ಹುಟ್ಟು ಹಬ್ಬ ಆಚರಣೆ

ಹುಟ್ಟು ಹಬ್ಬ ಆಚರಣೆ

ಭಾರತದಲ್ಲಿ ನಮ್ಮದೇ ಆದ ಹಲವಾರು ವಿಭಿನ್ನ ರೀತಿಯ ಸುಂದರವಾದ ಭಾವನಾತ್ಮಕ ಸಂಪ್ರದಾಯಗಳು ಇವೆ ಜೊತೆಗೆ ಆಚರಿಸುತ್ತಾ ಬಂದಿರುವೆವು. ಅದರಲ್ಲಿ ಹುಟ್ಟು ಹಬ್ಬವೊಂದು, ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಆ ದಿನ ಹುಟ್ಟಿದವರ ಹುಟ್ಟು ಹಬ್ಬ ಆಚರಣೆ ಮಾಡುವುದೇ ಹುಟ್ಟು ಹಬ್ಬ ಎನ್ನಬಹುದು. ಹೀಗಾಗಿ ಇಂದು ಹುಟ್ಟು ಹಬ್ಬ ಹೆಚ್ಚಾಗಿ ಚಿಕ್ಕ ಮಕ್ಕಳಿಗಾಗಿ ಆಚರಿಸುವ ಹಬ್ಬ ಎಂದೇ ಪ್ರಸಿದ್ಧಿ ಪಡೆದಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಆ ದಿನ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವವರನ್ನು ಮುಂಜಾನೆ ಎಬ್ಬಿಸಿ, ಎಣ್ಣೆ ಸ್ನಾನ ಮಾಡಿಸಿ, ಹುಟ್ಟು ಹಬ್ಬದ ಸಲುವಾಗಿಯೇ ತಂದ ಹೊಸ ಬಟ್ಟೆ ಉಡಿಸಿ, ದೇವರ ಮುಂದೆ ಪ್ರಾರ್ಥನೆಗೈದು, ಮಣೆ ಮೇಲೆ ಕುಳ್ಳರಿಸುವರು. ನಂತರ ಆರತಿಯ ತಟ್ಟೆ ತಂದು ತಾಯಿ ಮತ್ತು ಇನ್ನುಳಿದ ಹೆಣ್ಣುಮಕ್ಕಳು ಕುಂಕುಮ ಹಚ್ಚಿ ಹಾರ ಹಾಕಿ ಆರತಿ ಮಾಡುವರು. ಸಿಹಿ ಪದಾರ್ಥ ತಿನ್ನಿಸುವರು ಹಾಗೆ ಮನೆಯಲ್ಲಿ ಇದ್ದ ಉಂಡೆ, ಲಡ್ಡು ಹಂಚಿ, ಅದನ್ನು ಎಲ್ಲರೂ ಸೇರಿ ತಿನ್ನುವುದು ವಾಡಿಕೆಯಾಗಿದೆ. ಇದಲ್ಲದೆ ಆ ದಿನ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡವರು ಹಿರಿಯರಿಂದ ಆಶೀರ್ವಾದ ಪಡೆಯುವುದನ್ನು ಕಾಣುತ್ತೇವೆ. ಆ ದಿನ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಎಲ್ಲರೂ ಸಂತೋಷದಿಂದ ಊಟ ಮಾಡುವುದು. ದೇವರ ಗುಡಿಗೆ ಹೋಗಿ ತೆಂಗಿನಕಾಯಿ ಒಡೆದು, ನಮಸ್ಕರಿಸಿ ಬರುವುದು ಸೇರಿದಂತೆ ವಿವಿಧ ಬಗೆಯ ಅಲಂಕಾರ ಅಂದರೆ ಅವರ ಆರ್ಥಿಕ ಅನುಗುಣವಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೀಗೆ ಪ್ರತಿಯೊಬ್ಬರ ಹುಟ್ಟು ಹಬ್ಬದಲ್ಲಿ ಮನೆಯವರೆಲ್ಲರ ಪ್ರೀತಿ, ವಾತ್ಸಲ್ಯದ ಭಾವನೆಗಳ ಬುತ್ತಿ ಬಿಚ್ಚಿದಂತಿರುತ್ತದೆ.ಆದ್ದರಿಂದ ಹೀಗೆ ಮಾಡುವ ಪ್ರಕ್ರಿಯೇ ಹುಟ್ಟು ಹಬ್ಬದ ಸಂಪ್ರದಾಯ ಎನ್ನಬಹುದಾಗಿದೆ.

ಸರಳವಾಗಿ ಆಚರಣೆ: ಸೃಷ್ಟಿಕರ್ತನ ಸನ್ನಿಧಿಯಲ್ಲಿ ಹುಟ್ಟು ಆಕಸ್ಮಿಕ ಸಾವು ಖಚಿತ. ಅದನ್ನು ಮೀರಲು ಯಾರಿಗೂ ಇಂದಿನವರೆಗೂ ಸಾಧ್ಯವಾಗಿಲ್ಲ ಮುಂದೆಯೂ ಸಾಧ್ಯವಾಗುವುದಿಲ್ಲ ಇದು  ಸತ್ಯ. ಮಗುವಿನ ಜನನವಾದಾಗ ಮನೆಮಂದಿಯಲ್ಲಾ ಸಂತೋಷ ಸಾಗರದಲ್ಲಿ ತೇಲಾಡುತ್ತಾರೆ. ಪುಟ್ಟ ಕಂದನ ನಗು, ಮನೆಯ ವಾತಾವರಣವನ್ನು ಆನಂದಮಯವಾಗುವಂತೆ ಮಾಡುವುದರಲ್ಲಿ ಸಂದೇಹವಿಲ್ಲಾ. ಹಾಗೆ ಮಗುವಿಗೆ ಒಂದು ವರ್ಷವಾದೊಡನೆ ಹುಟ್ಟು ಹಬ್ಬದ ಆಚರಣೆಯ ಸಂಭ್ರಮ. ಆಚರಿಸುವುದು ತಪ್ಪಲ್ಲ.ಆದರೆ ವಿದೇಶಿಯರ ಅನುಕರಣೆ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಮಗುವಿನ ಬಾಳು ಬೆಳಗಲಿ ಎಂಬ ಆಶಯವಿರುವಾಗ ಮೇಣದ ಬತ್ತಿಯನ್ನು ಆರಿಸುವುದರ ಬದಲು ಜ್ಞಾನ ಜ್ಯೋತಿ ಬೆಳಗಲಿ ಎಂಬ ಧ್ಯೇಯದೊಂದಿಗೆ ದೀಪ ಬೆಳಗಿಸುವ ಸಂಪ್ರದಾಯ ಇಟ್ಟುಕೊಳ್ಳುವುದು ಶ್ರೇಷ್ಠ ಕಾರ್ಯ ಜೊತೆಗೆ ಇನ್ನು ಆಡಂಬರದ ಜೀವನಕ್ಕೆ ಕಡಿವಾಣ ಹಾಕಿ ಸರಳ ರೀತಿಯಲ್ಲಿ ಹುಟ್ಟು ಹಬ್ಬವನ್ನು ಅನಾಥ ಆಶ್ರಮ, ವೃದ್ಧಾಶ್ರಮಕ್ಕೆ ಹೋಗಿ, ಅಲ್ಲಿ ಎಲ್ಲರೂ ಜೊತೆ ಸೇರಿ ಆಚರಣೆ ಮಾಡುವುದು ಒಳ್ಳೆಯದು ಹಾಗೆ ಅಲ್ಲಿಯೇ ಸಿಹಿ ಊಟ ಮಾಡಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಹಂಚಿ ಅವರೆಲ್ಲರ ಹಾರೈಕೆ - ಆಶಿರ್ವಾದ ಪಡೆಯುವುದು ಅತ್ಯುತ್ತಮ. ಇದರಿಂದ ನಮ್ಮ ನಮ್ಮಲ್ಲಿ ಒಳ್ಳೆಯ ಭಾವನಾತ್ಮಕ ಆಚಾರ ವಿಚಾರಗಳು ಬೆಳೆಯುವುದಲ್ಲದೆ, ಬೆಳೆಯುವ ಮಕ್ಕಳಿಗೆ ಅದರ ಬಗ್ಗೆ ಒಳ್ಳೆಯ ತನದ ವೈಜ್ಞಾನಿಕ ಮತ್ತು ವೈಚಾರಿಕದ ಅರಿವು ಮೂಡಿಸಿ ದಂತಾಗುತ್ತದೆ ಇವುಗಳಲ್ಲದೆ ಬಡ ಮಕ್ಕಳಿಗೆ ನೋಟ ಬುಕ್, ಹೊಸ ಬಟ್ಟೆ ಹಂಚುವುದು ಸೇರಿದಂತೆ ಇನ್ನಿತರಿಗೆ ಉಪಯೋಗ ವಾಗುವ ವಸ್ತುಗಳನ್ನು ಹಂಚುವ ಮೂಲಕ ಬಡವರ 

ಶುಭಹಾರೈಕೆಯ ಪ್ರೀತಿ ಪಡೆಯುವುದರೊಂದಿಗೆ ಮಾನವೀಯ ಮೌಲ್ಯಗಳನ್ನು ಸಾರುವ ಕೆಲಸ ಮಾಡುವುದು ಸರಿಯಾದ ವಿಧಾನ ಎಂಬ ಭಾವನೆ ನಮ್ಮದು.ಹೀಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ಜೊತೆಗೆ ಸಂತೋಷ - ಸಡಗರ ಚೈತನ್ಯದಲ್ಲಿ ತೇಲಾಡಬಹುದು.

ಈ ಕಾರಣದಿಂದ ನಾವೆಲ್ಲ ಜನಸಾಮಾನ್ಯರು ಹುಟ್ಟು ಹಬ್ಬ ಆಚರಿಸಿ ಕೊಳ್ಳಬೇಕೆಂದರೆ ಕೇಕ್ ಕತ್ತರಿಸಿ ಮೋಜು-ಮಸ್ತಿ ಮಾಡುವುದು ಬಿಟ್ಟು ಅಂದರೆ ದುಂದು ವೆಚ್ಚ ಮಾಡುವುದು ಬಿಟ್ಟು ಅಂದರೆ ಮಾಡದೆ ಅದರ ಬದಲಾಗಿ ಆ ಹಣವನ್ನು ಅವಶ್ಯವಿರುವ ವ್ಯಕ್ತಿಗಳಿಗೆ ಅಥವಾ ಅನಾಥಾಶ್ರಮಗಳಿಗೆ ಅಥವಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು. ಈ ಮೂಲಕ ಹುಟ್ಟು ಹಬ್ಬ ಆಚರಿಸಿ ಕೊಳ್ಳುವುದು ಅತ್ಯುತ್ತಮ ಹಾಗೂ ಶ್ರೇಷ್ಠ ಕೆಲಸ ಎಂಬುದು ನಾವೆಲ್ಲರೂ ತಿಳಿದುಕೊಳ್ಳುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ ಬಂಧುಗಳೆ.

ಆಶಯ ಮಾತು : ಇಂದಿನ ನಮ್ಮ ಸಮಾಜದಲ್ಲಿ ಆಡಂಬರಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ.ಹಾಗಾಗಿ ಅಡಂಬರಕ್ಕೆ ಕಡಿವಾಣ ಹಾಕುವ ಮನಸ್ಸುಗಳು ಕಡಿಮೆಯಾಗುತ್ತಿವೆ ಎಂದರೆ ತಪ್ಪಾಗಲಾರದು.ಆದ್ದರಿಂದ ಹುಟ್ಟು ಹಬ್ಬದ ನೆಪದಲ್ಲಿ ಅನವಶ್ಯಕ ದುಂದು ವೆಚ್ಚವನ್ನು ಕಡಿಮೆ ಮಾಡಿ ಅದೇ ಹಣವನ್ನು ಬಡವರಿಗೋ, ಅನಾಥಾಶ್ರಮಕ್ಕೋ  ದಾನವಾಗಿ ನೀಡಿದರೆ, ಎಷ್ಟೋ ಮಕ್ಕಳ ಒಡಲು ತುಂಬುವಂತಾದರೆ ಒಳ್ಳೆಯದಲ್ಲವೇ? 

ಇಂದಿಗೂ ಎಷ್ಟೋ ಜನರಿಗೆ ತಮ್ಮ ಹುಟ್ಟಿದ ದಿನ ಆಚರಿಸಿಕೊಳ್ಳುವುದು ಬಿಡಿ ಸರಿಯಾದ ಸೂರು ಇಲ್ಲದ ಪರಿಸ್ಥಿತಿ ಇದೆ. ಹೀಗಿರುವಾಗ ಆಡಂಬರದ, ದುಂದುವೆಚ್ಚದ ಪಾಶ್ಚಾತ್ಯ ಮಾದರಿಯ ಆಚರಣೆಯ ಬಗ್ಗೆ ನಮಗೆ ಸಮ್ಮತವಿಲ್ಲ.ಅಲ್ಲದೇ ನಾವು ತೋರಿಸುವ ಗೌರವ , ಪ್ರೀತಿ ಹಣ ಆಡಂಬರದ ಮೂಲಕ ಆಗಬಾರದಲ್ಲವೇ? ಸರಳ ಆಚರಣೆ ಮಾಡಿ, ಬಡವರಿಗೆ , ಅನಾಥರಿಗೆ , ಅಸಹಾಯಕರಿಗೆ ರೋಗಿಗಳಿಗೆ ನಮ್ಮಗೆ ಕೈಲಾದಷ್ಟು ಸಹಾಯ ಮಾಡಬಹುದಲ್ಲವೇ? ಖಂಡಿತಾ ಮಾಡಬಹುದು.ಅಲ್ಲದೇ ಜನ್ಮ ದಿನದ ಆಚರಣೆಯ ಹೆಸರಲ್ಲಿ ನಡೆಯುವ ದೊಡ್ಡ ದೊಡ್ಡ ಪಾರ್ಟಿಗಳು ಅಲ್ಲಿ ನಡೆಯುವ ಅಸಭ್ಯ ವರ್ತನೆಗಳು ಹಿತವಲ್ಲ. ಇದರಿಂದ ವ್ಯಕ್ತಿ ಹಾಗೂ ಸಮಾಜ ಇಬ್ಬರಿಗೂ ಒಳಿತಲ್ಲ.ಒಟ್ಟಾರೆಯಾಗಿ ಸರಳತೆ, ಮಾನವೀಯ ಮೌಲ್ಯ , ಸಂಸ್ಕಾರಯುತವಾಗಿ ಯಾವ ಆಚರಣೆಗಳು ನಡೆದರೂ ಅವುಗಳಿಗೆ ಗೌರವವಿರುತ್ತದೆ.ಈ ಆಚರಣೆಗಳಲ್ಲಿ ಸುಮನಸ್ಸಿರಬೇಕು ,ಸಾಮರಸ್ಯವಿರಬೇಕು.ಅಂದಾಗಲೇ ಹುಟ್ಟು ಹಬ್ಬಕ್ಕೊಂದು ಗೌರವ ಹಾಗೂ ಆಚರಿಸಿದ್ದು ಸ್ವಾರ್ಥಕವಾಗುತ್ತದೆ. ಹೀಗಾಗಿ ಹುಟ್ಟು ಹಬ್ಬದಂದು ಶುಭಾಶಯ ಹೇಳುವುದು, ಸಂತೋಷವನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮ ಹೌದು.

ಸಂತಸದ ಕ್ಷಣಗಳನ್ನು ಅನುಭವಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆಡಂಭರ,ಡಂಭಾಚಾರಕ್ಕೆ ಮನಸೋಲದೇ ಪ್ರೀತಿ, ವಿಶ್ವಾಸ,ಪರಸ್ಪರ ಗೌರವಕ್ಕೆ ಬೆಲೆಕೊಟ್ಟು ನಾವೂ ಚೆನ್ನಾಗಿರಬೇಕು ಇತರರೂ ಚೆನ್ನಾಗಿರಲಿ ಎಂಬ ಭಾವ ನಮ್ಮಲ್ಲಿ ಮೂಡುವಂತೆ ಬಾಳೋಣ, ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ ಮತ್ತು ಬೆಳೆಸಿಕೊಳ್ಳುವುದು ಉತ್ತಮ ಹಾಗೆ ಜನುಮ ದಿನದ  ಶುಭ ಸಂದರ್ಭದಲ್ಲಿ ನಮ್ಮನ್ನು ಪರರು ನೆನಪಿಸಿಕೊಳ್ಳುವಂತ ಉತ್ತಮ ಕಾರ್ಯಗಳನ್ನು ಮಾಡಿ ಹುಟ್ಟಿದ ದಿನದ ಸಾರ್ಥಕತೆಯನ್ನು ಪಡೆಯೋಣ.ಸರಳತೆ ಹಾಗೂ ಉದಾತ್ತ ಚಿಂತನೆಗಳು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ನಡಿಯೋಣ.

-ಸಂಗಮೇಶ ಎನ್ ಜವಾದಿ, ಕೊಡಂಬಲ. ಬೀದರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ