ಹುಳ ರಹಿತ ಬದನೆ ಬೆಳೆಯುವ ಕ್ರಮ
ಜನ ಬದನೆಯನ್ನು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಹುಳಕ್ಕಾಗಿ ಅಂಜುತ್ತಾರೆ. ಹುಳವಿಲ್ಲದ ಬದನೆ ಹುಡುಕುವುದೇ ಸಾಹಸ. ಬದನೆ ರಾಜ್ಯದ ಪ್ರಮುಖ ತರಕಾರಿ ಬೆಳೆ. ಸ್ಥಳೀಯ ತಳಿ, ಹೈಬ್ರೀಡ್ ತಳಿ ಹೀಗೆ ಹಲವಾರು ತಳಿಗಳನ್ನು ಬೆಳೆಸಲಾಗುತ್ತಿದ್ದು, ಈ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಎಂದರೆ ಕಾಯಿ ಮತ್ತು ಚಿಗುರು ಕೊರಕ ಹುಳು. ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ ಮತ್ತೆ ಹೆಚ್ಚುತ್ತಾ ಹೆಚ್ಚಿನ ಗಿಡಗಳಿಗೆ ಹಾನಿಯಾಗುತ್ತದೆ. ಕಾಯಿ ಕೊರಕವೂ ಹಾಗೆ. ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು ಬರುತ್ತದೆ. ಕೊಯ್ದು ನೋಡಿದರೆ ಒಳಗೆ ಹುಳ ಇರುತ್ತದೆ. ಕಾಯಿ ಕೊರಕ ಮತ್ತು ಚಿಗುರು ಕುಡಿ ಕೊರಕಕ್ಕೆ ನಿರೋಧಕ ಶಕ್ತಿ ಪಡೆದ ತಳಿ ಇಲ್ಲ. ಇದನ್ನು ನಿಯಂತ್ರಿಸದೇ ಇದ್ದಲ್ಲಿ ಬೆಳೆಯಲ್ಲಿ ಗಣನೀಯ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ. ಕುಡಿ ಕೊರೆಯುವಾಗ ಹೂ ಮೊಗ್ಗುಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತದೆ. ಒಂದು ಹುಳ ೪-೫ ಕಾಯಿಯನ್ನು ಹಾಳು ಮಾಡುತ್ತದೆ. ಅದೇ ರೀತಿ ೧ ಹುಳ ಒಂದು ಕುಡಿ ಕೊರೆದು ಮತ್ತೊಂದಕ್ಕೆ ಹೋಗುತ್ತದೆ. ಹೀಗೆ ೩-೪ ಚಿಗುರನ್ನು ಹಾನಿ ಮಾಡುತ್ತದೆ. ಇದು ತನ್ನ ಸುಪ್ತಾವಸ್ಥೆಯನ್ನು ನೆಲದಲ್ಲಿ ಮಾಡುತ್ತದೆ.
ಹೇಗೆ ಬರುತ್ತದೆ?: ಕುಡಿ ಕೊರಕ ಮತ್ತು ಕಾಯಿ ಕೊರಕ ಹುಳು ಉಂಟಾಗಲು ಒಂದು ರೀತಿಯ ಪತಂಗ ಕಾರಣ. ಇದು ಪ್ರದೇಶವಾರು ಬಿಳಿ ಮತ್ತು ಮರದ ಬಣ್ಣದಲ್ಲಿರುತ್ತದೆ. ಈ ಪತಂಗವು ಸಸ್ಯದ ಎಲೆಯ ಮೇಲೆ, ಕುಡಿಯ ಮೇಲೆ, ಕಾಯಿಯ ಮೇಲೆ ಕುಳಿತು ಸುಮಾರು ೨೫೦ ರಷ್ಟು ಮೊಟ್ಟೆಗಳನ್ನು ಒಂದೊಂದಾಗಿ ಇಡುತ್ತವೆ. ೨ -೫ ದಿನದ ಒಳಗೆ ಅದು ಮರಿಯಾಗುತ್ತದೆ. ಎಲೆಯಲ್ಲಿ ಇಟ್ಟದ್ದು ಅಲ್ಲೇ ಮರಿಯಾಗಿ ಎಲೆಯನ್ನು ಭಕ್ಷಿಸುತ್ತದೆ. ಕುಡಿಯಲ್ಲಿ ಇಟ್ಟದ್ದು ಕುಡಿಯ ಯಾವುದಾದರೂ ಎಳೆ ಭಾಗದ ಮೂಲಕ ಒಳ ಸೇರಿ ಅದರ ಒಳ ಭಾಗದ ತಿರುಳನ್ನು ಭಕ್ಷಿಸುತ್ತದೆ. ಇದು ಜನವರಿಯಿಂದ ಎಪ್ರೀಲ್ ತನಕ ಅತೀ ಹೆಚ್ಚು. ಆದರೂ ಉಳಿದ ಸಮಯದಲ್ಲಿ ಅಲ್ಪ ಸ್ವಲ್ಪ ಇರುತ್ತದೆ.
ನಿಯಂತ್ರಣ: ರಾಸಾಯನಿಕ ಹತೋಟಿಗೆ ಕೆಲವು ಔಷಧಿಗಳನ್ನು ಶಿಫಾರಸು ಮಾಡಲಾಗುತ್ತಿದೆಯಾದರೂ ತಿನ್ನುವವನ ಆರೋಗ್ಯದ ದೃಷ್ಟಿಯಿಂದ ಅದು ಉತ್ತಮವಲ್ಲ. ಬೇವು ಮೂಲದ ಸಸ್ಯ ಜನ್ಯ ಕೀಟನಾಶಕವಾದ ಅಜಂಡಿರಕ್ಟಿನ್ ಅನ್ನು ವಾರಕ್ಕೊಂದಾವರ್ತಿಯಂತೆ ಸಿಂಪರಣೆ ಮಾಡಿ ಹತೋಟಿ ಸಾಧ್ಯ. ಕೀಟನಾಶಕಗಳನ್ನು ಬಳಕೆ ಮಾಡದೆ ಕೆಲವು ಸುರಕ್ಷಿತ ಕ್ರಮಗಳನ್ನು ಅನುಸರಿಸಬಹುದು.
ಮೊದಲನೆಯದಾಗಿ ಒಮ್ಮೆ ಬೆಳೆದ ಕಡೆ ಮತ್ತೊಮ್ಮೆ ಬದನೆಯನ್ನು ಬೆಳೆಯಬೇಡಿ. ಅನುಕೂಲ ಇದ್ದರೆ ಬದನೆ ಬೆಳೆಸುವ ಜಾಗದಲ್ಲಿ ಮಣ್ಣನ್ನು ಉಳುಮೆ ಮಾಡಿ ತರಗೆಲೆ ಮುಂತಾದ ಕೃಷಿ ತ್ಯಾಜ್ಯಗಳನ್ನು ಹಾಕಿ ಮಣ್ಣನ್ನು ಒಮ್ಮೆ ಬಿಸಿ ಮಾಡಿ. ಅದು ಅಸಾಧ್ಯವಾದರೆ ಮಣ್ಣಿನ ಮೇಲೆ ಪಾರದರ್ಶಕ ಪಾಲಿಥೀನ್ ಹಾಳೆ ಹೊದಿಸಿ ಎರಡು ವಾರ ಕಾಲ ಸೋಲರೈಸೇಶನ್ ಮಾಡಬೇಕು. ನಂತರ ಸಸಿ ನಾಟಿ ಮಾಡಬೇಕು. ನಾಟಿ ಮಾಡುವ ಮೂರು ನಾಲ್ಕು ವಾರಕ್ಕೆ ಮುಂಚೆ ಉಪಚಾರ ಪ್ರಾರಂಭಿಸಬೇಕು. ಸಸ್ಯ ಬೆಳೆಯುತ್ತಿದ್ದಾಗ ಮೊದಲಾಗಿ ಈ ಪತಂಗವು ಎಲೆಯಲ್ಲಿ ಬಂದು ಕುಳಿತು ಮೊಟ್ಟೆ ಇಡುತ್ತದೆ. ಆ ಸಮಯದಲ್ಲಿ ಎಲೆಗಳನ್ನು ಸುತ್ತಿ ಅದರಲ್ಲಿ ಹುಳ ಇರುತ್ತದೆ. ಅದನ್ನು ಗಮನಿಸಿದ ತಕ್ಷಣ ಆ ಭಾಗವನ್ನೇ ತೆಗೆದು ಅದನ್ನು ಬೆಂಕಿಗೆ ಹಾಕಿ ಸುಡಬೇಕು.
ಸಸ್ಯದಲ್ಲಿ ಎಳೆ ಚಿಗುರು ಬಾಡಿ ಒಣಗಿದ್ದು ಕಂಡು ಬಂದರೆ ಅದನ್ನು ಕೆಳಭಾಗದಲ್ಲಿ ಎಲ್ಲಿ ತೂತು ಇದೆಯೋ ಅಲ್ಲಿ ತನಕ ಕತ್ತರಿಸಿ ಹುಳುವನ್ನು ಕಣ್ಣಿನಲ್ಲಿ ಕಂಡು ನಂತರ ಅದನ್ನು ಸುಟ್ಟು ನಾಶಮಾಡಬೇಕು. ಯಾವುದೇ ಕಾರಣಕ್ಕೂ ಅದನ್ನು ಹಾಗೇ ಬಿಡಬಾರದು. ಅದೇ ರೀತಿ ಕಾಯಿಗೆ ಹುಳ ತೂತು ಮಾಡಿದ್ದರೆ ಅದನ್ನು ಕೊಯ್ಯದೆ ಗಿಡದಲ್ಲಿ ಬಿಡಬೇಡಿ. ಅಲ್ಲೇ ಉಳಿಸಿದರೆ ಅದು ಪ್ರಸಾರವಾಗುತ್ತದೆ. ಈ ಕಾಯಿ, ಮಿಡಿ ಕೊರಕಕ್ಕೇ ಈಗ ಲಿಂಗಾಕರ್ಷಕ ಬಲೆಗಳು ಲಭ್ಯವಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮತ್ತು ಕೆಲವು ಖಾಸಗಿ ತಯಾರಕರಲ್ಲಿ ಈ ಫೆರಮೋನು ಟ್ರಾಪುಗಳು ಲಭ್ಯವಿದ್ದು ಇದನ್ನು ಬದನೆ ಬೆಳೆಸುವಾಗ ಗಿಡ ಹಂತದಲ್ಲೇ ಹಾಕಬೇಕು.
ಜೈವಿಕವಾಗಿ ಇದನ್ನು ನಿಯಂತಿಸಲು ಬ್ಯಾಸಿಲಸ್ ತುರಂಜೆನ್ಸಿಸ್ ಜೈವಿಕ ಕೀಟನಾಶಕ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಕೆ ಮಾಡಿದರೆ ತಿನ್ನುವವನಿಗೆ ತೊಂದರೆ ಇಲ್ಲ. ಇದನ್ನು ಸಿಂಪಡಿಸಿದಾಗ ಮಣ್ಣು ಮತ್ತು ಸಸ್ಯದಲ್ಲಿರುವ ಹುಳುವನ್ನು ಅದು ಹುಡುಕಿ ಸಾಯಿಸುತ್ತದೆ. ಇದು ಅಪಾಯ ರಹಿತ ಜೈವಿಕ ಕೀಟನಾಶಕ. ಟ್ರೈಕೋಗ್ರಾಮ ಪರತಂತ್ರ ಜೀವಿಯು ಬದನೆಯ ಕುಡಿ ಮತ್ತು ಕಾಯಿ ಕೊರಕ ಹುಳುವನ್ನು ಭಕ್ಷಿಸುತ್ತದೆ. ಇದರ ಮೊಟ್ಟೆಗಳನ್ನು ತಂದು ಹೊಲದಲ್ಲಿ ಬಿಡುವುದರಿಂದ ನೈಸರ್ಗಿಕವಾಗಿ ಈ ಹುಳು ನಾಶವಾಗುತ್ತದೆ.
ಕಾಯಿ ಕೊರಕ ಮತ್ತು ಕುಡಿಕೊರಕ ಬದನೆಯ ಅತೀ ದೊಡ್ಡ ಸಮಸ್ಯೆ ಎಂಬ ಕಾರಣಕ್ಕೆ ಬಿ ಟಿ ಬದನೆಯನ್ನು ಪರಿಚಯಿಸಲಾಗಿದ್ದು, ನಮ್ಮ ದೇಶದಲ್ಲಿ ಇದನ್ನು ಬೆಳೆಸಲು ಅಧಿಕೃತ ಅನುಮತಿ ಇರುವುದಿಲ್ಲ. ಯಾವಾಗಲೂ ರಾಸಾಯನಿಕ ಕೀಟನಾಶಕ ಸಿಂಪಡಿಸುವುದಾದರೆ ಹೂ ಬಿಡುವ ಸಮಯದೊಳಗೆ ಅದನ್ನು ಸಿಂಪಡಿಸಿ ಮುಗಿಸಬೇಕು. ನಂತರ ಸಿಂಪಡಿಸಿದರೆ ತಿನ್ನುವವರಿಗೆ ಅಪಾಯ ಇದೆ. ಬೆಂಡೆಯ ಕಾಯಿ ಕೊರಕವೂ ಸಹ ಇದೇ ಹುಳುವಾಗಿದ್ದು ಅದನ್ನೂ ಈ ಕ್ರಮದಲ್ಲಿ ನಿಯಂತ್ರಣ ಮಾಡಬೇಕು.
ಮಾಹಿತಿ: ರಾಧಾಕೃಷ್ಣ ಹೊಳ್ಳ