ಹೀಗೊಂದು ಸಂದರ್ಶನ
ಸಂದರ್ಶನ ಪ್ರಾರಂಭವಾಗಿತ್ತು. ಮೊದಲ ಅಭ್ಯರ್ಥಿಯನ್ನು ಒಳಗೆ ಕರೆದರು
ಸಂದರ್ಶಕ ೧ ಅಭ್ಯರ್ಥಿಗೆ: ಬನ್ನಿ, ಕುಳಿತುಕೊಳ್ಳಿ, ಭಾರತಕ್ಕೆ ಯಾವಾಗ ಸ್ವಾತಂತ್ರ್ಯ ಬಂತು ತಿಳಿಸುವಿರಾ?
ಅಭ್ಯರ್ಥಿ: ಸ್ವಾತಂತ್ರ್ಯಕ್ಕಾಗಿ ಬಹಳ ವರ್ಷಗಳಿಂದ ಹೋರಾಟ ನಡೆದಿತ್ತು, ಕೊನೆಗೆ ೧೯೪೭ರಲ್ಲಿ ಅದು ಫಲಪ್ರದವಾಯಿತು.
ಸಂದರ್ಶಕ ೨ ಅಭ್ಯರ್ಥಿಗೆ: ಸ್ವಾತಂತ್ರ್ಯ ಗಳಿಸಿದ್ದಕ್ಕೆ ಪ್ರಮುಖ ವ್ಯಕ್ತಿ ಯಾರೆಂದು ಪರಿಗಣಿಸಲಾಗುತ್ತದೆ?
ಅಭ್ಯರ್ಥಿ : ಯಾರೆಂದು ಹೇಳುವುದು. ಹಲವಾರು ಜನ ಶ್ರಮಿಸಿದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಅನ್ಯಾಯವಾಗುತ್ತದೆ.
ಸಂದರ್ಶಕ ೩ ಅಭ್ಯರ್ಥಿಗೆ: ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಂ. ೧ ವೈರಿಯೇ?
ಅಭ್ಯರ್ಥಿ: ಅದರಬಗ್ಗೆ ಬಹಳ ಸಂಶೋಧನೆಗಳು ನಡೆಯುತ್ತಿವೆ. ಅದು ಪೂರ್ಣವಾದನಂತರ ತಿಳಿಸುತ್ತೇನೆ.
ಎಲ್ಲಾ ಸಂದರ್ಶಕರೂ ಒಟ್ಟಿಗೆ: ಬಹಳ ಚೆನ್ನಾಗಿ ಉತ್ತರ ನೀಡಿದ್ದೀರಿ. ಈ ಪ್ರಶ್ನೆಗಳನ್ನು ಹೊರಗೆ ಕುಳಿತಿರುವ ಇತರೆ ಅಭರ್ಥಿಗಳಿಗೆ ತಿಳಿಸಬೇಡಿ.
ಅಭ್ಯರ್ಥಿ ಕೊಠಡಿಯಿಂದ ಹೊರಬಂದಾಗ ಎಲ್ಲರೂ ಅವನಿಗೆ ಮುತ್ತಿಗೆ ಹಾಕಿ ’ಏನೇನು ಪ್ರಶ್ನೆಗಳನ್ನು ಕೇಳಿದರು’ ಎಂದು ದುಂಬಾಲು ಬಿದ್ದರು. ಅವನು ಜಗ್ಗಲಿಲ್ಲ. ಕೊನೆಗೆ ಒಬ್ಬ ಅಭ್ಯರ್ಥಿ ’ಹೋಗಲಿ ನೀವು ನೀಡಿರುವ ಉತ್ತರವನ್ನಾದರೂ ಹೇಳು’ ಎಂದ. ಅಭ್ಯರ್ಥಿ ಉತ್ತರಗಳನ್ನು ಮಾತ್ರ ತಿಳಿಸಿದ.
ಎರಡನೆ ಅಭ್ಯರ್ಥಿ ಒಳ ಹೋದ.
ಸಂದರ್ಶಕ ೧ ಅಭ್ಯರ್ಥಿಗೆ: ನಿಮ್ಮ ಹುಟ್ಟಿದ ದಿನಾಂಕ ಯಾವುದು?
ಅಭ್ಯರ್ಥಿ: ಅದಕ್ಕಾಗಿ ಬಃಅಳ ವರ್ಷಗಳಿಂದ ಹೋರಾಟ ನಡೆದಿತ್ತು. ಕೊನೆಗೆ ೧೯೪೭ರಲ್ಲಿ ಅದು ಫಲಪ್ರದವಾಯಿತು.
ಸಂದರ್ಶಕ ೨ ಅಭ್ಯರ್ಥಿಗೆ: ನಿಮ್ಮ ತಂದೆಯವರ ಹೆಸರೇನು?
ಅಭ್ಯರ್ಥಿ : ಯಾರೆಂದು ಹೇಳುವುದು. ಹಲವಾರು ಜನ ಶ್ರಮಿಸಿದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಅನ್ಯಾಯವಾಗುತ್ತದೆ.
ಸಂದರ್ಶಕ ೩ ಅಭ್ಯರ್ಥಿಗೆ: ಏನ್ರೀ ನಿಮಗೇನು ತಲೆಗಿಲೆ ಕೆಟ್ಟಿದೆಯೆ? ಈ ರೀತಿ ಉತ್ತರ ಕೊಡುತ್ತಿದ್ದೀರಲ್ಲಾ?
ಅಭ್ಯರ್ಥಿ: ಅದರ ಬಗ್ಗೆ ಬಹಳ ಸಂಶೋಧನೆಗಳು ನಡೆಯುತ್ತಿವೆ. ಅದು ಪೂರ್ಣವಾದನಂತರ ತಿಳಿಸುತ್ತೇನೆ.
ಸಂಗ್ರಹ - ಎ.ವಿ. ನಾಗರಾಜು