ಹೀಗೊಂದು 200 ರೂಪಾಯಿಯ ನೋಟಿನ ಕಥೆ

ಹೀಗೊಂದು 200 ರೂಪಾಯಿಯ ನೋಟಿನ ಕಥೆ

ಸುಮಾರು ಮೂರುವರೆ ವರ್ಷದ ಹಿಂದಿನ ಕಥೆ ಇದು . ಹೀಗೆ ದೊಡ್ಡವರು ಹೇಳಿದ್ದರು ರಾತ್ರಿ ಊಟವಾದ ಮೇಲೆ ಹಣ್ಣು ತಿಂದು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು.   ಯಾವತ್ತು  ಇಂತಹ ಈ ತರಹದ ಹಲವಾರು ಒಳ್ಳೆಯ ಅಭ್ಯಾಸಗಳು ಶುರು ಮಾಡಿದ  ಎರಡೇ ದಿನಕ್ಕೆ ಸೀಮಿತವಾಗಿ  ಮತ್ತೆ ಮೂರನೇ ದಿನಕ್ಕೆ ಯಥಾ ಪ್ರಕಾರ ಹಳೆಯ ದಾರಿಗೆ ಬಂದು ಬಿಡುತ್ತೇನೆ. ಬಹುಶ ಬಹುತೇಕರ ಅನುಭವ ಹೀಗೆ ಇರುತ್ತದೆ  ಅಂದುಕೊಳ್ಳುತ್ತೇನೆ.

      ಅವತ್ತು   ರಾತ್ರಿ ಊಟ ಆದ ಮೇಲೆ ಹಣ್ಣು ತಿನ್ನೋಣವೆಂದು ಮನಸ್ಸಾಯಿತು. ರಾತ್ರಿ ಸುಮಾರು ಹತ್ತು ಗಂಟೆ ಆಗಿತ್ತು.  ಸರಿ ಹಣ್ಣು ತರಲು  ಪರ್ಸ್ನಲ್ಲಿ ಐನೂರ ನೋಟು ಮತ್ತು ಒಂದು  ನೂರರ ನೋಟಿತ್ತು. ಪರ್ಸ್ ಜೇಬಿಗೆ ತುರುಕಿಕೊಂಡು ಬೈಕ್ ಹತ್ತಿ  ಮಾರುತಿನಗರಕ್ಕೆ ಹೊರಟೆ.  ಒಂದಿಸ್ಟು ಹಣ್ಣು ತೂಕಕ್ಕೆ ಹಾಕಿಕೊಂಡು ಒಂದು ಪ್ಲಾಸ್ಟಿಕ್ ಕವರ್ನಲ್ಲಿ   ಅಂಗಡಿಯವ ಹಾಕಿಕೊಟ್ಟ,  ಒಟ್ಟು 146 ರೂಪಾಯಿ ಆಗಿತ್ತು ಒಂದು ಕೈಯಲ್ಲಿ ಕವರ್ ಹಿಡಿದು ಮತ್ತೊಂದು ಕೈಯಲ್ಲಿ ಪರ್ಸ್ ನಿಂದ  ಹಣ ತೆಗೆದು ಕೊಟ್ಟೆ.  ಹಾಗೆ ಅಂಗಡಿಯವ ಏನೇನೋ ಮಾತಾಡ್ತಾ ನನ್ನ ಗಮನ ಬೇರೆಡೆ ತಿರುಗಿಸಿದ ಆ ಸಂದರ್ಭದಲ್ಲಿ ಏನೋ  ಯಾವುದೋ ಜ್ಞಾನದಲ್ಲಿ ಅವನು ಕೊಟ್ಟ ಬಾಕಿ ಹಣ  ಎಷ್ಟು ಎಂದು ತೆಗೆದುನೋಡುವ ಗೋಜಿಗೆ ಹೋಗದೆ ಪರ್ಸ್ಗೆ ತುರುಕಿ ಮನೆಗೆ ಹೊರಟೆ.   ಅದರೆ ನಾನು ಅವನಿಗೆ ಪರ್ಸ್ನಿಂದ ಒಂದೇ ಒಂದು ನೋಟು ಮಾತ್ರ ತೆಗೆದುಕೊಟ್ಟ ಸ್ಪಷ್ಟ ಅರಿವಿತ್ತು. ಆದರೆ ಯಾವ ನೋಟು ಕೊಟ್ಟೆ ಎಂಬ  ಅರಿವು ಆ ಸಮಯಕ್ಕೆ ಇರಲಿಲ್ಲ. 
 

      ಮನೆಗೆ ಬಂದು ಒಳಕ್ಕೆ ಹೋಗಿ ಹಣ್ಣಿನ ಬ್ಯಾಗ್ ಒಂದು ಕಡೆ ಇಟ್ಟು . ಪರ್ಸ್ ತೆಗೆದು ಹಣ ಎಣಿಸೆತೊಡಗಿದೆ.  ನನಗೆ ಶಾಕ್ ಆಗಿತ್ತು ಕಾರಣ ಆತ 354 ಚಿಲ್ಲರೆ ಕೊಡುವ ಬದಲು ನನಗೆ  ಬರೆ 54 ರೂಪಾಯಿ ಚಿಲ್ಲರೆ ಬಾಕಿ ಕೊಟ್ಟಿದ್ದ. ನನ್ನ ಒಂದು ನೂರರ ನೋಟು ಪರ್ಸ್ ನಲ್ಲೇ ಹಾಗೆ ಇತ್ತು.  ಹಾಗಾದರೆ ನಾನು ಕೊಟ್ಟಿದ್ದು ಐನೂರು ರ ನೋಟಗಿತ್ತು ಮತ್ತು ಹಣ್ಣಿಗೆ ಖರ್ಚು 146 ಕಳೆದು ನನಗೆ  ಒಟ್ಟು  354 ರೂಪಾಯಿ ಅಂಗಡಿಯವನಿಂದ  ಬಾಕಿ ಚಿಲ್ಲರೆ ಹಣ ಬರಬೇಕಿತ್ತು. ಸಮಯ ವ್ಯರ್ಥ ಮಾಡದೆ ಕೂಡಲೇ ಬೈಕ್ ನಲ್ಲಿ ಅವನ ಅಂಗಡಿಗೆ ಆ ರಾತ್ರಿಯೇ ಹೋದೆ.   ಅಷ್ಟರಲ್ಲಾಗಲೇ ಅವನು ಅಂಗಡಿ ಮುಚ್ಚಿ ಮನೆಗೆ ಹೋಗಿ ಆಗಿತ್ತು.  ಸರಿ ಇನ್ನೇನು ಮಾಡೋದು ನನ್ನ ಹಣ ಮತ್ತೆ ವಾಪಾಸು ಸಿಗೋದು ಕಷ್ಟ ಎಂದು ತಿಳಿದು ಹ್ಯಾಪುಮೋರೆ ಹಾಕಿಕೊಂಡು ಮನೆಗೆ ಬಂದೆ.
 

           ಬೆಳಿಗ್ಗೆ ಭಾನುವಾರ ಆಗಿದ್ದರಿಂದ ಯಾವಾಗಲೂ ಏಳುವುದು ತಡವಾಗಿಯೇ   ಮತ್ತೆ ತಿಂಡಿಗೆ ಹೋಗೋದು ಕೂಡ ತಡವಾಗಿ . ಮಧ್ಯಾನ್ಹ ಸುಮಾರು 12.30 ರ ಸುಮಾರಿಗೆ ಎದ್ದು ಸರಿ ಈಗಲಾದರೂ ಹೋಗಿ  ಅಂಗಡಿಯವನ ಹತ್ತಿರ ವಿಚಾರಿಸಿಕೊಂಡು ಬರೋಣವೆಂದು  ಹೊರಟೆ. ಆತನೇನು ಪರಿಚಯಸ್ತ ಆಗಿರಲಿಲ್ಲ. ಅವತ್ತು ಅಂಗಡಿಯಾತನ ಹೆಂಡತಿ ಕೂಡ ಅಂಗಡಿಯಲ್ಲಿ ಇದ್ದಳು. ನಾನು ಅವನ ಹತ್ತಿರ ಹೋಗಿ ಪರಿಚಯಿಸಿಕೊಂಡೆ ,      ಹೀಗೆ ಮೊದಲು ಗೊತ್ತು ಇರದ ಹಾಗೆ ನಟಿಸಿದ ಆತ  ಆಮೇಲೆ ಒಪ್ಪಿಕೊಂಡ ಹೀಗೆ ಹಣ್ಣು ಖರೀದಿಸಲು ಬಂದಿದ್ದರು ಎಂದು.  ನಾನು ಆತನಿಗೆ ನೆನ್ನೆ ನೀವು ಕೊಟ್ಟ ಚಿಲ್ಲರೆ ಎಣಿಸದೆ  ಜೇಬಿಗೆ ಹಾಕಿಕೊಂಡೆ. ನೀವು ಬಹುಶಃ ಚಿಲ್ಲರೆ ಕಡಿಮೆ ನೀಡಿದ್ದೀರಿ ದಯವಿಟ್ಟು ಉಳಿದ ಹಣ ನೀಡಿ ಎಂದು ಕೇಳಿದೆ.  ಅದಕ್ಕೆ ಆತ ಖಡಕ್ಕಾಗಿ ನೀವು ಕೊಟ್ಟಿದ್ದು 200 ರೂಪಾಯಿ ಅದಕ್ಕೆ ಚಿಲ್ಲರೆಯಾಗಿ ನಾನು ಉಳಿದ ಹಣ 54 ರೂಪಾಯಿಯನ್ನು ಕೊಟ್ಟಿದ್ದೇನೆ ಎಂದು ಉತ್ತರಿಸಿದ.  ನಾನು ಕೊಡಬೇಕಾದ ಚಿಲ್ಲರೆ ಕೊಟ್ಟಿದ್ದೇನೆ ನೀವು ಕನ್ಫ್ಯೂಸ್ ಮಾಡಿಕೊಂಡಿದ್ದಿರ ಎಂದು ಅವನ ತಮಿಳ್ ಗನ್ನಡದಲ್ಲಿ ಹೇಳಿದ.

            

                 ನಾನು ನಿಜಕ್ಕೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಬಿದ್ದೆ. ಹೇಗೆ ಇವನ ಹತ್ತಿರ ವಾದ ಮಾಡಿ ಹಣ ವಾಪಸ್  ತೆಗೆದುಕೊಳ್ಳೋದು ಎಂದು. ನನ್ನ ಹತ್ತಿರ ಸಾಕ್ಷಿಗೆ ಏನು ಇರಲಿಲ್ಲ.  ಆದರೂ ಒಂದು ಪ್ರಶ್ನೆ ಮನದಲ್ಲಿ ಹೊಳೆಯಿತು.  ನನ್ನ ಪರ್ಸ್ನಲ್ಲಿ ಇದ್ದುದು 2 ನೋಟುಗಳು, ಒಂದು ಐನೂರು ಇನ್ನೊಂದು ನೂರರ ನೋಟು.  ನನಗೆ ನೆನ್ನೆ ಒಂದೇ ನೋಟು ತೆಗೆದುಕೊಟ್ಟಿದ್ದದ್ದು ನಿಸ್ಸಂಶಯವಾಗಿ ಗೊತ್ತಿತ್ತು.  ನನ್ನ ಪರ್ಸ್ನಲ್ಲಿ ನೂರರ ನೋಟು ಹಾಗೆಯೇ ಇದ್ದಿತ್ತು. ಅಕಸ್ಮಾತ್ ನೂರರ ನೋಟು ತೆಗೆದುಕೊಟ್ಟಿದ್ದರೆ ಅವ್ನು ಬಾಕಿ 46 ರೂಪಾಯಿಗೆ ಕೇಳುತ್ತಿದ್ದ.  ಕೊನೆಗೆ ನಾನು ಹೇಳಿದೆ ನೆನ್ನೆ ನಾನು ನಿಮಗೆ ಒಂದೇ ಒಂದು ನೋಟನ್ನು ಮಾತ್ರ ನಿಮಗೆ ಕೊಟ್ಟಿದ್ದು ಎಂದು ಖಡಾಖಂಡಿತವಾಗಿ ಹೇಳಿದೆ.  ನನ್ನ ಪ್ರಶ್ನೆ  ನಿಮಗೆ ನಾನು ನೆನ್ನೆ ಕೊಟ್ಟಿದ್ದು ಒಂದೇ ನೋಟೆಂದು ಒಪ್ಪಿಕೊಳ್ಳುತ್ತಿರ ಎಂದು ಪ್ರಶ್ನಿಸಿದೆ.   ಆತ ಹೌದೆಂದು ಉತ್ತರಿಸಿದ .  ಅವನ 'ಹೌದು' ಉತ್ತರಕ್ಕೆ ಕಾಯುತ್ತಿದ್ದ  ನಾನು ಹಾಗದರೆ ಯಾವ ಸರ್ಕಾರ 200 ರ ನೋಟು ಈವಾಗ ಚಾಲ್ತಿಯಲ್ಲಿ ಬಿಟ್ಟಿದೆ ಎಂದು ಮರುಪ್ರಶ್ನಿಸಿ ಪಾಟಿಸವಾಲು ಅಂತ್ಯ ಮಾಡಿದೆ.   ಈ ಪ್ರಶ್ನೆಗೆ ಮರುಉತ್ತರಿಸಲಾಗದೆ ತಬ್ಬಿಬ್ಬಾಗಿ ಏನೋ ಅಸಂಬದ್ಧವಾಗಿ ಮಾತನಾಡ ತೊಡಗಿದ.  ಆದ್ರೆ ನನ್ನ ಉದ್ದೇಶ ಸಫಲವಾಗಿತ್ತು.  ಆತ ನೆನ್ನೆ ಆದ ಆಚಾತುರ್ಯಾಕ್ಕೆ ವಿಷಾದ ವ್ಯಕ್ತಪಡಿಸಿ ನನ್ನ ಬಾಕಿ ಚಿಲ್ಲರೆ ಹಣವನ್ನು ಕೊಡುತ್ತಾನೆ ಎಂಬ ಯಾವುದೇ ನಂಬಿಕೆ ಇರ್ಲಿಲ್ಲ. ಕಾರಣ ಇಷ್ಟೇ ನೆನ್ನೆ ನನಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ನನ್ನ ಗಮನ ಬೇರೆಡೆ ಹರಿಸಿ ಅದರಲ್ಲಿ ಯಶಸ್ವಿಯಾಗಿದ್ದದ್ದು ಆತನ ವರ್ತನೆಯಲ್ಲಿ ಸ್ಪಷ್ಟವಾಗಿತ್ತು.    ಅದಕ್ಕೆ ಯಾವ ಪ್ರಶ್ನೆ ಕೇಳಿದರೆ ಆತ ಸಿಕ್ಕಿಹಾಕಿಕೊಳ್ಳಬಹುದು ಎಂದು ಮನದಲ್ಲೇ ಲೆಕ್ಕ ಹಾಕಿಕೊಂಡು ಬಂದಿದ್ದೆ.  ಈಗ ಅದರಲ್ಲಿ  ಸಫಲತೆಯನ್ನು ಕಂಡುಕೊಂಡಿದ್ದೆ.  ಆತ ಮಾತ್ರ ಅಸಂಬದ್ಧವಾಗಿ ಏನೋ ಬಡಬಡಿಸುತ್ತಲೇ ಇದ್ದ. 

    

                   ಇನ್ನು ಇವನ ಹತ್ತಿರ  ಮಾತನಾಡಿ ಪ್ರಯೋಜನ ಇಲ್ಲವೆಂದು ಹೇಳಿ ನನ್ನ ಹಣ ಹೋದರು ಚಿಂತೆಯಿಲ್ಲ ಆದರೆ ನಾನು ನಿಮಗೆ ಕೊಟ್ಟಿದ್ದೆ ಒಂದು ನೋಟು  ಅದು ಐದು ನೂರರ ನೋಟ ಎಂದು ಭಾವನಾತ್ಮಕವಾಗಿ ಹೇಳಿ ನನ್ನ ಬೈಕ್ ಹತ್ತಿರ ಹೊರಟೆ .  ಅಷ್ಟರಲ್ಲಿ ಅಣ್ಣ ಎಂದು ಕರೆದದು ಕೇಳಿಸಿತು.  ಹಿಂತಿರುಗಿ ನೋಡಿದರೆ ಆತನ ಹೆಂಡತಿ ಕರೆದು ಬಾಕಿ ಉಳಿದ  300 ರೂಪಾಯಿ ಚಿಲ್ಲರೆ ಯನ್ನು ಹಿಂತಿರುಗಿಸಿ ತಮಿಳಿನಲ್ಲಿ ಅವರು ಕನ್ಫ್ಯೂಸ್ ಮಾಡ್ಕೊಂಡಿದ್ರು. ಬೇಜಾರು ಮಾಡ್ಕೋಬೇಡಿ ಎಂದು ಹೇಳಿದಳು.  ಆಕೆಯ ಪ್ರಾಮಾಣಿಕತೆ ನೋಡಿ ಖುಷಿಯಾಯಿತು.  ನಾನು ವಾಪಸ್ಸು ಬೈಕ್ ಹತ್ತಿರ ಬರುವಾಗ  ನನಗೆ ಆಸ್ಪಷ್ಟ ವಾಗಿ ತಿಳಿದದ್ದು ,ಆಕೆ ತನ್ನ ಗಂಡನಲ್ಲಿ ತಮಿಳಿನಲ್ಲಿ  ಕೇಳಿದಳು ಅವರು ಐನೂರರ ನೋಟು ಕೊಟ್ಟಿದ್ದು ನಿಜವೇ ಎಂದು ಅದಕ್ಕೆ ಆತ ಹೌದೆಂದು ತಮಿಳಿನಲ್ಲಿ ಉತ್ತರಿಸಿದ. ಹಾಗಾಗಿ ಆಕೆ ನನಗೆ ಉಳಿದ ಹಣವನ್ನು ಹಿಂತಿರುಗಿಸಿದ್ದುದು.  ಬಹುಶಃ ಆಕೆ ಆ ದಿನ ಅಂಗಡಿಯಲ್ಲಿ ಇರದಿದ್ದರೆ ನನಗೆ ಬಾಕಿ ಹಣ ಸಿಗುತ್ತಿರಲಿಲ್ಲ. ಮೇಲಾಗಿ ಇತ್ತಿಚೆಗೆ ಈ ಘಟನೆ ನಡೆದಿದ್ರೆ  ಆತ ಖಂಡಿತವಾಗಿಯು ಹೇಳುತ್ತಿದ್ದ ನೀವು ಕೊಟ್ಟಿದ್ದದು ಇದೆ ಹೊಸ ಈ ಇನ್ನೂರರ ರೂಪಾಯಿಯ ನೋಟೆಂದು. ಮೊನ್ನೆ ಹೀಗೆ 200 ರೂಪಾಯಿಯ ನೋಟು ಸಿಕ್ಕಿತ್ತು ಅದಕ್ಕೆ ಈ ಘಟನೆ ನೆನಪಾಗಿ ಬರಹಕ್ಕಿಳಿಸಿದೆ.