ಹುತವಹ‌

ಹುತವಹ‌

 

ಹುತವಹ
 
"ಏಯ್.....??"
ಮುಖ ಎತ್ತಿದಳು. ಅಶ್ರು ತುಂಬಿದೆ ಅವಳ ಕಣ್ಣುಗಳಲ್ಲಿ.
"ಏನಾದರೂ ತಿನ್ನೋಣವೇ?"
" ಬೇ... ಬೇಡ... ನನಗೆ ಹಸಿವಿಲ್ಲ.."
ಅದೋ ಸಂಜೆ ಆಗಲು ಬಂತು, ನಿನ್ನೆಯಿಂದ ಏನೂ ತಿಂದಿಲ್ಲ.. ನೋಡೂ ನಮಗೆ ಬೇಸರವಾದಾಗ, ಮನ ವ್ಯಘ್ರವಾದಾಗ ನಮಗೆ ಜಾಸ್ತಿ ತಾಕತ್ತು ಬೇಕಂತೆ, ನಮ್ಮನ್ನು ನಾವು ಸಂಭಾಳಿಸಲು.. ಅಂತೆಯೇ ನಮಗೂ ಈಗ ಜಾಸ್ತಿ ಶಕ್ತಿ ಬೇಕಾಗಿದೆ.... ಅದಕ್ಕೆ ಏನಾದರೂ ತಿನ್ನಲೇ ಬೇಕು"
"ಯಾಕೆ ನಾನು ಮಾತ್ರಾನಾ, ನೀವೂ ನಿನ್ನೆಯಿಂದ ಏನೂ ತಿಂದಿಲ್ಲ ಅಲ್ಲವಾ...??" 
"ನನ್ನ ಕಥೆ ಬಿಡು, ನಾನು ಹೊರಗಡೆ ತಿಂದು ಬಂದಿದ್ದೇನೆ"
ಆ ಸ್ಥಿತಿಯಲ್ಲೂ ನಗು ಬಂತು ಅವಳಿಗೆ.." ನಿಮಗೆ ಸುಳ್ಳು ಹೇಳಲೂ ಬರುವುದಿಲ್ಲ... ಅದೂ ನನ್ನಲ್ಲಂತೂ.....!!"
ಒತ್ತಾಯಕ್ಕೆ ಒಳಕ್ಕೆಳೆದುಕೊಂಡೇ ಹೋದೆ. ಅನ್ನ ಬಟ್ಟಲಿಗೆ ಹಾಕಿದೆ, ಸಾರೊ ಏನನ್ನೋ ಹಾಕಿ ಕಿವುಚಿದೆ......... ಆಗಲೇ..............
ಪಪ್ಪಾ ಮಮ್ಮೀ... ಪಾಪು ನಿದ್ದೆಯಲ್ಲೇ ನರಳಿತು....
ನಾಲ್ಕು ಕಣ್ಣುಗಳಲ್ಲೂ ಅಶ್ರು ಧಾರೆ......
ಇಲ್ಲ ತಿನ್ನಲಾಗುವುದಿಲ್ಲ....... 
ಒಂದಗಳೂ ಕೂಡಾ....
ಇಲ್ಲ..
ಮನಸ್ಸಿಲ್ಲ
ಮನಸ್ಸೇ...... ಇಲ್ಲ.
 
ಅವನು
 
ನೀನಾಗ ತುಂಬಾ ಚಿಕ್ಕವ. ನಿನಗೆ ನಾಲ್ಕೋ ಐದೋ ತಿಂಗಳಿರಬಹುದೇನೊ ಅಷ್ಟೇ. ಆಗೆಲ್ಲಾ ಅಮ್ಮನ ಮಡಿಲೇ ನಿನಗೆ ಸರ್ವಸ್ವವಾಗಿತ್ತು. ಬೇರೆ ಪ್ರಪಂಚವೇ ಇಲ್ಲ.ಕಡಿಮೆ ಎಂದರೂ ೧೪-೧೬ ಘಂಟೆ ಮಲಗುತ್ತಿದ್ದೆ ನೀನು. ಡಾಕ್ಟರು ಹೇಳುತ್ತಿದ್ದರು. ಮಕ್ಕಳು ತಾವು ಆರೋಗ್ಯವಾಗಿದ್ದರೆ ಮಾತ್ರ ಸುತ್ತಲ ಪ್ರಪಂಚವನ್ನೂ ಆರೋಗ್ಯಕರವಾಗಿಯೇ ಇಡುತ್ತಾರೆ ಅಂತ. ನನ್ನ ತಮ್ಮ ನಿನ್ನ ಚಿಕ್ಕಪ್ಪ ಒಮ್ಮೆ ಹೇಳುತ್ತಿದ್ದನಂತೆ" ಏನತ್ತಿಗೇ ನನ್ನ ಗೆಳೆಯರೆಲ್ಲಾ ಹೇಳುತ್ತಿದ್ದರು, ಏನೂ ಅಣ್ಣ ಅಣ್ಣನ ಹೆಂಡತಿ ಮತ್ತು ಮಗು ಮನೆಗೆ ಬರುತ್ತ್ತಲಿದ್ದಾರಾ... ಹಾಗಾದರೆ ರಾತ್ರೆ ನಿದ್ದೆಗೆಡಲು ಈಗಲೇ ಅಭ್ಯಾಸ ಮಾಡಿಕೋ ಅಂತ ಅಂತದ್ದೇನೂ ನಡೆಯಲೇ ಇಲ್ಲವಲ್ಲಾ..ನಮಗಂತೂ ಚಿಕ್ಕ ಮಗುವೊಂದು ಮನೆಯಲ್ಲಿದೆ ಅಂತ ಅನ್ನಿಸಲೇ ಇಲ್ಲ.. ಅಷ್ಟು ಸಾಧುವಪ್ಪಾ ನಿಮ್ಮ ಹುಡುಗ ಅನ್ನುತ್ತಿದ್ದನಂತೆ" ಆದರೆ ನೀನು ನನ್ನ ಬಳಿ ಬರುತ್ತಿರಲಿಲ್ಲ. ನನಗೆ ಆಶ್ಚರ್ಯ ಬೇಸರ ಎರಡೂ ಆಗುತ್ತಿತ್ತು. ನನ್ನಮ್ಮನಲ್ಲಿ ಹೇಳಿಕೊಂಡಾಗ ನಕ್ಕು ಹೇಳಿದ್ದಳವಳು " ಇಲ್ಲ ಮಗಾ, ಚಿಕ್ಕ ಮಕ್ಕಳು ಮೊದಮೊದಲು ಅಮ್ಮನನ್ನು ಹಚ್ಚಿಕೊಳ್ಳುವುದು ಸಹಜ, ಇದೆಲ್ಲಾ ಕೆಲವೇ ಸಮಯ ಅಷ್ಟೇ, ತಾನು ಮತ್ತು ತಾಯಿ ಮಾತ್ರವಲ್ಲ ಬೇರೆಯೂ ವಿಶ್ವವಿದೆ ಅಂತ.ಒಮ್ಮೆ ಅರಿತರೆ ಸಾಕು ವಿಶ್ವವನ್ನು ತೊರಿಸುವಾತ ತನ್ನ ಅಪ್ಪಯ್ಯ ಅಂತ ಗೊತ್ತಾದ ಮೇಲೆ ನೋಡು... ನಿನಗೆ ನಾನು ಹೇಳಿದುದರಲ್ಲಿ ಸತ್ಯವಿದೆ ಅಂತ ಅರ್ಥವಾಗುತ್ತೆ". ಎರಡೇ ತಿಂಗಳು!!! ನನ್ನಮ್ಮ ಹೇಳಿದ ಹಾಗೇ ಆಯ್ತಲ್ಲಾ... ಹೊರಗಡೆ ತಿರುಗಾಡಿಸಲು ನಾನೇ ಬೇಕಿತ್ತಲ್ಲ ನಿನಗೆ, ಆಫೀಸಿಗೆ ಹೋಗುವ ಮೊದಲು, ಆಫೀಸಿನಿಂದ ಬಂದ ಕೂಡಲೇ... ನಿನ್ನನ್ನು ತಿರುಗಾಡಿಸಲೇ ಬೇಕಿತ್ತು. 
 
ಪುಟ್ತಾ ನಿನಗೆ ನೆನಪಿದೆಯಾ ಆ ದಿನ ನಾವೆಲ್ಲಾ ಊರಲ್ಲಿನ ದೇವಸ್ಥಾನ ನಿನಗೆ ತೋರಿಸಿ ವಾಪಾಸ್ಸು ಬರುತ್ತಿದ್ದೆವು.ಬರುವ ದಾರಿಯಲ್ಲಿನ ಗಿಡಮರಗಳನ್ನು ನಿನಗೆ ಪರಿಚಯಿಸುತ್ತಲಿದ್ದೆ. ತೋಟಕ್ಕೆ ತಾಗಿ ಪಕ್ಕದ್ಸಲ್ಲೇ ಹರಿಯುತ್ತಿದ್ದ ನೀರಿನ ತೊರೆ( ತೋಡು) ಯ ಸಂಕ ( ಸಣ್ನ ಸೇತುವೆ- ಅಡ್ಡಲಾಗಿ ಹಾಕಿದ್ದ ಅಡಿಕೆ ಮರ) ದ ಮೇಲಿಂದ ಬರುತ್ತಿರುವಾಗ ನಮ್ಮಿಬ್ಬರ ಭಾರಕ್ಕೆ ಅದು ತುಂಡಾಗಿ ನಾವಿಬ್ಬರೂ ಹರಿಯುತ್ತಿರುವ ನಿರಿಗೆ ಬಿದ್ದಿದ್ದೆವು ನಾನು ಮೊದಲು, ನನ್ನ ಮೇಲೆ ನೀನು. ಅದಕ್ಕೇ ನಿನಗೆ ಪೆಟ್ಟಾಗಿರಲಿಲ್ಲ. ಆದರೆ ಬೀಳುವಾಗಿನ ಹೆದರಿಕೆಯಿಂದ ಹೊರಬರದೇ ನೀನು ಅಳುತ್ತಲೇ ಮನೆಗೆ ತಲುಪಿದಾಗ ಅಜ್ಜನಿಗೆ ಕಂಪ್ಲೈಂಟ್ ಕೊಟ್ಟಿದ್ದೆ. " ಅಜ್ಜಾ ಪಪ್ಪ ನನ್ನನ್ನು ಪಾಂಪೆ( ಸೇತುವೆ) ಯಿಂದ ಕೆಳಗೆ ಬೀಳಿಸಿದ" ಅಜ್ಜನೂ ಹುಸಿ ಹುಸಿಯಾಗಿಯೇ ನನ್ನನ್ನೂ ಬೈದಿದ್ದರು. ಆದರೂ ಹಿಂದಿನಿಂದ ಎಲ್ಲರೂ ನಗುತ್ತಿದ್ದರು.,
"ನೋಡೋಣ ಏಳು ಮರೀ... 
ಈಗ ಒಮ್ಮೆ ಎದ್ದು ಹಾಗೇ ಕಂಪ್ಲೈಂಟ್ ಮಾಡು.
ನೊಡೂ ಅಜ್ಜ ಅಜ್ಜಿ ಎಲ್ಲರೂ ಇಲ್ಲಿಯೇ ಇದ್ದಾರೆ...""
 
ಸಂಭಂದಗಳಿಂದ ನಾವು ದೂರವಿದ್ದರೂ ಸಂಬಂಧಗಳನ್ನು ಉದ್ದೀಪಿಸುವ ಗುಣಗಳನ್ನು ನಿನ್ನಿಂದಲೇ ಕಲಿಯಲೇಬೇಕಿತ್ತು ನಾವೆಲ್ಲಾ. ನಮ್ಮ ಮನೆಗೆ ಒಂದೇ ಒಂದು ಸಾರಿ ಬಂದವರೂ ನಿನ್ನ ಆಪ್ತರೇ ಆಗಿ ಬಿಡುತ್ತಿದ್ದರು. ಆ ಒಂದೊಂದು ಉದಾಹರಣೆಯೂ ಎಲ್ಲಾ ದೊಡ್ದವರೆನ್ನುವರ ಕಣ್ಣೂ ತೆರೆಸುತ್ತದೆ.ಮನೆಗೆ ದಿನಾ ಬರುವ ನಮ್ಮ ಹೂಗಿಡಗಳನ್ನೂನೋಡಿಕೊಳ್ಳುವ ಮತ್ತು ಸ್ನಾನಗೃಹ ತೊಳೆಯುವ ಮಾಲಿಗೆ ನೀನಿತ್ತ ಹೆಸರು ’ ಕಚಡ ಮಾಮ’. ಶಾಲೆಯಿಂದ ಬಂದವನೇ ( ಆಗೆಲ್ಲಾ ನಿನ್ನ ಶಾಲೆ ಹನ್ನೆರಡೂವರೆ , ಒಂದಕ್ಕೆ ಬಿಡುತ್ತಿತ್ತು) ಮೊದಲು ಕೇಳುವ ಮಾತೇ, ಆತ ಇರಲಿ ಇಲ್ಲದಿರಲಿ, ಮಮ್ಮೀ ಕಚಡಾ ಮಾಮನಿಗೆ ತಿಂಡಿ ಕೊಟ್ಟೆಯಾ" ಅಂತ. ಆತ ಮನೆಯಲ್ಲಿ ಆಗ ಇದ್ದರಂತೂ ಆತ ಎಷ್ಟೇ ಪ್ರತಿಭಟಿಸಿದರು ಕೇಳದೇ ಊಟದ ತಟ್ಟೆಯನ್ನು ಅವನು ಯಾವಾಗಲೂ ಕುಳಿತುಕೊಳ್ಳುವ ಹಾಲ್ ನ ಒಂದು ಮೂಲೆಯಲ್ಲಿ ಅವನ ಜತೆಗೇ ಹಾಕಿಕೋಂಡು ಇಲ್ಲೇ ಅವನ ಜತೆಗೇ ಬಡಿಸು ಎನ್ನುತ್ತಿದ್ದೆಯಲ್ಲಾ. ಆತ ಎಷ್ಟೇ ದೂರ ಸರಿದರೂ ನೀನು ಅವನ ಹತ್ತಿರ ಹತ್ತಿರಕ್ಕೆ ತಟ್ಟೆಯನ್ನೂ ಸರಿಸಿಕೊಂಡೇ ಹೋಗುತ್ತಿದ್ದೆ ತಿಂಡಿಯನ್ನು ಜತೆಗೇ ತಿನ್ನಲು. ಆ ಸಂಭಂಧ ಎಷ್ಟು ಆಪ್ತ ಹಾಗೂ ಗಾಢವಾಗಿತ್ತೆಂದರೆ ನಾವು ಬೇರೆಡೆ ವರ್ಗವಾಗಿ ಹೋಗುವಾಗ ಆತ ಅತ್ತೇ ಬಿಟ್ಟಿದ್ದ. ಅಮ್ಮ ಇವರು ದೇವರಂತಹ ಮನುಷ್ಯ ಇವರನ್ನು ಸರಿಯಾಗಿ ಸಾಕಿ ಎಂದು ಬಿಕ್ಕಿ ಬಿಕ್ಕಿ ಅತ್ತು ಹೇಳುತ್ತಿದ್ದ. ನಮ್ಮೆಲ್ಲರ ಕಣ್ಣೂಗಳೂ ಹನಿಗೂಡಿದ್ದವು ಆಗ. ಅವನ ಮಾತುಗಳು ಇನ್ನೂ ನನ್ನ ಕಿವಿಗಳಲ್ಲಿ ಅನುರಣಿಸುತ್ತಿವೆ, 
ಇನ್ನೊಮ್ಮೆ ನೀನು ಯಾವಾಗ ಹಾಗೆ ಹೇಳುತ್ತೀ..??
 
 
 
ಅಮ್ಮ
 
ಎಲ್ಲವೂ ಈಗಲೇ ಯಾಕೆ ನೆನಪಾಗಿ ನನ್ನ ಮನಸ್ಸನ್ನು ಘಾಸಿ ಮಾಡುತ್ತಿದೆಯೋ ಗೊತ್ತಾಗುವುದಿಲ್ಲ ಕಣೋ, ಊರಿಗೆ ಹೋದಾಗ ಮೊದಲ ಸಾರಿ ನನ್ನ ಚಿಕ್ಕಪ್ಪನ ಮನೆಯಲ್ಲಿ ( ನಿನ್ನ ಅಜ್ಜನ ಮನೆ) ಎಲ್ಲರೂ ಊಟಕ್ಕೆ ಕುಳಿತಾಗ ನೀನು ಚಕ್ಕಳ ಮಕ್ಕಳ ಹಾಕಿಕೊಂಡು ಊಟಕ್ಕೆ ಕುಳಿತು ಬಿಟ್ಟೆ ಅದನ್ನು ನೋಡಿ ಅವರು ಎಂತಹ ಸಂಸ್ಕಾರ ಕಲಿಸಿದ್ದೀ ಮಗನಿಗೆ ಭೇಷ್ ಎಂದಿದ್ದರು, ನಾವು ನಿನಗೆ ಕಲಿಸಿದ್ದಕ್ಕಿಂತ, ನೀನು ಸ್ವತಃ ಕಲಿತದ್ದು ಮತ್ತು ನಮಗೆ ಕಲಿಸಿದ್ದೂ ಜಾಸ್ತಿ ಕಣೋ.ನಾವು ಆಗ ಬೊಂಬಾಯಿಯಲ್ಲಿದ್ದೆವು, ನನ್ನ ಅಪ್ಪ ಅಮ್ಮ ಊರಿಂದ ಬರುವವರಿದ್ದರು. ಏನನ್ನುತ್ತಾರೋ   ಅಂತ ನಮಗೆ ಆತಂಕವಿದ್ದರೆ, ಒಂದು ವರ್ಷದವನಾದ ನೀನು ಅವರೊಡನೆ ನನ್ನ ಅಜ್ಜ ನನ್ನ ಅಜ್ಜ ಅಂತ ಹಿಂದೆ ಮುಂದೆ ತಿರುಗಾಡುತ್ತ ಕ್ಷಣದಲ್ಲೇ ಆಪ್ತವಾಗಿಬಿಟ್ಟೆ, ಮೂಲತಃ ಉಪಾಧ್ಯಾಯ ವ್ರತ್ತಿಯವರಾದ ಅವರು ಕಥೆ ಹೇಳೋದೇನು, ಕಲಿಸೋದೇನು, ಜತೆಗೆ ನಿನ್ನ ಮಮ್ಮಿಗೇ  ಒಳೆಯ ರೀತಿಯಲ್ಲೇ ಸಾಕಿದ್ದೆ ಮಗನನ್ನ ಅಂತ ಬಿರುದು ಬೇರೆ ಕೊಟ್ಟಿದ್ದರು. ಇಲ್ಲಪ್ಪಾ ಯಾರಿಗೂ ಗೊತ್ತಾಗಲೇ ಇಲ್ಲವಲ್ಲ, ಎಂತಹ ವಿಚಿತ್ರವಿದು ನೋಡು. ಅದಕ್ಕೇ ಏನೋ ಲೆಕ್ಕದಲ್ಲೂ ಅಷ್ಟೇ ನೀನು ಒಂದನೇ ವರ್ಷ (ಕೇ ಜಿ) ಲ್ಲಿರುವಾಗಲೆ ಎರಡನೆಯ( ಅಪ್ಪರ್ ಕೇ ಜಿ) ಕ್ಲಾಸಿನ ಗಣಿತವನ್ನೂ ಕರಾರುವಾಕ್ಕಾಗಿ ಕ್ಷಣದಲ್ಲಿ ಮಾಡುತ್ತಿದ್ದೆ. ನಿನ್ನನ್ನು ಎರಡನೇ ಕ್ಲಾಸಿಗೆ ಸೇರಿಸುವಾಗ ಆ ಟೀಚರ್ ಗೆ ಈ ವಿಷಯ ಹೇಳಿದರೆ ಅವಳು ಏನೆಂದಳು ಗೊತ್ತಾ..?" ಏನೂ ತೊಂದರೆಯಿಲ್ಲ ಬಿಡಿ, ಮುಂದಿನ ೬ ತಿಂಗಳು ಅವನ ಹತ್ತಿರ ಗಣಿತವನ್ನು ಕಲಿಸುವುದೇ ಇಲ್ಲ ನಾನು ತನ್ನಿಂತಾನೇ ಆತ ಬೇರೆ ಎಲ್ಲ ಮಕ್ಕಳ ಮಟ್ಟಕ್ಕೆ ಬರುತ್ತಾನೆ , ನೋಡು ಕೆಲವರ ಬೌದ್ಧಿಕ ಮಟ್ಟ ಹೇಗಿರುತ್ತದೆ ಅಂತ.
 
ಆದಿನ ಅವರ ಸ್ನೇಹಿತರೊಬ್ಬರು ಮನೆಗೆ ಬಂದಿದ್ದರು. ನೀನು ಮನೆಯ ಒಳಗೆಲ್ಲೋ ಇದ್ದೆ.  ಆ ದಿನವೇ ನಿನಗೆ ಸಿಕ್ಕಿದ ಹೊಸ ಕಪ್ಪು ಮಿಂಚುತ್ತಿತ್ತು ಮೇಜಿನ ಮೇಲೆ. ಅಪ್ಪ ಬಂದ ಕೂಡಲೇ ಅದನ್ನು ಕಾಣಲಿ ಅಂತ ನೀನೇ ಇಟ್ಟಿದ್ದೆ.  ಅದು ಕಣ್ಣಿಗೆ ಬಿದ್ದಾಗ ಸಹಜವಾಗಿ ಅವರು ಕೇಳಿದರು, ಯಾವುದರಲ್ಲಿ ಸಿಕ್ಕಿತ್ತು ಎಂದರೆ "ಉತ್ತಮ  ಧಿರುಸು ಧರಿಸುವುದರಲ್ಲಿ" ಎಂದಿದ್ದೆ ನಾನು. ದಿನಾ ಬಿಳಿ ಚಡ್ಡಿ ಬಿಳಿ ಅಂಗಿ ಅದು ಇಸ್ತ್ರಿ ಹಾಕಿದ ಠಾಕು ಠೀಕಿನ ಧಿರುಸು ತೊಟ್ಟು ಹೊರಟಾಗ ಎಲ್ಲರೂ ಅವನತ್ತ ತಿರುಗಿ ನೋಡಬೇಕು ಅನ್ನಿಸುವುದು. ದಿನಾ ದೃಷ್ಟಿ ತೆಗೆದೇ ಅವನನು ಮನೆಯೊಳಕ್ಕೆ ಕರೆಯುವುದು ನಾನು. ಹೌದಾ ಕರಿಯಿರಿ ಅವನನ್ನು ಅಂದಾಗ ನಾನುಕರೆದಾಗ ಒಳಗಿನಿಂದ ಹಾಗೇ ಓಡಿ ಬಂದಿದ್ದೆ ನೀನು ಹುಟ್ಟುಡುಗೆಯಲ್ಲಿ.ಅಂದು  ಎಲ್ಲರೂ ನಕ್ಕಿದ್ದೆವು .............. ಇಲ್ಲ... ಈಗ ಜಪ್ಪಯ್ಯ ಅಂದರು ಹೊರ ಬರಲಾಗದು ಆ ನಗು. 
 
ಕೆಳಮನೆಯ ರಾವ್ ಅವರ ಹೆಂಡತಿಯೊಮ್ಮೆ . ಮನೆಯ ಇದಿರು ಕುಳಿತುಕೊಂಡಿರುವಾಗ ( ನೀನೂ ಬಂದಿದ್ದೆ ಅಲ್ಲಿಗೇ.) ತನ್ನ ಕೈಯ್ಯಲ್ಲಿರುವ ಕೋಲನ್ನು ತೋರಿಸಿ ಕೇಳಿದರವರು" ಯಾಕೋ ನನ್ನ ಮಗನಿಗೆ ಹೊಡೆದೆಯಂತಲ್ಲಾ ಎಷ್ಟು ಧೈರ್ಯ ನಿನಗೆ..? ಅದು ಹೇಗೆ ಹೊಡೆದೆಯೋ  ಹೇಳು..?" ಅವರ ಮುಖವನ್ನೇ ನೋಡುತ್ತಾ ಹೇಳಿದ್ದೆ ನೀನು  " ಆ ಕೋಲು ಕೊಡಿ ಆಂಟೀ" ನಿನ್ನ ಪ್ರಶ್ನೆಗೆ ಮರು ಮಾತನಾಡದೇ ಕೋಲು ಕೊಟ್ಟಿದ್ದರವರು.  ಅವರ ತೆರೆದ ಅಂಗೈ ಮೇಲೆಯೇ ಅದೇ ಕೋಲಿನಿಂದ ಒಂದು ರಪ್ಪನೆ ಕೊಟ್ಟು " ಹೀಗೇ ಹೊಡೆದಿದ್ದೆ ಆಂಟೀ" ಅಂದಿದ್ದೆ ನೀನು. ಅವರು ನಿನ್ನ ಧೈರ್ಯ ನೋಡಿ ಬೆಕ್ಕಸ ಬೆರಗಾಗಿದ್ದರು. ಮೆಚ್ಚಿದ್ದರು ನಾವೆಲ್ಲರೂ ಮನಸೋ ಇಚ್ಛೆ ನಕ್ಕಿದ್ದೆವು , ಆ‌ಅ ನಗುವಿನಲ್ಲೇ ನೀನೂ ಶಾಮೀಲಾಗಿದ್ದೆ.
 
ಇನ್ನೊಮ್ಮೆ ಅವರೆಲ್ಲ ಬೆಳಗಿನ ತಿಂಡಿ ತಿನ್ನುತ್ತಿದ್ದಾಗ ನೀನು ಅಲ್ಲಿಗೆ ಹೋಗಿದ್ದೆ. ಎಲ್ಲರ ಪ್ಲೇಟಿನಲ್ಲಿದ್ದ ಮೊಟ್ಟೆಯನ್ನು ನೋಡಿ ನಿನಗೇನನ್ನಿಸಿತ್ತೋ. ಅವರು ತಿನ್ತೀಯಾ ಅಂದರೆ ನೀನು ಹ್ಞೂ ಅಂದು ಬಿಟ್ಟಿದ್ದೆ. ಅವರು ಖುಷಿಯಿಂದ ನಿನಗೂ ಬಡಿಸಿದ್ದರು. ಅವರಿಗೆ ಗೊತ್ತಿತ್ತು ನಾವು ಸಸ್ಯಾಹಾರಿಗಳು ಅಂತ. ಬಾಯಿಯವರೆಗೆ ಕೊಂಡು ಹೋದ ನೀನು ಆಂಟಿ ಇದು ವಾಸನೆ ಬರ್ತಿದೆ ಬೇಡ ನಿಮಗೆ ಇಡ್ಲಿ  ಮಾಡಲು ಬರಲ್ಲಾ, ನನ್ನ ಅಮ್ಮನಿಂದ ಕಲಿತುಕೊಳ್ಳಿ ಎಂದಿದ್ದೆ. ನಿನ್ನ ಮಾತು ಕಡು, ನೇರ ಸತ್ಯ ಆದರೂ ನಡವಳಿಕೆ ಆಪ್ತ, .ಸ್ವಲ್ಪ ದೊಡ್ಡವನಾದಾಗ ಕೇಕು ಕೊಟ್ಟರೂ ಇದರಲ್ಲಿ ಮೊಟ್ಟೆ ಇದೆಯಾ ಅಂತ ಕೇಳ್ತಿದ್ದೆ. ನೀನು ಯಾಕೋ ಮೊಟ್ಟೆ ಹಾಕಬಾರದಾ ಅಂತ ಯಾರಾದರೂ ಕೇಳಿದರೆ ಅದರಲ್ಲಿ ಒಂದು ಚಿಕ್ಕ ಕೋಳಿ ಮರಿ ಇರುತ್ತದೆ, ಅದನ್ನು ಕೊಂದ ಹಾಗೆ  ಅನ್ನುತ್ತಿದ್ದೆ ನೀನು. ಈಗ ನಾವೇ ನಿನ್ನ ಆಸ್ಥಿತಿಗೆ ತಂದೆವಲ್ಲಾ ಪುಟ್ಟಾ....
 
ಅಪ್ಪ 
 
ನೋಡಿ ಕರುಳು ಚುರುಕ್ ಎಂತು
ಮುದ್ದಾದ ಕಂಗಳಲ್ಲಿ ತುಂಬಿದ ಕಣ್ಣೀರು
ದಿನಾ ಎತ್ತಿ ಮುದ್ದಿಡುತ್ತಿದ್ದ ಮುಖವೀಗ............. ತುಂಬು ಕಳವಳ ಆತಂಕ ನನಗೆ
ಸಿಟ್ಟಾ ಕಂದ..?
ಇಲ್ಲ ಮುಖ ಆ ಕಡೆ ತಿರುಗಿಸಿತು ಪಾಪು.. ಅಂದರೆ ಪಕ್ಕಾಸಿಟ್ಟಾಗಿದ್ದಾನೆ
ನೋಡು ಇಲ್ಲಿ ..ಏನಿದು..??? ಇಲ್ಲ........ ಇಂತಾ ಚೀಪ್.......... ಟ್ರಿಕ್ ನಡೆಯದು ...........ಈಗಂತೂ
ಅವನದ್ದೇ ಆದ ಗತ್ತಿನಲ್ಲಿ ಸ್ವಲ್ಪ ಈಕಡೆ ತಿರುಗಿಸಿದ ಮುಖ.....
ಕಂಡ ಅರ್ಧ ಮುಖ..... ಎದೆಯಾಳದಲ್ಲೆಲ್ಲೋ ಭಗ್ಗನೆ ಜ್ವಲಿಸಿದ ಚಳಿಯೊಮ್ಮೆಲೇ ಮೈಯ್ಯ ಅಣು ಅಣುವೂ ವ್ಯಾಪಿಸಿ ಅಲುಗಾಡಿಸಿ ಬಿಟ್ಟಿತು.
 
"ಯಾರ್ರೀ........... ನೀವಾ ಈ ಮಗುವಿನ ಅಪ್ಪ ಅಮ್ಮ, ಏನ್ರೀ ಮಕ್ಕಳನ್ನು ಸಾಕುವುದು ಹೀಗೇನಾ.... ನೀವು??"
 
ನನ್ನ ದನಿಯಲ್ಲಿ ನಂಗೇ ನಂಬಿಕೆಯಿಲ್ಲ...  
 
"ಯಾ......ಯಾಕೆ ಏನಾಯ್ತೀಗ....?" ಕಂಪಿಸಿತಾ ಸ್ವರ..?
 
ಹೌದು ಯಾಕೆ ನಮಗೆ ಗೊತ್ತಾಗಲಿಲ್ಲ, ನಮ್ಮದೇ ರಕ್ತ ಮಾಂಸ ಹಂಚಿ ಬೆಳೆದ ಪುಟ್ಟಕಂದ....ಇವ, 
ಈ ನಾಲ್ಕು ವರ್ಷಗಳಲ್ಲಿಯೂ ..........ನಮಗೆ ಗೊತ್ತಾಗಲೇ ಇಲ್ಲ  ಅಂದರೆ
ಒಂದು ಸಾರಿಯೂ ಈ ವ್ಯತ್ಯಾಸ ಗೊತ್ತಾಗಲೇ ಇಲ್ಲ....ಯಾಕೆ..?  ಯಾಕೆ??
ಈಗಲಂತೂ   ವ್ಯತ್ಯಾಸ ಸರಿಯಾಗಿ ಗೊತ್ತಾಗ್ತಾ ಇದೆ........ ಅದೂ     ಅವರು.......ಆ.......... ಡಾಕ್ಟರ್ ಹೇಳಿದ ಮೇಲೆ.
ಮುದ್ದಾದ ರೇಶ್ಮೆಯಂತ ಮುಖದ ಮೇಲೆ ಹಣೆಯಿಂದ ಮೂಗಿನ ನೇರಕ್ಕೆ ಗೆರೆ ಎಳೆದರೆ ವ್ಯತ್ಯಾಸ ಸರಿಯಾಗಿ ಅರ್ಥವಾಗುತ್ತೆ ನಿಮಗೆ
ಪಾಪುವಿನ ಮುಖದಲ್ಲಿ ಎಡಬದಿ ಮತ್ತು ಬಲಬದಿಯಲ್ಲಿನ ವ್ಯತ್ಯಾಸ...
ಮುಖದ ಎಡಬಾಗ ಸಣ್ಣದು ಬಲಭಾಗ ದೊಡ್ಡದು, ವ್ಯತ್ಯಾಸ ಎದ್ದು ಕಾಣುತ್ತಿದೆ........... ಈಗ .... ಅವರು ಹೇಳಿದ ಮೇಲೆ..
ಯಾಕೆ ಗೊತ್ತಾಗಲಿಲ್ಲ..........?........ ಯಾಕೆ?. ಯಾಕೆ??......... ಯಾಕೆ..????.
"ನೋಡಿ... "           ಮುಂದುವರಿಸಿದರು ಅವರು..
"ಮರಿ ಈಕಡೆ ತಿರುಗು.. ........."  
ಗಲ್ಲ ಎಡಗಡೆ ತಿರುಗಿಸಿತು......... ಪಾಪು, ಗಲ್ಲ ಬುಜಕ್ಕೆ ತಾಗಿತು.  
"ಈಗ....... "   
ಈ ಕಡೆ ತಿರುಗು ಮರಿ............. ನೋಡೋಣ"
ಪಾಪು ಪ್ರಯತ್ನಿಸಿತು  ಸ್ವಲ್ಪ ..........ಅಷ್ಟೆ
ಇಲ್ಲ......... ಈ ಕಡೆ ಹೋಗುತ್ತಿಲ್ಲ ಮುಖ.. ಪ್ರಯತ್ನ ಪಟ್ಟರೂ... ಸಹ 
 ಆರೂ.........        ಕಣ್ಣುಗಳಲ್ಲೀಗ ಮಡುಗಟ್ಟಿದೆ  .......ಕಂಬನಿ
 
ಈ ಮಗುವಿನ ತಂದೆ ..ತಾಯಿ ನಾವೇ..................??
 
ಯಾಕೆ ಹೀಗಾಯ್ತು............ ಎಲ್ಲಿ ತಪ್ಪಾಯ್ತು????
 
 
"ರೀ ನೋಡಿ ಒಂದೇ ಕಡೆಯ ಹಾಲು ಮಾತ್ರ ಕುಡಿಯುತ್ತಿದ್ದಾನೆ ಪಾಪು, ಇನ್ನೊಂದು ಕಡೆ ಮುಖವೂ ತಿರುಗಿಸುತ್ತಿಲ್ಲ, ಮಲಗುವಾಗಲೂ....."
ನನ್ನವಳು ಹೇಳಿದ್ದಳು..........ಮೊದ ಮೊದಲು...............  ಇದೇ ಪಾಪು ಚಿಕ್ಕವನಿರುವಾಗ
ಈಗ ನೆನಪಾಗುತ್ತಿದೆ 
ಒಂದೇ ಕಡೆ ಮುಖ ಮಾಡಿ ಮಲಗುತ್ತಿದ್ದ.
ಒಂದೊಂದೇ ಈಗ ಅರ್ಥವಾಗುತ್ತಿದೆ. 
ಈಗ ..........ಇವರು ಹೇಳಿದ ಮೇಲೆ
ಪಾಪುವಿನ ಬಲ ಕಿವಿಯ ಕೆಳಗಿನ ಕುತ್ತಿ‌ಗೆಯಿಂದ ನೇರವಾಗಿ ಮೇಲೆ ಬರುತ್ತಿದ್ದ ನರವೊಂದು ಗಟ್ಟಿಯಾಗಿದೆ......... ನಮ್ಮೆಲ್ಲರ ನರದಂತೆ ಮೆತ್ತಗಿಲ್ಲ!!!!
ಮುಂದುವರಿಸಿದರು ಅವರು
"ಹೀಗೇ ಬಿಟ್ಟಿದ್ದರೆ......... ಏನಾಗುತ್ತಿತ್ತು ಗೊತ್ತಾ..?"
 
ಕೇಳಿ ಕಿವಿಯಲ್ಲಿ ಕಾದ ಎಣ್ಣೆ ಹೊಯ್ದ ಹಾಗಾಯ್ತು!!!
 
"ಮುಖಕ್ಕೆ ರಕ್ತ ಸರಿಯಾಗಿ ಸರಬರಾಜಾಗದೇ ಎಡ ಮತ್ತು ಬಲಗಡೆಯ  ವ್ಯತ್ಯಾಸ ಜಾಸ್ತಿಯಾಗುತ್ತಾ ಹೋದ ಹಾಗೇ ಒಂದೋ ಪಾರ್ಶ್ವ ವಾಯು ಬರಬಹುದು ಅಥವಾ ... "  ನಿಲ್ಲಿಸಿದರು ಅವರು
 
."........ಅಥವಾ ಏನು ಸಾರ್..?"  ಹೇಗೋ ಕಷ್ಟ ಪಟ್ಟು     .........ಕೇಳಿದೆ 
"ಮುಂದೆ......."
ಉ... ಉಹ್ಞು  ..........ಕೇಳಲಾಗಲಿಲ್ಲ .......ನನಗೆ!!
 
ನಮ್ಮ ಪ್ರೀತಿಯ ಕಂದಮ್ಮ ತಾನು ಏನೂ  ತಪ್ಪು ಮಾಡದೇ... ಜೀವ ಮಾನವಿಡೀ......... ಅಂಗ........ ವಿಕಲನಾಗಿ ಅಥವಾ..... ಹಾಗೇ ಮುಖದ ವ್ಯತ್ಯಾಸ ಜಾಸ್ತಿಯಾಗುತ್ತಾ ಹೋಗಿ... ಮ...... ರ........ಣ..
 
ಯಾಕೋ ಕಣ್ಣ ಮುಂದಿನ ಏನನ್ನೂ ಕಾಣಲಾಗುತ್ತಿಲ್ಲ ನನಗೆ... ಏನಾಯ್ತು, ನನಗೇನಾದರೂ....
"ರೀ ಕಣ್ಣೊರೆಸಿಕೊಳ್ಳಿ.. ಮಗು ನೋಡಿದರೆ ಕಷ್ಟ.."    ನನ್ನವಳು
"ಈ..... ........."  ಗದ್ಗದಿಸಿತು ಕಂಠ. 
"ಇದಕ್ಕೆ ಪರಿಹಾರ.. ಇಲ್ಲವೇ ಡಾಕ್ಟರ್?" ನನ್ನ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಕೇಳಿದ ಪದ ಅದು.
 
"ಮತ್ತಿನ್ನೇನು ... ಆಪರೇಷನ್!!!"
ಇಷ್ಟು ಚಿಕ್ಕ ಮಗುವಿಗೆ.................... ಆಪರೇಷನ್..?
ನವಂಬರ್ ೨೧ ಕ್ಕೆ ನಾಲ್ಕು ತುಂಬುತ್ತದೆ ಪಾಪುಗೆ, ನಾಲ್ಕೂ ತುಂಬದ ಮಗುವಿಗೆ...
"ಮೂರು ವರ್ಷದ ಮೊದಲೇ ಮಾಡ ಬೇಕಿತ್ತು ಈ ಆಪರೇಶನ್..."
"ಆಗ ಈತ ಹುಟ್ಟಿದ್ದಷ್ಟೇ ಡಾಕ್ಟರ್.....".  ನನ್ನ ...ವ್ಯಂಗ್ಯ...!!!!!
"ಹೌದು....... ಆಗಲೇ..........."   ದನಿ ಮೊದಲಿಗಿಂತ  ಗಡುಸಾಗಿತ್ತು..
"ಕಿವಿಯ ಪಕ್ಕದ ಗಟ್ಟಿಯಾದ ನರವನ್ನು ಕೊಯ್ದು ಒಳಗಿನ ಗಟ್ಟಿ ರಕ್ತವನ್ನು ಹೊರತೆಗೆದು ಪುನ ಮೊದಲಿನ ಹಾಗೇ ಹೊಲಿದಿಡಬೇಕು.
ಆತನ  ಎದೆಯ ಭಾಗ ದೊಡ್ಡದಿದ್ದುದರಿಂದ ಅವನು ಹುಟ್ಟುವಾಗ ದಾದಿ ತಿಳಿಯದೆಯೋ ತಿಳಿದೋ ಫೋರ್ಸೆಪ್ಸ್ ಉಪಯೋಗಿಸುವಾಗ ಆದ ಅನಾಹುತವಿರಬೇಕಿದು............"
ಈ ಡಾಕ್ಟರುಗಳು ಖಂಡಿತಾ ಪಾಷಾಣ ಹೃದಯಿಗಳು
ಅಲ್ಲ ಇಷ್ಟು ಚಿಕ್ಕ ಮಗುವಿಗೆ ಆಪರೇಷನ್ನಾ..?
 
( ನಾಳೆಗೆ ಮುಂದುವರಿಯುವುದು)
***********  **************  *********  **********
 
 
 
 
ಮನಸ್ಸಿನ ನೋವು ನನ್ನನ್ನು ಎಷ್ಟು ಘಾಸಿಗೊಳಿಸಿತ್ತೆಂದರೆ ಹಿಡಿದು ಒಂದು ಕಡೆ ಕುಳ್ಳಿರಿಸಲೂ ಕಷ್ಟವಾಗಿತ್ತು. 
ಮಗನ ತಲೆ ಬೋಳಿಸಿಕೊಳ್ಳುವುದು ಅವನ ತಂದೆ ಅಥವಾ ತಾಯಿ  ಸತ್ತ ಸಂದರ್ಭದಲ್ಲಿ 
ಇಲ್ಲಿ ಸ್ವತಃ ಜೀವಂತವಿದ್ದ  ತಂದೆಯೇ ತನ್ನ ಮಗನ ತಲೆ ಬೋಳಿಸುತ್ತಿದ್ದಾನೆ, 
ಹೌದು ಪುಟ್ಟಾ, ನಿನ್ನ ತಂದೆ ಇದ್ದರೂ ಇಲ್ಲದಂತೆ ಈ ಕ್ಷಣ.
ನಿನ್ನ ಗಲಾಟೆ ಹದ್ದು ಮೀರಿದ್ದು.
ನಾನು ಮಾತ್ರ ಯಾಕೆ ಕಟ್ ಮಾಡಿಕೋ ಬೇಕು..?, ನನ್ನ ಜತೆ ನೀನೂ ತಲೆ ಕೂದಲು ಕಟ್ ಮಾಡಿಕೋ. ಪಕ್ಕದವರದ್ದೂ ಮಾಡು
ಕ್ಷೌರಿಕನದ್ದು ಒಂದೇ ವರಾತ ನೀವು ಸರಿಯಾಗಿ ಹಿಡಿದುಕೊಂಡಿಲ್ಲ ಮಗುವನ್ನ.... ಸರಿಯಾಗಿ ಗಟ್ಟಿಯಾಗಿ ಹಿಡಿದುಕೊಳ್ಳಿ
ಮಗುವನ್ನು ಮಾತ್ರವೇನಾ, ನನಗೆ ಮನಸ್ಸನ್ನೂ , ಹೃದಯವನ್ನೂ ಗಟ್ಟಿ ಮಾಡಿಕೊಳ್ಳಲೂ ಬರಲ್ಲವಲ್ಲಾ ಏನು ಮಾಡಲಿ .....
ಕ್ಷೌರಿಕನಿಗೆ ಇದು ಹೇಗೆ ತಿಳಿದೀತು....? ಇದು ಅವನಿಗೆ ನಿತ್ಯ ಸಾಮಾನ್ಯ ...
ಅಳಲಾಗದು, ದುಃಖ ಒತ್ತೊತ್ತಿ ಬಂದರೂ,............. ಯಾಕೆಂದರೆ ಗಂಡಸರು ಅಳಬಾರದಲ್ಲಾ.....
ಕೂದಲೆಲ್ಲಾ ತೆಗೆದು ಬೋಳಾದ  ಮುಖ ನೋಡಿದರೆ ಮುಖದ ಎಡ ಬಲಗಳ ವ್ಯತ್ಯಾಸ ನಿಖರವಾಗಿ ಕಾಣುತ್ತಿತ್ತು.
ನಮ್ಮನ್ನು ಬಿಟ್ಟು ಈ ಪ್ರಪಂಚದಲ್ಲಿ ಇರುವವರೆಲ್ಲರೂ ಸುಖಿಗಳೇ.......
ಸ್ವತಃ ತಂದೆ ತಾಯಿ ಮಗನನ್ನು ಕೊಂಡು ಹೋಗುತ್ತಿದ್ದಾರೆ...
ಮನೆಗೋ....ಮಸಣಕ್ಕೋ ... ಯಾರೂ ಹೇಳಲಾರರು.
ಒಂದು ಕ್ಷಣ ಈ ಒಂದು ಕ್ಷಣ ಕಳೆಯಲಾರದಂತಹ ನಮಗೆ ಇಡೀ ರಾತ್ರೆ ........... ಹೇಗೆ ಕಳೆದೀತು.....
 
ಅಮ್ಮ
 
ನೋಡಿ ರಾತ್ರೆಯಿಡೀ ನೀರು ಕೂಡಾ  ಕೊಡಲೇ ಬಾರದು
ಕೊಟ್ಟರೆ ಆಪರೇಶನ್ ಕಷ್ಟವಾಗುತ್ತೆ
ಕೆಮ್ಮಂತೂ ಬರಲೇ ಬಾರದು ರಕ್ತ ಶ್ವಾಸ ಕೋಶದೊಳಗೆ ನುಗ್ಗಿದರೆ ಮತ್ತೆ ಯಾರೂ ಬದುಕಿಸಲಾರರು ನಿಮ್ಮ ಮಗುವನ್ನ, ಆಪರೇಶನ್ ನ ದಿನ ಗೊತ್ತಾದ ಮೇಲೆ ಮಗುವಿಗೆ ಶೀತ ಆಗದ ಹಾಗೆ ನೋಡಿಕೊಂಡಿರಿ, ಶೀತವೆಂದರೆ ಪುನಹಃ  ಕೆಮ್ಮು...ಬರಲೂ ಬಹುದು.....
ಎಚ್ಚರಿಕೆ,ಎಚ್ಚರಿಕೆ,.......  ಎಚ್ಚರಿಕೆ,.................ಎಚ್ಚರಿಕೆ!!!!!
ಪಾಪು ರಾತ್ರೆಗೆ ಜಾಸ್ತಿ ನೀರು ಕುಡಿಯುತ್ತಾನೆ, ೨-೩ ಸಲವಾದರೂ ನೀರು ಕೇಳಿಯೇ  ಕೇಳುತ್ತಾನೆ ಮನೆಯಲ್ಲಿ
ಯಾಕಮ್ಮ ನೀರು ಕೊಡೋಲ್ಲ ನೀನು....
ಆಪರೇಷನ್ ನಾಳೆ ಬೆಳಿಗ್ಗೆ 
ಅಲ್ಲಿಯವರೆಗೆ ಈತನಿಗೆ ಊಟವಿಲ್ಲ ತಿಂಡಿ ಇಲ್ಲಾ
ಹಲ್ಲು ಕಚ್ಚಿ ಕುಳಿತಿದ್ದೆ. ಅವುಡು ಗಟ್ಟಿಯಾಗಿ ಕಚ್ಚಿದ್ದಕ್ಕೋ ಏನೋ ರಕ್ತ ಒಸರಿತು... ಬಾಯೆಲ್ಲಾ ಉಪ್ಪುಪ್ಪು.
ಇದೇ ರಕ್ತ ಹಂಚಿಕೊಂಡು ಹುಟ್ಟಿದ್ದ ಪಾಪು.
 
ಇಲ್ಲಿಯವರೆಗೆ ಅವನು ಉಸುರಿದ ಪ್ರತಿ ವಸ್ತುವೂ ಪ್ರತ್ಯಕ್ಷ ಆಗುತ್ತಿದ್ದವು ಮರುಕ್ಷಣದಲ್ಲಿ...
ನಮ್ಮಿಬ್ಬರ ಪ್ರೀತಿಯ ಗಂಗೆಯಲ್ಲಿ ಮುಳುಗೇಳದ ದಿನವಿಲ್ಲ, ಕೆಲವೊಮ್ಮೆ ಇವರೇ ಜಾಸ್ತಿ ಪ್ರೀತಿ ಒಳ್ಳೆಯದಲ್ಲ ಅನ್ನುತ್ತಿದ್ದರು, ಆದರೂ ಅವನು ಕೇಳಿದ್ದನ್ನೆಲ್ಲಾ ಮೊದಲು ತಂದು ಕೊಡುವುದು ಅವರೇ.
 
" ಅಮ್ಮಾ ಹಸಿವೂ... ಸ್ವಲ್ಪ ನೀರಾದರೂ ತಂದು ಕೊಡು.."
ಅಮ್ಮಾ....
ಇಲ್ಲ ಕೊಡಲಾರೆ... ಕೊಡಲಾಗದು..
ಕಲ್ಲಿನಂತೆ ಕುಳಿತಿದ್ದೆ... ದೇವರೇ  ನನಗೇ ಯಾಕೆ ಈ ಶಿಕ್ಷೆ..??
ಹೋಗಲಿ ಎಂದರೆ ... ನೀ..ರೂ ಕೂಡಾ ಇಲ್ಲ...ಕೊಡಲೇ ಬಾರದು.
ದೇವರೇ ......
ಯಾಕಾಗಿ ಈ ಶಿಕ್ಷೆ
ಅಮ್ಮಾ ನೀರೂ.............. 
 
ಕಣ್ಣಲ್ಲಿ ಪಳಕ್ಕನೆ ಉಕ್ಕಿತು, ಆದರೂ ಕುಳಿತಿದ್ದೆ , ಮನಸ್ಸನ್ನು ಕಲ್ಲು ಮಾಡಿಕೊಂಡು, ಮುಖ ಆ ಕಡೆ ತಿರುಗಿಸಿದ್ದೆ.......    ಗೊತ್ತಾಗಬಾರದಲ್ಲ.
ಸೆರಗು ಹಿಡಿದು ಎಳೆಯುತ್ತಾ ಇದ್ದಾನೆ, 
ಪಕ್ಕದಿಂದ ಗೊತ್ತಾಗುತ್ತಿದೆ ಅವನ ಬಾಯಿ ಒಣಗಿದೆ ಸ್ವರವೂ ...........
ನಿನ್ನ ಹತ್ತಿರವಿಲ್ಲದಿದ್ದರೆ ಹೋಗಲಿ, ಪಕ್ಕದಲ್ಲಿ ಆಂಟಿಯ ಹತ್ತಿರ ಇದೆಯಲ್ಲ ತೆಗೆದು ಕೊಡಮ್ಮಾ........... ನನಗೆ ಅಂತ ಕೇಳಿದರೆ ಕೊಡುತ್ತಾರೆ........ಅಮ್ಮಾ...
ಇದಕ್ಕಿಂತ ನಾನು ಸತ್ತರೇ ಒಳ್ಳೆಯದಿತ್ತು.....
ಮಧ್ಯಾನ್ನದಿಂದ ಏನೂ ಹೋಗಿರಲಿಲ್ಲ ಮಗುವಿನ ಹೊಟ್ಟೆಗೆ.......... ಊಟ... ತಿಂಡಿ..... ಬೇಡ ..... ಒಂದು... ಹನಿ.......... ನೀರೂ..... ಸಹಾ
ನನ್ನೆದೆ ಬೆಂಕಿಯ ಜ್ವಾಲೆಯಲ್ಲಿ ನಾನೇಕೆ ಸುಟ್ಟು ಕರಗಿ ಹೋಗುವುದಿಲ್ಲ........
ಅಮ್ಮಾ..... 
ಕರಗುತ್ತಿದ್ದೇನಾ..... 
ಇಲ್ಲ..... ನಾನು ...........ಕರಗಬಾರದು
ಇಲ್ಲ ಹಲ್ಲು ಕಚ್ಚಿ ಕುಳಿತಿದ್ದೆ, ಅವುಡು ಗಟ್ಟಿಯಾಗಿ ಕಚ್ಚಿದ್ದಕ್ಕೋ ಏನೋ ರಕ್ತ ವಸರಿತು, ಬಾಯೆಲ್ಲಾ  ಉಪ್ಪುಪ್ಪು 
ಇದೇ ರಕ್ತ ಹಂಚಿಕೊಂಡು ಹುಟ್ಟಿದ ಪಾಪು.
ಇಲ್ಲಿಯವರೆಗೆ ಅವನು ಉಸುರಿದ ಪ್ರತಿ ಶಬ್ದವೂ  ಕೇಳಿದ ವಸ್ತು ಉಧ್ಭವ ಆಗುತ್ತಿತ್ತು, ಆ ಕ್ಷಣದಲ್ಲಿ....
 
ನಮ್ಮಿಬ್ಬರ ಪ್ರೀತಿಯಲ್ಲಿ ಆತ  ಮುಳುಗೇಳದ ದಿನವಿಲ್ಲ, ಕೆಲವೊಮ್ಮೆ ಇವರೇ ಜಾಸ್ತಿ ಪ್ರೀತಿ ಒಳೆಯದಲ್ಲ ಅನ್ನುತ್ತಿದ್ದರು ಆದರೂ ಮೊದಲು ತಂದು ಕೊಡುವವರು ಅವರೇ...
 
ಅಮ್ಮ ಹಸಿವೆ ಆಗ್ತಾ ಇದೆಯಮ್ಮಾ, ಸ್ವಲ್ಪ ನೀರಾದರೂ ಕೊಡು...
ಇಲ್ಲ.......ಕೊಡಲಾರೆ....ಕೊಡಲಾಗದು....
ಕಲ್ಲಿನಂತೆ ಕುಳಿತಿದ್ದೆ.... ದೇವರೇ.....ನನಗೇ ಯಾಕೆ ಈ ಶಿಕ್ಷೆ!!!!!!
 
ಅಪ್ಪ
 
ಅದೇಕೋ ನಿನ್ನ ಜತೆಯಲ್ಲಿರುವಾಗಿನ ಲವಲವಿಕೆ ಈಗ ಎಲ್ಲೂ ಕಾಣಿಸುತ್ತಿಲ್ಲ. ನಿನ್ನ  ಹಾಗೆಯೇ ಎಲ್ಲೆಲ್ಲೂ ಎಲ್ಲ್ರೂ ಮುನಿಸಿಕೊಂಡೇ ಇರುವಂತೆ ಕಾಣುತ್ತಿದೆ. ಆಸ್ಪತೆಯ ಇಡೀ ಕಾರಿಡಾರೇ ದುಖಃದಲ್ಲಿ ಮುಳುಗಿರುವಂತೆ ಕಾಣುತ್ತಿದೆ. ಇಲ್ಲಿನ ಡೆಟ್ಟಾಲಿನ ಕಂಪಿಗೂ ಈ ನಿನ್ನ ವಿರಹದ ನೋವೇ ಬೆರೆತಿರುವಂತೆ ಅನ್ನಿಸುತ್ತಿದೆ. ಅದಕ್ಕೇ ಏನೋ ಆಚೆ ಈಚೆ ಓಡಾಡುತ್ತಿರುವ ದಾದಿಗಳ ವೈದ್ಯರುಗಳ ಮುಖದಲ್ಲೂ ಬೇಸರದ ಛಾಯೆಯೇ.
 
ನನ್ನ ನಿನ್ನಮ್ಮನ ಕಣ್ಣುಗಳಲ್ಲೀಗ ಅಶ್ರುಗಳೇ ಬತ್ತಿ ಹೋಗಿವೆಯೇನೋ ಅನ್ನಿಸುತ್ತಿದೆ ಕಣೋ. ಆಸ್ಪತ್ರೆಯ ಐ ಸೀ ಯೂ ನ ಮುಚ್ಚಿದ ಬಾಗಿಲಿನ ಮೇಲಿನ ಕೆಂಪು ದೀಪವನ್ನೇ ನೋಡುತ್ತಾ ನೋಡುತ್ತಾ ನಿದ್ದೆಯೇ ಇಲ್ಲದ ಎರಡು ಮೂರು ರಾತ್ರೆಗಳ ನೆನಪೂ ಕೆಂಪಾಗಿದೆ.ನೀನನುಭವಿಸಿದ ನರಕ ಯಾತನೆ ಮನಸ್ಸಿಗೆ.
ಪ್ರಾಯಶಃ ಇಡೀಪ್ರಪಂಚದಲ್ಲೇ ನಮ್ಮಂತಹ ನತದೃಷ್ಟ ತಾಯ್ತಂದೆಗಳಿರಲಿಕ್ಕಿಲ್ಲ ಪುಟ್ಟಾ, ಕೆಲವೊಮ್ಮೆಯಂತೂ ನಾವೇ ನಿನ್ನನ್ನುಈ ನರಕದ ದಳ್ಳುರಿಗೆ ದೂಡಿ ಬಿಟ್ಟೆವಲ್ಲಾ ಅನ್ನಿಸುತ್ತಿದೆ ಪುಟ್ಟಾ, ಇದಕ್ಕೆ ಪ್ರಾಯಶ್ಚಿತ್ತವೇ ಇಲ್ಲವೇನೋ... ನಮ್ಮನ್ನು ಕ್ಷಮಿಸುತ್ತೀಯಲ್ಲಾ...!!
 
ನಿನ್ನ ಆಗಮನಕ್ಕಾಗಿ ಕೋಗಿಲೆ ವಸಂತನಿಗಾಗಿ ಕಾದಂತೆ ನಾವಿಬ್ಬರೂ ಕಾಯುತ್ತಿದ್ದೇವೆ ಕಣೋ. ಆ ಬಾಗಿಲ ಮೇಲಿನ ಓಟಿ ಎಂಬ ಎರಡಕ್ಷರಗಳು ನಮ್ಮನ್ನು ಅಣಕಿಸುವಂತೆ ಭಾಸವಾಗುತ್ತಿದೆ. ಆ ಬಾಗಿಲ ಮೇಲಿನ ಕೆಂಪು ದೀಪದ ಬೆಲಕು ಯಮರಾಜನ ವಾಹನದ ಕಣ್ಣಾಗಿ ಕಾಣುತ್ತಿದೆ. ಕಾಯುತ್ತಿದ್ದೇವೆ ಜೀವಚ್ಚವಗಳಾಗಿ, ಅದು ಹಸಿರಾಗೋ ಕಾಲಕ್ಕಾಗಿ
ಈಗ ಬಾಗಿಲು ತೆರೆದು ಹೊರ ಬಂದ ವೈದ್ಯರು ನಮ್ಮ ಮನೆದೀಪವನ್ನು ನಮ್ಮಿಬ್ಬರ ಕೈಗಿಟ್ಟು ಹೇಳುವರು
ಆಪರೇಶನ್ ಸಕ್ಸಸ್
ಬಾರೋ ಪುಟ್ಟಾ...
ಅಗೋ ಬಾಗಿಲಿನ ಮೇಲಿನ ದೀಪ ಹಸಿರಾಯ್ತು.
ಓಟಿಯ ಬಾಗಿಲೂ ತೆರೆಯಿತು.
ವೈದ್ಯರೂ ಹೊರಬಂದರು.
 
ಮುಕ್ತಾಯ
 

Comments

Submitted by partha1059 Tue, 12/25/2012 - 18:34

ಗೋಪಿನಾಥರಾಯರೆ, ಕತೆಯ ಕಡೆಯನ್ನು ಅದೇಕೆ ಹಾಗೆ ನಿಲ್ಲಿಸಿದಿರಿ, ಶುಭಂ ಅಂತ ಒಂದು ಪದ ಬರೆಯಬಾರದಿತ್ತೆ ! ಉತ್ತಮ ನಿರೂಪಣೆಯ ಹಾಗೆ ಮನಕಲಕುವ ವಸ್ತುವಿರುವ ಕತೆ !
Submitted by gopinatha Mon, 12/31/2012 - 21:23

In reply to by partha1059

ಪಾರ್ಥರೆ ಎಲ್ಲವನ್ನೂ ವಿಶದೀಕರಿಸಿದರೆ ಸರಿಯಲ್ಲ‌ ಅಲ್ಲವೇ..?? ನಿಮ್ ಅಭಿಮಾನದ ಮೆಚ್ಚುಗೆಗೆ ಧನ್ಯ