ಹುಚ್ಚಾಟದ ಹುಲಿ

ಹುಚ್ಚಾಟದ ಹುಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್. ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
೬೦.೦೦, ಮುದ್ರಣ : ನವೆಂಬರ್ ೨೦೧೧

ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು ಹಲವಾರು ಕಾಲ್ಪನಿಕ ಪತ್ತೇದಾರರಿಗೆ ಜನ್ಮದಾತರು. ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಎಂಬೆಲ್ಲಾ ಹೆಸರಿನ ಪತ್ತೇದಾರರ ನೂರಕ್ಕೂ ಮಿಗಿಲಾದ ಸಾಹಸ ಕಥೆಗಳನ್ನು ಓದುಗರಿಗೆ ಉಣಬಡಿಸಿದ ಖ್ಯಾತಿ ಇವರದ್ದು. 

‘ಹುಚ್ಚಾಟದ ಹುಲಿ' ಒಂದು ವಿಲಕ್ಷಣ ಕಾದಂಬರಿ. ಪತ್ತೇದಾರ ಮಧುಸೂದನನ ತೊಂಬತ್ತನೆಯ ಸಾಧನೆಯ ಕಥೆ. ಅವರೇ ಹೇಳುವಂತೆ “ಈ ಪತ್ತೇದಾರಿ ಕಾದಂಬರಿಯ ಕಥಾ ವಿವರಣೆಯು ದೆವ್ವಗಳಿಂದ ನಡೆಯುವ ವಿಲಕ್ಷಣ ಹಾಗೂ ವಿನೋದ ಚಮತ್ಕಾರ ಘಟನೆಗಳಿಂದ ಕೂಡಿದೆ. ಕಥೆ ಓದುತ್ತಿದ್ದ ಹಾಗೆ ಓದುಗರು ಆಶ್ಚರ್ಯಚಕಿತರಾಗುವುದರಲ್ಲಿ ಸಂದೇಹವಿಲ್ಲ. ಜಗತ್ತಿನಲ್ಲಿ ದೆವ್ವಗಳಿಂದ ಹೀಗೂ ನಡೆಯುವುದುಂಟೇ? ನಂಬುವುದಕ್ಕೇ ಆಗದು ಎಂದು ಭಾವಿಸುವರು.

ದೆವ್ವಗಳನ್ನು ಪ್ರತ್ಯಕ್ಷವಾಗಿ ನೋಡಿರುವವರು, ಅವುಗಳಿಂದ ತೊಂದರೆ ಅನುಭವಿಸಿರುವವರು, ಅವುಗಳ ವಿಲಕ್ಷಣ ಆಟ, ನಾನಾ ರೀತಿಯ ಬದಲಾವಣೆಗಳನ್ನು ಕಂಡವರು ಇದನ್ನು ಓದಿದರೆ... ಇದು ಸರ್ವ ಸಾಮಾನ್ಯವಾದ ವಿಷಯ. ಇದಕ್ಕೆ ಹತ್ತು ಪಾಲು- ನೂರು ಭಾಗ ಹೆಚ್ಚಿನ ಆಶ್ಚರ್ಯಕರ ಮತ್ತು ರೋಮಾಂಚಕರ ಘಟನೆಗಳು ನಡೆದಿವೆ. ನಾನು ಈವರೆಗೆ ಬರೆದಿರುವ ಪಿಶಾಚಿ ಕಥೆಗಳ ಮಾದರಿಯನ್ನು ಬದಲಿಸಿ, ಇದನ್ನು ಕೊಂಚ ವಿಭಿನ್ನ ರೀತಿ ಬರೆದಿದ್ದೇನೆ.”

ನರಸಿಂಹಯ್ಯನವರ ಬರಹ ಬಹಳ ಸರಳ. ಆಗಿನ ಕಾಲದ ಓದುಗರಿಗೆ ಇದು ಬಹಳವಾಗಿ ರುಚಿಸಿದರೂ ಈಗಿನ ಜನಾಂಗಕ್ಕೆ ಇದು ಇಷ್ಟವಾಗುವುದು ಕಷ್ಟ. ಈಗಿನವರು ದೆವ್ವ-ಭೂತಗಳನ್ನು ನಂಬುವುದೂ ಕಷ್ಟ. ಆದರೂ ಹಿಂದಿನ ಓದಿನ ನೆನಪುಗಳನ್ನು ತಾಜಾ ಮಾಡಲು ಅಂದಿನ ಓದುಗರಿಗೆ ಇದೊಂದು ಸುವರ್ಣಾವಕಾಶ. ೨೦೧೦ರಲ್ಲಿ ಸಪ್ನ ಬುಕ್ ಹೌಸ್ ಅವರು ಎನ್.ನರಸಿಂಹಯ್ಯನವರ ಬಹಳಷ್ಟು ಕಾದಂಬರಿಗಳನ್ನು ಮರುಮುದ್ರಣ ಮಾಡಿರುವರು. ಸಾಹಿತಿ ಕುಂ.ವೀರಭದ್ರಪ್ಪನವರು ಬೆನ್ನುಡಿ ಬರೆದಿದ್ದಾರೆ. ೧೪೦ ಪುಟಗಳ ಈ ಕಾದಂಬರಿಯನ್ನು ಸರಾಗವಾಗಿ ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದು.