ಹೀಗೊಂದು ಸನ್ಮಾನದ ಕರೆ
ಕವನ
ಉದಯದಲಿ ಚರವಾಣಿ ರಿಂಗಣಿಸಿ ಎಡೆಬಿಡದೆ
ಮೊದಲದನು ಹಿಡಿದಿದ್ದೆ ಗುಂಡಿಯೊತ್ತಿ
ತೊದಲುತ್ತ ನುಡಿದಿದ್ದ ಹಲವಾರು ವಿಷಯಗಳ
ಮೊದಲಾಯ್ತು ಮಾತುಗಳು ಸುತ್ತಿಬಳಸಿ
ಚೊಕ್ಕದಿಹ ರಂಗದಲಿ ಸನ್ಮಾನ ಮಾಡಿಸುವೆ
ಕಿಕ್ಕಿರಿದು ಜನ ನಿಂತು ನೋಡುವಂತೆ
ರೊಕ್ಕವನು ಒಂದಿಷ್ಟು ತಳ್ಳಿಬಿಡಿ ನನ್ನೆಡೆಗೆ
ಮಿಕ್ಕ ಹೊಣೆ ನನಗಿರಲಿ ಬೇಡ ಚಿಂತೆ
ಚಾಡಿ ಹೇಳುವರುಂಟು ನಮ್ಮ ದೂಷಣೆ ಗೈದು
ಬೇಡ ನಮ್ಮಲ್ಲಿ ನಿಮಗೆ ಅನುಮಾನ
ನೋಡುತಿರಿ ನಿಮಗಲ್ಲಿ ವೈಭವದ ಸನ್ಮಾನ
ಮಾಡಿಸುವೆ ರಂಗದಲಿ ನಿಮ್ಮ ಗುಣಗಾನ
ಕಳಿಸಿಬಿಡಿ ನಿಮ್ಮೆಲ್ಲ ಸಾಧನೆಯ ಪಟ್ಟಿಯನು
ಕಳವಳವ ಪಡಬೇಡಿ ಹಿತರು ನಾವು
ಚಳಿಯೆಂದು ಮನೆಯೊಳಗೆ ಗುಡಿಹೊದ್ಧು ಮಲಗಿದರೆ
ಬೆಳಕನ್ನು ಕಾಣುವುದು ಹೇಗೆ ನೀವು
ನುಡಿದಿರುವೆ ಅವನಲ್ಲಿ ಬೇಕಿಲ್ಲ ಸನ್ಮಾನ
ಬಿಡಬೇಡ ಹಳಿಯಿರದ ರೈಲು ಬಂಡಿ
ಕಡೆಗೊಮ್ಮೆ ಹೇಳಿಬಿಡು ಚರವಾಣಿ ಸಂಖ್ಯೆಯನು
ಪಡೆದಿರುವೆ ಯಾರಿಂದ ಯಾರು ಕೊಂಡಿ?
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್