ಕವನ
ಹೂವಿಗೂ ನೋವಿದೆ
ಆದರೆ ,
ಅದರ ಪಕಳೆಗಳಿಂದ
ಹುಣ್ಣಿಮೆ ಬೆಳಕು ತೊಟ್ಟಿಕ್ಕುತ್ತದೆ
ಅಂತರಂಗದ ಸುದ್ದಿ ಮರೆತು
ಸುಡು ಬಿಸಿಲ
ಕೆನ್ನೆ ಕೆನ್ನೆ ಸವರಿ
ಹುಚ್ಚುಗಾಳಿ ಬೆನ್ನ ತಟ್ಟಿ
ಹಸಿರ ಭೂಮಿಗೆ
ಬೆರಗ ಬೀಜ
ಹಸಿದ ಭೃಂಗದೊಡಲಿಗೆ
ಸಂಕ್ರಾಂತಿಯ ಕಡಲ ಸಂಭ್ರಮ
ಕಂಬನಿ ಕುಡಿಸುವ
ಕಾಲನ ಕಾಲಡಿ
ಗಂಧ ಸುಧೆಯನಳಿಸುವ
ಮಂತ್ರದಂಡವಾಗುತ್ತದೆ.
ಮುಂಗಾರಿನ ಮಳೆ ಮುತ್ತು
ಅತಿಥಿಗೆ ಔತಣದ ತುತ್ತು
ಪ್ರತಿ ಉಷೆಗೆ ಕಾಯುವುದು
ನಿಶೆಯ ಭಯ ಮೂಟೆ ಸಿಡಿಸಿ
ಚಿಂತೆ ಮಾಯುತ್ತೆ
ಚಂದ್ರನ ಸಿಹಿ ಚುಂಬನದಲಿ
ಹೂವಿಗೂ ನೋವಿದೆ
ಆದರೆ ,
ಅದು ಅಳುವುದಿಲ್ಲ
ಸುಮ್ಮನೆ ಅರಳುತ್ತದೆ !