ಹುಲಿ ಉಗುರಿಗೆ ಯಾಕಿಷ್ಟು ಮಹತ್ವ?

ಹುಲಿ ಉಗುರಿಗೆ ಯಾಕಿಷ್ಟು ಮಹತ್ವ?

ಕೆಲವು ಸಮಯದ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ‘ಬಿಗ್ ಬಾಸ್' ಕಾರ್ಯಕ್ರಮಕ್ಕೆ ಪೋಲೀಸರು ರೈಡ್ ಮಾಡಿ ಅಲ್ಲಿದ್ದ ಸ್ಪರ್ಧಿಯೊಬ್ಬರನ್ನು ಬಂಧಿಸಿದ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಅವರ ಬಂಧನಕ್ಕೆ ಕಾರಣವಾದದ್ದು ಅವರು ತಮ್ಮ ಕತ್ತಿನಲ್ಲಿ ಧರಿಸಿದ್ದ ಹುಲಿಯುಗುರಿನ ಲಾಕೆಟ್. ಹಿಂದೆಲ್ಲಾ ಹುಲಿ, ಆನೆ, ಜಿಂಕೆ ಮುಂತಾದ ಪ್ರಾಣಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿತ್ತು. ಆ ಸಮಯದಲ್ಲಿ ಹಣವಂತ ಶೋಕಿಲಾಲರ ಮನೆಯಲ್ಲಿ ಹುಲಿಯುಗುರು, ಚರ್ಮ, ಆನೆಯ ಕೂದಲು, ದಂತ, ಜಿಂಕೆಯ ಕೊಂಬು ಇವೆಲ್ಲಾ ಇರುತ್ತಿದ್ದದು ಸರ್ವೇ ಸಾಮಾನ್ಯವಾದ ಸಂಗತಿಯಾಗಿತ್ತು. ಆದರೆ ಕಾಲ ಕಳೆದಂತೆ ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗತೊಡಗಿತು. ಅವುಗಳ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳು ಘೋಷಣೆಯಾದವು. ವನ್ಯ ಜೀವಿ ಕಾನೂನು ಬಂತು. ಆ ಪ್ರಕರಾ ವನ್ಯ ಜೀವಿಗಳನ್ನು ಕೊಲ್ಲುವುದು ಅಥವಾ ಅವುಗಳ ಮೈಮೇಲಿನ ಕೂದಲು, ಉಗುರು ಮುಂತಾದುವುಗಳನ್ನು ಕೀಳುವುದು ಅಪರಾಧವಾಯಿತು. ಅದೇ ರೀತಿ ಸತ್ತ ಪ್ರಾಣಿಗಳ ಉಗುರು, ಹಲ್ಲು, ದಂತ, ಚರ್ಮ, ಕೊಂಬು ಮೊದಲಾದುವುಗಳನ್ನು ಸಂಗ್ರಹಿಸುವುದೂ ಅಕ್ರಮ ಎಂದು ಪರಿಗಣಿಸಲಾಯಿತು. ಆದರೂ ಕೆಲವರು ತಮ್ಮ ಶೋಕಿಗಾಗಿ ಇವನ್ನು ಗುಟ್ಟಾಗಿ ಸಂಗ್ರಹಿಸಲಾರಂಬಿಸಿದರು. 

ಬಿಗ್ ಬಾಸ್ ಸ್ಪರ್ಧಿಯ ಬಂಧನದ ಬಳಿಕ ಹುಲಿಯ ಉಗುರು ಒಮ್ಮೆಗೇ ಮುನ್ನೆಲೆಗೆ ಬಂತು. ಹಲವಾರು ಸೆಲೆಬ್ರಿಟಿಗಳು, ಅವರ ಮಕ್ಕಳು, ಸ್ವಾಮೀಜಿಗಳು, ಕೆಲವು ರಾಜಕಾರಣಿಗಳು ಹುಲಿಯ ಉಗುರನ್ನು ಧರಿಸಿರುವ ಕುರಿತಾದ ಮಾಹಿತಿಗಳು ಹೊರಬರುತ್ತಿವೆ. ವನ್ಯಜೀವಿ ರಕ್ಷಣೆಗೆ ಕಾನೂನಿನಲ್ಲಿ ಕೆಲವು ನಿಯಮಗಳಿವೆ. 

ವನ್ಯ ಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅಡಿಯಲ್ಲಿ ಇರುವ ನಿಯಮಗಳು: ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳಾದ ಚರ್ಮ, ಮೂಳೆ, ಕೊಂಬು, ಕೂದಲು, ಹಲ್ಲು, ಉಗುರು ಇತ್ಯಾದಿ ವಸ್ತುಗಳ ಸಂಗ್ರಹ ಅಪರಾಧ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಅನುಮತಿ ಪತ್ರ ಪಡೆದುಕೊಳ್ಳಬೇಕು. ಅಕ್ರಮ ಸಂಗ್ರಹ ಎಂದು ಸಾಬೀತಾದರೆ ೩ ರಿಂದ ೭ ವರ್ಷ ಜೈಲು ಮತ್ತು ಕನಿಷ್ಟ ೧೦ ಸಾವಿರ ದಂಡ ವಿಧಿಸುವ ಸಾಧ್ಯತೆ ಇದೆ. ಪ್ರಾಣಿಗಳ ಅವಶೇಷಗಳಿಗೆ ಸಾವಿರಾರು ರೂಪಾಯಿ ತೆತ್ತು ಖರೀದಿ ಮಾಡುವವರು ಇದ್ದಾರೆ. ಇವರು ಇನ್ನಾದರೂ ಜಾಗೃತಿ ವಹಿಸುವುದು ಉತ್ತಮ.

ಪುರಾಣ ಕಥೆಗಳಲ್ಲಿ ಬರುವ ಪೌರಾಣಿಕ ಪಾತ್ರಗಳು, ರಾಜರುಗಳು ಹುಲಿಯ ಉಗುರು ಧರಿಸುತ್ತಿದ್ದರು ಎನ್ನುವುದನ್ನು ನಾವು ಚಿತ್ರಗಳಲ್ಲಿ ನೋಡಿರುತ್ತೇವೆ. ಆಡು ಮಾತಿನಲ್ಲಿ ಅಥವಾ ಕಥೆಗಳಲ್ಲಿ ಈ ವಿಷಯವನ್ನು ಕೇಳಿರುತ್ತೇವೆ. ಸ್ವಾಮೀಜಿಗಳು ಕುಳಿತುಕೊಳ್ಳುವಾಗ ಹುಲಿ ಅಥವಾ ಜಿಂಕೆಯ ಚರ್ಮವನ್ನು ಹಾಸಿ ಕುಳಿತುಕೊಳ್ಳುವುದನ್ನು ನಾವು ನೋಡಿರುತ್ತೇವೆ. ಹುಲಿಯ ಉಗುರನ್ನು ಕುತ್ತಿಗೆಯ ಸರಕ್ಕೆ ಪದಕದ ರೂಪದಲ್ಲಿ ಧರಿಸುತ್ತಾರೆ. ಇದು ಹೃದಯಕ್ಕೆ ಹತ್ತಿರವಾಗಿರುವುದರಿಂದ ಅದೃಷ್ಟ ಬರುತ್ತದೆ ಎಂದು ಒಂದು ನಂಬಿಕೆ ಇದೆ. ಹುಲಿಯ ಲಾಕೆಟ್ ಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳು ಇವೆಯಂತೆ. ಈ ಉಗುರುಗಳು ಮಾಂತ್ರಿಕ ಶಕ್ತಿಯನ್ನು ಹೊಂದಿರುವುದರಿಂದ ದುಷ್ಟ ಶಕ್ತಿಗಳು ನಮ್ಮ ಹತ್ತಿರ ಸುಳಿದಾಡುವುದಿಲ್ಲವಂತೆ. ಕಷ್ಟದ ಸಮಯದಲ್ಲಿ ಧೈರ್ಯ ಬರುತ್ತದೆಯಂತೆ. ರೋಗಗಳಿಂದ ದೂರ ಉಳಿಯಬಹುದಂತೆ, ರಾಜಯೋಗ ಬರುತ್ತದೆಯಂತೆ. ಹೀಗೆ ಅಂತೆ ಕಂತೆಗಳ ಸರಮಾಲೆಗಳನ್ನೇ ಕೇಳಿದರೆ ಹೇಳುತ್ತಾರೆ. ಆದರೆ ನಿಜವಾಗಿ ಇವೆಲ್ಲಾ ನಡೆಯುತ್ತವೆಯೇ? ಗೊತ್ತಿಲ್ಲ. ಜನರ ನಂಬಿಕೆ ಅಷ್ಟೇ. ಈ ನಂಬಿಕೆಯನ್ನು ಉಳಿಸಲು ಬಡಪಾಯಿ ಪ್ರಾಣಿಗಳ ಬಲಿ!

ಋಷಿ ಮುನಿಗಳು ಹುಲಿಯ ಅಥವಾ ಜಿಂಕೆಯ ಚರ್ಮವನ್ನು ಬಳಸುತ್ತಿದ್ದ ಕಾರಣವೆಂದರೆ ಅದರ ಮೇಲೆ ಕುಳಿತರೆ ಬೆಚ್ಚಗೆಯ ಅನುಭವವಾಗುತ್ತಿತ್ತಂತೆ. ಈ ಶಾಖವು ಬೆನ್ನುಹುರಿಯ ತನಕ ತಲುಪಿ ಮೈಯನ್ನು ಬೆಚ್ಚಗೆ ಇಡುತ್ತಿತ್ತು ಎಂದು ಹೇಳುತ್ತಾರೆ. ಧ್ಯಾನ ಮಾಡುತ್ತಿರುವ ಸಂದರ್ಭದಲ್ಲಿ ಬೇರೆ ಪ್ರಾಣಿಗಳೂ ಸಹ ಈ ಚರ್ಮವನ್ನು ನೋಡಿ ಹತ್ತಿರ ಸುಳಿಯುತ್ತಿರಲಿಲ್ಲವಂತೆ. ಪುರಾಣ ಕಥೆಗಳಲ್ಲಿ ಶಿವನೂ ಸಹ ಹುಲಿಯ ಚರ್ಮ ಧರಿಸಿದ್ದು ಕಂಡು ಬರುತ್ತದೆ. ಅಂದು ರಾಜರು ತಮ್ಮ ಬೇಟೆಯ ಪ್ರತಾಪವನ್ನು ಜನರಿಗೆ ತೋರಿಸಲು ಹುಲಿಯ ಚರ್ಮವನ್ನು ತಮ್ಮ ಸಿಂಹಾಸನಕ್ಕೆ ಅಥವಾ ಸಿಂಹಾಸನದ ಎದುರಿಗೆ ಬಳಸುತ್ತಿದ್ದರು. 

ಈಗ ಹುಲಿಯ ಉಗುರಿನ ಕಡೆಗೆ ಬರುವುದಾದರೆ, ಇಂದಿನ ನೂತನ ಯುಗದಲ್ಲಿ ಅಪರೂಪವಾದ ವಸ್ತುವೊಂದು ತಮ್ಮ ಬಳಿ ಇದ್ದರೆ ಸಮಾಜದಲ್ಲಿ ತಮ್ಮ ಗರಿಮೆ ಹೆಚ್ಚುತ್ತದೆ ಎನ್ನುವ ನಂಬಿಕೆ ಹಲವರದ್ದು. ಅದಕ್ಕಾಗಿ ಇಂತಹ ಅಪರೂಪದ ಮತ್ತು ಪುರಾತನ ವಸ್ತುಗಳನ್ನು ದುಬಾರಿ ದರ ತೆತ್ತು ಕೊಂಡುಕೊಳ್ಳುತ್ತಾರೆ. ಹುಲಿಯ ಉಗುರನ್ನು ಕತ್ತಿನ ಲಾಕೆಟ್ ನಲ್ಲಿ ಧರಿಸಿ ಹಾಕಿದ ಶರ್ಟಿನ ಮೇಲಿನ ಗುಂಡಿಗಳನ್ನು ತೆರೆದಿಟ್ಟು ಈ ಲಾಕೆಟ್ ಅನ್ನು ಪ್ರದರ್ಶನ ಮಾಡುತ್ತಾರೆ. ಈ ಪ್ರದರ್ಶನದ ಕಾರಣದಿಂದಲೇ ಅರಣ್ಯ ಇಲಾಖೆ ಬಹಳಷ್ಟು ಮಂದಿಗೆ ನೋಟೀಸ್ ಕೊಟ್ಟಿದ್ದಾರೆ.

ಈಗ ವನ್ಯಜೀವಿ ಕಾನೂನು ಬಹಳಷ್ಟು ಬಿಗಿಯಾಗಿದೆ. ಜನರಲ್ಲೂ ವನ್ಯಜೀವಿಗಳನ್ನು ಉಳಿಸಬೇಕು ಎನ್ನುವ ಅರಿವು ಮೂಡಲಾರಂಭಿಸಿದೆ. ಆದರೂ ಕೆಲವು ಜನರಲ್ಲಿ ಆನೆಯ ಬಾಲದ ಕೂದಲು, ಹುಲಿಯ ಹಲ್ಲು, ಉಗುರು, ಚರ್ಮ ಇವುಗಳನ್ನೆಲ್ಲಾ ಇರಿಸಿದರೆ ಯಾವುದೋ ಒಂದು ಅಗೋಚರ ಶಕ್ತಿ ತಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿಬಿಟ್ಟಿದೆ. ಆದರೂ ಇಂದು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಬದುಕು ಸಾಗಿಸುತ್ತಾ ಅದಕ್ಕೆ ವಿರುದ್ಧವಾದ ಕೆಲಸವನ್ನು ಮಾಡಬಾರದು. ಯಾವುದೇ ಪ್ರಾಣಿಯನ್ನು ಕೊಲ್ಲ ಬಾರದು. ಅದೇ ರೀತಿ ಕೊಂದ ಪ್ರಾಣಿಗಳ ಅವಯವಗಳನ್ನು ಖರೀದಿಸಲೂ ಬಾರದು. ಅವುಗಳ ಚರ್ಮ, ಉಗುರು, ಹಲ್ಲು ನಮಗೆ ಯಾವುದೇ ರೀತಿಯ ಅದೃಷ್ಟವನ್ನು ಹೊತ್ತು ತರಲಾರದು ಎನ್ನುವ ಸತ್ಯವನ್ನು ಅರಿಯಬೇಕು.

ಚಿತ್ರ ಕೃಪೆ: ಅಂತರ್ಜಾಲ ತಾಣ