ಹುಣಸೆ ಬೀಜದಿಂದ ಪ್ರಯೋಜನಗಳು

ಹುಣಸೆ ಬೀಜದಿಂದ ಪ್ರಯೋಜನಗಳು

ಹುಣಸೆ ಹುಳಿ ಎಂದಾಗ ಗ್ರಾಮೀಣ ಮಕ್ಕಳ ಬಾಯಿಯಲ್ಲಿ ನೀರೂರುವುದು ಸಹಜ. ಹುಣಸೆ ಮರದ ಕೆಳಗೆ ಬಿದ್ದಿರುವ ಹುಣಸೆ ಹಣ್ಣನ್ನು ಬಾಯಿಯಲ್ಲಿ ಹಾಕಿ ಚೀಪುವುದೇ ಒಂದು ರೀತಿಯ ಮಜಾ. ಕಾಯಿ ಹುಣಸೆ, ಸ್ವಲ್ಪ ಹಣ್ಣಾದ ಹುಣಸೆ ಮತ್ತು ಹಣ್ಣಾಗಿ (ಮಾಗಿ) ಉದುರಿ ಕೆಳಕ್ಕೆ ಬಿದ್ದ ಹುಣಸೆ ಹುಳಿಯನ್ನು ತಿನ್ನುವುದು ಗ್ರಾಮೀಣ ಭಾಗದ ಮಕ್ಕಳ ಆಟದ ಭಾಗವೇ ಆಗಿರುತ್ತದೆ. ಪೇಟೆಯಲ್ಲಿ ಹುಣಸೆ ಮರಗಳು ಕಡಿಮೆ. ಹುಣಸೆ ಹಣ್ಣನ್ನು ಅಡುಗೆಗೆ ಬಳಸುವವರ ಸಂಖ್ಯೆಯೂ ಕಡಿಮೆಯಾಗತೊಡಗಿದೆ. ನಗರದ ಮಕ್ಕಳೂ ಹುಣಸೆ ಹುಳಿಯ ಸ್ವಾದವನ್ನು ಅನುಭವಿಸಿರಲಿಕ್ಕಿಲ್ಲ. 

ಹುಣಸೆ ಹಣ್ಣನ್ನು ತೆಗೆದ ಬಳಿಕ ಉಳಿಯುವ ಬೀಜವನ್ನು ಮಕ್ಕಳು ಒಲೆಯಲ್ಲಿ ಸುಟ್ಟು ತಿನ್ನುವುದಿದೆ. ‘ಪುಲಕಟ್ಟೆ ಅಥವಾ ಪುಲ್ಕಟ್ಟೆ’ ಎಂದು ತುಳು ಭಾಷೆಯಲ್ಲಿ ಕರೆಯಲಾಗುವ ಈ ಬೀಜವನ್ನು ಬಹಳಷ್ಟು ಮಂದಿ ಚಪ್ಪರಿಸಿ ತಿನ್ನುತ್ತಾರೆ. ಹುರಿದರೂ ಗಟ್ಟಿಯಾಗಿಯೇ ಇರುವ ಈ ಬೀಜ ಬಾಯಿಯ ಲಾವಾರಸದೊಂದಿಗೆ ಬೆರೆತು ಮೆದುವಾಗಿ ಒಂದು ರೀತಿಯ ಸ್ವಾದವನ್ನು ನೀಡುತ್ತದೆ. ಇದಕ್ಕಾಗಿ ಈ ಹುಣಸೆ ಬೀಜಗಳನ್ನು ಸಂಗ್ರಹಿಸಿಕೊಳ್ಳುವವರಿದ್ದಾರೆ. ಹುಣಸೆ ಹಣ್ಣಿನಲ್ಲಿ ಇರುವಷ್ಟೇ ಔಷಧೀಯ ಗುಣಗಳು ಅದರ ಬೀಜದಲ್ಲೂ ಇವೆ.

ಹುಣಸೆ ಬೀಜದಲ್ಲಿ ರಂಜಕ, ಮೆಗ್ನೀಶಿಯಂ, ವಿಟಮಿನ್ ಸಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಅಮೀನೋ ಆಮ್ಲಗಳಿವೆ. ಹುಣಸೆ ಬೀಜದ ಬಣ್ಣ ಕೆಂಪು, ಕಂದು ಮಿಶ್ರಿತ ಕಪ್ಪು ಬಣ್ಣದ್ದಾಗಿದ್ದು ಅದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಉತ್ತಮ ಎಂದು ಸಾಬೀತಾಗಿದೆ. ಕರುಳು ಮತ್ತು ಮೂತ್ರಕೋಶದ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳಿಂದ ಇದು ನಮ್ಮನ್ನು ರಕ್ಷಿಸುತ್ತದೆ. ಹುಣಸೆ ಬೀಜದ ಇನ್ನಷ್ಟು ಪ್ರಯೋಜನಗಳೆಂದರೆ…

* ಹುಣಸೆ ಬೀಜದ ಹೊರಗಿನ ಕೆಂಪು ಸಿಪ್ಪೆ ಭೇದಿ ಮತ್ತು ಅತಿಸಾರವನ್ನು ನಿವಾರಿಸುತ್ತದೆ.

* ಹುಣಸೆ ಬೀಜದಲ್ಲಿ ಪ್ರತಿರೋಧಕ ಶಕ್ತಿ ಅಧಿಕಗೊಳಿಸುವ ಗುಣಗಳಿವೆ. ನಿಯಮಿತವಾಗಿ ಹುಣಸೆ ಬೀಜಗಳನ್ನು ಸೇವನೆ ಮಾಡುವುದರಿಂದ ಹಲವಾರು ರೋಗಗಳು ಬರುವ ಮೊದಲೇ ಅದನ್ನು ತಡೆಗಟ್ಟಬಹುದು.

* ಹುಣಸೆ ಬೀಜದ ಹುಡಿಯು ಎಲ್ಲಾ ರೀತಿಯ ದಂತ ಸಮಸ್ಯೆಗಳನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ಧೂಮಪಾನಿಗಳ ಹಲ್ಲಿನಲ್ಲಿರುವ ನಿಕೋಟಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

* ಹುಣಸೆ ಬೀಜದ ಸಾರದಲ್ಲಿರುವ ಕ್ಸಯೋಗ್ಲ್ಯ ಕ್ಯಾನ್ ಎನ್ನುವ ಅಂಶವನ್ನು ಸೌಂದರ್ಯವರ್ಧಕ ಮತ್ತು ಕೆಲವು ಔಷಧೀಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

* ಹುಣಸೆ ಬೀಜದಲ್ಲಿರುವ ಪೊಟಾಶಿಯಂ ಅಂಶವು ಅಧಿಕ ರಕ್ತದೊತ್ತಡ ಮತ್ತು ಹೃದಯ ರೋಗಿಗಳಿಗೆ ಉತ್ತಮವೆಂದು ಹೇಳಲಾಗುತ್ತದೆ.

* ಹುಣಸೆ ಬೀಜದ ಹುಡಿಯನ್ನು ನೀವು ಶುಂಠಿ ಮತ್ತು ದಾಲ್ಚಿನ್ನಿ ಜತೆಗೆ ಮಿಶ್ರಣ ಮಾಡಿಕೊಂಡು ಸೇವನೆ ಮಾಡಿದರೆ ಶೀತ, ಕೆಮ್ಮು, ನೆಗಡಿ ಮತ್ತು ಟಾನ್ಸಿಲ್ ನಂತಹ ಗಂಟಲಿನ ಸಮಸ್ಯೆ ಪರಿಹಾರವಾಗುತ್ತದೆ.

* ಹುಣಸೆ ಹಣ್ಣಿನ ಅಂಟಿನ ಜ್ಯೂಸ್ ನಿಂದ ಕರುಳಿನ ಕ್ಯಾನ್ಸರ್ ತಡೆಗಟ್ಟಬಹುದು.

* ಹುಣಸೆ ಬೀಜಗಳು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶದ ಗಾತ್ರವನ್ನು ಹಿಗ್ಗಿಸಿ ಮೆದೋಜಿರಕ ಗ್ರಂಥಿಯನ್ನು ಪ್ರಚೋದಿಸುತ್ತದೆ.

* ಹುಣಸೆ ಬೀಜದಲ್ಲಿ ಕೊಬ್ಬಿನಂಶ (ಕೊಲೆಸ್ಟ್ರಾಲ್) ಕಡಿಮೆ ಇದ್ದು, ನಾರಿನಂಶ ಇರುತ್ತದೆ. ಈ ಕಾರಣದಿಂದ ನಮ್ಮ ಜೀರ್ಣಶಕ್ತಿ ಹೆಚ್ಚಾಗಲಿದ್ದು ಆರೋಗ್ಯ ಸುಧಾರಣೆಯಾಗುತ್ತದೆ. ನೈಸರ್ಗಿಕವಾಗಿ ಹಸಿವುಂಟಾಗುತ್ತದೆ. ಮಲಬದ್ಧತೆಯನ್ನು ನಿವಾರಣೆ ಮಾಡುವಲ್ಲಿಯೂ ಹುಣಸೆ ಬೀಜ ಸಹಕಾರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ