ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ...

ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ...

ಸಂಯಮವಿರಲಿ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ...

ಯಾವನೋ ಹುಚ್ಚ 2047 ರ ವೇಳೆಗೆ ಭಾರತವನ್ನು ಇಸ್ಲಾಂ ದೇಶ ಮಾಡುವುದಾಗಿ ಹೇಳುತ್ತಾನೆ, ಇನ್ಯಾರೋ ಮತಿಗೇಡಿ ಅಫ್ಘಾನಿಸ್ತಾನ್, ಪಾಕಿಸ್ತಾನ್, ಬಾಂಗ್ಲಾದೇಶ್, ನೇಪಾಳ, ಶ್ರೀಲಂಕಾ, ಭೂತಾನ್ ಮುಂತಾದ ದೇಶಗಳನ್ನು ಒಟ್ಟಿಗೆ ಸೇರಿಸಿ ಅಖಂಡ ಭಾರತವನ್ನು ಮತ್ತೆ ಸೃಷ್ಟಿ ಮಾಡುತ್ತೇವೆ ಎಂದು ಹೇಳುತ್ತಾನೆ, ಮತ್ಯಾರೋ ತಲೆ ಕೆಟ್ಟವ  ಈ ದೇಶವನ್ನು ಸನಾತನ ಧರ್ಮದ ಆಧಾರದ ಮೇಲೆ ಸಂಪೂರ್ಣ ಹಿಂದು ರಾಷ್ಟ್ರವನ್ನು ಮಾಡುವುದಾಗಿ ಹೇಳುತ್ತಾನೆ, ಮಗದೊಬ್ಬ ಅವಿವೇಕಿ ಒಂದು ಗಂಟೆ ಪೊಲೀಸರನ್ನು ಹಿಂದಕ್ಕೆ ಪಡೆಯಿರಿ ಮುಸ್ಲಿಮರು ತಮ್ಮ ಶಕ್ತಿ ಏನು ಎಂದು ಹಿಂದುಗಳಿಗೆ ತೋರಿಸುತ್ತೇವೆ ಎಂದು ಹೇಳುತ್ತಾನೆ.

ಹೀಗೆ ಮಾತನಾಡಲು ಈ ದೇಶ ಹುಚ್ಚರ ಸಂತೆಯಲ್ಲ. ನಿಮ್ಮ ಸ್ವಂತ ಆಸ್ತಿಯೂ ಅಲ್ಲ. ಇದೊಂದು ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವ. 75 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಿಮ್ಮ ಚುನಾವಣೆಯ ತೆವಲಿಗಾಗಿ ಏನೇನು ಬಾಯಿಗೆ ಬಂದಂತೆ ಮಾತನಾಡಬಾರದು. ಸಂವಿಧಾನದ ಮೂಲದಲ್ಲಿಯೇ ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಸದಾ ಅವಕಾಶವಿದೆ. ಅದು ನಿರಂತರವಾಗಿ ನಡೆಯುತ್ತಲು ಇದೆ. ಆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಜನಪ್ರತಿನಿಧಿ ಒಬ್ಬರು ಹೇಳುವುದು ಕೇವಲ ದೇಶದ್ರೋಹ ಮಾತ್ರವಲ್ಲ ಈ ಮಣ್ಣಿಗೆ ಇಲ್ಲಿನ ಮೌಲ್ಯಗಳ ಬೆನ್ನಿಗೆ ಚೂರಿ ಹಾಕಿದಂತೆ.

ಯಾವ ಸಂವಿಧಾನ ಒಂದಷ್ಟು ಅನುಷ್ಠಾನದ ಲೋಪಗಳ ಹೊರತಾಗಿಯೂ ಅತ್ಯಂತ ಯಶಸ್ವಿ ದೇಶವಾ,ಗಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಅದರಲ್ಲೂ ಆ ಜನಸಂಖ್ಯೆ ಅತ್ಯಂತ ವೈವಿಧ್ಯಮಯವಾಗಿದ್ದರು, ಹೇಗೋ ಏನೋ ನಾವೆಲ್ಲ ಒಂದಷ್ಟು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಸಂಪೂರ್ಣ ತೃಪ್ತಿ ಇಲ್ಲದಿದ್ದರೂ ಸಾಮಾನ್ಯ ಜನರಲ್ಲಿ ಒಂದಷ್ಟು ಸಮಾಧಾನವಂತು ಖಂಡಿತ ಇದೆ. ಹೌದು ಸಾಕಷ್ಟು ಬದಲಾವಣೆಯ ಅವಶ್ಯಕತೆಯೂ ಇದೆ, ಆದರೆ ಅದು ನೀವು ಹೇಳುವ ಸಂವಿಧಾನದ ಬದಲಾವಣೆ ಅಲ್ಲ‌. ಅದು ನಮ್ಮ ವ್ಯಕ್ತಿತ್ವಗಳ, ನಮ್ಮ ನಾಗರೀಕ ವರ್ತನೆಯ ಬದಲಾವಣೆ. ಭ್ರಷ್ಟಾಚಾರ ರಹಿತ, ಜಾತಿ ರಹಿತ, ವರ್ಗರಹಿತ ಸಮಾಜ ನಿರ್ಮಾಣವಾಗುವ ಹೆಜ್ಜೆಗಳನ್ನು ಇಡಬೇಕಾಗಿರುವುದು ನಿಜ. ಅದನ್ನು ಈ ಸಂವಿಧಾನದ ಅಡಿಯಲ್ಲಿಯೇ ಖಂಡಿತ ಮಾಡಬಹುದು. ಸಮಸ್ಯೆ ಇರುವುದು ಸಂವಿಧಾನದ ನಿಯಮಗಳಲ್ಲ, ಈ ಸಮಾಜದ ಅಧಿಕಾರ ಹೊಂದಿರುವ ಜನರ ಅಪ್ರಾಮಾಣಿಕತೆಯಿಂದಾಗಿ ಒಂದಷ್ಟು ಸಮಸ್ಯೆಗಳು ತಲೆದೋರಿದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗ ಹೆಚ್ಚು ಕ್ರಿಯಾತ್ಮಕವಾಗಿ, ಮೌಲ್ಯಯುತವಾಗಿ, ಸಂವಿಧಾನ ನಿಷ್ಠವಾಗಿ ಕೆಲಸ ಮಾಡಿದರೆ ಖಂಡಿತವಾಗಿಯೂ ಇನ್ನು ಹೆಚ್ಚು ಅಭಿವೃದ್ಧಿ ಸಾಧಿಸಿ ಜನರ ಜೀವನಮಟ್ಟ ಸುಧಾರಿಸಲು ಸಾಧ್ಯ. ನೀವು ಅಥವಾ ನಿಮ್ಮಂಥ ಎಲ್ಲಾ ಧರ್ಮಗಳ ಮತಾಂಧರು ಹೀಗೆ ತಮ್ಮ ಇಷ್ಟದಂತೆ ಹೇಳಿಕೆಗಳನ್ನು ನೀಡಿದರೆ ಅದರ ಪರಿಣಾಮ ನಿಮ್ಮಂತದೇ ಜನರು ಪ್ರಚೋದನೆಗೆ ಒಳಗಾಗಿ ಹಿಂಸೆಗೆ ಇಳಿಯುತ್ತಾರೆ.

ಮುಸ್ಲಿಮರೇ ಇರಲಿ, ಕ್ರಿಶ್ಚಿಯನ್ನರೇ ಇರಲಿ, ಸಿಖ್ಖರೇ ಇರಲಿ, ಹಿಂದುಗಳೇ ಇರಲಿ ಮೊದಲು ಗೌರವಿಸ ಬೇಕಾಗಿರುವುದು ಈ ದೇಶದ ಸಂವಿಧಾನವನ್ನು. ಕಾರಣ ಸಂವಿಧಾನದ  ಪೀಠಿಕೆಯಲ್ಲಿಯೇ  ಹೇಳಿರುವುದು "ವಿ ದ ಪೀಪಲ್ ಆಫ್ ಇಂಡಿಯಾ" ಅಂದರೆ "ಭಾರತೀಯರಾದ ನಾವು ಎಂದು" ಅದರ ಅರ್ಥ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ಆದ ನಾನು ಎಂದಲ್ಲ. ಇದಕ್ಕಿಂತ ರಾಷ್ಟ್ರಭಕ್ತಿ  ಯಾವುದಿದೆ ಹೇಳಿ? ವೇದಿಕೆ ಸಿಕ್ಕಿದೆ, ಜನ ಕೇಳುತ್ತಿದ್ದಾರೆ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಕಾರಣದಿಂದ ಒಬ್ಬ ರೌಡಿಯಂತೆ ಮಾತನಾಡುವುದು ಶೋಭೆ ತರುವುದಿಲ್ಲ. ಒಂದು ವೇಳೆ ಹಾಗೆ ಇತರ ಯಾರೇ ಮಾತನಾಡಿದರು ಸಹ ಅದನ್ನು ಖಂಡಿಸಿ ಅವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕೆ ವಿನಹ ಅದಕ್ಕೆ ವಿರುದ್ಧವಾಗಿ, ಅವರಂತೆ ನಾವು ಮಾತನಾಡುವುದು ಎಷ್ಟು ಸರಿ ?

ನಿಮಗೆ ಮೂಲಭೂತವಾಗಿ ಸಂವಿಧಾನ ಎಂದರೆ ಏನು ಎಂಬುದರ ಅರಿವಿದೆಯೇ ? ಸಂವಿಧಾನ ಎಲ್ಲಿಂದಲೋ ಯಾರಿಂದಲೂ ಹೇರಲ್ಪಟ್ಟ ನಿಯಮಗಳಲ್ಲ. ಸಂವಿಧಾನ ಈ ನೆಲದ, ಎಲ್ಲಾ ಮಾನವೀಯ ಮೌಲ್ಯಗಳ, ಪ್ರಾಕೃತಿಕ ಮೌಲ್ಯಗಳ, ಧಾರ್ಮಿಕ ಮೌಲ್ಯಗಳ, ಸಂಪ್ರದಾಯಿಕ ಪರಂಪರೆಯ, ವೈಚಾರಿಕ ಪ್ರಜ್ಞೆಯ ಸಮ್ಮಿಲನದ ನೀತಿ ನಿರೂಪಣೆಗಳು. ಅದನ್ನು ಇಲ್ಲಿನ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡೇ ರಚಿಸಲಾಗಿದೆ. ಅದನ್ನು ಕಾಪಾಡುವುದು ಹೇಗೆ ಎಂಬ ಚಿಂತನೆ ನಮ್ಮದಾಗಬೇಕೆ ಹೊರತು ಹುಚ್ಚುಚ್ಚಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಿನಿಮಾ ಹೀರೋನಂತೆ ಕಪಟ ನಾಟಕವಾಡುವುದು ಒಳ್ಳೆಯ ಲಕ್ಷಣವಲ್ಲ.

ನಿಮ್ಮ ಮಾತುಗಳು ಇತರ ಸಮುದಾಯಗಳಿಗೆ ಮತ್ತಷ್ಟು ಪ್ರಚೋದನೆ ಆಗುತ್ತದೆ. ಇದು ಯಾವುದೋ ಧರ್ಮದ ದೇಶವಲ್ಲ, ಯಾವುದೋ ಜಾತಿಯ ದೇಶವಲ್ಲ, ಯಾವುದೋ ಪಕ್ಷದ ದೇಶವಲ್ಲ. ಇದು ಜನಸಾಮಾನ್ಯರ, ಭಾರತೀಯರ ದೇಶ. ಯಾಕೆ ಸುಮ್ಮನೆ ಜನರ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತುವಿರಿ. ಅದಕ್ಕೆ ಬದಲಾಗಿ ಮನುಷ್ಯ ಪ್ರಜ್ಞೆಯನ್ನು, ವೈಚಾರಿಕ ಪ್ರಜ್ಞೆಯನ್ನು, ಜನರಲ್ಲಿ ಜಾಗೃತಗೊಳಿಸಿ, ಒಂದು ವೇಳೆ ನಿಮ್ಮ ದೃಷ್ಟಿಯಲ್ಲಿ ಹಿಂದೆ ನೀವೇ ಹೇಳಿರುವಂತೆ ಮುಸ್ಲಿಮರಲ್ಲಿ ಮತಾಂದತೆ ಇದೆ, ಹಿಂಸೆ ಇದೆ ದೇಶ ವಿರೋಧಿ ಮನೋಭಾವವಿದೆ ಎಂಬುದು ನಿಮ್ಮ ಅನಿಸಿಕೆಯಾದರೆ ಅದನ್ನು ಪರಿವರ್ತಿಸಲು ಪ್ರಯತ್ನಿಸಿ. ಅದು ಈ ದೇಶದ ರಕ್ಷಣೆಗೆ ನೀವು ಕೊಡಬಹುದಾದ ಕೊಡುಗೆ. ಅದು ಬಿಟ್ಟು ಆ ಸಮುದಾಯವನ್ನೇ ನಾಶ ಮಾಡುವ ದ್ವೇಷ ಕಾರುವ ನೀವೇ ಈ ದೇಶದ ಮತ್ತೊಂದು ವಿಭಜನೆಗೆ ಕಾರಣರಾಗುತ್ತೀರಿ ಎಂಬುದನ್ನು ಮರೆಯದಿರಿ.

ಸನ್ಮಾನ್ಯ ಅನಂತ್ ಕುಮಾರ್ ಹೆಗಡೆಯವರೇ, ಈಗೇನೋ ಕೆಲವರು ನಿಮ್ಮನ್ನು ಹಿಂದುತ್ವದ, ಸನಾತನ ಧರ್ಮದ ನಾಯಕ ಎಂಬುದಾಗಿ ಕರೆಯಬಹುದು, ಮೆಚ್ಚಬಹುದು. ಆದರೆ ದೀರ್ಘಕಾಲದಲ್ಲಿ ಅದರ ದುಷ್ಪರಿಣಾಮ ಬಹಳ ಗಂಭೀರವಾಗಿ ದೇಶದ ಮೇಲೆ ಆಗುತ್ತದೆ ನೆನಪಿರಲಿ. ನಿಮಗೆ ಇರುವ ಧೈರ್ಯವನ್ನು ಈ ದೇಶದ ಒಳಿತಿಗಾಗಿ ಉಪಯೋಗಿಸಿ. ಕೇಸರೀಕರಣ, ಇಸ್ಲಾಂಮೀಕರಣ ಮುಂತಾದ ಹುಚ್ಚುಗಳನ್ನು ಬಿಟ್ಟು ಸಂವಿಧಾನೀಕರಣ, ಮಾನವೀಕರಣ, ಭಾರತೀಕರಣ ಮಾಡುವ ಬಗ್ಗೆ ಯೋಚಿಸಿ. ಮಾಧ್ಯಮಗಳೇ ನೀವು ಸಹ ಹುಚ್ಚು ಹೇಳಿಕೆಗಳಿಗೆ ಮಹತ್ವ ನೀಡದೆ ವಿವೇಚನೆ ಪ್ರದರ್ಶಿಸಿ. ಇಲ್ಲದಿದ್ದರೆ ಇದೇ ಅನಂತ್ ಕುಮಾರ್ ನಿನ್ನೆಯ ಭಾಷಣದಲ್ಲಿ ನಿಮ್ಮನ್ನು ಸಹ ಬೊಗಳುವ ನಾಯಿಗಳು ಎನ್ನುವ ಅತಿರೇಕದ ಮಾತನ್ನಾಡಿದ್ದಾರೆ. ಆ ಹುಚ್ಚು ಮತ್ತಷ್ಟು ಕೆರಳಲು ನೀವೇ ಕಾರಣ ಎಂಬುದನ್ನು ಮರೆಯದಿರಿ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ