್ರೇಮ ತಂದ ದುರಂತ' (ಸಾಹಿತ್ಯ ಪ್ರಕಾಶನ). ಈಗ ನಿಮ್ಮ ಕೈಯಲ್ಲಿರುವುದು ಈ ಸರಣಿಯ ಏಳನೆಯ ಪುಸ್ತಕ. ಈ ಪುಸ್ತಕವನ್ನು ವಸಂತ ಪ್ರಕಾಶನವು ಹೊರತರುತ್ತಿದೆ.

ಈ ಹಿಂದೆ ಬರೆದ ಇದೇ ರೀತಿಯ ಅಂಕಣಗಳೂ ಪುಸ್ತಕಗಳಾಗಿ ಹೊರಬಂದಿವೆ. ಅವೆಲ್ಲದರ ಹೆಸರುಗಳನ್ನು ಈ ಪುಸ್ತಕದ ಕೊನೆಯಲ್ಲಿರುವ ನನ್ನ ಪ್ರಕಟಿತ ಕೃತಿಗಳ ಪಟ್ಟಿಯಲ್ಲಿ ನೋಡಬಹುದು. ವಾರದ ಅಂಕಣ ಬರೆಯುವುದು ಸುಲಭದ ಕೆಲಸವಲ್ಲ. ಪ್ರತಿವಾರವೂ ಹೊಸ ಹೊಸ ಅಪರಾಧಗಳ ಬಗ್ಗೆ ಮಾಹಿತಿಗಳನ್ನು ನಾನು ಸಂಗ್ರಹಿಸಬೇಕಾಗುತ್ತದೆ. ಈ ಸಂಗ್ರಹಕ್ಕಾಗಿ ನಾನು ನಾಡಿನ ವಿವಿಧ ಮೂಲೆಗಳಲ್ಲಿರುವ ಪೊಲೀಸ್ ಅಧಿಕಾರಿಗಳ, ನ್ಯಾಯವಾದಿಗಳ ಮತ್ತು ಪತ್ರಕರ್ತರ ನೆರವನ್ನು ಪಡೆಯುತ್ತಾ ಬಂದಿರುವೆ. ಅವರೇ ನನ್ನ ಅಂಕಣದ ಬೆನ್ನೆಲುಬಾಗಿದ್ದಾರೆ. ಅವರಿಗೆ ನನ್ನದೊಂದು ದೊಡ್ಡ ಸೆಲ್ಯೂಟ್. ನನ್ನ ಸ್ನೇಹಿತ ಶಶಿಕಿರಣ್ ವ್ಯಾಸಮುನಿಗಳ ನೆರವಿಗೆ ಬಂದ ಗಣಪತಿಯಂತೆ ಕಳೆದ 12 ವರ್ಷಗಳಿಂದ ನನ್ನ ನೆರವಿಗೆ ಬಂದಿದ್ದಾನೆ. ಆತನೇ ನನ್ನ ಎಲ್ಲ ಲೇಖನಗಳ ಮೊದಲ ಓದುಗ. ಆತ ನನಗೆ ಕಾಲಕಾಲಕ್ಕೆ ಉಪಯುಕ್ತ ಸಲಹೆ ಸೂಚನೆಗಳನ್ನು ಕೊಡುತ್ತಾ ಬರುತ್ತಿದ್ದಾನೆ. ಅವನಿಗೆ ನಾನು ಋಣಿಯಾಗಿದ್ದೇನೆ. ಅವನಂತೆಯೇ ಇನ್ನೊಬ್ಬ ಗೆಳೆಯ ನಾರಾಯಣ ಭಟ್ ನನ್ನ ಪುಸ್ತಕಗಳ ಕರಡು ತಿದ್ದುವ ಜವಾಬ್ದಾರಿಯನ್ನು ಹೊತ್ತು ಸೂಕ್ತ ತಿದ್ದುಪಡಿಗಳನ್ನು ಸೂಚಿಸುತ್ತಾರೆ. ಅವರಿಗೆ ಧನ್ಯವಾದಗಳು. ಇನ್ನು 'ವಿಜಯವಾಣಿ' ಸಂಪಾದಕರಾದ ಚನ್ನೇಗೌಡರು ಸದಾಕಾಲವೂ ಪ್ರೋತ್ಸಾಹವನ್ನು ತೋರುತ್ತಾ ಬಂದಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ನನ್ನ ಪತ್ನಿ ಮತ್ತು ಕುಟುಂಬ ಸದಸ್ಯರ ಬೆಂಬಲವಿಲ್ಲದಿದ್ದರೆ ನಾನು ದಿನದ ಆರು ಗಂಟೆಗಳ ಕಾಲ ಓದು ಮತ್ತು ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಪುಸ್ತಕದಲ್ಲಿ ಬರುವ ಎಲ್ಲ ಘಟನೆಗಳೂ ನಿಜವಾದುದೇ ಆಗಿವೆ. ಆದರೆ ವ್ಯಕ್ತಿಗಳ ಹೆಸರು, ವಿಳಾಸ, ಊರಿನ ಹೆಸರು ಮುಂತಾದವನ್ನು ಬದಲಾಯಿಸಲಾಗಿದೆ.”