ಹೂವಿನ ಭಾರಕ್ಕೆ ಉಗ್ರ ಶಿಕ್ಷೆ
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನ ಗೆಲ್ಲಬೇಕಾಗಿದ್ದ ಸುಂದರ ಕನಸೊಂದು ಕೊನೆ ಘಳಿಗೆಯಲ್ಲಿ ಚೂರಾಗಿ ಬಿದ್ದಿದೆ. ಕುಸ್ತಿ ೫೦ ಕೆಜಿ ಫ್ರೀಸ್ಟೈಲ್ ಮಹಿಳಾ ವಿಭಾಗದಲ್ಲಿ ದಿಗ್ಗಜ ಎದುರಾಳಿಗಳನ್ನು ಮಣ್ಣುಮುಕ್ಕಿಸಿ ಫೈನಲ್ ತಲುಪಿದ್ದ ವಿನೇಶ್ ಪೋಗಟ್, ಚಿನ್ನದ ಹಣಾಹಣಿ ಶುರುವಾಗುವ ಮೊದಲು ತೂಕ ಪರೀಕ್ಷೆಯಲ್ಲಿ ವಿಫಲರಾಗಿ ಆಘಾತ ಅನುಭವಿಸಿದ್ದಾರೆ.
ಇದರಿಂದ ಪೋಗಟ್ ಮಾತ್ರವಲ್ಲ, ಇಡೀ ದೇಶವೇ ಆಘಾತಕ್ಕೆ ಒಳಗಾಗಿದೆ. ೫೦ ಕೆ ಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಇದುವರೆಗೂ ಭಾರತ ಫೈನಲ್ ಪ್ರವೇಶಿಸಿದ ಇತಿಹಾಸವೇ ಇರಲಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದ ನಡುವೆಯೂ ಬೆಂಕಿ ಚೆಂಡಿನಂತಹ ೨೯ ವರ್ಷದ ಪೋಗಟ್ ಫೈನಲ್ ಪ್ರವೇಶಿಸಿದಾಗ ದೇಶ ಹೆಮ್ಮೆ ಪಟ್ಟಿತ್ತು. ಸೆಮಿಫೈನಲ್ ನಲ್ಲಿ ಬಲಿಷ್ಟ ಎದುರಾಳಿಗೆ ಒಂದೇ ಒಂದು ಅಂಕ ಬಿಟ್ಟುಕೊಡದೇ ಗೆದ್ದಿದ್ದರು. ಪೂರ್ವದ ಪಂದ್ಯಗಳಲ್ಲೂ ಬೆರಗುಗೊಳಿಸುವ ವಿಜಯವನ್ನೇ ಅವರು ದಾಖಲಿಸಿದ್ದರು. ಕಾರಣ ಈ ಸಾರಿ ಮಹಿಳಾ ಕುಸ್ತಿಯಲ್ಲಿ ಭಾರತ ಚಿನ್ನ ಗೆಲ್ಲುವುದು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಒಲಂಪಿಕ್ಸ್ ನ ಬಿಗಿ ನಿಯಮಗಳ ಬಿಸಿಗೆ ಆ ಕನಸು ಕೊನೆ ಘಳಿಗೆಯಲ್ಲಿ ಕಮರಿ ಬಿದ್ದಿದೆ. ನಿಗದಿಗಿಂತ ಕೇವಲ ೧೦೦ ಗ್ರಾಂ ದೇಹ ತೂಕ ಜಾಸ್ತಿಯಾಯಿತು ಎನ್ನುವ ಕಾರಣಕ್ಕೆ ಅವರು ಅನರ್ಹಗೊಂಡರು. ಆ ಮೂಲಕ ಖಚಿತವಾಗಿದ್ದ ಪದಕವೂ ಕೈಜಾರಿ ಹೋಗಿದೆ. ಕಂಚಿನ ಪದಕ ಕೂಡ ಅವರಿಗೆ ಇಲ್ಲವಾಗಿದೆ. ಈ ಟೂರ್ನಿಯಲ್ಲಿ ಅವರಿಗೆ ಕೊನೆ ರಾಂಕ್ ದೊರಕಲಿದೆ. ಎಂಥ ಅನ್ಯಾಯ..? ಗುಲಗುಂಜಿಯಷ್ಟು ತೂಕ ಹೆಚ್ಚಾಯಿತೆಂದು ಇಷ್ಟೊಂದು ದೊಡ್ಡ ಪೆಟ್ಟು ಕೊಡುವುದೇ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇದರಿಂದ ಏನೂ ಪ್ರಯೋಜನವಾಗದು. ಮುತ್ತು ಜಾರುವ ಮೊದಲೇ ಎಚ್ಚರ ವಹಿಸಬೇಕಾಗಿತ್ತು.
ಅಂತಾರಾಷ್ಟ್ರೀಯ ಎಲ್ಲಾ ಕ್ರೀಡಾಕೂಟಗಳ ನಿಯಮಗಳು ಬಿಗಿಯಾಗಿಯೇ ಇರುತ್ತವೆ. ಸಡಿಲಿಕೆ, ಚೌಕಾಸಿಗೆ ಇಲ್ಲಿ ಅವಕಾಶವೇ ಇರುವುದಿಲ್ಲ. ಸಿಟ್ಟು, ಸೆಡವು, ಮುನಿಸು, ಮನವಿಗೂ ಜಾಗ ಇರುವುದಿಲ್ಲ. ಕ್ರೀಡಾಪಟುಗಳು ಇವೆಲ್ಲವನ್ನು ತಿಳಿದೇ ಅಖಾಡಕ್ಕೆ ಇಳಿಯಬೇಕು. ಹಾಗೆಯೇ ತಿಳಿದಿರುತ್ತಾರೆ ಕೂಡ. ವಿನೇಶ್, ಹಿಂದಿನ ಕೂಟಗಳಲ್ಲಿ ಆಡಿದ್ದು ೫೩ ಕೆ ಜಿ ವಿಭಾಗದಲ್ಲಿ. ಈ ಒಲಂಪಿಕ್ಸ್ ನಲ್ಲಿ ಆ ಅವಕಾಶ ಕೈತಪ್ಪಿದ್ದರಿಂದ ಅನಿವಾರ್ಯವಾಗಿ ೫೦ ಕೆ ಜಿ ವಿಭಾಗದಲ್ಲಿ ಆಡಲು ಇಳಿದಿದ್ದರು. ದೇಹ ತೂಕ ನಿಯಂತ್ರಣದಲ್ಲಿಡಲು ಸಾಕಷ್ಟು ಬೆವರಿಳಿಸಿದ್ದರು. ಹಿಂದಿನ ಎಲ್ಲ ಪಂದ್ಯಗಳ ವೇಳೆಗೆ ನಿಯಂತ್ರಣ ಸಾಧಿಸಿದ್ದ ಅವರು, ನಿರ್ಣಾಯಕ ಫೈನಲ್ ನಲ್ಲಿ ಮಾತ್ರ ಎಡವಟ್ಟಿಗೆ ಒಳಗಾದರು. ಕೋಚ್ ಹಾಗೂ ತರಬೇತು ತಂಡ ಕೂಡ ಈ ವಿಚಾರದಲ್ಲಿ ಮರೆವಿನ ಪ್ರಮಾದ ಮಾಡಿದೆ. ಇದು, ಎಲ್ಲರಿಗೂ ಪಾಠವಾಗಬೇಕು.
ಅಮೋಘ ಸಾಮರ್ಥ್ಯ ಪ್ರದರ್ಶಿಸುತ್ತ ಬಂದ ವಿನೀಶ್ ಪೋಗಟ್, ಈ ಒಂದು ಎಡವಟ್ಟಿನಿಂದ ಎದೆಗುಂದುವ ಅಗತ್ಯವೂ ಇಲ್ಲ. ದೇಶದ ಹೃದಯ ಗೆದ್ದಿರುವ ಅವರು ಕ್ರೀಡಾಸ್ಪೂರ್ತಿ ಉಳಿಸಿಕೊಂಡು ಮುನ್ನಡೆಯಲಿ, ಮುಂದಿನ ಗೆಲುವನ್ನು ದೇಶ ಕಾಣುತ್ತದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೮-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ