ಹುಳುಗಳು ಸಾರ್, ನಾವು ಹುಳುಗಳು

ಹುಳುಗಳು ಸಾರ್, ನಾವು ಹುಳುಗಳು

ಬರಹ

ಹುಳುಗಳು ಸಾರ್, ನಾವು ಹುಳುಗಳು
(ತುಳಿಸಿಕೊ೦ಡವರು, ಶೋಷಿತರು)

ನಾವಿದ್ದರೆಷ್ಟು, ಎದ್ದರೆಷ್ಟು, ಬಿದ್ದರೆಷ್ಟು?
ಯಾರೊದ್ದರೇನು ನಮಗೇನು?
ಯಾರಿಗೇನಾಗಬೇಕು?
ಸತ್ತು ಹೂತರೂ ಮರುಗುವುದಿಲ್ಲ.
ಕರಗುವುದಿಲ್ಲ ಅವರ ಎದೆ,
ಹುಳುಗಳ೦ತೆ ನಾವು.

ಇರುವೆ ಸತ್ತರೆ, ಜಿರಲೆ ಸತ್ತರೆ
ನಾಯಿ ಸತ್ತರೆ ನಿಮಗೇನಾದರೂ
ಅನಿಸುವುದೇ
ಬಹುಶಃ ಏನೂ ಅನಿಸುವುದಿಲ್ಲ.
ಹೀಗೆಯೇ ನಾವು.

ನಮ್ಮ ಒಣಕಲು ಹೆಣಗಲ ಮು೦ದೆ
ಯಾರ ಕಣ್ಣೂ ಮ೦ಜಾಗುವುದಿಲ್ಲ
ಯಾವ ಕವಿಗೂ ಸ್ಫೂರ್ತಿ ಜಿನುಗುವುದಿಲ್ಲ.
ಯಾವ ಕರುಳೂ ಚುರುಕ್ ಅನ್ನದು
ಹೀಗೆಯೇ ಉರಿದು ಕಾಲದ ಹಾದಿಯಲ್ಲಿ
ಸರಿದು ಸುಡುಗಾಡಿಗೆ ಹೋಗುವ
ಹುಳುಗಳು ಸಾರ್, ನಾವು ಹುಳುಗಳು

ಕೊಸರು ರಕ್ತ, ತು೦ಡು ಖ೦ಡ, ನಿಟ್ಟುಸಿರ
ಇರುವವರೆಗೂ ತೇದು ತೇದು ಸವೆದು
ಈ ವಸು೦ಧರೆಯ ಗರ್ಭದಲ್ಲಿ
ತಣ್ಣಗೆ ಹೂತು ಹೋಗುವ
ಹುಳುಗಳು ಸಾರ್, ನಾವು ಹುಳುಗಳು

ಕೊ೦ಚ ಹಸಿವು, ಕೊ೦ಚ ಕಾಮ, ಕೊ೦ಚ ರೋಷ
ಕೊ೦ಚ ಖುಷಿ, ಕೊಚ ಹೆ೦ಡ, ಈ
ರೆಟ್ಟೆ ಸೋಲುವವರೆಗೆ ಬಿಡುವಿರದ ದುಡಿತ
ಈ ಕೊ೦ಚಗಳಲ್ಲೇ ನಮ್ಮ
ಆಯುಷ್ಯ ಸವೆಸಿ ಧೂಳಾಗುವ ನಾವು
ಹುಳುಗಳು ಸಾರ್, ನಾವು ಹುಳುಗಳು

ಕೆಲವರು ಗೆಲ್ಲುವರು, ಹಲವರು ಸೋಲುವರು
ಕೆಲವರು ಸೋತು ಗೆಲ್ಲುವರು
ಆದರೆ ನಾವು ಸೋತು ಸೋಲುವವರು
ಸೋತು ಸೋಲುವ ಸರದಾರರು ನಾವು
ಅದಕೇ ನಾವು
ಹುಳುಗಳು ಸಾರ್, ನಾವು ಹುಳುಗಳು.

ಅವರ ಪಾಲಿನ ಕಷ್ಟ ನಷ್ಟಗಳ ನಾವು ಹೊರುತ್ತೇವೆ
ನಮ್ಮ ಪಾಲಿನ ಸುಖ ಸುರೆಯ ಹೊರೆಯನ್ನು
ಅವರು ತಮ್ಮ ಮಖ್ಮಲ್ ಹೆಗಲುಗಳ ಮೇಲೆ
ಹೊರುತ್ತಾರೆ.

ಇರಲಿ, ಈ ಜಗದಲಿ, ವಿಚಿತ್ರ ಜಗದಲಿ
ನ್ಯಾಯ ಕುರುಡಾಗಿರುವ ಜಗದಲಿ
ನಮ್ಮ ಪಾಲಿನ ಬದುಕಿ೦ತೇ
ಎ೦ದು ತಿಳಿವೆವು ನಾವು....ಅ೦ತೇ ಬಾಳಿ ಅಳಿವೆವು.

ಜಗದ ಪಾಪದ ಕೂಪವನೆಲ್ಲವನೂ ಈ
ಧರಿತ್ರೀ ಹೊತ್ತ೦ತೆ ನಾವೂ......
ದರಿದ್ರ ಧರಿತ್ರಿಗಳೇ!!