ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ...

ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ...

ಬಸವೇಶ್ವರರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2021 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎಲ್ಲವೂ ಸಾಕಷ್ಟು ದಾಖಲಾಗಿವೆ. ಇವುಗಳಲ್ಲಿ ಬಸವಣ್ಣ ದೇವರಾಗಿಯೂ ಧರ್ಮವಾಗಿಯೂ ಸಮ ಸಮಾಜದ ಕ್ರಾಂತಿಕಾರಿಯಾಗಿಯೂ, ಓಟುಗಳಾಗಿಯೂ ಪರಿವರ್ತನೆಯನ್ನು ಹೊಂದಿದ್ದಾರೆ. 

ಅವರ ವಚನ ಸಾಹಿತ್ಯ  ಭಾಷಣಗಳಿಗೆ, ಪ್ರವಚನಗಳಿಗೆ, ವಿಚಾರಸಂಕಿರಣಗಳಿಗೆ, ಲೇಖನಗಳಿಗೆ, ಡಾಕ್ಟರೇಟ್ ಗಳಿಗೆ, ಬಹಳ ಒಳ್ಳೆಯ ಆಹಾರ ಒದಗಿಸುತ್ತದೆ. ರಸ್ತೆಗಳು, ಭವನಗಳು, ಮೂರ್ತಿಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಕೇಂದ್ರಗಳು, ಸಂಘಟನೆಗಳು, ಪ್ರಶಸ್ತಿಗಳು ಅವರ ಹೆಸರಿನಲ್ಲಿ ಆಗಿದೆ.....

ಆದರೆ ನಿಜವಾಗಿ ಆಗಬೇಕಾಗಿರುವುದು ಮಾತ್ರ ಇನ್ನೂ ಗಗನಕುಸುಮವಾಗಿದೆ. ಕನ್ನಡ ನಾಡಿನ ಬಹುದೊಡ್ಡ ಕೊಡುಗೆ ಬಸವೇಶ್ವರರು. ಹನ್ನೆರಡನೆಯ ಶತಮಾನದಲ್ಲಿಯೇ ಸಮ ಸಮಾಜದ ಕನಸು ಕಂಡವರು. ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ...

12 ನೆಯ ಶತಮಾನದಲ್ಲಿಯೇ ವೇಶ್ಯೆ ಅಥವಾ ಸೂಳೆ ಎಂದು ಕರೆಯಲಾಗುತ್ತಿದ್ದ ಒಬ್ಬ ಲೈಂಗಿಕ ಕಾರ್ಯಕರ್ತೆಯನ್ನು ಅನುಭವ ಮಂಟಪದ ಸದಸ್ಯೆಯನ್ನಾಗಿಸಿ ಆಕೆಯ ಒಡಲಾಳದ ನೋವಿಗೆ ವಚನ ಸಾಹಿತ್ಯದ ಮೂಲಕ ಧ್ವನಿಯಾಗಲು ಅವಕಾಶ ನೀಡಿದ ಬಸವಣ್ಣನವರನ್ನು ಏನೆಂದು ಕರೆಯುವುದು. 2020 ರ ಈ ಸಂದರ್ಭದಲ್ಲೂ ವೇಶ್ಯೆ ಎಂಬ ನಮ್ಮದೇ ಹೆಣ್ಣುಮಗಳು ಎಷ್ಟೊಂದು ತಿರಸ್ಕಾರಕ್ಕೆ ಒಳಗಾಗಿರುವಾಗ 12 ನೇ ಶತಮಾನದ ಬಸವೇಶ್ವರರ ಸಮಾನತೆಯ ಚಿಂತನೆ ಎಷ್ಟು ಗಾಢವಾಗಿರಬಹುದು. 

ಅಷ್ಟೇ ಏಕೆ ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಶೆಟ್ಟರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ, ಚಮ್ಮಾರ, ಹೊಲೆಯ, ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ ಎಂಟು ಶತಮಾನಗಳ ಹಿಂದೆಯೇ  ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದರು ಎಂಬುದನ್ನು ಊಹಿಸಿ ಕೊಳ್ಳಲು ಸಾಧ್ಯವೇ.....

ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು  ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು? ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು - ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವೇಶ್ವರರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ. ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಈಗ ಜನಪ್ರಿಯವಾಗಿರುವಾಗ ಆಗಿನ ಅವರ ಹೋರಾಟ ಹೇಗಿರಬಹುದು.

ಒಕ್ಕಲಿಗರು ವೀರಶೈವರು ಒಂದೊಂದು ಪಕ್ಷದ ಬಾಲಗಳಿಗೆ ಜೋತು ಬಿದ್ದಿರುವಾಗ, ಲಿಂಗಾಯಿತರು ವೀರಶೈವರು ಪರಸ್ಪರ ಕಚ್ಚಾಡುತ್ತಿರುವಾಗ, ದಲಿತರು ಬ್ರಾಹ್ಮಣರು ದ್ವೇಷಿಸುತ್ತಿರುವಾಗ, ಲೈಂಗಿಕ ಕಾರ್ಯಕರ್ತೆಯರು ಇರಲಿ ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ, ಪ್ರಜಾಪ್ರಭುತ್ವದ ತಳಹದಿ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ.....

ಕೆಲವು ಅಪರೂಪದ ಉದಾಹರಣೆ ಹೊರತುಪಡಿಸಿ, ಒಬ್ಬ ಒಕ್ಕಲಿಗ ಅಭ್ಯರ್ಥಿ ಚುನಾವಣೆಯಲ್ಲಿ ಲಿಂಗಾಯತರು ಹೆಚ್ಚು ಮತವಿರುವ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ, ಅದೇ ರೀತಿ ವೀರಶೈವರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಒಕ್ಕಲಿಗರು ಗೆಲ್ಲುವುದಿಲ್ಲ. ದಲಿತರು ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ, ಬ್ರಾಹ್ಮಣರು ವೇದ ಉಪನಿಷತ್ತು ಮನುಸ್ಮೃತಿಗಳನ್ನು ಬಿಟ್ಟು ಕದಲುತ್ತಿಲ್ಲ,

ಇಂತಹ ವಾತಾವರಣದಲ್ಲಿ ಗೆಳೆಯರೆ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ. ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ. ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ. ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ.

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ. ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ. 

ಆದರೂ, ಮತ್ತೆ ಕಲ್ಯಾಣಕ್ಕಾಗಿ ಆ ಕನಸನ್ನು ನನಸು ಮಾಡಲು ಮನಸ್ಸುಗಳ ಅಂತರಂಗದ ಚಳವಳಿ ಸದಾ ಜಾರಿಯಲ್ಲಿರುತ್ತದೆ. ಅದು ವಾಸ್ತವವಾಗುವವರೆಗೂ.....

***

ಕ್ಷಮಿಸೋ ಬಸವಣ್ಣ ನಿನ್ನನ್ನು ದೇವರು ಮಾಡಿದ್ದಕ್ಕೆ,

ಕ್ಷಮಿಸೋ ತಂದೆ  ನಿನ್ನದೇ ಧರ್ಮ ಮಾಡಿದ್ದಕ್ಕೆ,

ಕ್ಷಮಿಸೋ ಅಪ್ಪ ನಿನ್ನದೇ ಜಾತಿ ಮಾಡಿದ್ದಕ್ಕೆ,

ಕ್ಷಮಿಸೋ ಅಣ್ಣ ನಿನ್ನ ವಚನಗಳನ್ನು ಕೇವಲ  ಗೋಡೆ ಬರಹಗಳಾಗಿಸಿದ್ದಕ್ಕೆ.......

ನೀ ಹುಟ್ಟಿದಾ ಸ್ಥಳ ತೀರ್ಥಕ್ಷೇತ್ರವಾಯಿತು,

ನೀ ಬರೆದ ವಚನಗಳು ಧರ್ಮಗ್ರಂಥಗಳಾದವು,

ನೀ ನುಡಿದ ಮಾತುಗಳು ದ್ಯೆವವಾಣಿಯಾದವು,

ನಿನ್ನ ಮೂರ್ತಿಯೇ ಗರ್ಭಗುಡಿಯ ದೇವರಾಯಿತು,

ನಿನ್ನ ಹೆಸರಲ್ಲೇ ಸಂಘ ಸಂಸ್ಥೆಗಳಾದವು,

ನಿನ್ನ ಹೆಸರಲ್ಲೇ ಮಠಗಳಾದವು,

ನಿನ್ನ ಹೆಸರಲ್ಲೇ ಉದ್ದಿಮೆಗಳಾದವು,

ನಿನ್ನ ಹೆಸರಲ್ಲೇ ವ್ಯಾಪಾರಿ ಶಿಕ್ಷಣ ಸಂಸ್ಥೆಗಳಾದವು,

ವಿದೇಶಕ್ಕೂ ಹಾರಿತು ನಿನ್ನ ಖ್ಯಾತಿ,

ನಿನ್ನ ಮೇಲಿನ ಸಂಶೋಧನೆಗಳು ಅಸಂಖ್ಯಾತ,

ನಿನ್ನ ಹೆಸರಿಲ್ಲದೆ ರಾಜಕೀಯ ಮಾಡದಂತಾಯಿತು,

ಒಟ್ಟಿನಲ್ಲಿ ನಮ್ಮೆಲ್ಲರ ಸರ್ವಶಕ್ತ, ದ್ಯೆವಾಂಶಸಂಭೂತ ಆರಾಧ್ಯ ದ್ಯೆವವಾದೆ.........

ಆದರೆ .........

ನೀನು ಕಂಡ ಆದರ್ಶ ಸಮಾಜದ ಕನಸು ಮಾತ್ರ ನನಸಾಗಲಿಲ್ಲ,

ನಿನ್ನ ಕನಸಿನ ಸಮಾನತೆ ಸಾಧ್ಯವಾಗಲಿಲ್ಲ,

ಜಾತಿ ವ್ಯವಸ್ಥೆ ಈಗ ಹೆಬ್ಬಂಡೆಯಾಗಿ ಮತ್ತಷ್ಟು ಗಟ್ಟಿಯಾಗಿದೆ,

ಮೌಡ್ಯವಂತೂ ವಿಜ್ಞಾನವನ್ನು ನುಂಗಿ ಅಜ್ಞಾನವಾಗಿ ಮನೆಮನೆಯ ಆಚರಣೆಯಾಗಿದೆ,

ಪ್ರಜಾಪ್ರಭುತ್ವ ಸರ್ವಾಧಿಕಾರಿ ದುಷ್ಟ ಭ್ರಷ್ಟರ ಮುಖವಾಡವಾಗಿದೆ,

ಅನುಭವ ಮಂಟಪ ಬುದ್ದಿಹೀನರ ಜಟ್ಟಿಕಾಳಗವಾಗಿದೆ,

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದೇನೋ ಹೇಳಿದೆ,

ಆದರೆ ಜಂಗಮ ಅಳಿದು ಸ್ಥಾವರ ಶಾಶ್ವತವಾಗಿದೆ,

ಹೊಲಸು ತಿನ್ನುವವನೇ ಹೊಲೆಯ ಎಂದೇನೋ ಹೇಳಿದೆ,

ಆದರೆ ಹೊಲಸು ತಿಂದೂ ಹೊಲಸಾಡುವವನು ಶ್ರೇಷ್ಠನಾದ,

ಅಯ್ಯಾ ವಿಶ್ವ ಗುರುವೇ, ಸಮಾನತೆಯ ಹರಿಕಾರನೆ,

ನೀನೇ ಜಾತಿಯಾದೇ, ನೀನೇ ಧರ್ಮವಾದೆ, ನೀನೇ ದೇವರಾದೆ,

ಇದಕ್ಕಾಗಿ ನಿನ್ನನ್ನು ನಾನು ಮಾತ್ರ ಕ್ಷಮಿಸುವುದಿಲ್ಲ

ಇದನ್ನು ಹೇಳಿದರೆ ನಿನ್ನ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ,

ಆತ್ಮಸಾಕ್ಷಿಗೆ ಓಗೊಟ್ಟು ಕರುಳು ಕಿವುಚುವ ವಾಸ್ತವ ತೆರೆದಿಟ್ಟರೆ ಕೊಲ್ಲುತ್ತಾರೆ,

ಅದಕ್ಕೆ ನಾನವರನ್ನು ಟೀಕಿಸುವುದಿಲ್ಲ,

ನಿನ್ನನ್ನೇ ಬ್ಯೆದು, ಕಣ್ಣೀರು ಹಿಂಗುವಂತೆ ಅತ್ತು ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ...

ಆದರೂ....

ಅಯ್ಯಾ ಬಸವಣ್ಣ,

ಸಮಾನತೆಗಾಗಿ ಅದರಿಂದ ಸಮಾಜದ ನೆಮ್ಮದಿಗಾಗಿ ಒಂದೇ ಒಂದು ಸಾರಿ ಮತ್ತೊಮ್ಮೆ ಹುಟ್ಟಿ ಬಾ,

ಅಲ್ಲಿಯವರೆಗೂ ನಿನಗಾಗಿ ಕಾಯುತ್ತಲೇ ಇರುತ್ತೇನೆ....

ಸಮಾನತೆ ಬಯಸುವ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.

  • ಜ್ಞಾನ ಭಿಕ್ಷಾ ಪಾದಯಾತ್ರೆಯ 193 ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಗ್ರಾಮದಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ರಚನೆ: ಶ್ರೇಯಸ್ ಕಾಮತ್, ಬೆಂಗಳೂರು