ಹೀಗೊಂದು ಸಂಬಂಧ‌

ಹೀಗೊಂದು ಸಂಬಂಧ‌

ಸಂಬಂಧ....ಏಕೇ ಹೀಗೆ??

 

 

“ನಮ್ಮ ಸಂಸಾರ ಆನಂದಸಾಗರ....” ಹಾಡು ಕೇಳಿಬರುತ್ತಿತ್ತು. ಅವಳಿಗೂ ಅನ್ನಿಸಿತು “ಅರೆ ನನ್ನ ಸಂಸಾರವೂ ಹೀಗೆ ಇತ್ತು ಅಲ್ವಾ? ಎಷ್ಟೊಂದು ಕನಸು ಇತ್ತು ನನ್ನ ಹರೆಯದಲ್ಲಿ.ನನ್ನ ಮನೆ ನನ್ನ ಮಕ್ಕಳೂ... ಪ್ರಾಮಾಣಿಕ ವಾಗಿ ಹೇಳಬೇಕೆಂದರೆ ಅಂತರಾಳದಲ್ಲಿ ಯಾವತ್ತೂ ತನ್ನ ಜೀವನ ಸಂಗಾತಿ ಬಗ್ಗೆ ಯೋಚಿಸಿರಲಿಲ್ಲ. ಎಲ್ಲರ ಹಾಗೆ ಅವಳಿಗೂ ಮದುವೆ ಆಯಿತು,ಒಳ್ಳೆ ಸ್ವಭಾವದ ಹುಡುಗ ಅವಳ ಸಂಗಾತಿ ಆಗಿದ್ದ.ತಾನು ದುಡಿಯುತ್ತಿದುದರಿಂದ ಎಂದಿಗೂ ಅವಳಿಗೆ ಆರ್ಥಿಕ ಪರಾವಲಂಬನೆ ಇರಲಿಲ್ಲ.ಕಾಲಚಕ್ರ ಉರುಳುತ್ತಾ ಮನೆ, ಮಕ್ಕಳು ಅಂತಾ ಅವಳ ಪಾರಿವಾರಿಕ ಜವಾಬ್ದಾರಿ ಜಾಸ್ತಿ ಅಗತೊಡಗಿತು, ಅವಳ ಗಮನವೆಲ್ಲಾ ಮಕ್ಕಳ ಕಡೆ ಹರಿಯ ತೊಡಗಿತು ಅದು ಯಾವಾಗ ಅವಳ ಮತ್ತು ಅವಳ ಗಂಡನ ನಡುವೆ ಕಂದಕ ವಾಗ ತೊಡಗಿತು?.ಸಣ್ಣ ಪುಟ್ಟ ಕಾರಣಗಳಿಗೂ ಬಿರುಕಾಗುವುದು, ಮಾತು ಬಿಡುವುದು ಮಾಮೂಲಿ ಆಯಿತು. ಮೊದಮೊದಲು, ಅವಳೇ ಹೋಗಿ ಮಾತಾಡಿಸಿ ನಗು ಹೊರಡಿಸಿ ಸರಿ ತೂಗಿಸುತ್ತಿದ್ದಳು.ಆದರೆ, ೧೦-೧2 ವರ್ಷ ವಾದ ಮೇಲು ಅವನು ಒಂಚೂರು ಬದಲಾಗಲಿಲ್ಲ. ಅವಳ ಸಹನೆ ಕಟ್ಟೆ ಒಡೆಯಿತು. ತಾನು ಮಾತು ಬಿಟ್ಟು ಅವನೇ ಬರಲಿ ಎಂದು ಕಾಯುತ್ತಾ ಕುಳಿತಳು. ಆದರೆ ಆ ದಿನ ಬರಲೇ ಇಲ್ಲ… ಅವನ ಪಾಡಿಗೆ ಅವನು, ಅವಳ ಪಾಡಿಗೆ ಅವಳು . ಅತ್ತಿ ಹಣ್ಣಿನ ಹಾಗೆ ಇತ್ತು ಅವಳ ಜೀವನ. ನೋಡುವರ ಕಣ್ಣಿಗೆ ಇವರದು ಆನಂದ ತುಂಬಿದ ಸಂಸಾರ. ಮನೆಯಲ್ಲಿ ಮಾತಿಲ್ಲ, ಕಥೆ ಇಲ್ಲ, ನಗುವಿಲ್ಲ. ಮಕ್ಕಳನ್ನು ಇಬ್ಬರು ಮುದ್ದಾಡುವರು ಬೇರೆ ಬೇರೆ ಯಾಗಿ. ಹೊರಗಡೆ ಜೊತೆಯಲ್ಲಿ ಹೋಗುವರು ಬರುವರು ಆದರೆ ಇಬ್ಬರಲ್ಲೂ ಅನ್ಯೋನ್ಯತೆ ಇರಲಿಲ್ಲ.ಅವನೂ ಅಷ್ಟೇ, ಹೊಟ್ಟೆಗೆ ಬಟ್ಟೆಗೆ ಕಡಿಮೆ ಮಾಡಲಿಲ್ಲ ಅವರ ಮನೆಯಲ್ಲಿ ನಗು ಬಿಟ್ಟು ಬಾಕಿ ಎಲ್ಲ ಇತ್ತು.

ಇದು ಇವಳೊಬ್ಬಳ ಕಥೆ ಅಲ್ಲ, ಇಂದಿನ ಬಹುತೇಕ ಮನೆಗಳಲ್ಲಿ ಇದು ನಡೆದಿದೆ. ಮನೆ, ಕಾರು, ದೊಡ್ಡ ಮೊತ್ತದ ಸಂಬಳ ಮುದ್ದಾದ ಮಕ್ಕಳು ಆದರೆ ಸಂತೋಷವೇ ಇಲ್ಲ, ಇದು ಕೇವಲ ದಂಪತಿಗಳಿಗೆ ಮೀಸಲಾಗಿಲ್ಲ, ಅಣ್ಣ ತಮ್ಮ, ಅಕ್ಕ ತಂಗಿ, ಬಂಧು ಬಾಂಧವರು, ಗೆಳೆಯ, ಗೆಳತಿ ಅಷ್ಟೇ ಯಾಕೇ? ಅಪ್ಪ ಅಮ್ಮ ಯಾರನ್ನು ಬಿಟ್ಟಿಲ್ಲ.

ನಮ್ಮ ತಾಯಿ ತಂದೆಯರು ನಾವು ಕಂಡಷ್ಟು ಅದ್ಧೂರಿ ಜೀವನ ಕಂಡಿರಲಿಲ್ಲ, ಜೀವನದಲ್ಲಿ ಮೌಲ್ಯಗಳು ತುಂಬಾ ಪ್ರಮುಖ ಸ್ಥಾನ ಹೊಂದಿರುತ್ತಿತ್ತು .ಅವರ  ತಮ್ಮ ಇಡೀ ಬದುಕು ದುಡಿದು ನಿವ್ರುತ್ತರಾಗುವಾಗ ಸ್ವಂತ ಮನೆ ಕಟ್ಟುತ್ತಿದ್ದರು, ಬ್ಯಾಂಕ್ ಗೆ ಹೋಗಿ ನಿಂತು ಹಣ ವ್ಯವಹಾರ ಮಾಡುತ್ತಿದ್ದರು,ಸಿನೆಮ ನೋಡಲೂ ಕೂಡ ತಮ್ಮ ಸರದಿಗಾಗಿ ಕಾಯ್ತುತ್ತಿದ್ದರು. ನಾವು ಎಲ್ಲದಕ್ಕೂ ನಮ್ಮ “ಸ್ಮಾರ್ಟ್ ಫೋನ್”ನಲ್ಲಿ ಇಲ್ಲವೇ “ಕಂಪ್ಯೂಟರ್”ನಲ್ಲಿ “ಆನ್ಲೈನ್” ವ್ಯವಹರಿಸುತ್ತೇವೆ.ನಮಗೆ ಬೇಕಾದಾಗ ನಮ್ಮ ಸಮಯಕ್ಕನುಸಾರವಾಗಿ ನಮ್ಮ ಕೆಲಸಗಳನ್ನು ಮಾಡುತ್ತೇವೆ. ಇಂದು ಯಾವುದಕ್ಕೂಕಾಯುವ ಪ್ರಮೇಯವಿಲ್ಲ. ಮಕ್ಕಳು ಕೇಳಿದ ತಕ್ಷಣ “ಚಾಕ್ಲೇಟ್” ಕೊಡುತ್ತೇವೆ.ಇಂದಿನ ಪೀಳಿಗ”ಈಸಿ ಲೈಫ್” ಗೆ ಹೊಂದಿಕೊಳ್ಳುತ್ತಿದ್ದಾರೆ. ಹಾಗಾಗಿ ಜನರ “ಸಹಿಷ್ಣುತೆ” ಕಡಿಮೆ ಆಗಿದೆ. ಜನ ಸಂಬಂಧದಲ್ಲೂ ಅದನ್ನೇ ಕಾಣ ಬಯಸುತ್ತಿದ್ದಾರೆ. ಇನ್ನೊಬ್ಬರನ್ನು ಸಹಿಸುವ ಪರಿಮಿತಿ ಕಡಿಮೆ ಆಗಿದೆ.ಸಂಗಾತಿ, ಮಕ್ಕಳು , ಗೆಳೆಯರು ಎಲ್ಲರನ್ನೂ “ಸಹಿಸಿಕೊಳ್ಳುವುದೇ” ದೊಡ್ಡ ವಿಷಯ ವಾಗಿದೆ

ಸಂಬಂಧಗಳೇ ಹಾಗೆ, ಅದನ್ನು ಜತನದಿಂದ ಕಾಪಾಡಿಕೊಳ್ಳಬೇಕು.ಅದನ್ನು ನಿರ್ವಹಿಸುವ ಬಧ್ಧತೆ ಬೇಕು.ಅದರ ಜೊತೆಗೆ ವಯೋಮಾನಕ್ಕೆ ತಕ್ಕಂತೆ ಬುಧ್ಧಿ ಪರಿಪಕ್ವತೆ ಬೇಕು.ಪ್ರಸಕ್ತ ಜೀವನ ಶ್ಯಲಿಯಲ್ಲಿ ಯಾರಿಗೂ ಯಾರ ಮೇಲೂ ಅವಲಂಬನೆ ಇಲ್ಲ. ಆರ್ಥಿಕವಾಗಿ , ಭಾವುಕರಾಕಿ ಎಲ್ಲರೂ ಸ್ವಾವಲಂಬಿಗಳು.ಎಲ್ಲವು ಸರಿಯಾಗಿದ್ದಾಗ ಇನ್ನೊಬ್ಬರ ಅಗತ್ಯವೇ ಇರುವುದಿಲ್ಲ ಎನಿಸುವುದು ಸಹಜ. ನಮ್ಮ ಹಿಂದಿನ ಪೀಳಿಗೆ ಜೀವನಕ್ಕೆ, ಜನರಿಗೆ ಹೆಚ್ಚು ಒಟ್ಟು ಕೊಟ್ಟಿದ್ದರು. ಅವರು ಯಾತ್ರಿಕ ಬದುಕಿನ ರುಚಿ ಕಂಡಿರಲಿಲ್ಲ.ಇವತ್ತು ನಮಗೆ ಮನುಷ್ಯರಿಗಿಂತ ಹೆಚ್ಚು ಹತ್ತಿರ ಅಂದ್ರೆ ನಮ್ಮ “ಸ್ಮಾರ್ಟ್ ಫೋನ್”,ವ್ಹಾಟ್ಸ್ಆಪ್, ಫೆಸ್ ಬುಕ್” ಆಗಿದೆ.ನಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರು ಪಕ್ಕದ ಎಲೇಲಿ ಬಿದ್ದಿರೋ ನೊಣದ ಬಗ್ಗೆ ಚಿಂತೆ ಜಾಸ್ತಿ ಆಗಿದೆ..

ಸಂಬಧಗಳು ಒಮ್ಮೆ ಕಿತ್ತು ಹೋದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಎರಡು ಕಡೆ ಇಂದ ಬರಬೇಕು.ಒಮ್ಮೆ ಬಿರುಕು ಏರ್ಪಟ್ಟರೆ ಅದನ್ನು ಆಗಲೇ ಸರಿದೂಗಿಸಬೇಕು,ಬಿರುಕು ದೊಡ್ದದಾಗಿ ಕಂದಕ ಏರ್ಪಡಲು ಅವಕಾಶ ಕೊಡಬಾರದು. ಇಲ್ಲವಾದರೆ ಪರಸ್ಪರ ಅವಲಂಬನೆ ಇಲ್ಲವಾಗಿರುವುದರಿಂದ ಅವರ ಅಗತ್ಯವೇ ಕಾಣಿಸುವುದಿಲ್ಲ. ಅಗತ್ಯವೇ ಇಲ್ಲದ ಮೇಲೆ ಅದು ಕಟ್ಟಿಕೊಂಡು ಒದ್ದಾಡುವುದೇ? ಎಂದು ಅನಿಸುವುದು ಸಹಜೇವೆ. ಇಂದು ಮಕ್ಕಳು ಬೆಳೆದು ಬರುವ ವಾತಾವರಣವು ಬದಲಾಗಿರುವುದರಿಂದ “ಅಹಂ” ಸಹಜವಾಗಿಯೇ ಜಾಸ್ತಿ ಇದೆ. ಮನುಷ್ಯ ಯಾವಾಗ “ಪ್ರಾಪಂಚಿಕ ವಸ್ತು”ಗಳಿಗೆ ಜಾಸ್ತಿ ಮಹತ್ವ ಕೊಡುತ್ತಾನೋ, ಆಗಿನಿಂದಲೇ ಅವನ ಅಧೋಗತಿ ಪ್ರಾರಂಭವಾಗುತ್ತದೆ. ಪಶ್ಚಿಮ ದೇಶಗಳಲ್ಲಾದ ಬದಲಾವಣೆಗಳು ಈಗ ನಮ್ಮ ದೇಶದಲ್ಲಿ ಕಾಣುತ್ತಿದ್ದಿವಿ. ಎಷ್ಟೋ ಬ್ಲ್ಲಾಗ್,ಲೇಖನಗಳಲ್ಲಿ ಕೌಟುಂಬಿಕ ಜೀವನದ ಮಹತ್ವವನ್ನು ಬಿತ್ತರಿಸಲಾಗುತ್ತದೆ ವಿಪರ್ಯಾಸವೆಂದರೆ ಅವರು ಅದನ್ನು ತಿಳಿದು ಸುಧಾರಿಸಿಕೊಳಲ್ಲು ಹೆಣಗುತ್ತಿದ್ದಾರೆ ಆದರೆ ನಾವೇ ಬೀಳುವುದನ್ನು ಅನುಕರಿಸುತ್ತಿದ್ದೇವೆ ಹೊರತು ಏಳುವುದನ್ನು ಗುರುತಿಸುತ್ತಿಲ್ಲ.

ಭಗವಂತ ಕೊಟ್ಟಿರುವ ಈ ಭವ್ಯ ಬಾಳನ್ನು ಜನರನ್ನು ಅರ್ಥ ಮಾಡಿಕೊಂಡು, ಕಡೇ ಪಕ್ಷ ನಮ್ಮ ಸಂಪರ್ಕದಲ್ಲಿ ಇರುವ ಜನರ ಭಾವನೆಗಳಿಗೆ ಹೊಂದಿಕೊಂಡು, ಹೃದಯ ವೈಶಾಲ್ಯತೆ ಬೆಳೆಸಿಕೊಂಡು ನಾವು ಖುಷಿಯಿಂದ ಬಾಳಿ ಇನ್ನೊಬ್ಬರನ್ನು ಬಾಳಲು ಬಿಡೋಣ. ಬದುಕು ಅರ್ಥಪೂರ್ಣ ವಾಗುವುದು..ಎನಂತೀರ?

-ಸರಿತಾ

 

 

 

 

Comments

Submitted by ಗಣೇಶ Fri, 10/03/2014 - 23:25

ನಿಜ ಸರಿತಾ ಅವರೆ, ಈ ಸ್ಮಾರ್ಟ್ ಫೋನ್‌ಗಳು ಹತ್ತಿರವಾದಷ್ಟು ಸಂಬಂಧಗಳು ದೂರವಾಗುತ್ತಿವೆಯೋ ಏನೋ..
ಎಲ್ಲರಲ್ಲೂ ಅಹಂ. ಈಗಿನ ಕಾಲದವರು ಮಕ್ಕಳನ್ನು ಬೆಳಸುವ ರೀತಿಯೇ ಸರಿಯಿಲ್ಲ ಎನಿಸುತ್ತಿದೆ.

Submitted by sarithasangam Mon, 10/06/2014 - 17:03

In reply to by ಗಣೇಶ

ಗಣೇಶ್ ರವರೇ, ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು. ಜನರು " ಫೇಸ್ ಬುಕ್" ನಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಲು ಮುಂದಾಗುತ್ತಿದ್ದಾರೆ ಹೊರತು ಪಕ್ಕದಲ್ಲ್ಲಿರೋ ಕುಟುಂಬದವರೊಡನೆ ಮಾತಾಡಲು ತಯಾರಿಲ್ಲ :(
ಮಕ್ಕಳನ್ನು ಹೇಗೆ ಬೆಳೆಸುವುದು ಎನ್ನುವುದು ಒಂದು ದೊಡ್ದ‌ ಸವಾಲು.