ಹೀಟ್ ಬಾಡಿ
೩೬-೨೬-೩೬. ಇಂಥಾ fiಗರ್ ಯಾರದ್ದೂಂತಿರಾ? ಬೆಂಗಳೂರಿನ
ಹವಮಾನ ಇಲಾಖೆಯದ್ದು."ಗರಿಷ್ಟ-ಕನಿಷ್ಟ"ಉಷ್ಣಾಂಶಗಳು.
ಕೊನೆಯ "೩೬" ಎನೂಂದಿರಾ?
ಅದು ವಿಮಾನನಿಲ್ದಾಣದ್ದು.ಅವರಿಗೆ ಬೇಕಾದಷ್ಟು ಬಜೆಟ್ ಮಂಜೂರಾದರೆ ಟಿ.ವಿ.
ಟವರ್ ಮೇಲಿನ,ಲಾಲ್ ಬಾಗ್ ಒಳಗಿನ ವಿದಾನಸೌಧದ ಒಳಹೊರಗಿನ
ಉಷ್ಣಾಂಶಗಳನ್ನು ಪ್ರಕಟಿಸುತ್ತಿದ್ದರೋ ಏನೋ!
ಆದರೆ ನಾನೀಗ ಹೇಳಲು ಹೊರಟಿರುವ ಹೀಟ್ ಬಾಡಿಗೂ ಉಷ್ಣಾಂಶದ
ಏರಿಳಿತಕ್ಕೂ ಏನೂ ಸಂಬಂಧವಿಲ್ಲಾ.ನೋಡಿ ಡಿಸೆಂಬರನ್ನು ಚಳಿಗಾಲ ಎನ್ನುತ್ತಾರೆ.
ಅಲ್ಪ ಸ್ವಲ್ಪ ಚಳಿಯೂ ಇರುತ್ತದೆಯಲ್ವಾ? ಈ ಟೈಮ್ನಲ್ಲಿ ರಿಕ್ಷಾದವರು
ಹಿಂದಿನಂತೆ ಜರ್ಕಿನ್,ಶಾಲು,ಮಂಕಿ ಕ್ಯಾಪ್, ಹಾಕುವುದಿಲ್ಲ-ಗಮನಿಸಿದ್ದೀರಾ? ಕಿವಿಗೆ ಬರೀ
ವುಲನ್ ಪಟ್ಟಿ ಹಾಕಿರುತ್ತಾರೆ. ವಿಚಾರಿಸಿದರೆ- " ನಂದೂ ಹೀಟ್ ಬಾಡಿ ಸರ್.
ಈ ಎಂಜಿನ್ ಮೇಲೆ ಕೂತಿರುತ್ತೇವಲ್ಲಾ. ಈ ಪಟ್ಟಿ ಹಾಕಿದರೆ ಕಿವಿಗೆ ಗಾಳಿ
ಹ್.ಓಗುವುದಿಲ್ಲಾ.ಅಷ್ಟಾದರೆ ಸಾಕು".ಎನ್ನುತ್ತಾರೆ. (ರಿಕ್ಷಾಗಳು ಯಾಕೆ ಕಿವಿಗೆ
ಗಾಳಿ ಹೊಕ್ಕ ಕರುಗಳಂತೆ ರಸ್ತೆಯಲ್ಲಿ ಹಾರಾಡುತ್ತವೆ ಎಂಬುದು ಅರ್ಥವಾಯಿತು
ತಾನೆ!) ಯಾವಾಗ ಪಟ್ಟಿಯಿಲ್ಲದ ನನ್ನ ಕಿವಿಗೆ "ಹೀಟ್ ಬಾಡಿ" ಪದ ಬಿತ್ತೋ
ಆವಾಗಲೇ ಏರುತ್ತಿರುವ ಹೀಟ್ ವೇವ್ ಬಗ್ಗೆ ಯೋಚಿಸಿದೆ. ಹೌದಲ್ವಾ?
ಚಳಿಗಾಲವಿರಲಿ, ಮಳೆಗಾಲವಿರಲಿ ಕಮ್ಮಿಯಲ್ಲಿ ದಿನಕ್ಕೆ ೫-೬ ಬಾರಿಯಾದರೂ
"ಹೀಟ್" ಪದ ಕಿವಿಗೆ ಬೀಳದಿರುವ ಕಾಲವೇ ಇಲ್ಲಾ!
ಮೂಗಿನಲ್ಲಿ ಸುರಿಯುತ್ತಾ ಇದ್ದರೂ ಐಸ್ ಕ್ರೀಮ್ ತಿನ್ನುತ್ತಿರುತ್ತಾರೆ. "ಯಾಕಪ್ಪಾ
ತಿನ್ನುತ್ತೀಯಾ" ಎಂದಿರೋ ತಟ್ಟನೆ ಹೇಳುತ್ತಾರೆ- "ಐಸ್ ಕ್ರೀಮ್ ಹೀಟ್ ಸಾರ್"
ಗಂಡಸರಾಗಲಿ, ಹೆಂಗಸರಾಗಲಿ ಮಾತಿನ ನಡುವೆ "ಹೀಟ್"ನ ವಿಷಯ ಬರದೇ ಇರುವುದಿಲ್ಲ.
" ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವುದು-ಹೀಟ್ ನೋಡಿ ಕಾಲೆಲ್ಲಾ
ಒಡೆದು ಬಿಟ್ಟಿದೆ."
"ನಮ್ಮೆಜಮಾನರದ್ದು ಹೀಟ್ ಬಾಡಿ-ಊಟಕ್ಕೆ ಮೊಸರಿಲ್ಲದೇ ಆಗುವುದಿಲ್ಲಾ."
" ಕಲ್ಲಂಗಡಿ ಹೀಟ್ ಮಾರಾಯ-ನನಗೆ ಅದೊಂದು ಬಗೆ ಆಗುವುದಿಲ್ಲ,
ಬಾಯೆಲ್ಲಾ ಹುಣ್ಣಾಗುವುದು." "ಮಗುವಿಗೆ ಹೀಟ್ ಮೈ, ಈ ಚಳಿಯಲ್ಲೂ
ತಲೆ ನೋಡಿ ಹೇಗೆ ಬೆವರುತ್ತಿದೆ" ಮಗು ಹುಟ್ಟಿ ೩ ದಿನವೂ ಆಗಿಲ್ಲ, ಅಗಲೇ
ತಾಯಿಯ ವರ್ಣನೆ ಸಾಗಿತ್ತು.
ಕಣ್ಣು ಕೆಂಪಾದರೆ ಹೀಟ್, ಮೈಯಲ್ಲಿ ತುರಿಕೆಯಾದರೆ ಹೀಟ್,
ಮೊಡವೆಯಾದರೆ ಹೀಟ್,ಭೇದಿ ಆದರೆ ಹೀಟ್,ಭೇದಿ ಆಗದಿದ್ದರೂ ಹೀಟ್,
ಮಾತ್ರೆ ತಿಂದರೆ ಹೀಟ್,ಬಿಸಿಲಿಗೆ ಹೋದರೆ ಹೀಟ್, ಮನೆಯಲ್ಲಿ ಸೋಫ಼ಾದಲ್ಲಿ
ಮಲಗಿದರೂ ಹೀಟ್...."ಹೌದೂ ಈ ಹೀಟ್ ಗೆ ಡಾಕ್ಟ್ರ ಬಳಿ ಹೋಗಿ ಔಷಧಿ
ಯಾಕೆ ತೆಗೆದುಕೊಳ್ಳಬಾರದು?" ಎಂದಿರಾ.. ದೇವರಾಣೆಗೂ ಹೋಗುವುದಿಲ್ಲ!
ಯಾಕೆಂದರೆ ನನ್ನದು/ನನ್ನವರದ್ದು ಹೀಟ್ ಬಾಡಿ ಎಂದು ಹೇಳಿಕೊಳ್ಳುವುದು
ತಮ್ಮ ಅನುಕೂಲತೆಗಾಗಿ,ಇನ್ನು ಕೆಲವರಿಗೆ ಹೆಮ್ಮೆಯ ವಿಷಯ ಅಷ್ಟೆ.
ಸಲ್ಮಾನ್ ಖಾನ್ ಪ್ರತಿ ಹಾಡಿಗೆ ಶರ್ಟ್ ಬಿಸಾಕಿ ಬಾಡಿ ತೋರಿಸಿದಂತೆ
ಇವರೂ ಪ್ರತೀ ಮಾತಿನಲ್ಲಿ "ಹೀಟ್ ಬಾಡಿ " ನ ಬಿಸಾಕುವರು.
ನನಗಂತೂ "ಹೀಟ್ ಬಾಡಿ" ಅಂದವರ ತಲೆಗೆ ೨ ಬಕೆಟ್ ಐಸ್ ನೀರು
ಹಾಕುವ ಎನಿಸುತ್ತದೆ. ನಿಮಗೆ?