ಹುಟ್ಟದಿರು ಮತ್ತೆ

ಹುಟ್ಟದಿರು ಮತ್ತೆ

ಕವನ

ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ

ವರ್ಗ ಸಂಘರ್ಷಗಳಡಿಯೆ

ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ 

ಬೇಕೇನು ಹೊಡೆದಾಟ ಬಡಿದಾಟವೇಕೆ ? 

 

ಆತುರದ ನಿರ್ಧಾರ ನಮ್ಮವರಿಗಿಹುದೆ  ?

ನಮ್ಮ ಬಳಸುತ ಮೆರೆವ ನಾಯಕರಿಗೇನೆ ! 

ಎಲ್ಲ ಜಾತಿಯ ಕಟ್ಟಿ ಓಟ ಗಿಟ್ಟಿಸುತಲವರು 

ಮತ್ತೆ ಜಾತಿಯ ಮೆಟ್ಟಿ ಮಹಡಿಯಲಿ ಕುಳಿತಿಹರು

 

ಬೀದಿ ಕಾಳಗದೊಳಗೆ ಹೈರಾಣ ನಾವೆ

ಮಚ್ಚು ಬೀಸುತ ರಕ್ತ ಬೀಳಿಸುವವರು ನಾವೆ

ದೊಡ್ಡವರ ದಡ್ಡತನ ಬೀದಿಯೊಳು ಬರದಿಂದು

ಉಳ್ಳವರ ಮನೆಯೊಳಗೆ ಶಿವಲಿಂಗವಿಹುದಿಂದು

 

ಪಾಪದವರ ಮನೆಯೊಳಗೆ ಶಿಕ್ಷಣವು ರಿಂಗಣಿಸದೆ

ದೇಶ ಉದ್ಧಾರದ ಮಾತು ಬಲು ಹಾಸ್ಯ ನೋಡು

ಜನಸಾಮಾನ್ಯರ ಎಂಜಲನ್ನವ ತಿನ್ನುವವರು

ನಾಡ ಬೆಳೆಸುವರೇ ? ಮನೆ ಬೆಳಗಿಸುವುದನು ಕಾಣು ! 

 

ನಾಡ ಕಟ್ಟುವ ರೈತ ಎಲ್ಲಿಹನೋ ಏನೊ ? 

ಅವನ ಹೆಸರಲಿ ಕೋಟಿ ಗಳಿಸುವರು ನೋಡು ! 

ಅವನ ಮಣ್ಣನು ಅವಗೆ ತಿನಿಸುತಲೆ ಸಾಗುವರು

ಗೋರಿ ಕಟ್ಟುತಲವಗೆ ಪ್ರಾರ್ಥನೆಯ ಮಾಡುವರು !!

 

ಅಧಿಕಾರಿ ವರ್ಗದವರು ಎಲ್ಲಿಹರು ಇಂದು ? 

ನಾಯಕರ ಜೇಬೊಳಗೆ ಕುಳಿತಿಹರುಯೆಂದು !

ಬಡವನೊಬ್ಬನು ಹೋಗೆ ಬಡಿದು ಅಟ್ಟುವರು

ಸಿರಿವಂತನಾ ಬಳಿಯೆ ಮಲಗಿ ಬೇಡುವರು ! !

 

ಮೌನವಾದರೂ ನೋವು ಆಗದಿದ್ದರೂ ನೋವು

ಹುಟ್ಟು ಬೇಡವೇ ಬೇಡ ಈ ನೆಲದ ಮಣ್ಣಿನಲಿ

ಹುಟ್ಟುತ್ತಿದ್ದರೂ ಹುಟ್ಟು ಧೀರ ನಾಯಕರಂತೆ

ಭ್ರಷ್ಟತೆಯ ತೊಡೆಯುತಲೆ ದೇಶ ಸ್ವಚ್ಚವಗೊಳಿಸು ! 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್