ಹುತಾತ್ಮರ ದಿನದಂದು ಮಹಾತ್ಮರ ನೆನೆಯುತ್ತಾ...

ಹುತಾತ್ಮರ ದಿನದಂದು ಮಹಾತ್ಮರ ನೆನೆಯುತ್ತಾ...

ಗಾಂಧಿಗೊಂದು ವಿದಾಯ ಹೇಳುವ ಸಮಯ ಬಂದಿದೆಯೇ? ನನ್ನ ಅರಿವಿಗೆ ಬಂದಂತೆ ಗಾಂಧಿಯನ್ನು ಇಷ್ಟಪಡುವವರ ಸಂಖ್ಯೆ ದಿನೇ ದಿನೇ ವೇಗವಾಗಿ ಕುಸಿಯುತ್ತಿರುವ ಅನುಭವವಾಗುತ್ತಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಗಾಂಧಿಯನ್ನು ವಿರೋಧಿಸುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ ಅಷ್ಟೇ ಅಲ್ಲ ಗಾಂಧಿಯನ್ನು ದ್ವೇಷಿಸುವವರ ಸಂಖ್ಯೆ ಮತ್ತೂ ಹೆಚ್ಚಾಗುತ್ತಿದೆ. ಇನ್ನೂ ಆಳಕ್ಕೆ ಇಳಿದು ನೋಡಿದಾಗ ಕೆಲವರು ಗಾಂಧಿಯನ್ನು ಸಿಕ್ಕಿದರೆ ಮತ್ತೊಮ್ಮೆ ಇರಿದು ಇರಿದು ಕೊಲ್ಲುವ ಮಾತನಾಡುತ್ತಾರೆ.

ಇಂತಹ  ಗಾಂಧಿಯನ್ನು ಈ ದೇಶದಿಂದ ಓಡಿಸಲು ಇದು ಅತ್ಯಂತ ಸುಸಮಯ. ಈಗಾಗಲೇ ಗಾಂಧಿಯ ಪ್ರತಿಮೆಗಳು ಕಣ್ಮರೆಯಾಗುತ್ತಿವೆ. ಅವರ ಚಿಂತನೆಗಳು ನಾಶವಾಗುತ್ತಿವೆ‌. ಅದರ ವಿರುದ್ಧ ಚಿಂತನೆಗಳು ಮಾನ್ಯತೆ ಪಡೆಯುತ್ತಿವೆ. ಒಂದು ಕಡೆ ಭಗವದ್ಗೀತೆಯ ಶ್ಲೋಕಗಳು, ಮತ್ತೊಂದು ಕಡೆ ವೇದ ಉಪನಿಷತ್ತು ಮನುಸ್ಮೃತಿಗಳ ಕಡೆಗೆ ಒಲವು, ಇನ್ನೊಂದು ಕಡೆ ಕುರಾನ್ ಪ್ರಚಾರ, ಮಗದೊಂದು ಕಡೆ ಬೈಬಲ್ ವಿಸ್ತರಣೆ ಹಾಗೆಯೇ ಬುದ್ದನ ಚಿಂತನೆಗಳು, ಚಾಣಕ್ಯನ ನೀತಿಗಳು, ಆಚಾರ್ಯ ತ್ರಯರ ಸಂದೇಶಗಳು, ಬಸವಣ್ಣನವರ ಪ್ರವಚನಗಳು, ವಿವೇಕಾನಂದರ ಉಪನ್ಯಾಸಗಳು, ಬಾಬಾ ಸಾಹೇಬರ ವಿಚಾರಗಳು ಮುನ್ನಲೆಗೆ ಬಂದು ಒಂದು ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್, ವೀರ ಸಾರ್ವರ್ಕರ್ ಅವರನ್ನು ಗಾಂಧಿಯ ವಿರುದ್ಧ ವಿಜೃಂಭಿಸುವ ಭಾಷಣಗಳು, ಪುಸ್ತಕಗಳು, ಉಪನ್ಯಾಸಗಳು ಸಹ ಹೆಚ್ಚಾಗಿದೆ.

ಇಂತಹ ಸಂದರ್ಭದಲ್ಲಿ ಗಾಂಧಿಯನ್ನು ಇಟ್ಟುಕೊಂಡು ಮಾಡುವುದಾದರೂ ಏನು. ಗಾಂಧಿಯೊಬ್ಬ ಬ್ರಿಟಿಷ್ ಏಜೆಂಟ್, ಗಾಂಧಿಯೊಬ್ಬ ನಪುಂಸಕ, ಗಾಂಧಿಯೊಬ್ಬ ಕಪಟಿ, ಗಾಂಧಿಯೊಬ್ಬ ರಣಹೇಡಿ, ಗಾಂಧಿಯೊಬ್ಬ ಹಿಂದುತ್ವದ ವಿರೋಧಿ ಎಂದು ಹಿಯಾಳಿಸಿ ಕೇಳಿಬರುತ್ತಿರುವ ಮಾತುಗಳ ನಡುವೆ ಗಾಂಧಿ ಸಮರ್ಥನೆಯ ವ್ಯರ್ಥ ಪ್ರಯತ್ನ ಬಿಟ್ಟು ಅವರಿಗೆ ಒಂದು ವಿದಾಯ ಹೇಳಿ ಬಿಡೋಣ.

ಗಾಂಧಿ ಬದುಕಿದ್ದ ಸಮಯದಲ್ಲಿ ಬಹುತೇಕ ಅನಕ್ಷರಸ್ಥರಿಂದಲೇ ದೇಶ ತುಂಬಿತ್ತು. ಜನರ ಬಳಿ ಹಣವಿರಲಿಲ್ಲ. ಯಾವುದೇ ಪ್ರಬಲ ಮಾಧ್ಯಮಗಳು ಜನಪ್ರಿಯವಾಗಿರಲಿಲ್ಲ. ಚುನಾವಣಾ ರಾಜಕೀಯ ಹೆಚ್ಚು ಪ್ರಚಲಿತದಲ್ಲಿರಲಿಲ್ಲ. ಅಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಹಾತ್ಮಾನಾಗುತ್ತಾನೆ. ಆದರೆ ಈಗ ಎಲ್ಲರೂ ಬುದ್ದಿವಂತರೇ, ಜ್ಞಾನಿಗಳೇ, ಮೇಧಾವಿಗಳೇ. ಎಲ್ಲರ ಬಳಿಯೂ ವಿಶ್ವದ ಸಂಪೂರ್ಣ ಮಾಹಿತಿ ನೀಡುವ ಮೊಬೈಲ್ ತಂತ್ರಜ್ಞಾನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಮತ್ತು ಅದು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಬಹುತೇಕರ ಬಳಿ ದುಡ್ಡು ಇದೆ. ಅದರಿಂದಾಗಿಯೇ ಅವರಿಗೆ ಗಾಂಧಿ ಒಬ್ಬ ‌ಸವಕಲು ನಾಣ್ಯದಂತೆ ಕಾಣುತ್ತಾರೆ.

ತನ್ನ ಮಕ್ಕಳನ್ನೇ ಸರಿಯಾಗಿ ನಿರ್ವಹಿಸಲಿಲ್ಲ ಗಾಂಧಿ, ತನ್ನ ದೇಹವನ್ನೇ ಸರಿಯಾಗಿ ನಿರ್ವಹಿಸಲಿಲ್ಲ ಗಾಂಧಿ ಇನ್ನೂ ತನ್ನ ‌ದೇಶವನ್ನು ನಿರ್ವಹಿಸಲು ಸಾಧ್ಯವೇ ಎಂದು ಬಹಳ ಜನ ಕೇಳುತ್ತಾರೆ. ಒಬ್ಬ ಮಂತ್ರಿ " ಶಸ್ತ್ರ ಮತ್ತು ಶಾಸ್ತ್ರದ‌ ಬಲದಿಂದ ಸ್ವಾತಂತ್ರ್ಯ ಲಭಿಸಿತೇ ಹೊರತು ಅಹಿಂಸೆಯಿಂದ ಅಲ್ಲ " ಎಂದು ನೇರವಾಗಿಯೇ ಗಾಂಧಿಯ ಕೊಡುಗೆಯನ್ನು ಅಲ್ಲಗಳೆದರು. 

ಇನ್ನೊಬ್ಬ ಮಂತ್ರಿ " ನಾಥುರಾಂ ಘೋಡ್ಸೆ ನಿಜವಾದ ದೇಶಪ್ರೇಮಿ - ಗಾಂಧಿ ದೇಶದ್ರೋಹಿ " ಎಂದು ಬಹಿರಂಗವಾಗಿಯೇ ಹೇಳಿದರು. ಸತ್ಯ ಅಹಿಂಸೆ ಸರಳತೆ ನೈತಿಕತೆ ಮಾನವೀಯ ಮೌಲ್ಯಗಳು ಸಂಪೂರ್ಣ ಕುಸಿತ ಕಂಡಿರುವಾಗ ಗಾಂಧಿಯನ್ನು ಮರೆಯುವುದೇ ಒಳಿತು. ಇಲ್ಲದಿದ್ದರೆ...

***

ಭಾರತ ದೇಶ ಪಡೆದ 1947 ರ  ಸ್ವಾತಂತ್ರ್ಯ  ಹೀಗೂ ಉಪಯೋಗವಾಗುತ್ತಿದೆ. ಮತದಾರನಿಗೆ ಹಣ - ಹೆಂಡ ಸೀರೆ ಪಂಚೆ ಪಡೆದು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ ದೊರೆತಿದೆ. ಹಾಗೆಯೇ ಗೆದ್ದ ಅಭ್ಯರ್ಥಿ ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಅಥವಾ ಮಂತ್ರಿಗಿರಿ ಕೊಡುತ್ತಾರೋ ಅವರ ಪಕ್ಷಕ್ಕೆ ಹಾರುವ ಸ್ವಾತಂತ್ರ್ಯ ಉಳಿಸಿಕೊಂಡಿದ್ದಾರೆ. ಹಾಗೆಯೇ ಮಂತ್ರಿಯಾದವನು ತನ್ನ ಕುಟುಂಬದ ಏಳು ತಲೆಮಾರಿಗಾಗುವಷ್ಟು ಸಂಪತ್ತು ಗಳಿಸುವ ಸ್ವಾತಂತ್ರ್ಯವೂ ಸಿಕ್ಕಿದೆ.

ಟಿವಿ, ಫೇಸ್ ಬುಕ್, ಟ್ವಿಟರ್,  ವಾಟ್ಸ್ ಆಪ್ ಮುಂತಾದ ಮೀಡಿಯಾಗಳಲ್ಲಿ ಯಾರನ್ನು ಬೇಕಾದರೂ ಅವರ ವೈಯಕ್ತಿಕ ನೆಲೆಯಲ್ಲಿಯೂ ಬಾಯಿಗೆ ಬಂದಂತೆ ಮಾತನಾಡುವ ಸ್ವಾತಂತ್ರ್ಯವೂ ದೊರೆತಿದೆ. ಸಾಹಿತಿಗಳು - ಕಲಾವಿದರು - ಹೋರಾಟಗಾರರು - ಮಠಾದೀಶರು ಮುಂತಾದ ಜನಪ್ರಿಯರೂ ಕೂಡ ತಮ್ಮ ಸ್ಥಾನ ಮತ್ತು ಜವಾಬ್ದಾರಿಯ ಅರಿವಿಲ್ಲದೆ ಜನರ ಮಧ್ಯೆ ಬೆಂಕಿಹಚ್ಚುವ ಸಂಪೂರ್ಣ ಸ್ವಾತಂತ್ರ್ಯ ಗಳಿಸಿಕೊಂಡಿದ್ದಾರೆ. ಸಿಕ್ಕ ಸಿಕ್ಕ ವಿಷಯಗಳಿಗೆ ಇಡೀ ಭಾರತವನ್ನೇ ಬಂದ್ ಮಾಡಿ ಮನಸ್ಸೋ ಇಚ್ಚೆ ಗಲಭೆ ಮಾಡುವ ಮತ್ತು ಮಾಡಿಸುವ ಸ್ವಾತಂತ್ರ್ಯವೂ ನಮಗಿದೆ. ಕೆಲವು ಕೊಲೆ - ಅತ್ಯಾಚಾರ - ಭ್ರಷ್ಟಾಚಾರ - ವಂಚನೆ - ಕಳ್ಳತನವನ್ನು ಮಾಡಿಯೂ ಪೋಲೀಸರಿಂದಲೋ ತಪ್ಪಿದರೆ ನ್ಯಾಯಾಲಯದಿಂದಲೋ ಬಚಾವ್ ಆಗಿ ಬರುವ ಸ್ವಾತಂತ್ರ್ಯವೂ ಇದೆ. ದಾರಿಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಚುಡಾಯಿಸಿ ಭಾರತ್ ಮಾತಾಕಿ ಜೈ ಎನ್ನುವ ಸ್ವಾತಂತ್ರ್ಯವೂ ನಮಗಿದೆ. ತಾವು ಹುಟ್ಟಿದ ಜಾತಿ ಹೇಳಿಕೊಂಡು ನಮಗೇಗೆಬೇಕೋ ಹಾಗೆ ಅದರ ಲಾಭ ಪಡೆಯುವ ಸ್ವಾತಂತ್ರ್ಯವೂ ನಮಗಿದೆ.

ಇದೆಲ್ಲದರ ನಡುವೆ  ಬ್ರಿಟೀಷರ ಕಾಲದಲ್ಲಿ ಇದ್ದ ಆ ಗುಲಾಮಿ ಮನೋಭಾವ ಮಾತ್ರ ಬದಲಾಗಿಲ್ಲ.  ಸ್ವತಂತ್ರ ಚಿಂತನೆ - ಕ್ರಿಯಾತ್ಮಕ ಬೆಳವಣಿಗೆ - ಪ್ರಬುಧ್ಧ ಮನಸ್ಥಿತಿ ಮಾತ್ರ ನಮಗೆ ದಕ್ಕಲಿಲ್ಲ. ಆಧುನಿಕ ಯುವಕರಂತೂ ಯಾವುದೋ ಸಿದ್ಧಾಂತಕ್ಕೋ, ಇಲ್ಲ ಯಥೇಚ್ಛ ಹಣಕ್ಕೋ ಅಥವಾ ತಂತ್ರಜ್ಞಾನಕ್ಕೋ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ," ಸ್ವಾತಂತ್ರ್ಯವೆಂದರೆ ನಮಗಿಷ್ಟ ಬಂದಂತೆ ಆಡುವ ಸ್ವೇಚ್ಛಾಚಾರ ಅಥವಾ ಸ್ವಾತಂತ್ರ್ಯವೆಂದರೆ ಇನ್ನೊಬ್ಬರಿಗೆ ಮಾರಿಕೊಳ್ಳುವ ಗುಲಾಮಿತನ. "

***

ಗಾಂಧಿಯನ್ನು ಕೊಂದದ್ದು ಗೋಡ್ಸೆ ಮಾತ್ರವಲ್ಲ, ಗಾಂಧಿ ತತ್ವಗಳನ್ನು ಸಮಾಧಿ ಮಾಡಿದ ದೇಶದ ಭವಿಷ್ಯ ! ಪಿಕ್ಚರ್ ಅಭೀ ಬಾಕಿ ಹೈ...

ಗಾಂಧಿಯ ಸ್ವಗತ ಹೀಗಿರಬಹುದೆ… ನಾನು ಅಷ್ಟೊಂದು ಕೆಟ್ಟವನೇ ? ಗುಂಡಿಟ್ಟು ಕೊಲ್ಲುವಷ್ಟು ಅಪರಾಧಿಯೇ ? ನನ್ನನ್ನು ಮಹಾತ್ಮ ಎಂದು ಕರೆದು ಭಾರತದ ಜನರನ್ನು ವಂಚಿಸಲಾಗಿದೆಯೇ ? ನಾನು ಕಪಟ ಮುಖವಾಡದ ಆತ್ಮ  ವಂಚಕನೇ ? ಸತ್ಯಕ್ಕೆ ಸರಳತೆಗೆ ಅಹಿಂಸೆಗೆ ನಾನು ಅವಮಾನ ಮಾಡಿರುವೆನೇ ? ಸ್ವಾತಂತ್ರ್ಯ ಹೋರಾಟದ ಎಲ್ಲಾ ಹೆಸರನ್ನು ನಾನು ಪಡೆದ ಸ್ವಾರ್ಥಿಯೇ ?

೧೮೬೯ ರ ಅಕ್ಟೋಬರ್ ೨ ರಂದು ನಾನು ಸ್ವತಂತ್ರವಾಗಿ ಉಸಿರಾಡಿದ  ದಿನದಿಂದ ಜನವರಿ ೩೦ ೧೯೪೮ ರಂದು ನಾಥುರಾಂ ಘೋಡ್ಸೆ ಹೊಡೆದ ಗುಂಡಿನಿಂದ ನಾನು ಎಳೆದ ಕೊನೆಯ ಉಸಿರಿನವರೆಗೂ ನನ್ನ ಇಡೀ ಬದುಕೊಂದು ತೆರೆದ ಪುಸ್ತಕ. ನನ್ನ ಬಗ್ಗೆ ಯಾವ ಅಭಿಪ್ರಾಯ ಹೊಂದಲೂ ನೀವು ಸ್ವತಂತ್ರರು. ನನ್ನ ಮೇಲಿನ ಯಾವ ಆಪಾದನೆಯನ್ನು ನಾನು ನಿರಾಕರಿಸುವುದಿಲ್ಲ. ಆದರೆ ನಿಮ್ಮಲ್ಲಿ ನನ್ನ ಮನವಿ ಇಷ್ಟೆ.

ಭಾರತದ ಅಧೀಕೃತ ನಾಗರಿಕ ಇತಿಹಾಸ ಪ್ರಾರಂಭವಾಗುವ ಸಿಂಧೂ ನಾಗರಿಕತೆಯ, ಹರಪ್ಪ ಮತ್ತು ಮಹೆಂಜೋದಾರೋ ದಿನಗಳಿಂದ ಈ ಕ್ಷಣದವರೆಗೆ ಎಲ್ಲವನ್ನೂ ಒಮ್ಮೆ ಅವಲೋಕಿಸಿ, ನಿಮ್ಮ ಜ್ಞಾನವನ್ನು ಮತ್ತು ಬದುಕಿನ ಅನುಭವಗಳನ್ನು ಅದರೊಂದಿಗೆ ಸಮೀಕರಿಸಿ.  ಈ ಬೃಹತ್ ಮತ್ತು ವೈವಿಧ್ಯಮಯ ನೆಲದಲ್ಲಿ ನಡೆದ ಹೋರಾಟಗಳು, ಅದರ ನಾಯಕತ್ವ, ಫಲಿತಾಂಶಗಳು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಂತರ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾನು ಬ್ರಿಟಿಷರ ಏಜೆಂಟ್ ಆಗಲು ಸಾಧ್ಯವೇ ? ಅದರಿಂದ ನಾನು ಪಡೆಯಬಹುದಾದ್ದರೂ ಏನು ? ಅಹಿಂಸೆಯನ್ನು ಉಸಿರಾಡಿದ ನಾನು ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದವರ ಸಾವಿಗೆ ಕಾರಣ ಎಂದು ಭಾವಿಸುವಿರೇಕೆ ? ಸರ್ವೋದಯವೇ ಬದುಕಿನ ಮೂಲ ಮಂತ್ರ ಎಂದು ನಂಬಿದ್ದ ನಾನು ಅಸ್ಪೃಶ್ಯತೆಯನ್ನು ಬೆಂಬಲಿಸುವುದು ಹೇಗೆ ತಾನೆ ಸಾಧ್ಯ. ಮಾನವೀಯತೆಯ ನೆಲೆಯಲ್ಲಿ ಸಮಾಜ ನಿರ್ಮಿಸುವ ಕನಸಿನ ನಾನು ಮುಸ್ಲಿಂ ಪಕ್ಷಪಾತಿ ಎಂದು ಹೇಳುವುದು ತಪ್ಪು ಅಭಿಪ್ರಾಯವಲ್ಲವೇ ?

ಹರಿದು ಹಂಚಿಹೋಗಿದ್ದ ಭಾರತದ ಸಂಸ್ಥಾನಗಳನ್ನು ಒಗ್ಗೂಡಿಸಿ ವಿಭಿನ್ನ ಆಚರಣೆ ನಂಬಿಕೆಗಳ ಜನರನ್ನು ಒಟ್ಟು ಮಾಡಿ ಬ್ರಿಟಿಷರು ಒಡೆದು ಆಳುವ ನೀತಿಯನ್ನು ಮೀರಿ ನಿರ್ಧಾರ ತೆಗೆದುಕೊಳ್ಳುವ ಸಂಧರ್ಭದಲ್ಲಿ, ಅನೇಕ ಏರಿಳಿತಗಳನ್ನು ಮೆಟ್ಟಿ ನಿಲ್ಲುವಾಗ ಕಾಲಾ ನಂತರದ ಬದಲಾವಣೆಗಳ, ಫಲಿತಾಂಶಗಳ ಆಧಾರದ ಮೇಲೆ ನನ್ನನ್ನು ನಿರ್ಧರಿಸುವುದು ಸರಿಯೇ ? ಸಣ್ಣ ಸಣ್ಣ ಸಂಘ ಸಂಸ್ಥೆಗಳಲ್ಲಿ, ಫೇಸ್‌ಬುಕ್‌ ವಾಟ್ಸ್ ಆಪ್ ಗುಂಪುಗಳಲ್ಲಿಯೇ ಹಲವಾರು ವೈರುದ್ಯ ಚರ್ಚೆಗಳು ಟೀಕೆಗಳು ಅಸೂಯೆಗಳು ಗಲಾಟೆಗಳು ನಡೆಯುತ್ತವೆ. ಸಹಕಾರ ಮತ್ತು ಹೊಂದಾಣಿಕೆ ಸಾಧ್ಯವಾಗುವುದಿಲ್ಲ. ಇನ್ನು ಇಡೀ ದೇಶವನ್ನು ಒಗ್ಗೂಡಿಸಿ ಪರಕೀಯರ ವಿರುದ್ಧ ಹೋರಾಡುವುದು ಸುಲಭವೇ ? ಯಾವ ನಿರ್ಧಾರ ತೆಗೆದುಕೊಂಡರು ಒಬ್ಬರಲ್ಲ ಒಬ್ಬರು ವಿರೋಧಿಸುತ್ತಲೇ ಇರುತ್ತಾರೆ. 

ಜೊತೆಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ‌ಎತ್ತಿಹಿಡಿಯುವ ಜವಾಬ್ದಾರಿ ಸಹ ಇರುತ್ತದೆ. ಸತ್ಯವೋ ಮಿಥ್ಯವೋ, ನಂಬಿಕೆಯೋ ಮೂಡ ನಂಬಿಕೆಯೋ ಜನರ ಭಾವನೆಗಳಿಗೆ ನೇರ ಘಾಸಿ ಮಾಡುವಂತಿಲ್ಲ. ಸೌಮ್ಯವಾಗಿ ಅದನ್ನು ತಿಳಿ ಹೇಳಬೇಕು. ಒಂದು ಪ್ರಮುಖ ಕ್ರಿಕೆಟ್ ಮ್ಯಾಚಿನಲ್ಲಿ ಇರುವ ಉತ್ತಮ ೧೧ ಜನರನ್ನು ‌ಆಯ್ಕೆ ಮಾಡಿ ಆಡಲಾಗುತ್ತದೆ. ಫಲಿತಾಂಶ ಗೆದ್ದರೆ ನಮ್ಮ ನಿರ್ಧಾರ ಎಲ್ಲರೂ ಮೆಚ್ಚುತ್ತಾರೆ. ಸೋತರೆ ಅದೇ ಅಂಶಗಳನ್ನು ಟೀಕಿಸಲು ಉಪಯೋಗಿಸಿಕೊಳ್ಳುತ್ತಾರೆ.

ಸಾಮೂಹಿಕವಾಗಿ, ಆಕ್ರಮಣಕಾರಿಯಾಗಿ ಬ್ರಿಟಿಷರನ್ನು ಓಡಿಸುವುದು ಸಾಧ್ಯವಿರಲಿಲ್ಲ ಅಥವಾ ಸಂಪೂರ್ಣ ಸತ್ಯ ಅಹಿಂಸೆಯ ಶರಣಾಗತಿ ಸಹ ಪ್ರಯೋಜನವಿರಲಿಲ್ಲ. ಇಡೀ ಒಕ್ಕೂಟವನ್ನು ಜಾಗೃತಗೊಳಿಸಿ ಯಾವುದೇ ಸಾವು ನೋವುಗಳಿಲ್ಲದೆ ಪರಕೀಯರನ್ನು ಭಾರತ ಬಿಟ್ಟು ತೊಲಗುವಂತೆ ಮಾಡುವುದು ಬಹುದೊಡ್ಡ ಸವಾಲಾಗಿತ್ತು. ರಕ್ತ ಹರಿಸಿ ಹೋರಾಡಿದ್ದರೆ ಆಗುತ್ತಿದ್ದ ಅಪಾರ ಸಂಕಷ್ಟಗಳನ್ನು ಊಹಿಸಿದರೆ ಗೆಲುವಿಗಿಂತ ಯಾಥಾಸ್ಥಿತಿಯೇ ಉತ್ತಮ ಎಂದು ಖಂಡಿತ ಅನಿಸುತ್ತಿತ್ರು. ಏನಾದರಾಗಲಿ, ನಾನು ಮಹಾತ್ಮನೋ ಹುತಾತ್ಮನೋ ಎಂಬುದು ಮುಖ್ಯವಲ್ಲ. ‌ನನ್ನ ಎಲ್ಲಾ ಮೂರ್ತಿಗಳನ್ನು, ಸ್ಮಾರಕಗಳನ್ನು , ಹೆಸರುಗಳನ್ನು ನಾಶ ಮಾಡಿ ಚಿಂತೆಯಿಲ್ಲ. ಘೋಡ್ಸೆಯ ದೇವಸ್ಥಾನಗಳನ್ನು ಎಲ್ಲಾ ಕಡೆಯೂ ನಿರ್ಮಿಸಿ ಬೇಸರವಿಲ್ಲ. ಆದರೆ ಭಾರತ ದೇಶ ಮಾತ್ರ ನಾಶವಾಗದಿರಲಿ. ಇಲ್ಲಿನ ಜನ ನೆಮ್ಮದಿಯಿಂದ ಇರಲಿ. ತಮ್ಮ ಒಳ ಜಗಳಗಳಿಂದ ಮತ್ತೊಮ್ಮೆ ಪರಕೀಯರ ದಾಳಿಗೆ ಒಳಗಾಗದಿರಲಿ ಎಂದು ಆಶಿಸುತ್ತಾ, ನಾನು ಗುಂಡಿಗೆ ಬಲಿಯಾದ ಜನವರಿ 30 ರ  ಈ ದಿನವನ್ನು ಹರ್ಷಿಸುವವರಿಗೂ, ದುಃಖಿಸುವವರಿಗೂ ನೆನಪಿಸುತ್ತಾ....

ಇಂತಿ, ಅನಂತದಲ್ಲಿ ಲೀನನಾಗಿ ಭಾರತದ ಭೂ ಪ್ರದೇಶದ ಮೇಲೆ ಆಕಾಶದಲ್ಲಿ ಸದಾ ಸಂಚರಿಸುತ್ತಿರುವ ಮೋಹನ ದಾಸ್ ಕರಮಚಂದ್ ಗಾಂಧಿಯ ಆತ್ಮ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ