ಹುಣ್ಣಿಮೆಯ ರಾತ್ರಿಯಲಿ..............

ಹುಣ್ಣಿಮೆಯ ರಾತ್ರಿಯಲಿ..............

ಕವನ

 
 
 
 
 
 
 
 
 
 
 
 
 
 
 
 

 

 

 

 

 

 

ಹೊರಟೆ ಎಲ್ಲಿಗೆ ನೀನು, ಓ ಚಂದಿರ!
ಇಂದಿನೀ ಇರುಳಲ್ಲಿ ಎನ್ನ ಬಗೆಯನು ಕದಡಿ!
ಗಾಢಾಂಧಕಾರದಲಿ ನಾ ಮರುಗುತಿದ್ದೆನಂದು,
ಎನ್ನ ಹೊಂಗನಸುಗಳು ನನಸಾಗಲಿಲ್ಲವೆಂದು,
ಆಗ ಬಂದವನು ನೀನಲ್ಲವೆ, ಬಂದು ಹೃದಯಕೆ ತಂಪೆರೆಯಲಿಲ್ಲವೆ!
 
ಬೇಗನೇ ಬಂದೆ, ಬೆಳಕನ್ನು ತಂದೆ,
ಮನದ ದುಗುಡವನು ದೂರ ಮಾಡಿದೆ.
ಎಷ್ಟು ಹಿತವೋ ಆ ನಿನ್ನ ಶ್ವೇತ ಕಿರಣಗಳು,
ಮೊಗದಲ್ಲಿ ಮೂಡಿಸಿತು ಸಂತಸದ ಮುಗುಳು.
ಮುಗುಳು ನಗೆ ನಗುತಾ ನಿಂತಿರಲು ನಾನು, ಮುಳುಗುವಾ ಸನ್ನಾಹ ತೋರಿದೆಯೋ ನೀನು!
 
ಇಷ್ಟು ಅವಸರವೇಕೆ ತಾಳು ಸಂಯಮವ,
ಮತ್ತೊಂದು ನಿಮಿಷದಿ ನಿಂತು ಸಂತೈಸು ಮನವ.
ನನ್ನ ಏಕಾಂಗಿಯಾಗಿಸಿ ನೀ ಹೋಗದಿರು ದೂರ,
ಹಾಗೆಯೆ ನಿಂತುಬಿಡು ಕಳೆಯುತಾ ಬೇಸರ.
ಮೋಡಗಳ ಹಿಂದೆ ಅಡಗುವೆ ಏಕೆ, ಮೇಲಿಂದ ಕಾಲು ಜಾರಿ ಬಿದ್ದೀಯೆ ಜೋಕೆ!
 
ತಾರೆಗಳ ಜೊತೆ ನೀನಾಡುವ ಆಟ,
ಬೆಳದಿಂಗಳಿರುಳಿನ ಮನೋಹರ ನೋಟ.
ನಿಂತಿರುವಲ್ಲಿಯೇ ನಿಂತುಬಿಡು ನೀನು,
ನಿನ್ನಲ್ಲಿಗೇ ಬಂದು ಸೇರುವೆನು ನಾನು!
ಹೊರಟೆ ನಾ ನಿನ್ನಲ್ಲಿಗೆ, ಓ ಚಂದಿರ! ಶಾಂತಿಯನು ನೀಡುವ ಸುಖ-ಸಾಗರ!