ಹೀಮೋಗ್ಲೋಬಿನ್ ಕೊರತೆಗೆ ಪರಿಹಾರ ಏನು?

ಹೀಮೋಗ್ಲೋಬಿನ್ ಕೊರತೆಗೆ ಪರಿಹಾರ ಏನು?

ನಮ್ಮ ಮನೆಯಲ್ಲಿ ಈ ಸಂಗತಿ ಘಟಿಸಿದ್ದು ಸುಮಾರು ಒಂದು ತಿಂಗಳ ಹಿಂದೆ. ನನ್ನ ತಂದೆ ಯಾವಾಗಲೂ ನನಗೆ ಆಯಾಸವಾಗುತ್ತಿದೆ. ಆಹಾರ ರುಚಿಸುತ್ತಿಲ್ಲ, ಯಾವುದರಲ್ಲೂ ಉತ್ಸಾಹವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಅವರಿಗೆ ೭೫ ವರ್ಷವಾಗಿದ್ದ ಕಾರಣ ನಾವೂ ಸಹಜವಾಗಿಯೇ ಇದು ವಯೋ ಸಹಜ ಕಾರಣಗಳಿಂದ ಇರಬಹುದು ಎಂದು ತಿಳಿದುಕೊಂಡಿದ್ದೆವು. ಸುಮಾರು ನಲವತ್ತು ವರ್ಷಗಳ ಕಾಲ ಧೂಮಪಾನವನ್ನೂ ಮಾಡುತ್ತಿದ್ದು ಕಳೆದ ೩-೪ ವರ್ಷಗಳಿಂದ ಬಿಟ್ಟಿದ್ದರು. ದಿನಕಳೆದಂತೆ ಅವರ ಚಟುವಟಿಕೆಗಳು ಕಮ್ಮಿಯಾಗಿ ಮನೆಯಿಂದ ಹೊರ ಹೋಗುವುದೇ ಕಮ್ಮಿ ಮಾಡಿದಾಗ ನಮಗೆ ಗಾಬರಿಯಾಗತೊಡಗಿತು. ಅವರಿಗೆ ಮಧುಮೇಹ (ಡಯಾಬಿಟೀಸ್) ಇದ್ದ ಕಾರಣ ಸುಸ್ತಾಗುವುದು ಸಹಜ ಎಂದು ನಮ್ಮ ಕುಟುಂಬದ ವೈದ್ಯರೂ ಅಭಿಪ್ರಾಯ ಪಟ್ಟರು.

ಕೊನೆಗೊಮ್ಮೆ ಅವರ ಪರಿಸ್ಥಿತಿಯು ಅಪಾಯದ ಮಟ್ಟಕ್ಕೆ ತಲುಪುತ್ತಿದೆ ಎಂದು ಭಾವಿಸಿ ನಾವು ಅವರನ್ನು ಈ ಹಿಂದೆ ಅವರಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ ವೈದ್ಯರಲ್ಲಿ ಕರೆದುಕೊಂಡು ಹೋದೆವು. ಅವರು ಅಲ್ಲಿ ನಾನಾ ರೀತಿಯ ಪರೀಕ್ಷೆಗಳನ್ನು ಮಾಡಿದ ಬಳಿಕ ಹೇಳಿದರು ಇವರ ದೇಹದಲ್ಲಿ ರಕ್ತದ ಕೊರತೆಯಿದೆ. ಅಂದರೆ ಒಬ್ಬ ಆರೋಗ್ಯವಂತ ಮನುಷ್ಯನಲ್ಲಿರಬೇಕಾದ ಹಿಮೋಗ್ಲೋಬಿನ್ ಅಂಶಕ್ಕಿಂತ ಇವರದ್ದು ತುಂಬಾ ಕಮ್ಮಿ ಇದೆ. ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಅಗತ್ಯ ಎಂದು ಹೇಳಿದರು. ನನ್ನ ತಂದೆಗೆ ಆಸ್ಪತ್ರೆ ಸಹವಾಸ ಎಂದರೆ ಅಲರ್ಜಿ. ಅದನ್ನು ವೈದ್ಯರಿಗೆ ತಿಳಿಸಿದಾಗ ಅವರು ಒಂದು ವಾರದ ಮದ್ದು ಕೊಟ್ಟು, ಏನೆಲ್ಲಾ ಆಹಾರ ತಿಂದರೆ ಹೀಮೋಗ್ಲೋಬಿನ್ ಅಂಶ ಜಾಸ್ತಿ ಆಗುತ್ತದೆ ಎಂದು ಹೇಳಿ ವಾರದ ನಂತರ ಬರಲು ತಿಳಿಸಿದರು. ನನ್ನ ಅಪ್ಪ ವೈದ್ಯರು ಹೇಳಿದ ವಿಷಯಗಳನ್ನು ಚಾಚೂ ತಪ್ಪದೇ (ಆಸ್ಪತ್ರೆ ವಾಸದ ಹೆದರಿಕೆಯಿಂದ) ಪಾಲಿಸಿದರು. ಕ್ರಮೇಣ ಅವರ ರಕ್ತದಲ್ಲಿನ ಹೀಮೋಗ್ಲೋಬಿನ್ (ಕಬ್ಬಿಣಾಂಶ) ಪ್ರಮಾಣ ಅಧಿಕವಾಯಿತು. ಈಗ ಅವರು ಆರೋಗ್ಯವಂತರಾಗಿದ್ದಾರೆ. ಲವಲವಿಕೆಯಿಂದಿದ್ದಾರೆ. ಆಹಾರವನ್ನೂ ಸರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. 

ರಕ್ತದ ಕೊರತೆ ಎಂದು ಸಾಮಾನ್ಯ ಭಾಷೆಯಲ್ಲಿ ಹೇಳುವ ಈ ಹೀಮೋಗ್ಲೋಬಿನ್ ಅಂಶದ ಕೊರತೆಯಿಂದ ಏನಾಗುತ್ತದೆ? ಆರೋಗ್ಯವಂತ ಪುರುಷನ ದೇಹದಲ್ಲಿ ೧೦೦ ಗ್ರಾಂ ರಕ್ತದಲ್ಲಿ ೧೩-೧೪ ಗ್ರಾಂ ನಷ್ಟು ಹೀಮೋಗ್ಲೋಬಿನ್ ಇರುತ್ತದೆ. ಅದೇ ಆರೋಗ್ಯವಂತ ಮಹಿಳೆಯರಲ್ಲಿ ಇದರ ಪ್ರಮಾಣ ಸ್ವಲ್ಪ ಕಮ್ಮಿ ಅಂದರೆ ೧೧-೧೨ ಇರುವ ಸಾಧ್ಯತೆ ಇದೆ. ನಮ್ಮ ದೇಹದಲ್ಲಿರಬೇಕಾದ ಪ್ರಮಾಣಕ್ಕಿಂತ ಹೀಮೋಗ್ಲೋಬಿನ್ ಕಮ್ಮಿಯಾದರೆ ರಕ್ತದಲ್ಲಿ ಆಮ್ಲಜನಕ ಸಾಗಿಸುವ ಪ್ರಮಾಣ ಕಮ್ಮಿಯಾಗುತ್ತದೆ. ಇದರಿಂದ ಆ ವ್ಯಕ್ತಿಗೆ ಸರಾಗವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಕೆಲಸ ಮಾಡಿದಾಗ ಸುಸ್ತು, ದಣಿವು ಕಾಣಿಸತೊಡಗುತ್ತದೆ. ಇದರ ಜೊತೆ ಮುಖ ಬಿಳಚಿಕೊಳ್ಳುವುದು, ಯಾವುದೇ ಕೆಲಸ ಮಾಡಲು ಉತ್ಸಾಹವಿಲ್ಲದಿರುವುದು, ಎದೆಯಲ್ಲಿ ಡವ ಡವ ಶಬ್ಧವಾಗುವಂತೆ ಅನಿಸುವುದು, ಹೃದಯದ ಬಡಿತದಲ್ಲಿ ಹೆಚ್ಚಳವಾಗುವ ಸಂಭವವಿದೆ. ಅಪರೂಪದಲ್ಲಿ ಕೆಲವರಿಗೆ ವಿಚಿತ್ರ ಆಸೆಗಳು ಮೂಡಬಹುದು, ಉದಾಹರಣೆಗೆ ಮಣ್ಣು, ಅಕ್ಕಿ, ಕಲ್ಲಿನ ಚೂರುಗಳನ್ನು ತಿನ್ನುವ ಆಸೆ ಮೂಡಬಹುದು. 

ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯನ್ನು ಸೂಕ್ತ ಸಮಯದಲ್ಲಿ ಸರಿಪಡಿಸದಿದ್ದರೆ ಆ ವ್ಯಕ್ತಿಯ ಹೃದಯ, ಶ್ವಾಸಕೋಶದ ಕಾರ್ಯ ಕ್ಷಮತೆಯ ಮೇಲೆ ಪರಿಣಾಮ ಬೀಳಬಹುದು, ಇದು ಮುಂದುವರೆದು ಮೂತ್ರಪಿಂಡ (ಕಿಡ್ನಿ) ಹಾಗೂ ಕೊನೆಗೆ ಮೆದುಳಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಕಬ್ಬಿಣದ ಅಂಶ ಕೊರತೆಯಾಗಲು ಬಹಳಷ್ಟು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ. ನಮ್ಮ ಸಣ್ಣ ಕರುಳು ಹಾಗೂ ದೊಡ್ಡ ಕರುಳಿನಲ್ಲಿ ಮತ್ತು ಜಠರದಲ್ಲಿ ರಕ್ತಸ್ರಾವ ನಿರಂತರವಾಗಿ ಆಗುತ್ತಿದ್ದಾರೆ, ಮಹಿಳೆಯರಲ್ಲಿ ಋತುಸ್ರಾವದ ದಿನಗಳಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ ರಕ್ತದ ಕೊರತೆ ಕಂಡು ಬರಬಹುದು. ಕೆಟ್ಟ ಹವ್ಯಾಸಗಳಾದ ಮಾದಕ ವಸ್ತುಗಳ ಸೇವನೆ, ಸರಿಯಾದ ಪ್ರಮಾಣದ ಪೌಷ್ಟಿಕ ಆಹಾರದ ಕೊರತೆಯಿಂದಾಗಿಯೂ ರಕ್ತಹೀನತೆ ಬರುತ್ತದೆ. ಕೆಲವು ಬಗೆಯ ಅನಾರೋಗ್ಯದ ಕಾರಣದಿಂದಲೂ ರಕ್ತದ ಕೊರತೆಯಾಗುವ ಸಂಭವಿದೆ.

ಒಬ್ಬ ವಯಸ್ಕ ಮನುಷ್ಯನ ದೇಹಕ್ಕೆ ೫೦ ಗ್ರಾಂ ಪ್ರೋಟೀನ್, ೨೦ ಗ್ರಾಂ ಕೊಬ್ಬು (ಫ್ಯಾಟ್), ೧೫೦ ಗ್ರಾಂ ಪಿಷ್ಟವುಳ್ಳ ಆಹಾರದ ಅಗತ್ಯವಿದೆ. ಇದರ ಜೊತೆಗೆ ಅಗತ್ಯವಾದ ಕೆಲವು ಜೀವಸತ್ವಗಳೂ ಬೇಕಾಗುತ್ತವೆ. ಇವೆಲ್ಲವೂ ಸರಿಯಾದ ಪ್ರಮಾಣದಲ್ಲಿ ಸಿಗದೇ ಹೋದಲ್ಲಿ ನಮ್ಮ ಕೂದಲು, ಉಗುರು ಹಾಗೂ ನಾಲಗೆಯ ಬಣ್ಣದಲ್ಲಿ ವ್ಯತ್ಯಾಸ ಕಂಡು ಬರಬಹುದು. ನಾಲಗೆಗೆ ರುಚಿಯೂ ಇರುವುದಿಲ್ಲ. ಬಾಯಿಯ ಸುತ್ತ ಹುಣ್ಣುಗಳೂ ಕಾಣಿಸಬಹುದು. ಹೀಮೋಗ್ಲೋಬಿನ್ ಪ್ರಮಾಣ ಕಮ್ಮಿಯಾಗಿ ಅದರ ಪ್ರಮಾಣ ಮೂರಕ್ಕೆ ಇಳಿದರೆ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲೇ ಬೇಕಾಗುತ್ತದೆ. ಅವರಿಗೆ ರಕ್ತನಾಳದ ಮೂಲಕ ಹೊರಗಿನ ನೆತ್ತರನ್ನು ನೀಡುವ ಅಗತ್ಯತೆ ಇರುತ್ತದೆ.

ಸಾಧಾರಣವಾಗಿ ರಕ್ತ ಕಮ್ಮಿ ಇದೆ ಎಂದು ಹೇಳಿದ ಕೂಡಲೇ ರೋಗಿಯು ವೈದ್ಯರ ಬಳಿ ಯಾವ ಟಾನಿಕ್ ಕುಡಿಯಲಿ ಎಂದೇ ಕೇಳುತ್ತಾನೆ. ನಿಜಕ್ಕೂ ನಮಗೆ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಅಂಶ ಹೊಂದಿರುವ ಟಾನಿಕ್ ಅಗತ್ಯವಿದೆಯೇ? ದೊಡ್ದ ದೊಡ್ಡದಾಗಿ ಜಾಹೀರಾತುಗಳನ್ನು ನೀಡುವ ಕಂಪೆನಿಗಳ ಟಾನಿಕ್ ಗಳಲ್ಲಿ ಇರುವುದಾದರೂ ಏನು ಗೊತ್ತೇ? ಮದ್ಯಸಾರದಲ್ಲಿ ಮಿಶ್ರಿತವಾದ ಅನೇಕ ಜೀವಸತ್ವಗಳು, ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರ. ನೀವೇ ವೈದ್ಯರೆಂದು ಭಾವಿಸಿ ಏನೇನೋ ಮದ್ದುಗಳನ್ನು ತೆಗೆದುಕೊಳ್ಳಬೇಡಿ. ಈ ಕಬ್ಬಿಣಾಂಶದ ಕೊರತೆಯನ್ನು ಮಾತ್ರೆಯ ಮೂಲಕವೇ ಸರಿದೂಗಿಸಬಹುದಾಗಿದೆ. ರಕ್ತದ ಕೊರತೆ ಇದ್ದವರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸುತ್ತಾ ಇರಬೇಕು.

ಕಬ್ಬಿಣಾಂಶ ಅಧಿಕ ಇರುವ ದಾಳಿಂಬೆ, ಖರ್ಜೂರ, ಬಾಳೆಹಣ್ಣು ಮೊದಲಾದ ಹಣ್ಣುಗಳು, ಹಸಿರು ಸೊಪ್ಪು ತರಕಾರಿಗಳು, ಬೀಟ್ರೂಟ್, ಬಾದಾಮಿ ಮುಂತಾದ ಒಣ ಹಣ್ಣುಗಳು, ಹಾಲು, ಮಾಂಸಹಾರಿಗಳು ಮೀನು, ಮೊಟ್ಟೆ ಸೇವನೆ ನಿಯಮಿತವಾಗಿ ಮಾಡುತ್ತಿರಿ. ಯಾವುದೇ ಮಾತ್ರೆಗಳಿಗಿಂತ ನೈಜವಾದ ಪೌಷ್ಟಿಕ ಆಹಾರ ಉತ್ತಮ. ಕಬ್ಬಿಣದ ಕೊರತೆಯನ್ನು ನೀಗಿಸಲು ಚುಚ್ಚುಮದ್ದಿನ ಅಗತ್ಯತೆ ಇರುವುದಿಲ್ಲ. ತೀವ್ರ ಕೊರತೆಯಾದರೆ ಮಾತ್ರ ರಕ್ತವನ್ನು ನೀಡಬೇಕಾಗಿ ಬರಬಹುದು.

ಆರೋಗ್ಯವಂತರಾಗಿರುವಾಗಲೇ ನೀವು ನಿಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಬದಲಾಯಿಸಿಕೊಂಡುಬಿಡಿ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಿ ಅಥವಾ ತೀರಾ ಅಲ್ಪ ಪ್ರಮಾಣದಲ್ಲಿ ಬಳಸಿ. ಆರೋಗ್ಯವಂತ ಜೀವನ  ಸಾಗಿಸುವತ್ತ ಗಮನ ನೀಡಿ. ಏಕೆಂದರೆ ಆರೋಗ್ಯವೇ ಭಾಗ್ಯ ಅಲ್ಲವೇ?

ವಿ.ಸೂ: ಈ ಲೇಖನದಲ್ಲಿರುವ ಯಾವುದೇ ಕ್ರಮಗಳನ್ನು ಸ್ವಯಂ ಅನುಸರಿಸ ಹೋಗದಿರಿ. ನಿಮ್ಮ ಕುಟುಂಬದ ವೈದ್ಯರ ಸಲಹೆಯ ಮೇರೆಗೆ ಅವಶ್ಯವಿದ್ದಲ್ಲಿ ಮಾತ್ರ ಮದ್ದುಗಳನ್ನು ತೆಗೆದುಕೊಳ್ಳುತ್ತಿರಿ. ಸ್ವಯಂ ವೈದ್ಯ ಪ್ರಕ್ರಿಯೆ ಅಪಾಯಕಾರಿ. 

ಚಿತ್ರ ಕೃಪೆ: ಅಂತರ್ಜಾಲ ತಾಣ