ಹುಡುಕಾಟ

ಹುಡುಕಾಟ

ಬರಹ

ಹುಡುಕಾಟ

ಕಪ್ಪು ಕತ್ತಲಲಿ, ಗೊಂಡಾರಣ್ಯದಲಿ, ಬಾಳ ಬೆಳಕಿನ ಹುಡುಕಾಟ
ರವಿಯೇ ಬರಲೊಲ್ಲೆ ಎನುತಿರೆ, ನಾ ಬಿಡಲಾರೆ ನನ್ನ ತಿಣುಕಾಟ
ಕಲ್ಲು ಮುಳ್ಳೆನದೆ, ಹಳ್ಳ ದಿಣ್ಣೆ ಎನದೆ, ನಾ ಸಾಗುತಿರೆ ಗುರಿಯತ್ತ ಭರದಿ
ಮೂರ್ಖತನ ಎನಬೇಡ ನಂಬಿಕೆಯಿದೆ, ನಾನೊಬ್ಬ ಆಶಾವಾದಿ

ಮಿಂಚುಹುಳದ ಬೆಳಕ ನಿರ್ಲಕ್ಷಿಸಲಾರೆ
ನನ್ನ ದೀಪದ ಹುಡುಕಾಟವ ನಿಲ್ಲಿಸಲಾರೆ
ಮುನ್ನುಗ್ಗುವೆ ನಾ, ಕಗ್ಗತ್ತಲ ಸೀಳಿ ಹಾಲೆರೆವ ಸೂರ್ಯಕಿರಣದ ತೆರದಿ
ಆಸೆಬುರುಕ ಅಂತೆನಬೇಡ ಭರವಸೆಯಿದೆ, ನಾನೊಬ್ಬ ಛಲವಾದಿ

ಎಣ್ಣೆ ಆರುವ ಮುಂಚೆ ಬೆಳಕ ಕಾಣುವ ತುಡಿತ
ಸೆಳೆಗೆ ಸಿಲುಕುವ ಮೊದಲೆ ದಡವ ಸೇರುವ ಮಿಡಿತ
ಬಾನಿಗೆಲ್ಲೆ ಇಲ್ಲದಿರಬಹುದು, ಭೂಮಿಗಿಲ್ಲವೆ ಪರಿದಿ!
ಕಾಣದ ಕೈಯ ಮೀರಿ ನಡೆವ ಹುಂಬನೆನಬೇಡ, ನಾನೊಬ್ಬ ಸ್ಥಿರವಾದಿ