ಹುಡುಗಿ - ಹೆಣ್ಣು - ನಾರಿ - ಮಹಿಳೆ - ಸ್ತ್ರೀ - ಸುತ್ತಲೂ ಒಂದು ಕೋಟೆ ! (ಭಾಗ 1)

ಹುಡುಗಿ - ಹೆಣ್ಣು - ನಾರಿ - ಮಹಿಳೆ - ಸ್ತ್ರೀ - ಸುತ್ತಲೂ ಒಂದು ಕೋಟೆ ! (ಭಾಗ 1)

ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ… ಮಾರ್ಚ್ 8.

ಹೆಣ್ಣೆಂದರೆ ಪ್ರಕೃತಿಯಲ್ಲ,

ಹೆಣ್ಣೆಂದರೆ ಸೌಂದರ್ಯವಲ್ಲ,

ಹೆಣ್ಣೆಂದರೆ ಮಮತೆಯಲ್ಲ,

ಹೆಣ್ಣೆಂದರೆ ಪೂಜ್ಯಳಲ್ಲ,.....

 

ಹೆಣ್ಣೆಂದರೆ ಅಬಲೆಯಲ್ಲ,

ಹೆಣ್ಣೆಂದರೆ ಸಹನಾಮೂರ್ತಿಯಲ್ಲ,

ಹೆಣ್ಣೆಂದರೆ ದೇವತೆಯಲ್ಲ,

ಹೆಣ್ಣೆಂದರೆ ಭೋಗದ ವಸ್ತುವಲ್ಲ,....

 

ಹೆಣ್ಣಿರುವುದು ಗಂಡಿಗಾಗಿಯೇ ಅಲ್ಲ,

ಹೆಣ್ಣೆಂದರೆ ನಮ್ಮ ನಿಮ್ಮಂತೆ ಒಂದು ಜೀವಿ ಅಷ್ಟೆ.

 

ನೀನು ತಂದೆ ಅವಳು ತಾಯಿ, 

ನೀನು ಅಣ್ಣ ಅವಳು ಅಕ್ಕ,

ನೀನು ಗಂಡ ಅವಳು ಹೆಂಡತಿ, 

ನೀನು ತಮ್ಮ ಅವಳು ತಂಗಿ, ನೀನು ಅಳಿಯ ಅವಳು ಸೊಸೆ ಅಷ್ಟೆ.

ನಿನ್ನಂತೆ ಅವಳೂ ಒಳ್ಳೆಯವಳು, 

ನಿನ್ನಂತೆ ಅವಳೂ ಮೋಸಗಾತಿ,

ನಿನ್ನಂತೆ ಅವಳೂ ತ್ಯಾಗಜೀವಿ, 

ನಿನ್ನಂತೆ ಅವಳೂ ಕೊಲೆಗಡುಕಿ......

 

ಕಿತ್ತೊಗೆ ನಿನ್ನ ಭ್ರಮೆಯನ್ನು, 

ಅವಳೇನು ನಿಮ್ಮಪ್ಪನ ಆಸ್ತಿಯಲ್ಲ,

ಅವಳೂ ನಿನ್ನಂತೆ ಸೃಷ್ಟಿಯ ಕೂಸು,

ನೀನೂ ಪವಿತ್ರನಲ್ಲ ಅವಳೂ ಪವಿತ್ರಳಲ್ಲ.

15 ರ ಕನ್ಯತ್ವ ಅವಳಿಗೂ ಇದೆ, 

15 ರ ಪುರುಷತ್ವ ನಿನಗೂ ಇದೆ,

ಅದು ಪ್ರಕೃತಿಯ ನಿಯಮ, 

ಬಿಡು ಕೊಂಕು ನುಡಿಯುವುದನ್ನು..

ನಿನ್ನಂತೆ ಅವಳದೂ ಜೇನಿನ ತುಟಿ, ನಿನ್ನಂತೆ ಅವಳಿಗೂ ಅಸಿಡಿಟಿ,

ಜೀವಗಳ ಮುಂದುವರಿಕೆಗಾಗಿ ಇರುವ ಸಣ್ಣ ದೈಹಿಕ ಭಿನ್ನತೆಗೆ

ಪಾವಿತ್ರ್ಯತೆಯ ಮುಖವಾಡವೇಕೆ ಗೊಣಗಾಟವೇಕೆ........

 

ಅವಳಿಗೆ ಬೇಕಿರುವುದು ತೋರಿಕೆಯ ಗೌರವವಲ್ಲ, 

ನಿನ್ನ ಸಹಾನುಭೂತಿಯಲ್ಲ,

ಗೌರವ ಎಲ್ಲರಿಗೂ ಒಂದೇ. 

ಅದು ಕೊಟ್ಟು ತೆಗೆದುಕೊಳ್ಳುವ ಕ್ರಿಯೆ

ಅದರಲ್ಲಿ ವಿಶೇಷವೇನಿಲ್ಲ.

ಸಮಾನತೆ, ಸ್ವಾತಂತ್ರ್ಯ ಆಕೆಯ ಇಂದಿನ ಅವಶ್ಯಕತೆ,

ಅದಿಲ್ಲದೆ ಇನ್ನೆಲ್ಲವೂ ನಿನ್ನ ಬೂಟಾಟಿಕೆಗಳೇ...

ಬಿಟ್ಟುಬಿಡು ವ್ಯಂಗ್ಯ ನುಡಿಯುವುದನ್ನು,

ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು,..

ಅವಳು ಶೀಲವೂ ಅಲ್ಲ, 

ಅಶ್ಲೀಲವೂ ಅಲ್ಲ,

ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಒಬ್ಬಳಷ್ಟೆ.

ಪ್ರೀತಿ ಪ್ರೇಮ ಪ್ರಣಯ ಸಂಸಾರ ಜಗಳ ಗುದ್ದಾಟ,

ಎಲ್ಲವೂ ನಡೆಯಲಿ ಸಮಾನತೆಯ ನೆಲೆಯಲ್ಲಿ,

ಲಿಂಗಭೇದವಿಲ್ಲದ ಸ್ವಾತಂತ್ರ್ಯದ ಪರಿಸರದಲ್ಲಿ.

ಇಡೀ ವಿಶ್ವದಲ್ಲಿಯೇ ಮಹಿಳೆಯರು ಎಂಬ ಸಮುದಾಯ ತನ್ನೊಳಗೆ ಮತ್ತು ಹೊರಗೆ ಹೆಚ್ಚು ಗೊಂದಲಕ್ಕೆ ಒಳಗಾಗಿರುವುದು ಭಾರತದ ಸಾಂಸ್ಕೃತಿಕ ವಾತಾವರಣದಲ್ಲಿ ಎಂಬುದು ವಾಸ್ತವಿಕ ಸತ್ಯ.

ಪಾಶ್ಚಾತ್ಯ ಸಾಂಸ್ಕೃತಿಕ ವಾತಾವರಣದಲ್ಲಿ ಬಹುಮಟ್ಟಿಗೆ ಮಹಿಳೆಯರ ಸ್ವಾತಂತ್ರ್ಯ ಸಮಾನತೆ ಸಾಧ್ಯವಾಗಿದೆ. ಮಧ್ಯಪ್ರಾಚ್ಯದ ಇಸ್ಲಾಮಿಕ್ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಷರಿಯತ್ ನಿಯಮದ ಅಡಿಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ ಮತ್ತು ಒಪ್ಪಿಕೊಳ್ಳಲಾಗಿದೆ. ತೀರಾ ಅಪರೂಪಕ್ಕೆ ಈ ಸಂಸ್ಕೃತಿಗಳಲ್ಲಿ ಕೆಲವೊಮ್ಮೆ ಸಂಘರ್ಷ - ಹೋರಾಟ ನಡೆಯುತ್ತದೆ.

ಆದರೆ ಭಾರತದ ವೈವಿಧ್ಯಮಯ ಸಮಾಜದಲ್ಲಿ ಹೆಣ್ಣು ಭಾವನಾತ್ಮಕವಾಗಿ ಹೆಚ್ಚು ಪೂಜನೀಯಳು ಹೌದು ಹಾಗೆಯೇ ಹೆಚ್ಚು ಶೋಷಿತಳು ಹೌದು. ಇಲ್ಲಿ ಹೆಣ್ಣು ಆಂತರ್ಯದ ತುಮಲಗಳ ಜೊತೆಗೆ ಹೋರಾಡುತ್ತಾ ಪುರುಷ ಸಮಾಜದ ಬಾಹ್ಯ ಪ್ರತಿಕ್ರಿಯೆಗಳ ಜೊತೆ ಸಹ ಸಂಘರ್ಷ ಮಾಡುವ ತಲ್ಲಣಗಳ ವಿಚಿತ್ರ ಪರಿಸ್ಥಿತಿಯಲ್ಲಿ ಬದುಕಬೇಕಾಗಿದೆ. ಇಲ್ಲಿನ ಸನ್ನಿವೇಶ ಹೇಗಿದೆಯೆಂದರೆ ಹೆಣ್ಣು ತನ್ನ ಅರಿವಿನಾಳದಲ್ಲಿ ತಾನು ಮಾತ್ರ ಜ಼್ಞಾನದ ಬಲದಿಂದ ಬದಲಾಗಲು ಸಾಧ್ಯವಿಲ್ಲ. ಆಕೆ ತನ್ನ ಬದಲಾವಣೆಯ ಜೊತೆ ತನ್ನವರು ಮತ್ತು ತನ್ನ ಸುತ್ತಮುತ್ತಲಿನವರ ಬದಲಾವಣೆಗೂ ಕಾರಣವಾಗಬೇಕು. ಇಲ್ಲದಿದ್ದರೆ ಆಕೆಯ ಬದಲಾವಣೆಗಳನ್ನು ಸಮಾಜ ಒಪ್ಪದೆ ಆಕೆಯನ್ನು ಮತ್ತಷ್ಟು ಮಾನಸಿಕ ಹಿಂಸೆಗೆ ತಳ್ಳುವ ಅಪಾಯವೂ ಇದೆ.

ಹೆಣ್ಣಿನ ಅನೇಕ ಸಹಜ ನಡವಳಿಕೆಗಳು ಪುರುಷರಿಗೆ ಸ್ವೇಚ್ಛೆಯಾಗಿ ಕಾಣುತ್ತದೆ. ಅತಿರೇಕದ ಸ್ವಾತಂತ್ರ್ಯದಂತೆ ಭಾಸವಾಗುತ್ತದೆ. ಅದನ್ನು ಮೀರುವ ಸವಾಲು ಸಹ ಮಹಿಳೆಯರಿಗಿದೆ. ಜಾಗತೀಕರಣದ ನಂತರ ಮೇಲ್ನೋಟಕ್ಕೆ ಭಾರತದ ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿಯ ಹಾದಿಯಲ್ಲಿ ಇರುವಂತೆ ಕಾಣುತ್ತಿದೆ. ಆದರೆ ಶೋಷಣೆಯ ರೂಪ ಬದಲಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುತ್ತದೆ.

ವಸ್ತು -  ವಸ್ತ್ರಗಳ ವಿಷಯದಲ್ಲಿ ಆಧುನಿಕವಾದಷ್ಟು ಮನಸ್ಸುಗಳು ಆಧುನಿಕವಾಗಿಲ್ಲ. ಸಾಂಪ್ರದಾಯಿಕ ಬದುಕಿನ ಬಗ್ಗೆ ಮೋಹವಿರುವ ಸಾಕಷ್ಟು ಪುರುಷರು ಮಹಿಳೆಯರ ಸ್ವಾತಂತ್ರ್ಯವನ್ನು ಒಪ್ಪುತ್ತಿಲ್ಲ. ಅವಕಾಶ ಸಿಕ್ಕಾಗ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ಅದನ್ನು ಪ್ರಯೋಗ ಮಾಡುತ್ತಲೇ ಇದ್ದಾರೆ. ನೈತಿಕ ಮಾನದಂಡಗಳು ಪುರುಷ ಪಕ್ಷಪಾತಿಯಾಗಿ ಅದೇ ಮಾನದಂಡಗಳು ಮಹಿಳೆಯರಿಗೆ ಅವಮಾನ ಮತ್ತು ಅನುಮಾನದ ಪಟ್ಟ ಕಟ್ಟುತ್ತಿರುವುದು ವಿಷಾದನೀಯ. ಮಹಿಳೆಯರ ಸಾಂಸ್ಕೃತಿಕ ನೆಲೆಗಳು ವಿಸ್ತರವಾಗದಿರಲು ಮತ್ತು ಬೆಳವಣಿಗೆ ಹೊಂದದಿರಲು ಬಹುದೊಡ್ಡ ಅಡ್ಡಿ ಇದೇ ಆಗಿದೆ.

(ಇನ್ನೂ ಇದೆ)

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ