ಹುಲಿಯಿಂದ ಪಾರಾದ ಸೌದೆ ಕಡಿಯುವವನು
ಹಲವಾರು ವರುಷಗಳ ಹಿಂದೆ ಹಿಮಪುರವೆಂಬ ಹಳ್ಳಿಯಲ್ಲಿ ಗೋಪಣ್ಣ ಎಂಬ ಸೌದೆ ಕಡಿಯುವವನಿದ್ದ. ಪರ್ವತದ ತಪ್ಪಲಿನಲ್ಲಿದ್ದ ಆ ಹಳ್ಳಿಯ ಅಂಚಿನಲ್ಲಿ ದಟ್ಟ ಕಾಡು. ಗೋಪು ದಿನದಿನವೂ ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರುತ್ತಿದ್ದ.
ಅದೊಂದು ದಿನ ತಾನು ಕಡಿದಿದ್ದ ಸೌದೆಯನ್ನು ಗೋಪಣ್ಣ ಮೂಟೆ ಕಟ್ಟುತ್ತಿದ್ದ. ಆಗ ಹುಲಿಯ ಗರ್ಜನೆ ಕೇಳಿಸಿತು. ಆ ಹುಲಿ ನೆಗೆದು ಬಂದು ಅವನೆದುರು ನಿಂತಿತು. ಹುಲಿಯಿಂದ ಪಾರಾಗುವುದು ಹೇಗೆಂದು ಒಂದು ಕ್ಷಣ ಯೋಚಿಸಿದ ಗೋಪಣ್ಣ. ನಂತರ ಸೌದೆಯ ಹೊರೆಯನ್ನು ನೆಲದಲ್ಲಿ ಎಳೆಯ ತೊಡಗಿದ. ಅದು ಭಾರವಿರುವಂತೆ ನಟಿಸಿದ. ಇದನ್ನೆಲ್ಲ ನೋಡುತ್ತಿದ್ದ ಹುಲಿ ಅಬ್ಬರಿಸಿತು, “ಅದೊಂದು ಸಣ್ಣ ಮೂಟೆ. ಅದನ್ನು ನೀನು ಯಾಕೆ ತಲೆಯ ಮೇಲೆ ಎತ್ತಿಕೊಳ್ಳುತ್ತಿಲ್ಲ?"
ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಗೋಪಣ್ಣ ಹೇಳಿದ, "ನಿನಗೆ ಗೊತ್ತಿಲ್ಲ. ಈ ಸೌದೆ ಮೂಟೆ ಭಾರೀ ಭಾರವಿದೆ. ಇದನ್ನು ಒಂದು ಇಂಚು ಸರಿಸಲಿಕ್ಕೂ ನಾನು ಒದ್ದಾಡುತ್ತಿದ್ದೇನೆ. ನೀನು ಅಂತಹ ಬಲಶಾಲಿ ಆಗಿದ್ದರೆ ಇದನ್ನು ಸರಿಸು ನೋಡೋಣ. ನಾನು ಪಂಥ ಹಾಕುತ್ತೇನೆ - ನಿನ್ನಿಂದ ಸಾಧ್ಯವಿಲ್ಲ.”
ಇದನ್ನು ಕೇಳಿದ ಹುಲಿ ಗುರುಗುಟ್ಟಿತು. ಅದು ತನ್ನ ಬಲವನ್ನೆಲ್ಲ ಒಗ್ಗೂಡಿಸಿ ಸೌದೆಮೂಟೆಯನ್ನು ಮುಂಗಾಲುಗಳಿಂದ ತಳ್ಳಿತು. ಆ ರಭಸಕ್ಕೆ ಸೌದೆ ಮೂಟೆ ಪರ್ವತದ ಇಳಿಜಾರಿನಲ್ಲಿ ವೇಗವಾಗಿ ಉರುಳಿತು. ಆಗ ಹುಲಿಗೆ ಆಯ ತಪ್ಪಿ, ಅದೂ ಸೌದೆ ಮೂಟೆಯೊಂದಿಗೆ ಉರುಳಿಕೊಂಡು ಇಳಿಜಾರಿನ ಬುಡಕ್ಕೆ ಜಾರಿತು.
ತಕ್ಷಣವೇ ಗೋಪಣ್ಣ ಅಲ್ಲಿಂದ ಓಡಿ ಹೋದ. ಅನಂತರ ಒಂದು ವಾರ ಅವನು ಕಾಡಿಗೆ ಸೌದೆ ಕಡಿಯಲು ಹೋಗಲೇ ಇಲ್ಲ. ತದನಂತರ ಅವನು ಕಾಡಿಗೆ ಹೋದಾಗ ಪುನಃ ಅದೇ ಹುಲಿ ಅವನಿಗೆ ಎದುರಾಯಿತು. ಅದು ಅವನನ್ನು ಗುರುತಿಸಿ ಗರ್ಜಿಸಿತು. "ಆ ದಿನ ನನಗೆ ದಾರಿ ತಪ್ಪಿಸಿದೆ. ಆದರೆ ಇವತ್ತು ನೀನು ಹೇಗೆ ನನ್ನಿಂದ ಪಾರಾಗುತ್ತಿ? ನಿನ್ನನ್ನು ಈಗಲೇ ತಿನ್ನುತ್ತೇನೆ” ಎನ್ನುತ್ತಾ ಗೋಪಣ್ಣನತ್ತ ನುಗ್ಗಿ ಬಂತು.
ಗೋಪಣ್ಣ ಇನ್ನೊಂದು ಐಡಿಯಾ ಮಾಡಿದ. “ಹುಲಿರಾಯಾ, ನನ್ನನ್ನು ಕ್ಷಮಿಸು. ಇವತ್ತು ನಿನ್ನನ್ನು ಉಳಿಸಲಿಕ್ಕಾಗಿಯೇ ನಾನು ಕಾಡಿಗೆ ಬಂದಿದ್ದೇನೆ. ಆದರೆ ನಿನಗೆ ನನ್ನ ಮೇಲೆ ನಂಬಿಕೆಯಿಲ್ಲ” ಎಂದ. ಹುಲಿಗೆ ಕುತೂಹಲವಾಯಿತು. “ಏನೆಂದೆ? ನನ್ನನ್ನು ನೀನು ಉಳಿಸುವುದೇ? ಅದು ಹೇಗೆ?” ಎಂದು ಕೇಳಿತು.
ಹುಲಿಗೆ ಒಂದು ಹಗ್ಗದ ತುಂಡನ್ನು ತೋರಿಸುತ್ತಾ ಗೋಪಣ್ಣ ಉತ್ತರಿಸಿದ, "ನಮ್ಮ ಹಳ್ಳಿಯಲ್ಲಿ ಎಲ್ಲರೂ ಆಕಾಶ ಕೆಳಗೆ ಬೀಳುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಅವರೆಲ್ಲರೂ ತಮ್ಮನ್ನು ಮರಗಳಿಗೆ ಬಿಗಿದು ಕೊಳ್ಳಲಿಕ್ಕಾಗಿ ಹಗ್ಗದ ತುಂಡುಗಳನ್ನು ಸಿದ್ಧ ಮಾಡಿ ಇಟ್ಟುಕೊಂಡಿದ್ದಾರೆ. ಹಾಗೆ ಬಿಗಿದುಕೊಂಡರೆ ಕೆಳಗೆ ಬೀಳುವ ಆಕಾಶದಿಂದ ರಕ್ಷಿಸಿ
ಕೊಳ್ಳಬಹುದು. ನನಗೆ ನಿನ್ನ ಚಿಂತೆಯಾಯಿತು. ನಿನಗೆ ಕೊಡಲಿಕ್ಕಾಗಿ ಈ ಹಗ್ಗದ ತುಂಡನ್ನು ತಂದಿದ್ದೇನೆ."
ಗೋಪಣ್ಣನ ಮಾತುಗಳನ್ನು ಕೇಳಿ ಹುಲಿಗೆ ಕೃತಜ್ನತೆ ಮೂಡಿತು. ಅಲ್ಲಿದ್ದ ಒಂದು ದೊಡ್ಡ ಮರವನ್ನು ತೋರಿಸುತ್ತಾ ಹುಲಿ ಹೇಳಿತು, “ಗೆಳೆಯಾ, ಕೆಳಗೆ ಬೀಳುವ ಆಕಾಶದಿಂದ ಬಚಾವ್ ಆಗಲಿಕ್ಕಾಗಿ ನನ್ನನ್ನು ಈ ಮರದ ಕಾಂಡಕ್ಕೆ ಕಟ್ಟು.”
ಈ ಅವಕಾಶಕ್ಕಾಗಿ ಕಾಯುತ್ತಿದ್ದ ಗೋಪಣ್ಣ, ಹುಲಿಯನ್ನು ಹಗ್ಗದಿಂದ ಆ ಮರದ ಕಾಂಡಕ್ಕೆ ಕಟ್ಟಿ, ಅಲ್ಲಿಂದ ಓಡಿ ಹೋದ. ಸ್ವಲ್ಪ ಹೊತ್ತಿನ ನಂತರ, ಆ ಮನುಷ್ಯ ಪುನಃ ತನ್ನನ್ನು ಮೂರ್ಖನನ್ನಾಗಿ ಮಾಡಿದ್ದಾನೆಂದು ಹುಲಿಗೆ ಅರ್ಥವಾಯಿತು. ಅದು ಹೇಗೋ ಹೆಣಗಾಡಿ ಹಗ್ಗದ ಸುತ್ತುಗಳಿಂದ ಜಾರಿ, ಬಂಧನದಿಂದ ಬಿಡುಗಡೆ ಆಯಿತು.
ಕೆಲವು ತಿಂಗಳುಗಳ ನಂತರ ಗೋಪಣ್ಣ ಕಟ್ಟಿಗೆ ಕಡಿಯುತ್ತಿದ್ದಾಗ ಅದೇ ಹುಲಿ ಹಿಂಬದಿಯಿಂದ ಅವನ ಮೇಲೆ ಎರಗಿತು. ಈಗ ಗೋಪಣ್ಣ ಹೆದರಿ ಬಿಟ್ಟ. ಆದರೂ ಸಂಭಾಳಿಸಿಕೊಂಡು, “ಓ ಹುಲಿ ಗೆಳೆಯಾ, ಹ್ಯಾಗಿದ್ದಿ?” ಎಂದು ಕೇಳಿದ.
ಹುಲಿ ಆಕ್ರೋಶದಿಂದ ಗರ್ಜಿಸಿ ಹೇಳಿತು, "ದುಷ್ಟ ಮನುಷ್ಯನೇ, ನಾನು ನಿನ್ನ ಗೆಳೆಯನಲ್ಲ. ಇವತ್ತು ನಿನ್ನ ಮೋಸಕ್ಕೆ ನಾನು ಬಲಿ ಆಗೋದಿಲ್ಲ." ಗೋಪಣ್ಣ ಮತ್ತೊಂದು ತಂತ್ರ ಮಾಡಿದ. “ಹುಲಿರಾಯಾ, ಸಿಟ್ಟು ಮಾಡಿಕೊಳ್ಳ ಬೇಡ. ಆದರೆ ನಾನು ಸಾಯುವ ಮುಂಚೆ ನಿನಗೊಂದು ರಹಸ್ಯ ಹೇಳಬೇಕೆಂದಿದ್ದೇನೆ” ಎಂದ ಗೋಪಣ್ಣ.
ಹುಲಿಗೆ ಕುತೂಹಲ ತಡೆಯಲಾಗಲಿಲ್ಲ. ಆ ರಹಸ್ಯವೇನೆಂದು ಕೇಳಿದಾಗ, ಹುಲಿಯ ಕಿವಿಯಲ್ಲಿ ಗೋಪಣ್ಣ ಪಿಸುಗುಟ್ಟಿದ, “ಈ ಮರದ ತುತ್ತತುದಿಯ ಕೊಂಬೆಯಲ್ಲಿ ದೊಡ್ಡ ಗೂಡಿನಲ್ಲಿ ಒಂದು ಮ್ಯಾಜಿಕ್ ಮೊಟ್ಟೆಯಿದೆ. ಅದನ್ನು ನೀನು ತಿಂದರೆ, ಇಡೀ ಜಗತ್ತಿನಲ್ಲಿ ಅತ್ಯಂತ ಶಕ್ತಿವಂತನಾಗುತ್ತಿ.”
ಇದನ್ನು ಕೇಳಿದ ಹುಲಿ ಖುಷಿಯಿಂದ ಕುಣಿದಾಡಿತು. "ಸರಿ. ನೀನು ಸಾಯುವ ಮುಂಚೆ ಈ ಮರ ಹತ್ತಿ ಆ ಮೊಟ್ಟೆ ತಂದು ಕೊಡು. ಯಾಕೆಂದರೆ ನನಗೆ ಮರ ಹತ್ತಲಾಗದು” ಎಂದು ಹೇಳಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಗೋಪಣ್ಣ ತಕ್ಷಣವೇ ಪಕ್ಕದ ಹಣ್ಣಿನ ಮರ ಹತ್ತಿದ. ಅದು ಕಿತ್ತಳೆ ಮರ. ಗೋಪಣ್ಣ ಒಂದು ಕಿತ್ತಳೆ ಹಣ್ಣನ್ನು ಕಿತ್ತಾಗ, ನೆಲದಲ್ಲಿದ್ದ ಹುಲಿ ತಲೆಯೆತ್ತಿ ಅವನನ್ನು ನೋಡುತ್ತಲೇ ಇತ್ತು. ಗೋಪಣ್ಣ ಆ ಕಿತ್ತಳೆ ಹಣ್ಣನ್ನು ಹಿಂಡಿ ಅದರ ರಸವನ್ನೆಲ್ಲ ಹುಲಿಯ ಕಣ್ಣಿಗೆ ಹಾಕಿದ.
ಈಗ ಹುಲಿ ನೋವಿನಿಂದ ಚೀರಿತು. ಅದು ತನ್ನ ಮುಂಗಾಲುಗಳಿಂದ ತನ್ನ ಕಣ್ಣುಗಳನ್ನು ಉಜ್ಜಿಕೊಂಡಿತು. ಅದರಿಂದಾಗಿ ಹುಲಿಯ ಕಣ್ಣುರಿ ಹೆಚ್ಚಾಯಿತು. ಕೊನೆಗೆ ಹುಲಿ ಕಾಡಿನೊಳಗೆ ಓಡಿ ಹೋಯಿತು. ಕೂಡಲೇ ಗೋಪಣ್ಣ ಮರದಿಂದ ಇಳಿದು ತನ್ನ ಮನೆಗೆ ಓಡಿ ಹೋದ.
ಅಂತೂ ತನ್ನ ಬುದ್ಧಿವಂತಿಕೆಯಿಂದ ಗೋಪಣ್ಣ ಮೂರು ಸಲ ಹುಲಿಯ ಬಾಯಿಯಿಂದ ಪಾರಾದ. ಆ ಹುಲಿಗೂ ಗೋಪಣ್ಣನೆಂದರೆ ಹೆದರಿಕೆ ಹುಟ್ಟಿರಬೇಕು. ಅನಂತರ ಅದು ಗೋಪಣ್ಣನ ತಂಟೆಗೆ ಬರಲಿಲ್ಲ.
ಚಿತ್ರ ಕೃಪೆ: “ವಿಸ್-ಡಮ್ ಟೇಲ್ಸ್” ಪುಸ್ತಕ