ಹುಳುವಿನ ಅಳಲು
ನಾನೊಂದು ಪುಟ್ಟ ಜಂತು ನಿಮ್ಮ ಕಣ್ಣ ಮುಂದೆ
ನೂರಾರು ಕಾರ್ಮಿಕರು ನನ್ನ ಹಿಂದೆ ಹಿಂದೆ
ಹುಟ್ಟಿದ್ದು ಬೆಳೆದದ್ದು ಒಂದು ಗೂಡಿನೊಳಗೆ
ನನ್ನ ಕಾಣಿಕೆಯೆಲ್ಲ ನನ್ನ ಲೋಕದ ಹೊರಗೆ
ನನ್ನ ಸಲಹಿದಾತ ಕೊಡುವ ಹಿಪ್ಪುನೇರಳೆಯ ದಂಡೆ
ತಿಂದು ತಿಂದು ತುಂಬಿಸುತಿಹೆ ಜೊಲ್ಲಿನ ಹಂಡೆ
ಹೊಟ್ಟೆ ತುಂಬಿ ಬಿರಿಯುತಿರಲು ಎಂಥ ಸುಖದ ನಿದ್ದೆ
ಆಗ ತಿಳಿಯದಂತೆ ಆ ಮನುಜನ ಬಲೆಗೆ ಬಿದ್ದೆ
ಕಷ್ಟಪಟ್ಟು ಕಟ್ಟಿದೆ ನನಗಾಗಿ ಒಂದು ಗೂಡು
ಅಣ್ಣ ತಮ್ಮ ಅಕ್ಕ ತಂಗಿಯರೂ ಹಿಡಿದರು ಅದೇ ಜಾಡು
ಸಲಹಿದಾತ ಬಂದು ಸುರಿದ ನಮ್ಮನೆಲ್ಲ ಕುದಿವ ನೀರಿಗೆ
ಅತ್ತು ಕರೆದು ಬೇಡಿಕೊಂಡದ್ದೆಲ್ಲಾ ಹೋಯಿತು ಗಾಳಿಗೆ
ಸತ್ತ ನಮ್ಮನೆಲ್ಲ ಸುರಿದನಲ್ಲ ಕೊಚ್ಚೆ ಮೋರಿಗೆ
ಕಷ್ಟದ ಫಲವ ಸುತ್ತಿದನಲ್ಲ ನೂಲಿನುಂಡೆಗೆ
ನೂಲನೆಲ್ಲ ಎಳೆದು ಕಟ್ಟಿ ತೆತ್ತೆನಲ್ಲ ಒಂದು ಸೀರೆಗೆ
ಆತ ಅದರ ಫಲವ ಒಯ್ದನು ಮಾರುಕಟ್ಟೆಗೆ
ಧನ್ಯೆ ಸೀರೆಗೆ ಬಂದಿತಲ್ಲ ಒಳ್ಳೆಯ ಬೆಲೆ
ಅದನು ಉಟ್ಟು ಒಯ್ಯಾರದಿ ನುಲಿಯುತಿಹಳು ಕೋಮಲೆ
ಕುಳಿರ್ಚಳಿಯ ತಾಳುವರು ಹೊದ್ದು ನನ್ನ ಶಾಲು, ಸೀರೆ
ನಿಸ್ಸಹಾಯಕನಾದ ನನ್ನ ಮೊರೆಯ ಕೇಳುವೆಯಾ ಓ ದೇವರೇ