ಹುಡುಕಾಟ
ಜೀವನವು ಹುಡುಕಾಟದ ಆಡುಂಬೊಲ. ಪ್ರತಿಯೊಬ್ಬರೂ ಹುಡುಕಾಡುತ್ತಲೇ ಇರುವರು. ಹುಡುಕಾಟಕ್ಕೆ ಅಂತ್ಯವಿಲ್ಲ. ಉಸಿರಿರುವ ತನಕವೂ ಹುಡುಕಾಟ, ಕೈಗೆಟುಕದಾದಾಗ ತಡಕಾಟ ಸಹಜ. ವಿವಾಹಕ್ಕೆ ಹೆತ್ತವರು ಗಂಡು ಯಾ ಹೆಣ್ಣುಗಳನ್ನು ಹುಡುಕಾಡುತ್ತಾರೆ. ವಿವಾಹ ಕೂಡಿ ಬಂದರೆ ಕಲ್ಯಾಣ ಮಂಟಪ, ಮುಹೂರ್ತ ಗೊತ್ತು ಮಾಡಲು ಜ್ಯೋತಿಷಿ, ಮದುವೆಗೆ ಒಡವೆ, ದಿರಿಸು, ಅಡುಗೆಯವರು, ಬೆಳಕಿನ ವ್ಯವಸ್ಥೆ, ವಾಹನ ಜೋಡಣೆ, ಆಮಂತ್ರಣ ಮುದ್ರಣಾಲಯ, ಛಾಯಾ ಚಿತ್ರಗ್ರಾಹಕರು, ಸಹಾಯಕರು ಹೀಗೆ ಹಲವರ ಮತ್ತು ಹಲವುಗಳ ಹುಡುಕಾಟ ನಡೆಯುತ್ತದೆ. ವಿವಾಹಾ ನಂತರವೂ ನಾನಾ ಕಾರಣಗಳಿಗೆ ಹುಡುಕಾಟ ಇದ್ದೇ ಇರುತ್ತದೆ. ಅಗತ್ಯಗಳ ಪೂರೈಕೆಯಾಗಲು ಹುಡುಕಾಟ ಇರಲೇ ಬೇಕು ತಾನೇ?
ಹೆಂಡತಿ ಗರ್ಭಿಣಿಯಾದಳು. ಅವಳ ಆರೋಗ್ಯದ ಮೇಲೆ ನಿಗಾ ನೀಡುವವರ ಹುಡುಕಾಟ ಆರಂಭವಾಗುತ್ತದೆ. ದಾದಿ ಮತ್ತು ವೈದ್ಯರನ್ನು ಹುಡುಕಾಡಿ ಹೆಂಡತಿಯ ಆರೋಗ್ಯ ಉಸ್ತುವಾರಿಗೆ ಜೋಡಿಸಲಾಗುತ್ತದೆ. ಹೆರಿಗೆಯ ನಂತರ ಹೆಸರಿನ ಹುಡುಕಾಟ ನಡೆಯುತ್ತದೆ. ಶೈಶವದಿಂದ ಬಾಲ್ಯಕ್ಕೆ ಕಾಲಿಡುತ್ತಿದ್ದಂತೆ ಮಗುವಿನ ಶಿಕ್ಷಣದ ಬಗ್ಗೆ ಶಿಕ್ಷಣ ಸಂಸ್ಥೆಗಳ ಹುಡುಕಾಟ ನಡೆದೇ ನಡೆಯುತ್ತದೆ. ಶಾಲಾ ಶಿಕ್ಷಣ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಹುಡುಕಾಟದ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಆದರೆ ಕಲಿಕೆಯ ಮತ್ತು ಕೌಶಲ್ಯಗಳ ವರ್ಧನೆ ಹುಡುಕಾಟದಿಂದ ಫಲಿಸದು. ಯೋಗ(ಅದೃಷ್ಟ), ಆರೋಗ್ಯ ಮತ್ತು ಭಗವದನುಗ್ರಹದೊಂದಿಗೆ ಅವಿರತ ಪ್ರಯತ್ನ ಬೇಕೇ ಬೇಕು. ಇವನ್ನು ಹುಡುಕಿ ತರುವುದಾದರೂ ಎಲ್ಲಿಂದ? ಮತ್ತು ಹೇಗೆ? ಹುಡುಕಿದಾಗ ಕಾಣಿಸುತ್ತವೆ ಖಂಡಿತ. ಆದರೆ ಅವು ಕರಗತವಾಗಲು ಪರಿಶ್ರಮವನ್ನೂ ಹುಡುಕಾಟ ಮಾಡಿ ಪಡೆಯಲಾಗದು. ಅದು ಸ್ವಯಂ ಸಿದ್ಧಿಯೇ ಹೊರತು ಮಾರುಕಟ್ಟೆಯಲ್ಲಿ ಸಿಗದು.
ದೇಶದ ಮೊದಲ ಗೌರವ ರೈತನಿಗೆ ಸಲ್ಲುತ್ತದೆ. ರೈತರಲ್ಲಿ ಭತ್ತ ಬೆಳೆಯುವವರು, ತರಕಾರಿ ಬೆಳೆಯುವವರು, ಹಣ್ಣು ಹಂಪಲು ಬೆಳೆಯುವವರು, ಹೈನುಗಾರಿಕೆಯವರು ಹೀಗೆ ಹಲವು ವರ್ಗದವರು ಸೇರುತ್ತಾರೆ. ಅವರಿಂದಲೂ ತಮಗೆ ಸೂಕ್ತವಾದ ಪರಿಸರಗಳ ಹುಡುಕಾಟ ನಡೆಯುತ್ತದೆ. ನೀರಿನ ಹುಡುಕಾಟ, ರಸಗೊಬ್ಬರದ ಹುಡುಕಾಟ, ಕಾರ್ಮಿಕರ ಹುಡುಕಾಟ, ಯಂತ್ರತಂತ್ರಗಳ ಹುಡುಕಾಟ, ಸಲಹೆಗಾರರ ಹುಡುಕಾಟ, ಪರಿಕರಗಳ ಹುಡುಕಾಟ ಇತ್ಯಾದಿ ನಡೆಯಲೇ ಬೇಕು. ಆದರೆ ಫಲ ಹುಡುಕಾಟದಿಂದ ಒದಗದು. ಸ್ವಚಿಂತನೆ, ಭಗವದನುಗ್ರಹ ಮತ್ತು ಸ್ವಪ್ರಯತ್ನಗಳು ಇವೆಲ್ಲದರ ಜೊತೆಗೆ ಸಂಯೋಗವಾಗಬೇಕು.
ಯಾವುದೇ ವೃತ್ತಿ ಕೌಶಲ್ಯ ಪಡೆದವರು ಅವರ ಜ್ಞಾನ ಮತ್ತು ದೈಹಿಕ ಶಕ್ತಿಗೆ ಪೂರಕವಾದ ಉದ್ಯೋಗಗಳನ್ನು ಹುಡುಕಾಡುತ್ತಾರೆ. ಸ್ವಯಂ ಉದ್ಯೋಗ ಮಾಡುವವರು ಹಣಕಾಸಿನ ನೆರವಿಗೆ ಹುಡುಕಾಡುತ್ತಾರೆ. ಯೋಗ್ಯ ಕಟ್ಟಡ ಮತ್ತು ಜಮೀನು ಹುಡುಕಾಡುವರು. ಎಲ್ಲವೂ ಸಂಪನ್ನವಾದರೆ ಸಿದ್ಧತೆಗಳಿಗಾಗಿ ಹುಡುಕಾಟವಿರುತ್ತದೆ. ಶ್ರಮಿಕರ ಮತ್ತು ಮಾರುಕಟ್ಟೆದಾರರು ಹಾಗೂ ಗ್ರಾಹಕರ ಹುಡುಕಾಟವೂ ಬೇಕು. ಆದರೆ ಸ್ವದ್ಯೋಗದಿಂದ ಉತ್ತಮ ಪ್ರತಿಫಲವು ಪ್ರಾಮಾಣಿಕ ಪ್ರಯತ್ನದ ತಳಹದಿಯಲ್ಲೇ ಇರುತ್ತದೆ.
ಸಮುದ್ರದಲ್ಲಿ ಮೀನು ಹಿಡಿಯುವ ಬೆಸ್ತರ ಬದುಕನ್ನು ಗಮನಿಸೋಣ. ಯಾಂತ್ರೀಕೃತ ದೋಣಿ, ಕುಶಲ ಕೆಲಸಗಾರರು, ಮೀನು ಹಿಡಿಯುವ ಬಲೆಗಳು, ಬಲೆಯೊಳಗೆ ಮೀನು ಬೀಳಿಸುವ ತಂತ್ರಗಾರರು, ಮೂಲ ಬಂಡವಾಳ, ದೋಣಿಯ ಚಾಲಕರು ಎಲ್ಲರನ್ನೂ ಹುಡುಕಿ ಪಡೆಯಬಹುದು. ಮೀನು ಹೆಚ್ಚು ಸಿಗುವ ಪ್ರದೇಶವನ್ನೂ ಹುಡುಕಿ ತೆಗೆಯಬಹುದು. ಆದರೆ ಮೀನು ಬಲೆಗೆ ಬೀಳಲು ದೇವರ ಕರುಣೆ, ಬೆವರಿಳಿಯುವ ಸಾಮೂಹಿಕ ಪರಿಶ್ರಮ ಬೇಕಲ್ಲವೇ? ಹಿಡಿದ ಮೀನು ಮನೆ ಮನೆ ಸೇರಲು ಅಲ್ಲಿಯೂ ಹುಡುಕಾಟ ಮತ್ತು ಪ್ರಯತ್ನಗಳು ಬೇಕೇ ಬೇಕು,
ಭೂಮಿಯೊಳಗೆ ಇರುವ ನಾನಾ ಖನಿಜಗಳ ಹುಡುಕಾಟ ನಿರಂತರ ನಡೆಯುತ್ತಿರುತ್ತವೆ. ಆ ಖನಿಜಗಳು ಸಂಸ್ಕರಣೆಗೊಳಗಾಗಿ ಬದುಕಿಗೆ ಪೂರಕವಾದ ನಾನಾ ಉಪಯುಕ್ತ ಕ್ಷೇತ್ರಗಳನ್ನು ತಲುಪಲು ಹಣವನ್ನು ಎಲ್ಲಿಂದಲೂ ಹುಡುಕಿ ಹೊಂದಿಸಬಹುದು, ಆದರೆ ಪರಿಶ್ರಮ ಮಾತ್ರ ಹುಡುಕಾಟದಲ್ಲಿ ಒದಗದು. ಶ್ರಮದ ಸಿದ್ಧಿಯಾಗಬೇಕು.
ಆಳವಾದ ಯೋಚನೆಯಲ್ಲಿ ತೊಡಗಿದಾಗ ನಮಗನಿಸುವುದು ಹುಡುಕಾಟ ಸುಲಭ. ಹುಡುಕಾಡಿದ್ದು ನಮಗೆ ಅನುಕೂಲಕರವಾಗಿ ರೂಪಂತರವಾಗಲು ಪರಿಶ್ರಮ ಅತ್ಯಗತ್ಯ. ವಿದ್ಯಾರ್ಥಿಯು ತನ್ನ ಕಲಿಕೆಗೆ ಪುಸ್ತಕಗಳನ್ನು, ಸಾಹಿತ್ಯಗಳನ್ನು, ಅನುಕೂಲಕಾರರನ್ನು, ಸಮಯವನ್ನು, ಸ್ಥಳವನ್ನು ಹೀಗೆ ಪ್ರತಿಯೊಂದನ್ನು ಹುಡುಕಿ ಪಡೆಯಬಹುದು. ಆದರೆ ವಿದ್ಯೆ ಇಷ್ಟರಿಂದ ಮಾತ್ರ ಮಸ್ತಕ ಸೇರದು. ಪ್ರಯತ್ನ ಹೊರತು ವಿದ್ಯೆ ನಮಗೆ ಮೈಗೂಡದು. ಪ್ರಯತ್ನ ಮಾಡುವ ಮನೋಗುಣ ಇಲ್ಲದವರು ಯಾವುದನ್ನು ಹುಡುಕಿಕೊಂಡರೂ ಅದು ಕರಗತವಾಗದು. ಹುಡುಕಾಟ ಮತ್ತು ಪ್ರಯತ್ನ ಎರಡೂ ಅಗತ್ಯವಿದೆ. ಜೊತೆಗೆ ಹಿರಿಯರ ಆಶೀರ್ವಾದ ಮತ್ತು ದೇವ ಕೃಪೆಯೂ ಬೇಕಲ್ಲವೇ? ಹುಡುಕಾಟ ಹುಡುಗಾಟವಾಗಬಾರದು.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ