ಹುಚ್ಚರ ಸಂತೆಯಲ್ಲಿ ನಿಂತು...

ಕಾಲ ಬದಲಾಗಿದೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರ ಬಾಯಿ ಮತ್ತು ಮನಸ್ಸು ದೊಡ್ಡದಾಗಿದೆ. ಜ್ಞಾನ ಅಪಾರವಾಗಿ ಬೆಳೆದು ಮೆದುಳಿನಿಂದ ಆಚೆ ಹೊರಚಾಚುತ್ತಿದೆ. ಆದ್ದರಿಂದ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಯಾವುದೇ ದೊಡ್ಡ ಅಪರಾಧಿಗಳಿಗೆ ಪೊಲೀಸ್ ತನಿಖೆಯಾಗಲಿ, ಸಿಐಡಿ, ಸಿಓಡಿ ತನಿಖೆಯಾಗಲಿ ಅಥವಾ ವಿಶೇಷ ತನಿಖಾ ತಂಡಗಳ ಅವಶ್ಯಕತೆಯೇ ಇಲ್ಲ. ಜೊತೆಗೆ ಅಪರಾಧಿಗಳನ್ನು ಶಿಕ್ಷಿಸಲು ನ್ಯಾಯಾಲಯಗಳ ಅವಶ್ಯಕತೆಯೂ ಇಲ್ಲ. ಏಕೆಂದರೆ ಅದು ತುಂಬಾ ತಡವಾಗಿ ತೀರ್ಪು ನೀಡುತ್ತದೆ ಮತ್ತು ಕಾನೂನುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಅದು ಯಾರಿಗೂ ಬೇಕಾಗಿಲ್ಲ. ಅದಕ್ಕಾಗಿ ಖರ್ಚು ಮಾಡುವ ಹಣ, ಶ್ರಮ ಮತ್ತು ಬುದ್ಧಿವಂತಿಕೆಯೂ ಬೇಕಾಗಿಲ್ಲ. ಅದೆಲ್ಲ ಈಗ ಹಳೆಯದಾಗಿದೆ. ಯಾರಿಗೂ ಅಷ್ಟು ಸಮಯ ಮತ್ತು ತಾಳ್ಮೆಯೂ ಇಲ್ಲ.
ಆದ್ದರಿಂದ ಇನ್ನು ಮುಂದೆ ಎಂತಹುದೇ ದೊಡ್ಡ ಅಪರಾಧಗಳಾಗಲಿ ಅಥವಾ ಹಿಂದೆ ನಡೆದಿರಬಹುದಾದ ಆದರೆ ಇಂದಿಗೂ ಪತ್ತೆಯಾಗದ ಅಪರಾಧಗಳೇ ಆಗಿರಲಿ, ಟೆಲಿವಿಜನ್ ಸುದ್ದಿ ಮಾಧ್ಯಮಗಳಿಗೆ ಒಪ್ಪಿಸಿದರೆ ಸಾಕು. ಅಲ್ಲಿನ ವರದಿಗಾರರೇ ಆ ಘಟನೆಯ ಎಲ್ಲಾ ಮಾಹಿತಿಯನ್ನು ಹೆಕ್ಕಿ ಹೆಕ್ಕಿ ತರುತ್ತಾರೆ. ಅಪರಾಧಿಗಳು ಯಾರು ? ಏಕೆ ಅಪರಾಧ ಮಾಡಿದ್ದಾರೆ ? ಹೇಗೆ ಮಾಡಿದ್ದಾರೆ ? ಎಲ್ಲಿ ಮಾಡಿದ್ದಾರೆ ? ಯಾರು ಯಾರು ಮಾಡಿದ್ದಾರೆ ? ಹೀಗೆ ಎಲ್ಲವನ್ನೂ ಅವರು ಪಾರದರ್ಶಕವಾಗಿ, ಬಹಿರಂಗವಾಗಿ ತಮ್ಮ ಟಿವಿ ಮುಖಾಂತರ ಜನರಿಗೆ ತೋರಿಸುತ್ತಾರೆ. ಅದರಲ್ಲಿ ವಿಶೇಷ ಚರ್ಚೆಗಳನ್ನು ಏರ್ಪಡಿಸುತ್ತಾರೆ. ಅನೇಕ ವಿಷಯ ತಜ್ಞರನ್ನು ಕರೆಸುತ್ತಾರೆ. ಕೊಲೆ ಆರೋಪಿಗಳನ್ನು, ಕೊಲೆಯಾದ ನತದೃಷ್ಟರನ್ನು ಅವರ ಸಂಬಂಧಿಕರನ್ನು ಅವರ ಪರವಾಗಿರುವ ಸೈದ್ಧಾಂತಿಕ ಹಿನ್ನೆಲೆಯವರನ್ನು ಹುಡುಕಿ ಹುಡುಕಿ ತರುತ್ತಾರೆ. ಸಾರ್ವಜನಿಕರೆದುರೇ. ಚರ್ಚೆಗಳನ್ನು ಮಾಡುತ್ತಾರೆ
ಇಷ್ಟಾಗುವ ಹೊತ್ತಿಗೆ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗುತ್ತದೆ. ಅಲ್ಲಿ ಎಲ್ಲಾ ಜನಪ್ರತಿನಿಧಿಗಳು ತಮ್ಮ ತಮ್ಮ ಪಕ್ಷದ ನಿಲುವಿನಂತೆ ಕೆಲವರು ಆರೋಪಿಗಳನ್ನು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಆರೋಪಗಳನ್ನು ವಿರೋಧಿಸುತ್ತಾರೆ. ಹೀಗೆ ದೊಡ್ಡ ದೊಡ್ಡ ಚರ್ಚೆಗಳು ನಡೆಯುತ್ತವೆ. ಜನರು ಅದನ್ನು ಟಿವಿ ಮಾಧ್ಯಮದಲ್ಲಿ ನೋಡುತ್ತಾರೆ. ಕೊನೆಗೆ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಹೇಳಿದ ಆರೋಪಿಗಳನ್ನು ಅಪರಾಧಿ ಎಂದು ಘೋಷಿಸಿ ಅವರಿಗೆ ಶಿಕ್ಷೆ ವಿಧಿಸಲಾಗುವುದು. ಇಷ್ಟು ಬಹಿರಂಗವಾಗಿ ಶಿಕ್ಷೆ ವಿಧಿಸಿದ ನಂತರ ಇನ್ನು ಮುಂದೆ ಸಮಾಜದಲ್ಲಿ ಯಾವುದೇ ಅಪರಾಧ ಚಟುವಟಿಕೆಗಳು ನಡೆಯುವುದಿಲ್ಲ. ಕೆಲವೇ ಅಪರಾಧಗಳು ಮಾತ್ರ ಅಲ್ಲ, ಯಾವುದೇ ಕೊಲೆ, ಅತ್ಯಾಚಾರ, ಅಪಘಾತ, ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣಗಳೇ ಇರಲಿ ಅದನ್ನು ಟೆಲಿವಿಷನ್ ಸುದ್ದಿ ಮಾಧ್ಯಮಗಳು ಮತ್ತು ಜನಪ್ರತಿನಿಧಿಗಳೇ ನಿರ್ಧರಿಸುತ್ತಾರೆ. ಪೊಲೀಸರಾಗಲಿ, ನ್ಯಾಯಾಲಯಗಳಾಗಲಿ ಅಸಮರ್ಥವಾಗಿವೆ. ಅವು ಧೀರ್ಘ ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಅಲ್ಲೇ ಡ್ರಾ ಅಲ್ಲೇ ಬಹುಮಾನ ಹೀಗೆ ಮಾಡಿದರೆ ವ್ಯವಸ್ಥೆ ಸುಧಾರಣೆಯಾಗಬಹುದು
ಬೇಕಿದ್ದರೆ ನೋಡಿ, ಧರ್ಮಸ್ಥಳದಲ್ಲಿ ಕೆಲವು ಕೊಲೆ, ಅತ್ಯಾಚಾರಗಳು, ಅಸಹಜ ಸಾವುಗಳು ಆಗಿರಬಹುದು ಎಂಬ ಆರೋಪದ ಮೇಲೆ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ಅದು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದೆ. ಆ ಕ್ಷೇತ್ರದಲ್ಲಿ ಅನುಭವ ಹೊಂದಿದ ಪೊಲೀಸ್ ಅಧಿಕಾರಿಗಳು ಘಟನೆಯಾ ಸುತ್ತ ಬಲೆ ಹೆಣೆಯುತ್ತಿದ್ದಾರೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಶ್ರಮ ಪಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮಾಧ್ಯಮಗಳು, ರಾಜಕಾರಣಿಗಳು, ಸಾಮಾಜಿಕ ಜಾಲತಾಣಗಳ ಕೆಲವು ಸ್ವಯಂ ಘೋಷಿತ ನಾಯಕರು ಎಲ್ಲರೂ ಅದರಲ್ಲಿ ಮೂಗು ತೂರಿಸಿ ತಮ್ಮದೇ ಅಭಿಪ್ರಾಯಗಳನ್ನು ಹೇಳುತ್ತಾ, ಇಡೀ ಸಮಾಜವೇ ಹುಚ್ಚರ ಸಂತೆಯಾಗಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಇವರುಗಳಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ಕೆಲಸ ಮಾಡುತ್ತಿರುವ ರೀತಿ ನೀತಿಗಳ ಬಗ್ಗೆ ಅರಿವಿಲ್ಲವೇ?
ಒಂದು ತನಿಖಾ ತಂಡ ವರದಿ ನೀಡುವವರೆಗೂ ಕಾಯುವ ತಾಳ್ಮೆ ಬೇಡವೇ. ಅದೇನು ಅಷ್ಟು ಸುಲಭದ ಕೆಲಸವೇ. ಅದಕ್ಕಾಗಿ ಸಾಕಷ್ಟು ಸಮಯ, ಸಾಕ್ಷಿ ಪುರಾವೆಗಳು ಸಿಗಬೇಕಲ್ಲವೇ, ಘಟನೆಗಳು ನಡೆದಿದೆಯೋ ಅಥವಾ ಇಲ್ಲವೋ ಎಂಬ ಮಾಹಿತಿ ಗೊತ್ತಾಗಬೇಕಲ್ಲವೇ. ಅಷ್ಟೂ ಅವಕಾಶ ಕೊಡದೆ ಅದು ಸಿಕ್ಕಿದೆ ಇದು ಸಿಕ್ಕಿಲ್ಲ, ಅದು ಹಾಗೆ ಇದು ಹೀಗೆ ಎಂದು ದಿನಕ್ಕೊಂದು ಅಭಿಪ್ರಾಯ, ತೀರ್ಪು ನೀಡುತ್ತಾ ಇಡೀ ಘಟನೆಯನ್ನು ವಿಮರ್ಶಿಸಿದರೆ, ಪರವಾಗಿ ಮತ್ತು ವಿರೋಧವಾಗಿ ಪ್ರತಿಭಟನೆ ಮಾಡಿದರೆ ತನಿಖಾ ತಂಡದ ಅವಶ್ಯಕತೆ ಇದೆಯೇ. ಇದು ಹುಚ್ಚರ ಸಂತೆಯಲ್ಲವೇ?
ನಾವೆಲ್ಲರೂ ಒಂದು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಅದನ್ನು ಒಪ್ಪಿಕೊಂಡು ಮುನ್ನಡೆಯೋಣ. ವ್ಯವಸ್ಥೆಯಲ್ಲಿ ಲೋಪ ದೋಷಗಳಿದ್ದರೆ ನ್ಯಾಯಾಂಗ ವ್ಯವಸ್ಥೆ ಇದೆ. ಅಲ್ಲಿಯೂ ದೋಷಗಳಿದ್ದರೆ ಸರಿಪಡಿಸುವುದಕ್ಕೆ ಅವಕಾಶವಿದೆ. ಆದರೆ ವ್ಯವಸ್ಥೆಯನ್ನೇ ಧಿಕ್ಕರಿಸುವ ರೀತಿಯಲ್ಲಿ ಮಾಧ್ಯಮ ಮತ್ತು ಶಾಸಕಾಂಗ ನಡೆದರೆ ಅರಾಜಕತೆ ಉಂಟಾಗಬಹುದು. ಆದ್ದರಿಂದ ದಯವಿಟ್ಟು ಅಪರಾಧಿಗಳನ್ನು ಹಿಡಿಯಲು ಅವರು ಅನುಸರಿಸುವ ತಂತ್ರಗಾರಿಕೆಯನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ಅವರಿಗೂ ಜವಾಬ್ದಾರಿ ಇದೆ. ಎಲ್ಲರೂ ಪ್ರಬುದ್ಧವಾಗಿ ನಡೆದುಕೊಳ್ಳಿ. ಇದು ಹುಚ್ಚರ ಸಂತೆಯಲ್ಲ.
ಈಗ ಭಾರತ ದೇಶದಲ್ಲಿ ಅತಿ ಹೆಚ್ಚು ಜನಾಭಿಪ್ರಾಯವನ್ನು ರೂಪಿಸುವ ಮಾಧ್ಯಮ ಯಾವುದಾದರೂ ಇದ್ದರೆ ಅದು ಸಾಮಾಜಿಕ ಜಾಲತಾಣಗಳು. ಅನೇಕ ರೀತಿಯ ಜಾಲತಾಣಗಳಿದ್ದರು ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್, ಇನ್ಸ್ಟಾಗ್ರಾಂ, ಟೆಲಿಗ್ರಾಂ, ಎಕ್ಸ್, ಶೇರ್ ಚಾಟ್, ಲಿಂಕ್ಡೇನ್ ಮುಂತಾದ ಜಾಲತಾಣಗಳು ತುಂಬಾ ಪ್ರಭಾವಶಾಲಿಯಾಗಿವೆ. ಅದರಲ್ಲೂ ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸಾಪ್ ಬಹುತೇಕ ಎಲ್ಲಾ ಜನಸಾಮಾನ್ಯರು ಉಪಯೋಗಿಸುತ್ತಾರೆ.
ಇಂತಹ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲರೂ ಒಂದಷ್ಟು ಜವಾಬ್ದಾರಿಯಿಂದ, ಅರಿವಿನ ಪ್ರಜ್ಞೆಯಿಂದ ಇದನ್ನು ಉಪಯೋಗಿಸಬೇಕಿದೆ. ಏಕೆಂದರೆ ಇತ್ತೀಚೆಗೆ ಅತಿ ಹೆಚ್ಚು ಲೈಕ್ ಗಳು, ಫಾಲೋವರ್ಸ್ ಗಳು, ವೀಕ್ಷಣೆಗಳು ಪಡೆದವರ ಪಟ್ಟಿಯನ್ನು ನೋಡಿದರೆ ಅದರಲ್ಲಿ ಶೇಕಡಾ 50 ಕ್ಕೂ ಹೆಚ್ಚು ಜನ ಅತಿರೇಕದ, ವಿಚಿತ್ರ ನಡುವಳಿಕೆಯ, ತಿಕ್ಕಲುತನದ, ಬಾಯಿಗೆ ಬಂದಂತೆ ಹುಚ್ಚುಚ್ಚಾಗಿ ಮಾತನಾಡುವ, ಸಭ್ಯತೆಯೇ ಇಲ್ಲದ, ವಿಕಾರ ವ್ಯಕ್ತಿತ್ವದವರೇ ಕಂಡುಬರುತ್ತಾರೆ. ಆ ಲೈಕ್ ಮತ್ತು ಫಾಲೋವರ್ಸ್ ಗಳ ಸಂಖ್ಯೆಯಿಂದ ಮುಖ್ಯ ವಾಹಿನಿಯ ಮಾಧ್ಯಮಗಳು ಸಹ ಅವರನ್ನೇ ಹೆಚ್ಚು ಪ್ರಚಾರಕ್ಕೆ ತಂದು, ಅವರ ಸಂದರ್ಶನ ಮಾಡಿ ಪ್ರಮುಖ ವಿಷಯಗಳಲ್ಲಿ ಅವರ ಅಭಿಪ್ರಾಯ ಕೇಳುತ್ತಾರೆ. ಇದರಿಂದಾಗಿ ಅವರು ಮತ್ತಷ್ಟು ಜನಪ್ರಿಯರಾಗಿ ಆ ತಿಕ್ಕಲುತನದ ಹೇಳಿಕೆಗಳೇ ಅಭಿಪ್ರಾಯಗಳಾಗಿ ರೂಪಗೊಳ್ಳುತ್ತಿದೆ.
ಇದು ಇಡೀ ಭಾರತದ ಎಲ್ಲ ಕ್ಷೇತ್ರಗಳ ಮೌಲ್ಯಗಳಿಗೆ ಬಹುದೊಡ್ಡ ಪೆಟ್ಟು ನೀಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ತುಂಬಾ ಇದೆ. ಇದೇನು ಸಂಕೀರ್ಣ ವಿಷಯವಲ್ಲ, ಕಷ್ಟದ ವಿಷಯವಲ್ಲ, ಅಧ್ಯಯನ, ಚಿಂತನೆ ಮಾಡಬೇಕಾದ ವಿಷಯವಲ್ಲ. ಸಾಮಾನ್ಯ ಜ್ಞಾನ ಹೊಂದಿದ್ದರೆ ಸಾಕು. ಯಾವ ವ್ಯಕ್ತಿ ಹುಚ್ಚುತನದಿಂದ ಹಸಿ ಹಸಿ ಸುಳ್ಳುಗಳನ್ನು, ಅತಿರೇಕದ ವಿಷಯಗಳನ್ನು ಬಾಯಿಗೆ ಬಂದಂತೆ ಮಾತನಾಡುತ್ತಾನೋ ಅವನನ್ನು ಸೂಕ್ಷ್ಮವಾಗಿ ಗಮನಿಸಿ ನಿರ್ಲಕ್ಷಿಸಬೇಕು. ಅವರಿಗೆ ಹೆಚ್ಚಿನ ಮಾನ್ಯತೆ ಕೊಡಬಾರದು. ನಾವು ಒಂದಷ್ಟು ತಾಳ್ಮೆ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು.
ಯಾವ ವ್ಯಕ್ತಿ ಸಮಾಜದ ಮೌಲ್ಯಗಳಿಗೆ ಧಕ್ಕೆಯಾಗದಂತೆ, ಈ ವ್ಯವಸ್ಥೆಗೆ ಯಾವುದೇ ಹಾನಿಯಾಗದಂತೆ, ಯಾವುದೇ ಪ್ರಚೋದನಾಕಾರಿ ವಿಷಯಗಳನ್ನು ಹೇಳದಂತೆ, ಅತ್ಯಂತ ಜವಾಬ್ದಾರಿಯಿಂದ ಕಾನೂನಾತ್ಮಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ಬರೆಯುತ್ತಾರೋ, ಯೂಟ್ಯೂಬ್ ಗಳಲ್ಲಿ ಪ್ರಸಾರ ಮಾಡುತ್ತಾರೋ ಅಂತಹವರನ್ನು ದಯವಿಟ್ಟು ಪ್ರೋತ್ಸಾಹಿಸಿ. ಇಲ್ಲದಿದ್ದರೆ ಈ ಐಲುಪೈಲುಗಳೇ ಮುಂದೆ ಒಂದು ಪೀಳಿಗೆಯಾಗಿ ಜನಪ್ರಿಯತೆ ಹೊಂದಿ ನಮ್ಮ ಮಕ್ಕಳು ಸಹ ಅವರನ್ನೇ ಅನುಕರಿಸುವಂತೆ ಆಗುತ್ತದೆ.
ಈಗಾಗಲೇ ಆ ಸನ್ನಿವೇಶಕ್ಕೆ ನಾವೆಲ್ಲರೂ ಬಂದಿದ್ದೇವೆ. ಮನರಂಜನೆಯೇ ಇರಲಿ, ರಾಜಕೀಯವಿರಲಿ, ಧರ್ಮವೇ ಇರಲಿ ಅಥವಾ ಇನ್ಯಾವುದೇ ಕ್ಷೇತ್ರವಿರಲಿ ದಯವಿಟ್ಟು ಒಂದಷ್ಟು ಉತ್ತಮ ವ್ಯಕ್ತಿತ್ವಗಳನ್ನು ಆಯ್ಕೆ ಮಾಡಿ ಅವರನ್ನು ಪ್ರೋತ್ಸಾಹಿಸಿ. ತೀರಾ ಅತಿರೇಕದ ತಿಕ್ಕಲುಗಳನ್ನು ನಿರ್ಲಕ್ಷಿಸಿ. ಅದಕ್ಕೆ ಒಂದಷ್ಟು ಸಮಯಾವಕಾಶ ಬೇಕಾಗಬಹುದು. ಆದರೆ ಸಮಯ ತೆಗೆದುಕೊಂಡಾದರೂ ಅದನ್ನು ವಿವೇಚನೆಯಿಂದ ಗಮನಿಸಿ.
ಅವರು ಸೈದ್ಧಾಂತಿಕವಾಗಿ ನಮ್ಮದೇ ಅಭಿಪ್ರಾಯಕ್ಕೆ ಬದ್ಧವಾಗಿದ್ದರೂ ಸಹ ಅವರ ಭಾಷೆ, ವರ್ತನೆ ಮಿತಿಮೀರಿದರೆ ಅವರನ್ನು ದಯವಿಟ್ಟು ತಿರಸ್ಕರಿಸಿ. ನೀವು ಒತ್ತುವ ಒಂದು ಲೈಕ್ ಬಟನ್, ಫಾಲೋ ಬಟನ್ ಹುಚ್ಚನೊಬ್ಬನ ಸೃಷ್ಟಿ ಮಾಡಬಹುದು. ಆದ್ದರಿಂದ ಹೆಚ್ಚು ಜವಾಬ್ದಾರಿಯಿಂದ ನಿಮ್ಮ ಲೈಕ್ ಬಟನ್ ಗಳನ್ನು ಆಪರೇಟ್ ಮಾಡಿ. ಈ ಸಂದರ್ಭದಲ್ಲಿ ಒಂದಷ್ಟು ಸಂಕಲ್ಪವನ್ನು ಮಾಡೋಣ. ಸಾಮಾಜಿಕ ಜಾಲತಾಣಗಳು ತೀರಾ ಅನಾಹುತಗಳನ್ನು ಮಾಡುತ್ತಿದೆ. ಅದರಲ್ಲಿ ನಮ್ಮ ಪಾಲು ಇರುವುದು ಬೇಡ. ಸಾಮಾಜಿಕ ಜಾಲತಾಣಗಳ ಮೂಲಕ ಈ ನೆಲದ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳೋಣ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ