ಹೂವಿನ ಸಸ್ಯಗಳ ಗೆಲ್ಲು ಬೇರು ಬರಿಸುವಿಕೆ.

ಹೂವಿನ ಸಸ್ಯಗಳ ಗೆಲ್ಲು ಬೇರು ಬರಿಸುವಿಕೆ.

ಹೂವಿನ ತೋಟ ಮಾಡುವಾಗ ಅಲ್ಲಿ ಇರುವ ಗಿಡಗಳನ್ನು ಸಂಖ್ಯಾಭಿವೃದ್ಧಿ ಮಾಡಲು ಅಥವಾ ಬೇರೆ ಕಡೆಯಿಂದ ಗೆಲ್ಲು ತಂದು ಅದನ್ನು ಬೇರು ಬರಿಸಿ ಸಸಿ ಮಾಡಲು ಎಲ್ಲಾ ಹೂ ತೋಟ ಮಾಡುವವರಿಗೆ ತಿಳಿದಿರಬೇಕು. ದಾಸವಾಳ, ಗುಲಾಬಿ,  ಹೀಗೇ ಕೆಲವೊಂದು ಹೂವಿನ ಗಿಡದ ಗೆಲ್ಲನ್ನು ತಂದು ಅದಕ್ಕೆ ಬೇರು ಬರುವಂತೆ ಮಾಡುವ ಕೃಷಿ ವಿಧಾನ ಇಲ್ಲಿದೆ.

ಬೇರು ಬರಿಸಲು ಬಳಕೆ ಮಾಡುವ ಗೆಲ್ಲು ಹೆಚ್ಚು ದಪ್ಪ ಇರಬೇಕಾಗಿಲ್ಲ. ತೀರಾ ತೆಳ್ಳಗೆಯೂ ಇರದೆ, ಮಧ್ಯಮ ದಪ್ಪದ್ದಾಗಿರಬೇಕು. ತೀರಾ ಎಳೆಯ ಗೆಲ್ಲು ಆಗಬಾರದು. ತುಂಬಾ ಬೆಳೆದ ಗೆಲ್ಲೂ ಆಗಬಾರದು. ಗೆಲ್ಲನ್ನು ತಾಯಿ ಗಿಡದಿಂದ  ಪ್ರತ್ಯೇಕಿಸುವಾಗ ಅದು ಮೂಡಿದ ಭಾಗದಿಂದ ಕತ್ತರಿಸಿ ತೆಗೆದರೆ ಒಳ್ಳೆಯದು. ಎಷ್ಟು ಹೆಚ್ಚು ತೊಗಟೆ ಇರುತ್ತದೆಯೋ ಅಷ್ಟು ಒಳ್ಳೆಯದು.

ಗೆಲ್ಲಿನ ಉದ್ದ ಅರ್ಧ ಅಥವಾ ಮುಕ್ಕಾಲು ಅಡಿಗಿಂತ ಹೆಚ್ಚು ಇರಬಾರದು. ಗೆಲ್ಲು ತುಂಡು ಮಾಡಿದ ನಂತರ ಅದರ ತುದಿ ಭಾಗವನ್ನು ಮೇಲಿನ ಅಳತೆಗೆ ಕತ್ತರಿಸಿ ಎಲ್ಲಾ ಎಲೆಗಳನ್ನೂ ತೊಟ್ಟಿನ ಬುಡಕ್ಕೆ ಗಾಯವಾಗದಂತೆ ಕತ್ತರಿಸಿ ತೆಗೆಯಬೇಕು. ತುದಿ ಬಾಗಕ್ಕೆ ಬೋರ್ಡೋ ಪೇಸ್ಟ್ ಅಥವಾ ಒಂದು ಕಡಲೆ ಗಾತ್ರದ ಸಗಣಿಯ ಉಂಡೆಯನ್ನು ಇಡಬೇಕು. ಇದು ಕಡ್ಡಿ ಕೊಳೆಯದಂತೆ ರಕ್ಷಿಸುತ್ತದೆ. ಬೇರು ಬರಲಿರುವ ಕಡ್ಡಿಯ ಇನ್ನೊಂದು ಭಾಗಕ್ಕೆ ಬೇರು ಬರಿಸುವ ಹಾರ್ಮೋನು  ಪುಡಿಯನ್ನು ತಾಗಿಸಿ, ಅದನ್ನು ಚೆನ್ನಾಗಿ ಬೇರು ಬರಲು ಸಹಾಯಕವಾಗುವ ಉತ್ತಮ ಕಾಂಪೋಸ್ಟು ಹುಡಿ ತುಂಬಿದ ಪಾಲಿಥೀನ್  ಕೊಟ್ಟೆಯಲ್ಲಿ ಊರಬೇಕು. (ಪಾಲಿಥೀನ್ ಕೊಟ್ಟೆಗೆ ಸಗಣಿಯ ಒಣ ಹುಡಿ ಆದರೆ ಉತ್ತಮ) ಪಾಲಿಥೀನ್ ಕೊಟ್ಟೆಯನ್ನು ಮತ್ತೊಂದು ಪಾರದರ್ಶಕ ಪಾಲಿಥೀನ್ ಲಕೋಟೆ ಮೂಲಕ ಮುಚ್ಚಬೇಕು. ಖಾಲಿ ನೀರಿನ ಬಾಟಲಿಯ ಬುಡ ಭಾಗವನ್ನು ತುಂಡು ಮಾಡಿ ಅದನ್ನೂ ಮುಚ್ಚಬಹುದು. ಹೀಗೆ ಮಾಡಿದಾಗ ನೀರು ಆವಿ ಆಗುವುದಿಲ್ಲ. ಸಸ್ಯ ಚಿಗುರಲು ಬೇಕಾಗುವ ಹಸುರು ಮನೆ ವಾತಾವರಣ ಇದರ ಒಳ ಭಾಗದಲ್ಲಿ ದೊರೆಯುತ್ತದೆ. ಒಳ ಭಾಗಕ್ಕೆ ಗಾಳಿ ಸಂಚಾರ ಬೇಕಾಗಿಲ್ಲ. ಇದನ್ನು ನೆರಳಿನಲ್ಲಿ ಇಟ್ಟರೆ ಅದು ಸುಮಾರು ೬-೮ ವಾರಗಳಲ್ಲಿ ಚಿಗುರು ಬರುತ್ತದೆ. ಬೇರು ಮೂಡಲು ಪ್ರಾರಂಭವಾಗುತ್ತದೆ. ಪಾರದರ್ಶಕ ಪಾಲಿಥೀನ್ ಕೊಟ್ಟೆಯಲ್ಲಿ ಕಡ್ಡಿ ಊರಿದರೆ ಹೊಸ ಬೇರು ಮೂಡಿರುವುದು ಹೊರಗೆ ಕಾಣುತ್ತದೆ. ಅಂತಹ ಗಿಡವನ್ನು ನೆರಳಿನಲ್ಲಿ ಮತ್ತೂ ೧ ತಿಂಗಳು ಕಾಲ ಬೆಳೆಸಿ ನಂತರ ಚಿಗುರು ಬಂದ ಭಾಗದ ಮೇಲು ಭಾಗವನ್ನು ಕತ್ತರಿಸಿ ತೆಗೆದು ನಾಟಿ ಮಾಡಬಹುದು.

ಆಲೂಗಡ್ಡೆಯ ಒಳ ಭಾಗಕ್ಕೆ ಗೆಲ್ಲಿನ ತುಂಡನ್ನು ತುರುಕಿ ಸಸಿ ಮಾಡಬಹುದು ಎಂಬ ಬಗ್ಗೆ ಮಾಹಿತಿ ಇದೆ. ಆಲೂಗಡ್ಡೆಯ ಎಲ್ಲಾ ಮೊಳಕೆ ಬರುವ ಭಾಗವನ್ನು ಕತ್ತರಿಸಿ ತೆಗೆಯಬೇಕು. ಆ ನಂತರ ಅದಕ್ಕೆ ಒಂದು ತೂತು ಕೊರೆದು ಅದರೊಳಗೆ ಗೆಲ್ಲಿನ ತುದಿಯನ್ನು ತುರುಕಿ ಅದನ್ನು ಪಾಲಿಥೀನ್ ಚೀಲದಲ್ಲಿ ಅಥವಾ ನೆಲದಲ್ಲಿ ಊರಿದಾಗಲೂ ಬೇರು ಬರುತ್ತದೆಯಂತೆ.   

ಮಾಹಿತಿ: ರಾಧಾಕೃಷ್ಣ ಹೊಳ್ಳ