ಹೂಗಳ ಸಂದೇಶ
ಕವನ
ಏನು ಸುಂದರ ನಗುವು ಮೊಗದೊಳಗೆ ಮಿನುಗುವುದು
ಏನು ಶಾಂತತೆಯಲ್ಲಿ ಮನೆಯ ಮಾಡಿಹುದು
ಏನು ಗಂಭೀರತೆಯು ಏನು ತೃಪ್ತಿಯ ಭಾವ
ನಾನು ನೋಡುವೆ ನಿತ್ಯ ಹೂಗಳಲ್ಲಿ
ಬೆಳಗಾಗಿ ಕಣ್ಬಿಟ್ಟು ಅಂಗಳಕೆ ಬಂದೊಡನೆ
ತಿಳಿಯಾಗಿ ನಗುತೆನ್ನ ಸ್ವಾಗತಿಪುದು
ಒಳಮನದೊಳಿಹ ಕೊಳೆಯ ಹೊರಗೆಳೆದು ಹೃದಯವನು
ತಿಳಿಮಾಡಿ ಉಲ್ಲಾಸ ತುಂಬುತಿಹುದು
ಕೆಲಗಂಟೆಗಳ ಬಾಳಿದೆಂದು ಚಿಂತಿಸುತಿಲ್ಲ
ಗೆಲುವು ಮುಖದೊಳು ತುಂಬಿ ತುಳುಕುತಿಹುದು
ಕೆಲಕ್ಷಣಕೆ ಕೊಯ್ಯುವರು ದೇವರಿಗೋ ಯಾರಿಗೋ
ನಲಿಯುತಲೆ ಹೋಗುವೆನು ಏಂಬ ಭಾವದಲಿ
ಎಲ್ಲರೊಳು ಚೈತನ್ಯವೊಂದೆ ಹರಿಯುತಲಿರಲು
ಕಲ್ಲದೇವರೆ ಬೇಕು ಎಂಬ ಹಠವಿಲ್ಲ
ಎಲ್ಲಿ ಕುಳಿತರು ಅಲ್ಲೆ ನೋಡಬಲ್ಲೆನು ನಾನು
ಎಲ್ಲೆಡೆಯೊಳಿಹನನ್ನು ಎನ್ನುವಂತೆ
ಸುಖಬರಲಿ ಜೀವನದಿ ದುಃಖಗಳೆ ಬರುತಿರಲಿ
ಸಖರಾಗಲೆಲ್ಲ ಶತ್ರುಗಳಾಗಲಿ
ಸಕಲವನು ಏಕಭಾವದಿ ಸ್ವಾಗತಿಸಿರೆಂಬಂಥ
ಅಖಿಳ ಶಾಸ್ತ್ರದ ಸಾರ ಸಾರುತಿಹುದು
Comments
ಉ: ಹೂಗಳ ಸಂದೇಶ
In reply to ಉ: ಹೂಗಳ ಸಂದೇಶ by raghumuliya
ಉ: ಹೂಗಳ ಸಂದೇಶ