ಹುಸೇನಿ ದ್ವಿಪದಿಗಳು

ಹುಸೇನಿ ದ್ವಿಪದಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಿ. ಹುಸೇನಿ
ಪ್ರಕಾಶಕರು
ಝಾನ್ಸಿ ರಾಣಿ ಪ್ರಕಾಶನ, ವಲ್ಲೂರು, ಆಂಧ್ರಪ್ರದೇಶ
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ : ೨೦೨೩

ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್ಲೂರು ಹುಸೇನಿ ಅವರು ತಮ್ಮ ಲೇಖಕರ ನುಡಿ “ದಿಲ್ ಕೀ ಬಾತ್" ನಲ್ಲಿ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಹೀಗೆ...

“ಆಂಧ್ರ ಮೂಲದ 'ಹುಸೇನಿ' ಕೇವಲ 'ಕವಿ'ಯೆಂದೆನಿಸಿಕೊಳ್ಳಲು ಅವಸರದಿ ಕೃತಿ ಪ್ರಕಟಿಸಿದರೆಂದ ಹಿರಿಯರ ಮಾತಿಗೆ ಐದು ವರ್ಷಗಳ ಬೊಗಸೆ ತುಂಬಿಸುತ್ತಿದ್ದೇನೆ. ಇಲ್ಲಿ ಬೆನ್ನುಡಿ ಬಿಟ್ಟು ಯಾವುದೇ ಸಾಹಿತಿಗಳ ಮುನ್ನುಡಿ ಮತ್ತು ಅಭಿಪ್ರಾಯಗಳಿರುವುದಿಲ್ಲ. ಓದುಗ ಪ್ರೇಮಿಗಳೇ ಈ ಕೃತಿಗೆ ಮುನ್ನುಡಿಗಾರರೆಂದು ಭಾವಿಸಿ ತಮ್ಮ ಕೈಗಿಡಲು ಮುಂದಾಗಿದ್ದೇನೆ. ಮೂಲತಃ ನಾನು ಆಂದ್ರಪ್ರದೇಶದ ತೆಲುಗು ಭಾಷಿಕನಾಗಿದ್ದರೂ...! ಈ ಜೀವದುಸಿರು ಕನ್ನಡವೇ ಎಂದು ಹೇಳಲು ನನ್ನೋಳಿಗಿನ ಹುಸೇನಿಗೆ ದಿಲ್ ಖುಷ್ ಆಗುತ್ತದೆ. ಈ ಪುಸ್ತಕದಲ್ಲಿ ಬರುವ ದ್ವಿಪದಿ ಸಾಲಿನಂತೆ ರಕ್ತದ ಪ್ರತಿ ಕಣದಲ್ಲೂ ಕನ್ನಡವೇ ನನ್ನನ್ನು ಆವರಿಸಿಕೊಂಡು ಕನ್ನಡ ಸಾಹಿತ್ಯದ ಸೇವೆಗಾಗಿ ಶ್ರಮಿಸಲು ಈ ಜನ್ಮ ಪೂರ್ತಿ ಇಚ್ಛಿಸಿದ್ದೇನೆ.

ಈ ಹಿಂದಿನ ನನ್ನ ಕೃತಿಗಳನ್ನು ಓದಿ ಮನಸ್ಸಾರೆ ಮೆಚ್ಚಿ ಕವಿತೆ ಮನನ ಮಾಡಿಕೊಂಡು ಬೆರಗಾಗಿದ್ದೇವೆ 'ಹುಸೇನಿ' ಎಂದ್ದೇಳಿದ ಈ ನಾಡಿನ ಮನಸ್ಸುಗಳಿಗೆ ಧನ್ಯವಾದಗಳಷ್ಟೇ ಹೇಳಿ ಕೈ ಬಿಟ್ಟೆ. ಅಪರಿಚಿತ ಮಿತ್ರರು ಜಂಗಮವಾಣಿಯ ಮೂಲಕ ನಿಮ್ಮ ಕವಿತೆಗಳು ಓದುಗ ಹೃದಯಗಳನ್ನೇ ತಲ್ಲಣಿಸುವ ಸಹಾಸಕ್ಕಿಳಿದಿವೆಯೆಂದು ಸಂತಸ ವ್ಯಕ್ತಪಡಿಸಿದಾಗ ನನಗಾದ ಆನಂದ ಮತ್ತು ಬರೆಯುವ ಹುಚ್ಚು ಹೆಚ್ಚಾಗಿ ಈಗ ನಿಮ್ಮ ಮುಂದೆ ಕನ್ನಡ ನಾಡಿನ ಬಹುದೊಡ್ಡ ಸಂಖ್ಯೆಯ ದ್ವಿಪದಿ ಗಜಲ್ ಸಾಲುಗಳ ಸಂಕಲನವನ್ನು ನಿಮ್ಮ ಓದಿಗೆ ಮತ್ತು ವಿಮರ್ಶೆಗೆ ತಂದಿದ್ದೇನೆ ಎಂದೇಳುವ ಹೆಮ್ಮೆ ನನ್ನೋಳಗೆ ಪುಟಿಯುತ್ತಿದೆ ಇದೊಂದು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯೋಗಾಯೋಗ ಎಂದು ಹೇಳಬಹುದು...!

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕನ್ನಡ ನಾಡು ಕಂಡ ಹಿರಿಯ ಕಥೆಗಾರ ಕುಂ. ವೀರಭದ್ರಪ್ಪ ಸರ್ ರವರು ಮಾನ್ವಿಗೆ ಬಂದಾಗ, ನನ್ನ ಪರಿಚಯದೊಂದಿಗೆ ಕೆಲವು ದ್ವಿಪದಿಗಳನ್ನು ಗಮನಿಸಿ ನನ್ನ ಎದುರಲ್ಲಿ ಓದಿ, ಎಲ್ಲಿಲ್ಲದ ಸಂತಸವನ್ನು ವ್ಯಕ್ತಪಡಿಸುತ್ತಾ, ಬಹಳ ದೊಡ್ಡ ವಯಸ್ಸಿನ ಕವಿ 'ಹುಸೇನಿ' ಎಂದು ಹೆಗಲ ಮೇಲೆ ಕೈ ಹಾಕಿ, ಪ್ರೀತಿ ಮತ್ತು ಅಭಿಮಾನವನ್ನು ಹಂಚಿಕೊಂಡು ತಬ್ಬಿಕೊಂಡ ಆ ಗಳಿಗೆ ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ. ನಾನಾದರು ಅಂತಹ ಕನ್ನಡ ಹಿರಿಯ ಕಥೆಗಾರರಿಗೆ ನನ್ನ ದ್ವಿಪದಿಗಳನ್ನು ಅವರ ಗಮನಕ್ಕೆ ತರುವುದರ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಮುಜುಗುರಕ್ಕೊಳಗಾಗಿ ದ್ವಿಪದಿ ಸಂಕಲನವನ್ನು ಪ್ರಕಟಿಸಿ ಒಂದು ಸಾಹಸದ ಕೆಲಸ ಮಾಡಿದ್ದೇನೆ ಇದೊಂದು ಹುಚ್ಚು ಮನಸ್ಸಿನ ಸಾಹಸವೆಂದೆ ನಾನು ಬಾವಿಸಿದ್ದೇನೆ ಮತ್ತು ಕನ್ನಡ ಕವಿಗಳಲ್ಲಿ ಈ ಭಾವನೆ ಮೂಡಿರಬಹುದೆಂದು ಭಾವಿಸಿದ್ದೇನೆ.

ಜಾರುವ ನನ್ನ ಪ್ರತಿ ಕಣ್ಣ ಹನಿ ಒರೆಸುವ ಕರವಸ್ತ್ರವೇ ಈ ಕವಿತೆ. ಪ್ರತಿ ಸಲ ನನ್ನ ಆತ್ಮೀಯ ಸ್ನೇಹಿತರು ಹೇಳುತ್ತಲೇ ಇರುತ್ತಾರೆ 'ನಿನ್ನ ಕವಿತೆ ಹೊದ್ದು ಈ ಚಳಿಗಾಲದಲ್ಲಿ ಬೆಚ್ಚನೆ ನಿದ್ರಿಸುತ್ತಿರಬಹುದು ನಿನ್ನವಳೆಂದು' ಬಹುಶಃ ಅವರದ್ದು ಅನುಭವದ ಮಾತು. ನನಗೂ ಒಬ್ಬಳು ಪ್ರೇಯಸಿ ಇದ್ದರೆ ಚೆನ್ನಾಗಿತ್ತು ಅನಿಸುತ್ತೇ... ಹಣೆ ಬರಹ ಯಾರೂ ಇಲ್ಲದಾಗಿದೆ ಪ್ರೀತಿಸಲು 'ಹುಸೇನಿನ. ಇನ್ನೂ ಕೆಲವರಿಗೆ ಗಾಬರಿ, ಇವನೇನಪ್ಪಾ ಇತ್ತೀಚೆಗೆ ಪ್ರೇಮ-ವಿರಹದ ಕವಿತೆಗಳನ್ನು ಬರೆಯುವ ಗೀಳಿಗಿಳಿದಿದ್ದಾನೆಂದು ತಲೆ ಕೆರೆದುಕೊಂಡು ಹುಚ್ಚರಾಗಿದ್ದಾರೆ. ಎಲ್ಲರ ನಿರೀಕ್ಷೆಯಂತೆಯೇ ನನ್ನವಳನ್ನು ನಿಮ್ಮ ಕಣ್ಣ ಮುಂದಿಡುತ್ತೇನೆ. ಓದುಗ ಸಹೃದಯ ಸಂಗಾತಿಗಳೇ, ಅವಳನ್ನೇ ಧ್ಯಾನವಾಗಿಸಿಕೊಂಡು ಆರಾಧಿಸುವ ಈ ಹೃದಯವೆಂದೂ ಸುಳ್ಳು ಹೇಳಲು ಬಯಸುವುದಿಲ್ಲ ಕೇಳಿ.

ಮೌನ ಬಿಚ್ಚಿ ಬರೆದ ಪ್ರತೀ ಕವಿತೆಗಳಿಗೆ ಧ್ವನಿ ನೀಡುವ ನಿಮ್ಗಳಿಗೆ ಸತ್ಯವನಷ್ಟೇ ಹೇಳಲಿಚ್ಛಿಸುವೆನು.

ಕಾವ್ಯ ಕನ್ನಿಕೆಯನ್ನು ಬಿಟ್ಟು 'ಹುಸೇನಿ'
ಯಾವ ಕನ್ಯಾಳನ್ನೂ ಆರಾಧಿಸಿಲ್ಲ ಇದುವರೆಗೂ!!

ಆರಾಧಿಸಿದ್ದೇ ಆದರೆ, ಇನ್ನೂ ಮೌಲ್ಯಯುತ ಬರಹಗಳು ನಿಮ್ಮ ಮುಂದೆ ಚಿತ್ರಣಗೊಳ್ಳುತ್ತಿದ್ದವು. ಯುವ ಬರಹಗಾರರಿಗೆ ಪ್ರಕಾಶಕರಾಗಲಿ ಹಿರಿಯ ಸಾಹಿತಿಗಳಾಗಲಿ ಪ್ರೋತ್ಸಾಹಿಸುವುದು ತುಂಬಾ ಅಪರೂಪದ ಸಂಗತಿ. ಅಂತಹ ಸಂದರ್ಭದಲ್ಲಿ ನನಗೆ ಬರವಣಿಗೆಯ ಬೀಜ ಬಿತ್ತಿದ 'ಅಲ್ಲಾಗಿರಿರಾಜ್ ಕನಕಗಿರಿ' ಸರ್ ರವರಿಗೆ ಹೃತೂರ್ವಕ ಧನ್ಯವಾದಗಳು ಹೇಳಲೇಬೇಕಾಗಿದೆ. ಇವರ ಪ್ರೋತ್ಸಾಹದಿಂದಲೇ ನನ್ನೆರಡೂ ಕೃತಿಗಳು ಲೋಕಾರ್ಪಣೆಗೊಂಡಿದ್ದು ಎಂದೇಳುವೆ ನಾನು. ಪ್ರತಿ ಸಲ ನನ್ನ ಕೃತಿಯು ಪ್ರಕಟಿಸಲು ಪ್ರಕಾಶಕರ ನೆರವು ಕೇಳಿ ವಿಪಲವಾದ ಕಾರಣ ಈ ಸಾರಿ ನನ್ನದೇ 'ಝಾನ್ಸಿ ರಾಣಿ ಪ್ರಕಾಶನ ವಲ್ಲೂರು' ಅಡಿಯಲ್ಲಿ 'ಹುಸೇನಿ ದ್ವಿಪದಿಗಳು' ಕೃತಿ ಮೊಟ್ಟ ಮೊದಲ ಬಾರಿಗೆ ಮುದ್ರಿಸಿ ಪ್ರಕಟಿಸಲಾಯಿತು.

ತೆಲುಗು ಸಾಹಿತಿ ಕೆಂಗಾರು ಮೋಹನ್, ಮಾರುತಿ ಕಥೆಗಾರರವರಿಗೂ, ಕರ್ನೂಲ್ ಜಿಲ್ಲೆಯಲ್ಲೇ 'ಹುಸೇನಿ' ಹೆಸರುವಾಸಿಯಾಗಲೆಂದು ಶ್ರಮಿಸುವ ಈನಾಡು ತೆಲುಗು ದಿನ ಪತ್ರಿಕೆ ವರದಿಗಾರ ನಾಗಭೂಷಣ್‌ ರವರಿಗೂ, ಕರ್ನಾಟಕಕ್ಕೆ ಬಂದುಳಿಯಲು ಸಹಕಾರಿಸಿದ ಮಾವ ಆಂಜನೇಯ ಚೀಕಲಪರ್ವಿ ಇವರಿಗೂ, ಖಾಲಿ ಸಮಯದಲ್ಲಿ ಗ್ರಂಥಾಲಯಕ್ಕೆ ಹೋದಾಗ ಪ್ರೋತ್ಸಾಹಿಸಿದ ಚಕ್ರಪಾಣಿ ಸರ್ ರವರಿಗೂ, ಬಿಎ ಮತ್ತು ಬಿಇಡಿ ಸ್ನೇಹ ಬಳಗಕ್ಕೂ, ಪ್ರತಿ ಬರಹವನ್ನು ಪ್ರೋತ್ಸಾಹಿಸಿ ಪ್ರಕಟಿಸುವ ಪತ್ರಿಕಾ ಬಳಗಕ್ಕೂ ಈ ಬದುಕೇ ಬರಹವಾಗಿಸಿಕೊಂಡ 'ವಿ.ಹುಸೇನಿ' ಗೆ ಜನ್ಮ ನೀಡಿದ ಹೆತ್ತವರಿಗೂ, ಬರೆದಾಗಲೆಲ್ಲಾ ಸಹೃದಯ ಸಾಹಿತ್ಯಾಸಕ್ತ ಓದುಗ ಬಳಗಕ್ಕೂ, ಈ ಕೃತಿಯ ಪ್ರಕಟಣೆ ವೆಚ್ಚ ಭರಿಸಿದ, ಹೆಡಗಿನಾಳ್ ದಿ.ಜಲಾಲಿ ನಾಯಕ ಮತ್ತು ಯಂಕಪ್ಪ ನಾಯಕ ಹಾಗೂ ಸಹೋದರರ ಕುಟುಂಬಮದ್ಲಾಪೂರು ಗ್ರಂಥದಾಸೋಹಿಗಳಿಗೂ ಹೃತ್ತೂರ್ವಕ ಕೃತಜ್ಞತೆಗಳು.

ಮುಖಪುಟ ವಿನ್ಯಾಸಗೊಳಿಸಿದ ಶಿವು ಹೂಗಾರ ಧಾರವಾಡ ಇವರಿಗೂ, ಅಂದವಾಗಿ ಪುಟ ವಿನ್ಯಾಸ ಮಾಡಿದ ವೀರೇಶ ಸಮಗಂಡಿ ಇವರಿಗೂ ಪ್ರತಿ ಸಲ ನನ್ನ ಬರಹವನ್ನು ಪ್ರೋತ್ಸಾಹಿಸಿ ಛಾಯಕ್ಷರ ಜೋಡಣೆ ಮಾಡಿದ ಕಲಾ ಸ್ಪೂರ್ತಿ ವಿಜಯ ಭಾಸ್ಕರ್ ಸರ್ ಮಾನವಿ ಮತ್ತು ವಿನಯಕುಮಾರ ನಾಯಕ ಮದ್ಲಾಪುರ ಇವರಿಗೂ, ಕೃತಿಗೆ ಅಂದವಾಗಿ ಛಾಯ ಚಿತ್ರವನ್ನು ತೆಗೆದು ಕಳುಹಿಸಿದ ಸ್ನೇಹಿತ ಜೆ. ವೀರೂಪಾಕ್ಷಿ ವಲ್ಲೂರು ಇವರಿಗೂ, ಕೃತಿಯನ್ನು ಬಹಳ ಅಚ್ಚುಕಟ್ಟಾಗಿ ಮುದ್ರಿಸಿದ ರಿಗಲ್ ಪ್ರಿಂಟರ್ ಮುದ್ರಣಾಲಯ ಬೆಂಗಳೂರು ಇವರಿಗೂ, ವಲ್ಲೂರಿನ ಹಿರಿಯ ಕಿರಿಯ ಸ್ನೇಹ ಬಳಗಕ್ಕೂ ನನ್ನೀ ಸಾಹಿತ್ಯ ಸೇವೆಗೆ ಪ್ರತ್ಯಾಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ, ಪುಸ್ತಕ ಕೊಂಡು ಓದುವ ಎಲ್ಲಾ ಸಹೃದಯ ಸಂಗಾತಿಗಳ ಹೃದಯದಲ್ಲಿ 'ಹುಸೇನಿ ದ್ವಿಪದಿಗಳು'ಗೆ ಕೊಂಚ ಜಾಗ ನೀಡುವಿರೆಂದು ಭಾವಿಸಿ ಸಾವಿರ ಸಲಾಂ ಹೇಳಿ ವಿರಾಮಿಸುತ್ತೇನೆ.”